ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮುರಿದು ಹೋಗಿರುವ ಕಾರಣ ಭಾರಿ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡುತ್ತಿದ್ದು, ಪ್ರವಾಸಿಗರಿಗೆ ಅಣೆಕಟ್ಟೆ ವೀಕ್ಷಣೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಸಾಮಾನ್ಯವಾಗಿ ಶನಿವಾರ, ಭಾನುವಾರ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಶನಿವಾರ ಮಧ್ಯರಾತ್ರಿ ಗೇಟ್‌ನ ಚೈನ್ ಲಿಂಕ್ ಕಳಚಿ ಕ್ರಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿರುವ ಕಾರಣ ಅಣೆಕಟ್ಟೆಯಿಂದ ಅಧಿಕ ಪ್ರಮಾಣದಲ್ಲಿ ನೀರು ಹೊರಬರುತ್ತಿದೆ.
ಹೊಸ ಗೇಟ್ ಅಳವಡಿಕೆಗೆ 20 ಅಡಿಯಷ್ಟು (60 ಟಿಎಂಸಿ ಅಡಿ ನೀರು ಸಂಗ್ರಹ ಖಾಲಿಮಾಡಬೇಕು) ನೀರಿನ ಮಟ್ಟ ತಗ್ಗಿಸಬೇಕಿದ್ದು, ಅದಕ್ಕಾಗಿ ಸದ್ಯ ಎಲ್ಲಾ 33 ಗೇಟ್‌ಗಳನ್ನು ತೆರೆದು 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಬಿಡಲಾಗುತ್ತಿದೆ. ಕೆಲವೇ ಗಂಟೆಗಳಲ್ಲಿ ಆ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿನ ಟಿ.ಬಿ.ಡ್ಯಾಂ ಪ್ರವೇಶ ದ್ವಾರದಲ್ಲಿ 50ಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಅತಿ ಗಣ್ಯರು, ಅಧಿಕಾರಿಗಳು, ಆಯ್ದ ಮಾಧ್ಯಮದವರನ್ನು ಹೊರತಾಗಿ ಯಾರನ್ನೂ ಒಳಗೆ ಬಿಡುತ್ತಿಲ್ಲ.
ಮುನಿರಾಬಾದ್ ಸೇತುವೆ ಮೇಲಿನಿಂದಲೇ ಅಣೆಕಟ್ಟೆಯ ಗೇಟ್ ಒಡೆದಿರುವುದು ರಭಸವಾಗಿ ಹರಿಯುತ್ತಿರುವ ನೀರಿನ ಕಾರಣದಿಂದ ಕಾಣಿಸುತ್ತಿದ್ದು, ಹೆದ್ದಾರಿಯಲ್ಲೇ ನಿಂತು ಜನರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.