ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ | ಡೆಂಗಿ ಜ್ವರ: ನಿರ್ಲಕ್ಷ್ಯ ಬೇಡ

ಆರೋಗ್ಯ ಇಲಾಖೆಯಿಂದ ಜಾಗೃತಿ: ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ
Published 16 ಮೇ 2024, 14:07 IST
Last Updated 16 ಮೇ 2024, 14:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಕಚೇರಿಗಳ ವತಿಯಿಂದ ‘ಸಮುದಾಯದೊಂದಿಗೆ ಸೇರಿ ಡೆಂಗಿ ನಿಯಂತ್ರಿಸೋಣ’ ಎಂಬ ಘೋಷವಾಕ್ಯದೊಂದಿಗೆ ನಗರದಲ್ಲಿ ಗುರುವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ. ಹಸಿರು ನಿಶಾನೆ ತೋರಿಸಿದರು.

‘ಡೆಂಗಿ ಜ್ವರವನ್ನು ಜನರು ನಿರ್ಲಕ್ಷಿಸದೆ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂಗಾರು ಪೂರ್ವ, ಮುಂಗಾರು ಮತ್ತು ಮುಂಗಾರಿನ ನಂತರದ ಸಮಯದಲ್ಲಿ ಡೆಂಗಿ ಸೊಳ್ಳೆಗಳ ಸಂತತಿ ತೀವ್ರ ಪ್ರಮಾಣದಲ್ಲಿ ಇರುತ್ತದೆ. ಎಚ್ಚರಿಕೆ ವಹಿಸದಿದ್ದರೆ ಡೆಂಗಿ ಮಾರಣಾಂತಿಕವಾಗಬಹುದು’ ಎಂದು ತಿಳಿಸಿದರು.

‘ಡೆಂಗಿ ಲಕ್ಷಣ, ಹೇಗೆ ಮುಂಜಾಗ್ರತೆ ವಹಿಸಬೇಕು ಎಂದು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಳ್ಳಲಾಗುವುದು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಶಂಕರ ನಾಯ್ಕ ಮಾತನಾಡಿ, ‘ರೋಗಗಳು ಬಂದಮೇಲೆ ಚಿಕಿತ್ಸೆ ಪಡೆಯುವ ಬದಲಿಗೆ ಮುಂಜಾಗ್ರತೆ ವಹಿಸುವುದು ಸೂಕ್ತ. ಜನರು ಮನೆಯಲ್ಲಿ ಶೇಖರಿಸಿದ ನೀರನ್ನು ಆಗಾಗ ಬದಲಿಸುತ್ತಿರಬೇಕು’ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ ದೊಡ್ಡಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ, ಬೆಳಗಾವಿಯ ಡಾ. ಸಿದ್ಧಲಿಂಗಯ್ಯ ಇದ್ದರು.

ಹಗಲು ಹೊತ್ತಲ್ಲಷ್ಟೇ ಕಚ್ಚುವ ಸೊಳ್ಳೆ

ಈಡೀಸ್ ಈಜಿಪ್ಟೆ ಸೊಳ್ಳೆ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಇದರಿಂದ ಡೆಂಗಿ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಮೂರಕ್ಕಿಂತ ಹೆಚ್ಚು ದಿನಗಳಿಂದ ಜ್ವರ ವಿಪರೀತ ತಲೆನೋವು ಕಣ್ಣುಗಳ ಹಿಂಭಾಗ ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ತಕ್ಷಣವೇ ಆಶಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎನ್ನುವ ಮಾಹಿತಿಯ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT