ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಗರಿಬೊಮ್ಮನಹಳ್ಳಿ: ಮದಗಜಗಳಂತೆ ಕಾದಾಡಿದ ಪೈಲ್ವಾನರು

ಲೋಕಪ್ಪನಹೊಲದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ
Published 24 ಮೇ 2024, 5:40 IST
Last Updated 24 ಮೇ 2024, 5:40 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಒಂದು ವಾರದಿಂದ ಆರ್ಭಟಿಸಿದ್ದ ಮಳೆರಾಯ ಮೂರು ದಿನಗಳಿಂದ ಕೊಂಚ ವಿರಾಮ ನೀಡಿದ್ದು, ಸಾವಿರಾರು ಕುಸ್ತಿ ಪ್ರೇಮಿಗಳಿಗೆ ಸಂತಸ ತಂದಿತ್ತು.

ತಾಲ್ಲೂಕಿನ ಲೋಕಪ್ಪನಹೊಲ ಗ್ರಾಮದಲ್ಲಿ ಗುಳೇಲಕ್ಕಮ್ಮ ಹಾಗೂ ಊರಮ್ಮ ದೇವಿ ಜಾತ್ರೋತ್ಸವ ಅಂಗವಾಗಿ ಗುರುವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯ ಅಖಾಡ ರಂಗೇರಿತು.

ಮಧ್ಯಾಹ್ನದ ಇಳಿ ಬಿಸಿಲು ನೆತ್ತಿಗೆ ಚುರುಕು ಮುಟ್ಟಿಸಿದರೂ ಜನರು ಮಾತ್ರ ಧ್ಯಾನಸ್ಥರಾಗಿ ಕುಸ್ತಿ ವೀಕ್ಷಿಸಿದರು. ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿದ್ದ ಪೈಲ್ವಾನರ ಕಾದಾಟ ಪ್ರೇಕ್ಷಕರಿಗೆ ನಿಜವಾದ ರಸದೌತಣ ನೀಡಿತ್ತು. ಅಖಾಡದ ಸುತ್ತಲೂ ಸಾವಿರಾರು ಜನ ಜಮಾಯಿಸಿದ್ದರು.

ದಾವಣಗೆರೆಯ ಗಿರೀಶ್ ಅವರು ಮಹಾರಾಷ್ಟ್ರದ ಯುವರಾಜ್ ಮತ್ತು ಕಲಬುರಗಿಯ ಸಿದ್ದಪ್ಪ ಅವರನ್ನು ಮಣಿಸಿ ‘ನಾಣಿಕೇರಿ ಪ್ರಶಸ್ತಿ’ ಜತೆ ಬೆಳ್ಳಿಗದೆ ಮತ್ತು ₹15ಸಾವಿರ ನಗದು ಪಡೆದರು.

ಅಂತಿಮ ಪಂದ್ಯದಲ್ಲಿ ಪರಸ್ಪರ ಮದಗಜಗಳಂತೆ ಕಾದಾಡಿ ಪಟ್ಟಿಗೆ ಪಟ್ಟು ಹಾಕುತ್ತಾ ಮಣ್ಣು ಮುಕ್ಕಿಸಿದರು. 20ನಿಮಿಷಗಳ ಹೋರಾಟವನ್ನು ಕುಸ್ತಿ ಪ್ರಿಯರು ತುದಿಗಾಲಲ್ಲಿ ನಿಂತು ವೀಕ್ಷಿಸಿದರು.

ಇದಕ್ಕೂ ಮುನ್ನ ನಡೆದ ಕಾದಾಟದಲ್ಲಿ ಮಾಸೂರು ಅಬ್ದುಲ್ ಅವರು ಬೆಳಗಾವಿಯ ಅನಿಲ್ ಅವರನ್ನು, ಸುನಿಲ್ ಬೆಳಗಾವಿ ಅವರು ರವಿ ಬಾಗಲಕೋಟೆ ಅವರನ್ನು ಕೇವಲ ಎರಡು ನಿಮಿಷಗಳಲ್ಲಿ ಚಿತ್ ಮಾಡಿದರು.

ಧಾರವಾಡದ ಬಸಪ್ಪ ಅವರಂತೂ ರುದ್ರಪ್ಪ ಮಲ್ಲಾಪುರ ಅವರನ್ನು ಕುಕ್ಕಿಕುಕ್ಕಿ ಸೋಲುಣಿಸಿದರು, ಎದುರಾಳಿ ಕೆಲಕಾಲ ಅಖಾಡದಿಂದ ಮೇಲೆ ಏಳಲಿಲ್ಲ. ಹಂಪಿ ಕುಮಾರ ಪ್ರಶಸ್ತಿ ಪಡೆದ ಪೈಲ್ವಾನ್ ಮಂಜು ಹಂಪಿನಕಟ್ಟಿ ಜಮಖಂಡಿಯ ಜಾವಿದ್ ಅವರನ್ನು ಮಣಿಸಿದರು. ಹಂಪಿ ಕೇಸರಿ ಪ್ರಶಸ್ತಿ ಪಡೆದಿದ್ದ ಮರಿಯಮ್ಮನಹಳ್ಳಿಯ ಹನುಮಂತ ಬೆಳಗಾವಿಯ ನಿಖಿಲ್, ಅವರಿಗೆ ವರುಣ್ ದಾವಣಗೆರೆ ಅವರು ಮಧು ಧಾರವಾಡ ಅವರಿಗೆ, ಶಿಕಾರಿಪುರದ ಫೈರೂಜ್ ಅವರು ಭದ್ರಾವತಿಯ ಮಧು ಅವರಿಗೆ, ಬೆಳಗಾವಿಯ ಪರಶುರಾಂ ಅವರು ಜಮಖಂಡಿಯ ಸಾದಿಕ್ ಅವರಿಗೆ ಸೋಲುಣಿಸಿದರು.

ಪೈಲ್ವಾನರೆಲ್ಲ ಕಲ್ಲರ್ಜಿಂಗ್, ಏಕಲಾಂಗ್, ಸವಾರಿ, ಹೊರಕಾಲು ಸೇರಿದಂತೆ ಅನೇಕ ಪಟ್ಟುಗಳನ್ನು ಪ್ರದರ್ಶಿಸಿ ಎದುರಾಳಿ ಎದುರಾಳಿಗಳನ್ನು ಮಣ್ಣುಮುಕ್ಕಿಸಿದರು. ಪೈಲ್ವಾನರು ತಂತ್ರಗಳನ್ನು ಪ್ರಯೋಗಿಸಿದಾಗಲೊಮ್ಮೆ ಪ್ರೇಕ್ಷಕರಿಂದ ಶಿಳ್ಳೆ, ಕೇಕೆ, ಕರಾಡತನ ವ್ಯಕ್ತವಾಯಿತು. ಗ್ರಾಮದ ಸೋಮಣ್ಣೆಪ್ಪ, ದೊಡ್ಡ ಹಲೀಫ್, ಚೌಟ್ಗಿ ಬಸವರಾಜ, ತಂಬ್ರಹಳ್ಳಿ ಹನುಮಂತ, ಕೆ.ಬಿ.ಸತೀಶ್, ಕೊಡ್ಲಿ ನಾಗಪ್ಪ, ದುರುಗಪ್ಪ, ಡಿ.ಮಂಜುನಾಥ ನಿರ್ಣಾಯಕರಾಗಿದ್ದರು.

ರಾಜಸ್ಥಾನದ ಕಿಶೋರ್ ಕುಮಾರ್ ಮತ್ತು ಮಹಾರಾಷ್ಟ್ರದ ಯುವರಾಜ್ ಪರಸ್ಪರ ಸೆಣಸಾಡಿಸಿದರು
ರಾಜಸ್ಥಾನದ ಕಿಶೋರ್ ಕುಮಾರ್ ಮತ್ತು ಮಹಾರಾಷ್ಟ್ರದ ಯುವರಾಜ್ ಪರಸ್ಪರ ಸೆಣಸಾಡಿಸಿದರು

ಅಂತರರಾಜ್ಯ ಕುಸ್ತಿಪಟುಗಳ ರಸದೌತಣ

ಅಖಾಡದಲ್ಲಿ ಅಂತರರಾಜ್ಯ ಪೈಲ್ವಾನರು ನೆರೆದಿದ್ದ ಕುಸ್ತಿ ಪ್ರೇಮಿಗಳನ್ನು ನಿರಾಸೆಗೊಳಿಸಲಿಲ್ಲ. ರಾಜಸ್ಥಾನದ ಕಿಶೋರ್ ಕುಮಾರ್ ಮಹಾರಾಷ್ಟ್ರದ ಯುವರಾಜ್ ಅವರನ್ನು ಕೇವಲ ಐದು ನಿಮಿಷಗಳಲ್ಲಿ ಚಿತ್ ಮಾಡಿದರು. ಪಂಜಾಬ್‍ನ ಸಿಂಧುಸಿಂಗ್ ಅವರನ್ನು ಹರಿಯಾಣದ ಪವನ್‍ಕುಮಾರ್ ಅವರು 25 ನಿಮಿಷಗಳ ಕಾದಾಟದ ಬಳಿಕ ಚಿತ್ ಮಾಡಿ ನಗದು ಬಹುಮಾನ ಪಡೆದರು. ಮತ್ತೊಂದು ಪಂದ್ಯದಲ್ಲಿ ಮೈಸೂರಿನ ಸುತ್ತೂರು ಕೇಸರಿ ವಿಜೇತ ನಿತಿನ್ ಹಾಗೂ ಉತ್ತರ ಪ್ರದೇಶದ ಉದಯಕುಮಾರ ಯಾದವ್ ಅವರು 20ನಿಮಿಷಗಳಿಗೂ ಅಧಿಕ ಕಾಲ ಸೆಣಿಸಿದರೂ ಫಲಿತಾಂಶ ಮಾತ್ರ ಸಮಬಲವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT