ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಇದ್ದೂ ಇಲ್ಲದಂತಾದ ಶುದ್ಧ ನೀರಿನ ಘಟಕ

Published 4 ಮಾರ್ಚ್ 2024, 4:59 IST
Last Updated 4 ಮಾರ್ಚ್ 2024, 4:59 IST
ಅಕ್ಷರ ಗಾತ್ರ

ಕಾರವಾರ: ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ನೀರಿನ ಕೊರತೆ ಜಿಲ್ಲೆಯನ್ನು ಬಾಧಿಸುವ ಲಕ್ಷಣ ಹೆಚ್ಚಿದೆ. ಗ್ರಾಮೀಣ ಭಾಗದಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿಡುವಲ್ಲಿ ಆಡಳಿತ ವ್ಯವಸ್ಥೆ ಎಡವಿದೆ ಎಂಬ ಆರೋಪಗಳಿವೆ.

ಜಿಲ್ಲೆಯ ಗ್ರಾಮೀಣ ಪ್ರದೇಶದ 241 ಕಡೆಗಳಲ್ಲಿ ಕೆಲ ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿತ್ತು. ₹1 ನಾಣ್ಯ ಹಾಕಿ 20 ಲೀ. ನೀರು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ನಿರ್ವಹಣೆ ಕೊರತೆಯಿಂದ 130ಕ್ಕೂ ಹೆಚ್ಚು ಘಟಕಗಳು ಕೆಲಸ ನಿಲ್ಲಿಸಿ ವರ್ಷಗಳೇ ಕಳೆದಿದ್ದವು. ಈ ಪೈಕಿ ಕೆಲವು ದುರಸ್ಥಿಯಾದರೆ, ಇನ್ನು ಕೆಲವು ಘಟಕಗಳು ನಿರ್ವಹಣೆಯ ಕೊರತೆಯಿಂದ ಇದ್ದೂ ಇಲ್ಲದಂತಾಗಿವೆ.

‘241 ಘಟಕಗಳ ಪೈಕಿ 220 ಸದ್ಯ ಕೆಲಸ ನಿರ್ವಹಿಸುತ್ತಿದೆ. ಉಳಿದ 21 ಘಟಕಗಳನ್ನು ಆದಷ್ಟು ಶೀಘ್ರವೇ ದುರಸ್ಥಿಪಡಿಸಿ ಜನರ ಬಳಕೆಗೆ ಸಿಗುವಂತೆ ಮಾಡಲಾಗುವುದು’ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಇಇ ರಾಜೀವ ನಾಯ್ಕ ಹೇಳುತ್ತಾರೆ.

ಆದರೆ, 220 ಘಟಕಗಳ ಪೈಕಿಯೂ ಬಹುತೇಕ ಪದೇ ಪದೇ ಕೆಟ್ಟು ನಿಲ್ಲುತ್ತಿವೆ ಎಂಬ ದೂರುಗಳಿವೆ. ಕಾರವಾರ ತಾಲ್ಲೂಕಿನಲ್ಲೇ ಸುಮಾರು ಎಂಟಕ್ಕೂ ಹೆಚ್ಚು ಘಟಕಗಳು ನಿಷ್ಪ್ರಯೋಜಕ ಎನಿಸಿವೆ.

ಶಿರಸಿ ನಗರದ ಐದು ಕಡೆಗಳಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ನಗರದ ಹಳೆ ಬಸ್ ನಿಲ್ದಾಣದ ಸಮೀಪ, ಎಪಿಎಂಸಿ ಆವರಣ, ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಆವರಣ, ಮಾರಿಗುಡಿ ಸಮೀಪ ಹಾಗೂ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಈ ಘಟಕಗಳು ಸಾರ್ವಜನಿಕರಿಗೆ ಉಪಯೋಗವಾಗುತ್ತಿವೆ.

ಭಟ್ಕಳ ತಾಲ್ಲೂಕಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಥಾಪಿಸಿದ್ದ ಬಹುತೇಕ ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ.

ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣದಲ್ಲಿರುವ ನೀರಿನ ಘಟಕದಿಂದ ಕೆಲವರು ನೀರನ್ನು ಕೈಕಾಲು ತೊಳೆಯಲು ಬಳಸುತ್ತಿದ್ದಾರೆ. ಇಲ್ಲಿ ಉಗುಳಬಾರದು ಎಂಬ ಬೋರ್ಡ್ ಹಾಕಿದ್ದರೂ ಅಲ್ಲೇ ಉಳುಗಿ ಗಲೀಜು ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ನೂತನ ನಗರ–ಜಡ್ಡಿರಸ್ತೆಯ ಸಮುದಾಯ ಭವನದ ಪಕ್ಕದಲ್ಲಿ ನಿರ್ಮಿಸಲಾದ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆಯಾಗಿ ವರ್ಷಗಳೇ ಗತಿಸಿದ್ದರೂ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸುತ್ತಿಲ್ಲ.

ಹಳಿಯಾಳ ಪಟ್ಟಣದಲ್ಲಿ ಪುರಸಭೆಯ ವತಿಯಿಂದ ಪುರಭವನ ಆವರಣ ಹಾಗೂ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು ಸಾರ್ವಜನಿಕರ ಬಳಕೆಗೆ ಅನುಕೂಲವಾಗಿದೆ. ಪಟ್ಟಣದಲ್ಲಿ ಸದ್ಯ ಎರಡು ಘಟಕ ಮಾತ್ರವಿದ್ದು, ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಜನರು ಒತ್ತಾಯಿಸುತ್ತಿದ್ದಾರೆ.

ಮುಖ್ಯ ಮಾರುಕಟ್ಟೆ, ಸಾರಿಗೆ ನಿಲ್ದಾಣದ ಹತ್ತಿರ, ಮೀನು ಮಾರುಕಟ್ಟೆ, ಯಲ್ಲಾಪುರ ನಾಕಾ ಹತ್ತಿರ ಘಟಕ ಸ್ಥಾಪನೆಗೆ ಒತ್ತಡ ಹೆಚ್ಚಿದೆ. ಹಳೆ ಬಸ್ ನಿಲ್ದಾಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಪದೇ ಪದೇ ಸ್ಥಗಿತಗೊಳ್ಳುತ್ತಿದ್ದು ಜನರಿಗೆ ಸಮಸ್ಯೆಯಾಗಿದೆ. ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿದ ಶುದ್ಧ ನೀರಿನ ಘಟಕಗಳ ಪೈಕಿ ಶೇ.60 ರಷ್ಟು ನೀರು ಪೂರೈಸಲು ಸಾಧ್ಯವಾಗದೆ ಉಳಿದುಕೊಂಡಿವೆ.

ಹೊನ್ನಾವರ ತಾಲ್ಲೂಕಿನ ಕುದ್ರಗಿ, ಕಡತೋಕಾ ಸೇರಿದಂತೆ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳೆಲ್ಲ ಸೂಕ್ತ ನಿರ್ವಹಣೆ ಇಲ್ಲದೆ ತಮ್ಮ ಕಾರ್ಯ ನಿಲ್ಲಿಸಿವೆ. ಗ್ರಾಮೀಣ ಭಾಗದಲ್ಲಿ ಜಲಜೀವನ ಮಿಷನ್ ಕಾಮಗಾರಿ ನಡೆಯುತ್ತಿದ್ದು ನಲ್ಲಿ ನೀರಿಗಾಗಿ ಜನರು ಎದುರು ನೋಡುತ್ತಿದ್ದಾರೆ. ತಾಲ್ಲೂಕು ಬರ ಪೀಡಿತ ಪ್ರದೇಶವೆಂದು ಘೋಷಣೆಯಾಗದಿರುವುದರಿಂದ ಕುಡಿಯುವ ನೀರಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ಅವಕಾಶ ಸಿಕ್ಕಿಲ್ಲ.

‘ಸದ್ಯ ಕುಡಿಯುವ ನೀರಿನ ತೊಂದರೆ ಉಂಟಾಗಿಲ್ಲ.ಅಗತ್ಯ ಕಂಡುಬಂದಲ್ಲಿ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ರಾಮ ಭಟ್ಟ ತಿಳಿಸಿದರು.

ಕುಮಟಾ ತಾಲ್ಲೂಕಿನ ಗ್ರಾಮ ಪಂಚಾಯ್ತಿ, ಶಾಲೆ ಹಾಗೂ ವಸತಿ ಪ್ರದೇಶಗಳಲ್ಲಿ ಸ್ಥಾಪಿಸಲಾದ ಶುಲ್ಕ ಆಧಾರಿತ ಎಲ್ಲ 24 ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿವೆ.

‘ಘಟಕಗಳಿಂದ ಹಿಂದೆ ₹1ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಈಗ ದರ ಪರಿಷ್ಕರಣೆಯಾದ ನಂತರ ₹5ಕ್ಕೆ 20 ಲೀ. ನೀಡಲಾಗುತ್ತಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಎಂಜಿನಿಯರ್ ರಾಘವೇಂದ್ರ ನಾಯ್ಕ ಹೇಳುತ್ತಾರೆ.

ದಾಂಡೇಲಿ ನಗರದ ಹಳೆ ದಾಂಡೇಲಿಯಲ್ಲಿನ ಘಟಕದ ತಳಪಾಯ ಕುಸಿದಿದ್ದು ಕಾರ್ಯನಿರ್ವಹಿಸುತ್ತಿಲ್ಲ. ನಗರಸಭೆಯ ವಿಶೇಷ ಅನುದಾನದಲ್ಲಿ ದುರಸ್ತಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ನಗರಸಭೆಯ ಕಿರಿಯ ಅಭಿಯಂತರರಾದ ಸುನೀತಾ ನಾಯ್ಕ ತಿಳಿಸಿದ್ದಾರೆ.

ಅಂಬಿಕಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಿಕಾನಗರದ ಬಸ್ ನಿಲ್ದಾಣದಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕವು ಕಳೆದ ಒಂದು ವರ್ಷದಿಂದ ಹಾಳಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೂಡಲೇ ದುರಸ್ಥಿಗೆ ಮುಂದಾಗಬೇಕು ಎಂದು ನಿವಾಸಿ ಯುವರಾಜ ಬಿಚ್ಚುಕಲೆ ಒತ್ತಾಯಿಸಿದ್ದಾರೆ.

ಅಂಕೋಲಾ ತಾಲ್ಲೂಕಿನಲ್ಲಿ ಬೇಸಿಗೆಯ ಸಮಯ ಶುರುವಾಯಿತೆಂದರೆ ಶೇಡಿಕುಳಿ, ಬೆಳಾಬಂದರ, ತೆಂಕಣಕೇರಿ, ಪೂಜಗೆರಿ ಮುಂತಾದ ಭಾಗಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ. ಬೊಬ್ರುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಕುಳಿ ಹಾಗು ಬೆಳಾಬಂದರ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಿದರೂ ಜನರಿಗೆ ಅದನ್ನು ಉಪಯೋಗಿಸಲಾರದ ಪರಿಸ್ಥಿತಿ ಇದೆ.

ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿ ಇಡಲಾಗಿದೆ. ಕೆಲವೆಡೆ ಸಣ್ಣ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದು ಅದನ್ನು ಸರಿಪಡಿಸಲು ಕ್ರಮವಹಿಸಲಾಗುವುದು - ಕಾಂತರಾಜ್ ಶಿರಸಿ ನಗರಸಭೆಯ ಪೌರಾಯುಕ್ತ

ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ಕಾಣಿಸುತ್ತಿದೆ. ಘಟಕಗಳು ಉಪಯೋಗಕ್ಕೆ ಬಾರದಂತಿದ್ದು ಅವುಗಳನ್ನು ದುರಸ್ತಿಪಡಿಸುವ ಕೆಲಸ ನಡೆಯಲಿ - ಎಸ್.ಎಲ್. ಸೋಮಣ್ಣವರ ಮುರ್ಕವಾಡ ಗ್ರಾ.ಪಂ ಸದಸ್ಯ

ಶುದ್ಧ ನೀರಿನ ಘಟಕ ನೀರ್ಮಾಣ ಮಾಡಿ ಎಂಟು ವರ್ಷ ಕಳೆದರೂ ಈವರೆಗೆ ಜನರ ಉಪಯೋಗಕ್ಕೆ ನೀಡಿಲ್ಲ. ಸಮಸ್ಯೆಯನ್ನು ಈಗಾಗಲೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರಲಾಗಿದೆ - ಚಂದ್ರಕಾಂತ ನಾಯ್ಕ ಬೊಬ್ರುವಾಡ ಗ್ರಾ.ಪಂ ಅಧ್ಯಕ್ಷ

ಶುದ್ಧ ನೀರಿನ ಘಟಕಗಳು ನಿರ್ಮಿಸಿದಾಗಿನಿಂದ ಬಳಕೆಗೆ ಲಭಿಸಿದ್ದು ಕಡಿಮೆ. ಸುತ್ತ ಗಿಡಗಂಟಿಗಳು ಬೆಳೆದುಕೊಂಡಿದ್ದು ಘಟಕದ ಬಳಿ ಹೋಗಲೂ ಜನ ಹೆದರುವ ಸ್ಥಿತಿ ಇದೆ - ವಿಶಾಲ ಬೋವಿ ಕಡವಾಡ ಗ್ರಾಮಸ್ಥ

ದುರಸ್ತಿ ಮಾಡಿದ ನಾಲ್ಕು ದಿನ ಮಾತ್ರ ನೀರು!

ಮುಂಡಗೋಡ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಕೆಲವೆಡೆ ಉದ್ಘಾಟನೆ ಆಗಿ ತಿಂಗಳು ಕಳೆಯುವುದರೊಳಗೆ ಘಟಕಗಳು ಬಾಗಿಲು ಹಾಕಿಕೊಂಡಿವೆ. ಗುಣಮಟ್ಟದ ಕೊರತೆಯಿಂದ ನೀರು ಶುದ್ಧಿಕರಿಸುವ ಯಂತ್ರಗಳು ಪದೇ ಪದೆ ದುರಸ್ತಿಗೆ ಒಳಪಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

‘ಬಾಚಣಕಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರಗಳು ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ. ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ’ ಎಂದು ಗ್ರಾಮಸ್ಥ ನಿಂಗಪ್ಪ ಕುರುಬರ ಹೇಳಿದರು.

‘ಕುಸೂರ ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡಿದ ನಾಲ್ಕೈದು ದಿನಗಳು ಮಾತ್ರ ನೀರು ಬರುತ್ತದೆ. ತಿಂಗಳುಗಟ್ಟಲೇ ಬಂದ್ ಆಗಿರುತ್ತದೆ. ನಿರ್ವಹಣೆ ಕೊರತೆಯಿಂದ ಘಟಕವು ಸಾರ್ವಜನಿಕರ ಬಳಕೆಯಿಂದ ದೂರವಾಗಿದೆ’ ಎಂದು ಗ್ರಾಮಸ್ಥ ದತ್ತಾತ್ರೇಯ ದೂರಿದರು.

‘ತಾಲ್ಲೂಕಿನಲ್ಲಿ 26 ಶುದ್ಧ ನೀರಿನ ಘಟಕಗಳಿದ್ದು ಅದರಲ್ಲಿ ಐದು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಕಡೆ ನೀರಿನ ಕೊರತೆಯಿಂದ ಸ್ಥಗಿತಗೊಂಡಿವೆ’ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಎಇಇ ಪ್ರದೀಪ ಭಟ್ಟ ಹೇಳಿದರು. 

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ಶಾಂತೇಶ ಬೆನಕನಕೊಪ್ಪ, ಪ್ರವೀಣಕುಮಾರ ಸುಲಾಖೆ, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಮುಂಡಗೋಡ ತಾಲ್ಲೂಕಿನ ಬಾಚಣಕಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಬಂದ್ ಆಗಿರುವುದು.
ಮುಂಡಗೋಡ ತಾಲ್ಲೂಕಿನ ಬಾಚಣಕಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಬಂದ್ ಆಗಿರುವುದು.
ಹಳಿಯಾಳದ ಅರ್ಬನ್‌ ಬ್ಯಾಂಕ್‌ ಸರ್ಕಲ್‌‍ನಲ್ಲಿ ಸ್ಥಾಪನೆ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ತೆಗೆದುಕೊಂಡು ಸಾಗುತ್ತಿರುವ ಜನರು.
ಹಳಿಯಾಳದ ಅರ್ಬನ್‌ ಬ್ಯಾಂಕ್‌ ಸರ್ಕಲ್‌‍ನಲ್ಲಿ ಸ್ಥಾಪನೆ ಮಾಡಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ತೆಗೆದುಕೊಂಡು ಸಾಗುತ್ತಿರುವ ಜನರು.
ಅಂಕೋಲಾ ತಾಲ್ಲೂಕಿನ ಬೊಬ್ರುವಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಕುಳಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ.
ಅಂಕೋಲಾ ತಾಲ್ಲೂಕಿನ ಬೊಬ್ರುವಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಕುಳಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ದುಸ್ಥಿತಿ.
ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಸುತ್ತಿಲ್ಲ.
ದಾಂಡೇಲಿ ತಾಲ್ಲೂಕಿನ ಅಂಬಿಕಾನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT