ಗುರುವಾರ , ಆಗಸ್ಟ್ 18, 2022
26 °C
ಆರಂಭಿಸಿದ್ದಕ್ಕೆ ಹಂಪಿ ಪ್ರಾಧಿಕಾರದಿಂದ ಕ್ರಮ

ಅನುಮತಿ ಪಡೆಯದೇ ನಿಯಮ ಉಲ್ಲಂಘನೆ: ಹಂಪಿ ಸುತ್ತಲಿನ 16 ರೆಸಾರ್ಟ್‌ ಬಂದ್‌

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಹಂಪಿ ಸುತ್ತಮುತ್ತಲಿನ 16 ರೆಸಾರ್ಟ್‌ಗಳಿಗೆ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು ಬೀಗ ಮುದ್ರೆ ಹಾಕಿದೆ.

ಅನುಮತಿ ಪಡೆದುಕೊಳ್ಳದೇ ಕೃಷಿ ಜಮೀನಿನಲ್ಲಿ ಈ ರೆಸಾರ್ಟ್‌ಗಳನ್ನು ನಡೆಸಲಾಗುತ್ತಿತ್ತು. ಕೆಲ ತಿಂಗಳ ಹಿಂದೆಯೇ ಕಾರಣ ಕೇಳಿ ಪ್ರಾಧಿಕಾರವು ನೋಟಿಸ್‌ ಜಾರಿ ಮಾಡಿತ್ತು. ಯಾರೊಬ್ಬರೂ ಸೂಕ್ತ ಕಾರಣ ನೀಡಿರಲಿಲ್ಲ. ಇಷ್ಟೇ ಅಲ್ಲ, ಎಚ್ಚರಿಕೆ ಕೊಟ್ಟರೂ ರೆಸಾರ್ಟ್‌ಗಳನ್ನು ನಡೆಸುತ್ತಿದ್ದರು.

ಇದನ್ನು ಗಂಭೀರವಾಗಿ ತೆಗೆದುಕೊಂಡ ಪ್ರಾಧಿಕಾರವು ಎಲ್ಲ ರೆಸಾರ್ಟ್‌ಗಳಿಗೆ ಕಲ್ಪಿಸಿದ್ದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಅನಂತರ ಎಲ್ಲಕ್ಕೂ ಬೀಗ ಮುದ್ರೆ ಹಾಕಿದೆ.

ವಿಶ್ವ ಪ್ರಸಿದ್ಧ ಹಂಪಿ, ಕಡ್ಡಿರಾಂಪುರ ಸುತ್ತಮುತ್ತ ಕೃಷಿ ಜಮೀನಿನಲ್ಲಿ 16 ರೆಸಾರ್ಟ್‌ಗಳು ತಲೆ ಎತ್ತಿದ್ದವು. ಸ್ಮಾರಕಗಳಿಗೆ ಹೊಂದಿಕೊಂಡಂತೆ ರೆಸಾರ್ಟ್‌ಗಳಿದ್ದರಿಂದ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗುತ್ತಿದ್ದರು. ಹೆಚ್ಚಿನ ಆದಾಯ ಗಳಿಸುತ್ತಿದ್ದರು. ಈಗ ಪ್ರಾಧಿಕಾರದ ಕ್ರಮದಿಂದ ರೆಸಾರ್ಟ್‌ಗಳು ಮುಚ್ಚಿರುವುದಲ್ಲದೇ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಉದ್ಯೋಗ ಕಳೆದುಕೊಂಡಿದ್ದಾರೆ.

ಅಂಜನಾದ್ರಿ ಬಳಿಕ ಒತ್ತಡ: ಕೆಲ ತಿಂಗಳ ಹಿಂದೆ ಪ್ರಾಧಿಕಾರವು ಅಂಜನಾದ್ರಿ, ಕಿಷ್ಕಿಂದೆ ಸುತ್ತಮುತ್ತ ಅನಧಿಕೃತವಾಗಿ ನಡೆಸುತ್ತಿದ್ದ 49 ರೆಸಾರ್ಟ್‌, ಹೋಟೆಲ್‌ಗಳನ್ನು ತೆರವುಗೊಳಿಸಿತ್ತು. ಆದರೆ, ಹಂಪಿ ಸುತ್ತಮುತ್ತಲಿನ ರೆಸಾರ್ಟ್‌ಗಳು ಯಾವುದೇ ಅಡೆತಡೆಯಿಲ್ಲದೇ ನಡೆಯುತ್ತಿದ್ದವು. ಪ್ರಾಧಿಕಾರ ಪಕ್ಷಪಾತ ನೀತಿ ಅನುಸರಿಸುತ್ತಿದೆ ಎಂದು ಅಂಜನಾದ್ರಿ, ಕಿಷ್ಕಿಂದೆ ಭಾಗದ ರೆಸಾರ್ಟ್‌ ಮಾಲೀಕರು ಆರೋಪಿಸಿದ್ದರು. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಗಮನಕ್ಕೂ ತಂದಿದ್ದರು. ಆದರೆ, ಪ್ರಾಧಿಕಾರ ಅಷ್ಟೊತ್ತಿಗೆ ಹಂಪಿ ಸುತ್ತಮುತ್ತಲಿನ ರೆಸಾರ್ಟ್‌ಗಳಿಗೆ ನೋಟಿಸ್‌ ನೀಡಿತ್ತು. ಈ ಬೆಳವಣಿಗೆ ನಂತರ ಎಲ್ಲ ರೆಸಾರ್ಟ್‌ಗಳನ್ನು ಮುಚ್ಚಿಸಿದೆ.

‘ಪ್ರವಾಸೋದ್ಯಮ ಬೆಳೆಯಬೇಕೆಂದರೆ ಪ್ರವಾಸಿಗರಿಗೆ ಎಲ್ಲ ರೀತಿಯ ಸವಲತ್ತು ಕಲ್ಪಿಸಿಕೊಡಬೇಕು. ಆ ಕೆಲಸ ಪ್ರಾಧಿಕಾರ ಮಾಡಿಲ್ಲ. ಸರ್ಕಾರಕ್ಕೆ ಸೇರಿದ ಒಂದೆರಡು ಹೋಟೆಲ್‌ಗಳಿವೆ. ವಾರಾಂತ್ಯಕ್ಕೆ ಸಾವಿರಾರು ಜನ ಹಂಪಿ, ಅಂಜನಾದ್ರಿಗೆ ಬಂದು ಹೋಗುತ್ತಾರೆ. ಎಲ್ಲ ರೆಸಾರ್ಟ್‌ಗಳು ಭರ್ತಿಯಾಗುತ್ತಿದ್ದವು. ಈಗ ಎಲ್ಲ ರೆಸಾರ್ಟ್‌ ಮುಚ್ಚಿಸಿದರೆ ಪ್ರವಾಸಿಗರು ಎಲ್ಲಿ ಉಳಿದುಕೊಳ್ಳುತ್ತಾರೆ? ನಿಯಮ ಸಡಿಲಿಸಿ ರೆಸಾರ್ಟ್‌ ನಡೆಸಲು ಅವಕಾಶ ಕಲ್ಪಿಸಬೇಕಿತ್ತು’ ಎಂದು ಹೆಸರು ಹೇಳಲಿಚ್ಛಿಸದ ರೆಸಾರ್ಟ್ ಮಾಲೀಕರು ಹೇಳಿದರು.

‘ರೆಸಾರ್ಟ್‌ಗಳಿಂದ ಮಾಲೀಕರಷ್ಟೇ ಅಲ್ಲ, ಸುತ್ತಮುತ್ತಲಿನ ಜನರಿಗೆ ಉದ್ಯೋಗಾವಕಾಶಗಳು ಸಿಕ್ಕಿದ್ದವು. ರೈತರು ನೇರವಾಗಿ ಅವರ ಉತ್ಪನ್ನಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಪ್ರವಾಸೋದ್ಯಮದಿಂದ ಉದ್ಯೋಗಗಳ ಸರಪಳಿಯೇ ಸೃಷ್ಟಿಯಾಗುತ್ತದೆ. ಆದರೆ, ಪ್ರಾಧಿಕಾರ ಯಾವುದನ್ನೂ ನೋಡದೇ ನಿಯಮದ ಹೆಸರಿನಲ್ಲಿ ರೆಸಾರ್ಟ್‌ಗಳನ್ನು ಮುಚ್ಚಿಸಿದೆ. ಇದರಿಂದ ಐಷಾರಾಮಿ ಹೋಟೆಲ್‌ಗಳವರಿಗೆ ಲಾಭವಾಗುತ್ತದೆ’ ಎಂದು ತಿಳಿಸಿದರು.

*
ಹಂಪಿ ಸುತ್ತಮುತ್ತ ಅನುಮತಿ ಪಡೆಯದೇ ಕೃಷಿ ಜಮೀನಿನಲ್ಲಿ ನಡೆಸುತ್ತಿದ್ದ 16 ರೆಸಾರ್ಟ್‌ಗಳನ್ನು ಮುಚ್ಚಿಸಲಾಗಿದೆ
–ಸಿದ್ದರಾಮೇಶ್ವರ, ಆಯುಕ್ತ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು