ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಪ್ರತಿ ವಿಷಯಕ್ಕೆ 5 ಪಿಎಚ್‌.ಡಿ ಸೀಟು ಹೆಚ್ಚಳ

ಅಗತ್ಯ ಇರುವೆಡೆಗಳಲ್ಲಿ ಮಾರ್ಗದರ್ಶಕರ ಸಂಖ್ಯೆ ಹೆಚ್ಚಿಸಲು ನಿರ್ಧಾರ
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಲ್ಲಿ ಪ್ರತಿ ವಿಷಯದ ಪಿಎಚ್‌.ಡಿ. ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಅನುವು ಮಾಡಿಕೊಟ್ಟಿದೆ.

ವಿಶ್ವವಿದ್ಯಾಲಯ ಆರಂಭಗೊಂಡ ನಂತರ ಇದೇ ಮೊದಲ ಸಲ ಪಿಎಚ್‌.ಡಿ ಸೀಟುಗಳ ಸಂಖ್ಯೆ ಹೆಚ್ಚಿಸಲಾಗಿದೆ. ಈ ಹಿಂದೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಕೇಂದ್ರಗಳಲ್ಲಿ ಪ್ರತಿ ವಿಷಯಕ್ಕೆ 10 ಸೀಟುಗಳನ್ನು ನಿಗದಿಗೊಳಿಸಲಾಗಿತ್ತು. ಈಗ ಆ ಸಂಖ್ಯೆ 15ಕ್ಕೆ ಹೆಚ್ಚಿಸಲಾಗಿದೆ. ಇದೇ ಸಾಲಿನಲ್ಲಿ ಒಟ್ಟಿಗೆ 15 ಸೀಟುಗಳನ್ನು ತುಂಬಬಹುದು. ಒಂದುವೇಳೆ ಪೂರ್ಣ ಪ್ರಮಾಣದಲ್ಲಿ ಸೀಟುಗಳು ಭರ್ತಿಯಾಗದಿದ್ದಲ್ಲಿ ಈ ವರ್ಷ ಭರ್ತಿಯಾಗಿ ಉಳಿದ ಸೀಟುಗಳನ್ನು ಮುಂದಿನ ಐದು ವರ್ಷದೊಳಗೆ ತುಂಬಬಹುದಾಗಿದೆ.

ವಿಶ್ವವಿದ್ಯಾಲಯದಲ್ಲಿ 61 ಸೀಟು, ವಿ.ವಿ. ವ್ಯಾಪ್ತಿಯ ಕೇಂದ್ರಗಳಲ್ಲಿ 393 ಪಿಎಚ್‌.ಡಿ. ಸೀಟುಗಳಿವೆ. ಆದರೆ, ಹೆಚ್ಚಿನ ಕೇಂದ್ರಗಳಲ್ಲಿ ಮೂಲಸೌಕರ್ಯ, ಪಿಎಚ್‌.ಡಿ ಗೈಡ್‌ಗಳಿಲ್ಲ. ಇನ್ನು, ಕೆಲವು ಕೇಂದ್ರಗಳಲ್ಲಿ ಅನೇಕ ವರ್ಷಗಳಿಂದ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ನಿರಾಸಕ್ತಿ ತೋರಿಸುತ್ತಿದ್ದಾರೆ. ಉಡುಪಿ, ಉಜಿರೆ ಕೇಂದ್ರಗಳಲ್ಲಿ ಸಂಶೋಧನೆಗೆ ವಿದ್ಯಾರ್ಥಿಗಳು ಆಸಕ್ತಿಯೇ ತೋರಿಸುತ್ತಿಲ್ಲ ಎಂದು ಗೊತ್ತಾಗಿದೆ. ಹೀಗಿರುವಾಗ ಸೀಟು ಹೆಚ್ಚಳ ನಿರ್ಧಾರ ಸರಿಯಲ್ಲ ಎನ್ನುವುದು ಕೆಲವರ ಅನಿಸಿಕೆ. ಆದರೆ, ಉತ್ತರ ಕರ್ನಾಟಕದ ಬಹುತೇಕ ಕೇಂದ್ರಗಳಲ್ಲಿ ಸಂಶೋಧನೆ ಕೈಗೊಳ್ಳಲು ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿದ್ದಾರೆ. ನೂರಾರು ಅರ್ಜಿಗಳು ಬರುತ್ತಿರುವುದರಿಂದ ಆಯಾ ಕೇಂದ್ರಗಳ ಮನವಿ ಮೇರೆಗೆ ಸೀಟುಗಳ ಸಂಖ್ಯೆ ಹೆಚ್ಚಿಸಲಾಗಿದೆ ಎನ್ನುವುದು ವಿ.ವಿ. ಆಡಳಿತದ ವಾದ.

ಮೂಲಸೌಕರ್ಯ, ಗೈಡ್‌ಗಳ ಸಮಸ್ಯೆ:ವಿ.ವಿ. ವ್ಯಾಪ್ತಿಯ ಹೆಚ್ಚಿನ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳ ಕೊರತೆ, ಗೈಡ್‌ಗಳ ಸಮಸ್ಯೆ ಮೊದಲಿನಿಂದಲೂ ಕಾಡುತ್ತಿದೆ. ಈ ನಡುವೆ ಪಿಎಚ್‌.ಡಿ ಸೀಟುಗಳ ಸಂಖ್ಯೆ ಹೆಚ್ಚಿಸಿದರೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಸಂಶೋಧನೆ ಕೈಗೊಳ್ಳಲು ಸಾಧ್ಯವಾಗುತ್ತದೆಯೇ? ಇಂತಹದ್ದೊಂದು ಪ್ರಶ್ನೆ ಮೊದಲಿನಿಂದಲೂ ಇದೆ.

ಈ ಹಿಂದಿನ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಅವಧಿಯಲ್ಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪಿಎಚ್‌.ಡಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳ ಮಾರ್ಗದರ್ಶನಕ್ಕೆ ನಿಯಮ ಮೀರಿ ಗೈಡ್‌ಗಳನ್ನು ನೇಮಕಾತಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಸಲ ಹಾಲಿ ಆಡಳಿತ ಅದನ್ನು ಹೇಗೆ ನಿಭಾಯಿಸುತ್ತದೆ ಎಂಬ ಪ್ರಶ್ನೆ ಮೂಡಿದೆ.

‘ಆಯಾ ಕೇಂದ್ರಗಳಿಂದ ಗೈಡ್‌ಗಳ ನೇಮಕಾತಿಗೆ ಪ್ರಸ್ತಾವ ಬಂದರೆ, ಅದನ್ನು ಪರಿಶೀಲಿಸಲಾಗುವುದು. ಎಲ್ಲ ರೀತಿಯ ಅರ್ಹತೆ ಪೂರ್ಣಗೊಳಿಸಿದವರಿಗಷ್ಟೇ ಗೈಡ್‌ಗಳಾಗಿ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಎಲ್ಲೆಲ್ಲಿ ಮೂಲಸೌಕರ್ಯ ಕೊರತೆ ಇದೆಯೋ ಅದನ್ನು ನೀಗಿಸಲು ಈಗಾಗಲೇ ಕ್ರಮ ಜರುಗಿಸಲಾಗುತ್ತಿದೆ’ ಎಂದು ಕನ್ನಡ ವಿ.ವಿ. ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪಿಎಚ್‌.ಡಿ ಸೀಟುಗಳ ಸಂಖ್ಯೆ ಹೆಚ್ಚಿಸಿದರೆ ತಪ್ಪಿಲ್ಲ. ಆದರೆ, ಅದಕ್ಕೆ ಪೂರಕವಾಗಿ ಎಲ್ಲ ಕೇಂದ್ರಗಳಲ್ಲಿ ಸಕಲ ರೀತಿಯ ಸೌಕರ್ಯ ಒದಗಿಸಬೇಕು. ನುರಿತ ವಿಷಯ ತಜ್ಞರನ್ನು ಗೈಡ್‌ಗಳಾಗಿ ನೇಮಿಸಿಕೊಳ್ಳಬೇಕು’ ಎಂದು ವಿ.ವಿ. ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ.

*
ಸಿಂಡಿಕೇಟ್‌ ಸದಸ್ಯರು ಹಾಗೂ ಆಯಾ ಕೇಂದ್ರಗಳ ಮನವಿ ಮೇರೆಗೆ ಈ ಬಾರಿ ಪಿಎಚ್.ಡಿ. ಸೀಟುಗಳ ಸಂಖ್ಯೆ ಹೆಚ್ಚಿಸಲಾಗಿದೆ.
-ಪ್ರೊ. ಎ. ಸುಬ್ಬಣ್ಣ ರೈ, ಕುಲಸಚಿವ, ಹಂಪಿ ಕನ್ನಡ ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT