ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ರಜೆಯಲ್ಲಿ ತರಗತಿ: ಐಟಾ ಆಕ್ಷೇಪ

Published 17 ಮೇ 2024, 16:28 IST
Last Updated 17 ಮೇ 2024, 16:28 IST
ಅಕ್ಷರ ಗಾತ್ರ

ಭಟ್ಕಳ: ಬೇಸಿಗೆ ರಜೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರಿಹಾರ ತರಗತಿಗಳನ್ನು ಆಯೋಜಿಸುವ ಕುರಿತು ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಈಚೆಗೆ ಹೊರಡಿಸಿದ ನಿರ್ದೇಶನದ ಬಗ್ಗೆ ‘ಆಲ್ ಇಂಡಿಯಾ ಟೀಚರ್ಸ್‌ ಅಸೋಸಿಯೇಶನ್’ (ಐಟಾ) ಆಕ್ಷೇಪ ವ್ಯಕ್ತಪಡಿಸಿದೆ.

ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಮೇ 13 ರಂದು ವಿಡಿಯೊ ಕಾನ್ಫರೆನ್ಸ್ ಮೂಲಕ ರಜಾ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರಿಹಾರ ತರಗತಿಗಳನ್ನು ಕಡ್ಡಾಯವಾಗಿ ನಡೆಸುವಂತೆ ತಿಳಿಸಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಐಟಾ, ರಜಾ ದಿನಗಳಲ್ಲಿ ತರಗತಿಗಳನ್ನು ನಡೆಸಬೇಕೆಂಬ ಆದೇಶವನ್ನು ಹಿಂಪಡೆಯಲು ಮತ್ತು ಕಾರ್ಯ ಸಾಧ್ಯವಾದರೆ ಮೇ 29ರ ನಂತರ ಅವುಗಳನ್ನು ಮರು ಹೊಂದಿಸಲು ಪರಿಗಣಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದೆ.

‘ಶೈಕ್ಷಣಿಕ ವರ್ಷದುದ್ದಕ್ಕೂ ನಿಯಮಿತ ಮೌಲ್ಯಮಾಪನ, ವಿಶೇಷ ತರಗತಿ ಆಯೋಜಿಸುವುದು ಮತ್ತು ಪೋಷಕ– ಶಿಕ್ಷಕರ ಸಭೆಗಳನ್ನು ಸುಗಮಗೊಳಿಸುವುದು ಸೇರಿದಂತೆ ವಿವಿಧ ಜವಾಬ್ದಾರಿಗಳಿಗೆ ಶಿಕ್ಷಕರು ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ. ಇದಲ್ಲದೇ, ಅನೇಕ ಶಿಕ್ಷಕರು ರಜಾ ದಿನಗಳಲ್ಲಿ ಚುನಾವಣಾ ಜವಾಬ್ದಾರಿ ಮತ್ತು ಇಲಾಖೆಯ ನಿಯೋಜನೆಗಳಂತಹ ಹೆಚ್ಚುವರಿ ಕರ್ತವ್ಯಗಳನ್ನು ಸಮರ್ಪಕವಾಗಿ ಪೂರೈಸಿದ್ದಾರೆ. ರಜೆಯ ಯೋಜನೆಗಳ ಹಠಾತ್ ಬದಲಾವಣೆ ವೈಯಕ್ತಿಕ ಬದ್ಧತೆಗಳನ್ನು ಮಾತ್ರವಲ್ಲದೇ ಶಿಕ್ಷಕರಲ್ಲಿ ಆರ್ಥಿಕ ಮತ್ತು ಮಾನಸಿಕ ಒತ್ತಡ ಉಂಟುಮಾಡುತ್ತದೆ’ ಎಂದು ಸಂಘಟನೆ ತಿಳಿಸಿದೆ.

‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಿಗದಿತ ರಜೆ ಅವಧಿಯನ್ನು ಅನುಸರಿಸಿ ಮೇ 29 ರಿಂದ ಜೂನ್ 6ರವರೆಗೆ ಪರಿಹಾರ ತರಗತಿಗಳನ್ನು ನಡೆಸಲು ಪ್ರಸ್ತಾಪಿಸಿದೆ. ಈ ವಿಧಾನವು ಶಿಕ್ಷಕರಿಗೆ ತಮ್ಮ ಯೋಗಕ್ಷೇಮಕ್ಕೆ ಧಕ್ಕೆಯಾಗದಂತೆ ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಪೂರೈಸಲು ಅನುವು ಮಾಡಿಕೊಡಲಿದೆ. ಶಿಕ್ಷಕ ಸಮುದಾಯದ ಧ್ವನಿ ಮತ್ತು ಅಗತ್ಯಗಳನ್ನು ಆಲಿಸುವುದು ಮತ್ತು ಗೌರವಿಸುವುದು ಅನಿವಾರ್ಯವಾಗಿದೆ. ಅಧಿಕಾರಿಗಳು ನಮ್ಮ ಮನವಿಯನ್ನು ಪರಿಗಣಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸನ್ನು ಖಾತ್ರಿಪಡಿಸುವ ಜತೆಗೆ ಶಿಕ್ಷಕರ ಹಿತವನ್ನು ಎತ್ತಿ ಹಿಡಿಯುವ ನಿರ್ಧಾರವನ್ನು ತೆಗೆದುಕೊಳ್ಳಬೇಕು’ ಎಂದು ಐಟಾದ ರಾಜ್ಯ ಘಟಕ ಅಧ್ಯಕ್ಷ ಎಂ.ಆರ್. ಮಾನ್ವಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT