ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಷ್ಟೇ ನೀರು ಬಿಟ್ಟರೂ ಆತಂಕ ಬೇಡ: ತುಂಗಭದ್ರಾ ಜಲಾಶಯ ಮಂಡಳಿ

Published : 11 ಆಗಸ್ಟ್ 2024, 6:20 IST
Last Updated : 11 ಆಗಸ್ಟ್ 2024, 6:20 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯನ್ನು ಗರಿಷ್ಠ 6.5 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ ಮಾಡಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಹೀಗಾಗಿ ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ನದಿ ಪಾತ್ರದ ಜನರು ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್‌.ಕೆ.ರೆಡ್ಡಿ ಭರವಸೆ ನೀಡಿದ್ದಾರೆ.

ಈ ಬಗ್ಗೆ ಭಾನುವಾರ ಲಿಖಿತ ಹೇಳಿಕೆ ಬಿಡುಗಡೆ ಮಾಡಿರುವ ಅವರು, 1992ರ ಡಿಸೆಂಬರ್‌ನಲ್ಲಿ ತುಂಗಭದ್ರಾ ಅಣೆಕಟ್ಟೆಯಿಂದ 3.65 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗಿತ್ತು. ಈ ಅಣೆಕಟ್ಟೆಯಿಂದ ಹೊರಬಿಟ್ಟ ಗರಿಷ್ಠ ಪ್ರಮಾಣದ ನೀರು ಅದೇ ಆಗಿದೆ. ಸದ್ಯ ಮಳೆ ಕಡಿಮೆಯಾಗಿರುವುದರಿಂದ ಜನ ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದ್ದಾರೆ.

ತುಂಗಭದ್ರಾ ನದಿಯ ಕೆಳಭಾಗದಲ್ಲಿ ರಾಜೋಲಿಬಂಡಾ ತಿರುವು ಯೋಜನೆ ಮತ್ತು ಸುಂಕೆಸುಲಾ ಬ್ಯಾರೇಜ್‌ಗಳಿವೆ. ಇವುಗಳನ್ನು ಕ್ರಮವಾಗಿ 7.65 ಲಕ್ಷ ಕ್ಯುಸೆಕ್‌ ಮತ್ತು 2.08 ಲಕ್ಷ ಕ್ಯುಸೆಕ್‌ ಪ್ರವಾಹ ನೀರು ನಿಭಾಯಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಅಷ್ಟು ಪ್ರಮಾಣದಲ್ಲಿ ನೀರು ಬಿಡುಗಡೆ ಈಗ ಆಗುವುದಿಲ್ಲವಾದ ಕಾರಣ ಕೆಳಭಾಗದ ಬ್ಯಾರೇಜ್‌, ಅಣೆಕಟ್ಟೆಗಳಿಗೂ ಯಾವುದೇ ಅಪಾಯ ಇಲ್ಲ ಎಂದು ಅವರು ಹೇಳಿದ್ದಾರೆ.

ಅಣೆಕಟ್ಟೆಯ ಒಟ್ಟು ಉದ್ದ 1,798.28 ಮೀಟರ್. ಈ ಪೈಕಿ ನೀರನ್ನು ತಡೆಹಿಡಿಯುವ ತಡೆಗೋಡೆಯ ಉದ್ದ ಬಲಭಾಗದಲ್ಲಿ 1,097.28 ಮೀಟರ್ ಉದ್ದ ಇದೆ ಹಾಗೂ ಎಡಭಾಗದಲ್ಲಿ 483.72 ಮೀಟರ್‌ ಇದೆ. 33 ಕ್ರಸ್ಟ್‌ಗೇಟ್‌ ಅಳವಡಿಸಿದ ಸ್ಥಳ 701 ಮೀಟರ್‌ನಷ್ಟು ಉದ್ದವಿದೆ. ಈ ಕ್ರಸ್ಟ್‌ಗೇಟ್‌ಗಳನ್ನು 1955ರಲ್ಲಿ ಅಳವಡಿಸಲಾಗಿದೆ. ಜಲಾಶಯದ ವ್ಯಾಪ್ತಿ 378.10 ಚದರ ಕಿ.ಮೀ.ಒಳಗೊಂಡಿದೆ. ಇಂತಹ ಅಣೆಕಟ್ಟೆಯಲ್ಲಿ ಕ್ರಸ್ಟ್‌ಗೇಟ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಮೇಲಕ್ಕೆ ಎತ್ತಬಹುದಾದ ಮತ್ತು ಕೆಳಕ್ಕೆ ಇಳಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲ ಗೇಟ್‌ಗಳಿಗೆ ಕಳೆದ ಮೇ ತಿಂಗಳಲ್ಲೇ ಗ್ರೀಸಿಂಗ್‌, ಆಯಿಲ್‌ ಫಿಲ್ಲಿಂಗ್‌ಗಳೆನ್ನೆಲ್ಲ ನಡೆಸಲಾಗಿತ್ತು ಎಂದು ಕಾರ್ಯದರ್ಶಿ ಅವರು ಮಾಹಿತಿ ನೀಡಿದ್ದಾರೆ.

10.50 ಸರಿಯಾದ ಸಮಯ: ಈಗಾಗಲೇ ತಿಳಿದಂತೆ ಶನಿವಾರ ರಾತ್ರಿ 11.30ರಿಂದ 12ರ ನಡುವೆ ಗೇಟ್ ಮುರಿದುದಲ್ಲ, ಬದಲಿಗೆ ರಾತ್ರಿ 10.50ಕ್ಕೆ ಗೇಟ್ ಮುರಿದಿತ್ತು ಎಂಬ ಮಾಹಿತಿಯನ್ನು ಕಾರ್ಯದರ್ಶಿ ಅವರು ನೀಡಿದ್ದಾರೆ. ನೀರಿನ ರಭಸಕ್ಕೆ ಗೇಟ್ ಕೊಚ್ಚಿಕೊಂಡು ಹೋಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ. ಸದ್ಯ ಗೇಟ್‌ ಎಲ್ಲಿದೆ ಎಂಬುದು ಗೊತ್ತಾಗಿಲ್ಲ.

16 ಗೇಟ್ ಆಂಧ್ರದ್ದು, 17ರಿಂದ 33 ಕರ್ನಾಟಕದ್ದು
ತುಂಗಭದ್ರಾ ಅಣೆಕಟ್ಟೆಯ 1ರಿಂದ 16ರವರೆಗಿನ ಕ್ರಸ್ಟ್‌ಗೇಟ್‌ಗಳು ಆಂಧ್ರಪ್ರದೇಶಕ್ಕೆ ಸೇರಿದ್ದಾಗಿದ್ದು, 17ರಿಂದ 33ರವರೆಗಿನ ಗೇಟ್‌ಗಳು ಕರ್ನಾಟಕಕ್ಕೆ ಸೇರಿದ್ದು ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ. ಸದ್ಯ 19ನೇ ಗೇಟ್‌ ಕೊಚ್ಚಿಕೊಂಡು ಹೋಗಿದ್ದರೂ, ಎರಡೂ ರಾಜ್ಯಗಳ ಅಧಿಕಾರಿಗಳು, ಎಂಜಿನಿಯರ್‌ಗಳು ಒಟ್ಟಾಗಿ ಸಮಾಲೋಚನೆ ನಡೆಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.

ರೈತರ ಆತಂಕ: ಈ ಬಾರಿ ನದಿಯಲ್ಲಿ ಸಾಕಷ್ಟು ನೀರು ಹರಿದು ಬಂದಿರುವ ಕಾರಣ ಎರಡು ಬೆಳೆಗೆ ನೀರು ಸಿಗುವುದು ನಿಶ್ಚಿತ ಎಂದು ರಾಜ್ಯದ ನಾಲ್ಕೂ ಜಿಲ್ಲೆಗಳ ಹಾಗೂ ಆಂಧ್ರ, ತೆಲಂಗಾಣದ ಮೂರು ಜಿಲ್ಲೆಗಳ ರೈತರು ನಿರೀಕ್ಷಿಸಿದ್ದರು. ಆದರೆ ಅವರ ನಿರೀಕ್ಷೆ ಈ ಗೇಟ್ ತುಂಡಾಗುವ ಮೂಲಕ ಛಿದ್ರವಾಗಿದೆ.

ಈ ಬಗ್ಗೆ ಹಲವು ಮುಖಂಡರು ‘ಪ್ರಜಾವಾಣಿ’ ಜತೆಗೆ ತಮ್ಮ ಆತಂಕ ಹಂಚಿಕೊಂಡರು. ಸರ್ಕಾರ ತಕ್ಷಣ ಅಣೆಕಟ್ಟೆಯ ನೀರಿನ ಸಂಗ್ರಹವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೊಸಪೇಟೆಯ ರೈತ ಮುಖಂಡ ಸಣ್ಣಕ್ಕಿ ರುದ್ರಪ್ಪ ಒತ್ತಾಯಿಸಿದರು.

ಬಾಗಿನ ಅರ್ಪಣೆ ರದ್ದು?
ತುಂಬಿ ತುಳುಕುತ್ತಿರುವ ತುಂಗಭದ್ರಾ ಅಣೆಕಟ್ಟೆಗೆ ಇದೇ 13ರಂದು ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬರುವವರಿದ್ದರು. ಈ ನಿಟ್ಟಿನಲ್ಲಿ ಸ್ವಾಗತ ಕಮಾನುಗಳನ್ನು ಸಹ ಅಳವಡಿಸಲಾಗಿತ್ತು. ಆದರೆ ಈ ಕಾರ್ಯಕ್ರಮ ರದ್ದಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT