ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ: ಮತ್ತಷ್ಟು ತೀವ್ರಗೊಂಡ ರೈತರ ಆಕ್ರೋಶ, ವಾಹನ ತಡೆಯುವ ಎಚ್ಚರಿಕೆ

Last Updated 8 ಅಕ್ಟೋಬರ್ 2022, 15:44 IST
ಅಕ್ಷರ ಗಾತ್ರ

ಹಳಿಯಾಳ: ‘ಕಬ್ಬಿಗೆ ನಿಗದಿತ ದರ ಘೋಷಿಸಬೇಕು. ರೈತರು ಹಾಗೂ ಕಾರ್ಖಾನೆ ಮಾಲೀಕರು ದ್ವಿಪಕ್ಷೀಯ ಒಪ್ಪಂದ ಮಾಡಿದ ಮೇಲೆಯೇ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕು’ ಎಂದು ಕಬ್ಬು ಬೆಳೆಗಾರರು ಹಮ್ಮಿಕೊಂಡಿರುವ ಪ್ರತಿಭಟನೆಯು ಶನಿವಾರವೂ ಮುಂದುವರಿಯಿತು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಯಿತು.

ಕಲಘಟಗಿ, ದಾಂಡೇಲಿ, ಜೊಯಿಡಾ, ಮುಂಡಗೋಡ, ಅಳ್ನಾವರ, ಕಿತ್ತೂರು ಹಾಗೂ ಬೆಳಗಾವಿ ಭಾಗದ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳೂ ಭಾಗವಹಿಸಿದ್ದರು.

ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಲು ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಸೇರಿದ್ದರು. ಆದರೆ, ತಿಂಗಳ ಎರಡನೇ ಶನಿವಾರದ ಕಾರಣ ರಜೆಯಿದ್ದು, ಕಚೇರಿಯ ಗೇಟಿಗೆ ಬೀಗ ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು, ಗೇಟು ತೆರೆಯಲು ಮುಂದಾದರು. ಈ ವೇಳೆ ಪೋಲಿಸರು ಮಧ್ಯ ಪ್ರವೇಶಿಸಿ ಪ್ರತಿಭಟನಕಾರರ ಮನವೊಲಿಸಿದರು. ಸರ್ಕಾರದ ಆಸ್ತಿಗೆ ಹಾನಿ ಪಡಿಸದಂತೆ ಎಚ್ಚರಿಕೆ ನೀಡಿದರು. ಬಳಿಕ ಪ್ರತಿಭಟನೆಯು ಶಿವಾಜಿ ವೃತ್ತದ ಬಳಿ ಮುಂದುವರಿಯಿತು.

ಕಬ್ಬು ಬೆಳೆಗಾರರ ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ ಬೋಬಾಟಿ ತಮ್ಮ ಟ್ರ್ಯಾಕ್ಟರ್‌ನಲ್ಲಿ ಗ್ರಾಮೀಣ ಭಾಗದಿಂದ ಕಬ್ಬು ಬೆಳೆಗಾರ ರೈತ ಮಹಿಳೆಯರನ್ನು ಕರೆ ತಂದಿದ್ದು ಕಂಡು ಬಂತು. ಪಟ್ಟಣದಲ್ಲಿ ಬೆಳಿಗ್ಗೆಯಿಂದ ಕೆಲವು ಅಂಗಡಿ ಮುಂಗಟ್ಟನ್ನು ತೆರೆದಿದ್ದ ಕಾರಣ, ಕಬ್ಬು ಬೆಳೆಗಾರರು ಪೇಟೆ ಎಲ್ಲ ಸುತ್ತಾಡಿ ಧ್ವನಿವರ್ಧಕದ ಮೂಲಕ ಅಂಗಡಿ ಮುಂಗಟ್ಟನ್ನು ಬಂದ್‌ ಮಾಡಲು ಮನವಿ ಮಾಡಿದರು. ನಂತರ ಶಿವಾಜಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕಬ್ಬು ಬೆಳೆಗಾರರ ಸಂಘಟನೆಯ ಜಿಲ್ಲ ಘಟಕದ ಅಧ್ಯಕ್ಷ ಕುಮಾರ ಬೊಬಾಟೆ ಮಾತನಾಡಿ, ‘ಸ್ಥಳೀಯ ರಾಜಕಾರಣಿಗಳೂ ರೈತರ ಪರ ಇಲ್ಲ. ಅವರಿಂದ ನಾವೇನು ನಿರೀಕ್ಷಿಸಿಲ್ಲ. ನಮ್ಮ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಸುದ್ದಿಗೋಷ್ಠಿ ನಡೆಸುವುದು ನಾಚಿಕೆಗೇಡು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಸಿದರೆ ಸ್ವಾಗತಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅ.9ರಿಂದ ತಾಲ್ಲೂಕಿನ ತೆರಗಾಂವ, ಹವಗಿ, ಕೆಸರೋಳ್ಳಿ ಹಾಗೂ ಹಳಿಯಾಳ ಪಟ್ಟಣದ ಯುವ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಲಕ್ಷ್ಮಣ ಪ್ಯಾಲೇಸ್ ಬಳಿ ಧರಣಿ ಹಮ್ಮಿಕೊಳ್ಳಲಿದ್ದಾರೆ. ಬೇರೆ ತಾಲ್ಲೂಕುಗಳಿಂದ ಕಬ್ಬು ಸಾಗಿಸಿದರೆ ಆ ವಾಹನಗಳನ್ನು ತಡೆಯಲಿದ್ದೇವೆ’ ಎಂದರು.

‘ಲಾಬಿಗೆ ಮಣಿದ ಸರ್ಕಾರ’:‘10 ವರ್ಷಗಳಿಂದ ಕಬ್ಬಿನ ಖರೀದಿ ದರ ಹೆಚ್ಚಳವಾಗಿಲ್ಲ. ಎಫ್.ಆರ್.ಪಿ ಮೂಲಕ ರೈತರಿಗೆ ಮೋಸ ಮಾಡಲಾಗುತ್ತಿದೆ. ಸರ್ಕಾರವು ಸಕ್ಕರೆ ಕಾರ್ಖಾನೆಗಳ ಲಾಬಿಗೆ ಮಣಿದಿದ್ದು, ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದೆ’ ಎಂದುರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚುನಪ್ಪಾ ಪೂಜೇರಿ ಆರೋಪಿಸಿದರು.

‘ಪ್ರತಿ ವರ್ಷ ಕಬ್ಬಿನ ಉಪ ಉತ್ಪನ್ನದಿಂದ ಸರ್ಕಾರಕ್ಕೆ ₹ 28 ಸಾವಿರ ಕೋಟಿ ಜಮೆಯಾಗುತ್ತಿದೆ. ಹಾಗಾಗಿ ಪ್ರತಿ ಟನ್ ಕಬ್ಬಿಗೆ ಸರ್ಕಾರವು ₹ 2 ಸಾವಿರ ಹಾಗೂ ಕಾರ್ಖಾನೆ ಮಾಲೀಕರು ₹ 3,500 ನೀಡಬೇಕು’ ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ವಿ.ಘಾಡಿ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಪ್ರಮುಖರಾದ ನಾಗೇಂದ್ರ ಜಿವೋಜಿ, ಲಿಂಗರಾಜ ಹಿರೇಮಠ, ಬಸವರಾಜ ಬೆಂಡಿಗೇರಿಮಠ, ಮಂಗಳಾ ಕಶೀಲ್ಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT