ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ನದಿಯಲ್ಲಿ ನೀರು ಹರಿದರಷ್ಟೇ ಸಮಾಧಾನ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್

Published 29 ಮಾರ್ಚ್ 2024, 5:27 IST
Last Updated 29 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ತುಂಗಭದ್ರಾ ಜಲಾಶಯದಲ್ಲಿ ಎಷ್ಟು ನೀರಿದೆ, ಕೈಗಾರಿಕೆಗಳಿಗೆ ಎಷ್ಟು ನೀರು ಬಿಡಲಾಗಿದೆ ಎಂಬುದೆಲ್ಲ ಜಿಲ್ಲೆಯ ನೀರಿನ ವಿಚಾರದಲ್ಲಿ ನಗಣ್ಯವಾಗುತ್ತದೆ. ನದಿಯಲ್ಲಿ ನೀರು ಹರಿದುಬರುವುದಷ್ಟೇ ಮುಖ್ಯವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್‌ ಹೇಳಿದ್ದಾರೆ.

‘ಪ್ರತಿಭಟನೆ ನಡೆಸುವವರು ಭದ್ರಾ ಜಲಾಶಯದಿಂದ ನೀರು ನದಿಗೆ ಹರಿಸುವಂತೆ ಪ್ರತಿಭಟಿಸಿದರೆ ಜಿಲ್ಲೆಯ ಜನತೆಗೆ ಅನುಕೂಲವಾಗುತ್ತದೆ. ಅದರ ಹೊರತಾಗಿ ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ ವಿಚಾರದಲ್ಲಿ ಪ್ರತಿಭಟನೆ, ಮನವಿ ಕೊಡುವುದೆಲ್ಲ ವ್ಯರ್ಥ. ಏಕೆಂದರೆ ಹೊಸಪೇಟೆ ನಗರಕ್ಕಂತೂ ಜಲಾಶಯದಿಂದ ನೀರು ಸಿಕ್ಕೇ ಸಿಗುತ್ತದೆ. ಜಿಲ್ಲೆಯ ಉಳಿದ ಭಾಗಗಳಿಗೆ ಈ ಜಲಾಶಯದಿಂದ ನೀರು ಲಭ್ಯವಾಗುವುದಿಲ್ಲ. ಹೀಗಾಗಿ ಜಲಾಶಯದ ಮೇಲ್ಭಾಗದಲ್ಲಿ, ನದಿಯಲ್ಲಿ ನೀರು ಹರಿಯುವುದರತ್ತ ನಮ್ಮ ಗಮನ ಇರಬೇಕಾಗುತ್ತದೆ’ ಎಂದು ಅವರು ಗುರುವಾರ ತಮ್ಮನ್ನು ಭೇಟಿ ಮಾಡಿದ ‘ಪ್ರಜಾವಾಣಿ’ಗೆ ತಿಳಿಸಿದರು.

‘ತುಂಗಭದ್ರಾ ಜಲಾಶಯದಿಂದ ಬೆಳೆಗೆ ನೀರು ಹರಿಸಿದಿರಿ, ಆಂಧ್ರಕ್ಕೆ ಕೊಟ್ಟಿರಿ, ಕೈಗಾರಿಕೆಗಳಿಗೆ ಕೊಟ್ಟಿರಿ, ನೀರು ಲಭ್ಯ ಇಲ್ಲ ಎಂದರೆ ಹೇಗೆ?’ ಎಂದು ಈ ಭಾಗದ ಹಲವರು ಪ್ರಶ್ನಿಸುತ್ತಾರೆ. ಆದರೆ ಅವರು ವಾಸ್ತವ ತಿಳಿದುಕೊಂಡಿಲ್ಲ ಎಂದೇ ಹೇಳಬೇಕಾಗುತ್ತದೆ. ಹರಪನಹಳ್ಳಿ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ತಾಲ್ಲೂಕುಗಳು ತುಂಗಭದ್ರಾ ನದಿಯ ನೀರನ್ನೇ ಅವಲಂಬಿಸಿವೆ. ಈ ವರ್ಷ ಮಳೆ ಕಡಿಮೆಯಾಗಿದ್ದರಿಂದ ಆಗಸ್ಟ್‌ ವೇಳೆಗೇ ನದಿಯಲ್ಲಿ ನೀರು ಹರಿಯುವಿಕೆ ಸ್ಥಗಿತಗೊಂಡಿತ್ತು. ಬರಗಾಲದ ಕರಾಳ ಛಾಯೆ ಇದು. ಶಿವಮೊಗ್ಗ ಜಿಲ್ಲೆ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಬಿಡುಗಡೆಯಾಗುವ ನೀರಷ್ಟೇ ನಮಗೆ ಕುಡಿಯುವ ನೀರಿನ ಆಸರೆಯಾಗಿದೆ’ ಎಂದು ಅವರು ವಿವರಿಸಿದರು.

ನದಿಯಲ್ಲಿ ಅಲ್ಲಲ್ಲಿ ತೋಡಿರುವ ಹೊಂಡಗಳನ್ನು ತುಂಬಿ ಕೆಳಗೆ ಬರುವಾಗ ಹಲವೆಡೆ ನೀರು ಪೋಲಾಗುತ್ತದೆ. ಸಿಂಗಟಾಲೂರು ಬ್ಯಾರೇಜ್‌ಗೆ ಬರುವ ಹೊತ್ತಿಗೆ ಅರ್ಧ ಟಿಎಂಸಿ ಅಡಿ ನೀರು ಸಹ ಸಿಗುವುದಿಲ್ಲ. ಇಷ್ಟೇ ನೀರಲ್ಲೇ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ದಾಹ ತೀರಬೇಕಿದ್ದು, ಸದ್ಯ ಜಿಲ್ಲೆಯ ಐದು ತಾಲ್ಲೂಕುಗಳು ಈ ನೀರಿನ ಬರುವಿಕೆಗಾಗಿ ಕಾದು ಕುಳಿತಿವೆ.

ಒಂಬತ್ತು ದಿನ ನೀರು

ವಿಜಯನಗರ ಗದಗ ಹಾವೇರಿ ಕೊಪ್ಪಳ ಭಾಗದ ಕುಡಿಯುವ ನೀರಿನ ಸಮಸ್ಯೆಯ ಕುರಿತಂತೆ ಸರ್ಕಾರ ಮಟ್ಟದಲ್ಲಿ ಚರ್ಚಿಸಿದ್ದರ ಫಲವಾಗಿ ಶುಕ್ರವಾರ ರಾತ್ರಿಯಿಂದ ಏಪ್ರಿಲ್‌ 5ರ ರಾತ್ರಿಯವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್‌ ನೀರನ್ನು ಭದ್ರಾ ಜಲಾಶಯದಿಂದ ಹರಿಸಲಾಗುತ್ತದೆ. ಏಪ್ರಿಲ್‌ 6ರಂದು 2200 ಕ್ಯೂಸೆಕ್‌ ನೀರು ಹರಿಸಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

ಭದ್ರಾ ಜಲಾಶಯದಿಂದ ನೀರು ಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಬಲ ವಾದ ಮಂಡಿಸಿದೆ. 3 ಟಿಎಂಸಿ ಅಡಿ ನೀರು ಕೇಳಿದ್ದೆವು 2 ಟಿಎಂಸಿ ಅಡಿ ಬಿಡುಗಡೆಗೆ ಸಮ್ಮತಿಸಿದ್ದಾರೆ.
–ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT