ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ (ಸ್ಟಾಪ್‌ಲಾಗ್ ಗೇಟ್) ಅಳವಡಿಕೆ ಯಶಸ್ವಿಯಾಗಿರುವುದು ಶನಿವಾರ ಬೆಳಿಗ್ಗೆ ಖಚಿತವಾಗಿದ್ದು, ಇದೀಗ ಗೇಟ್‌ನ ಮೇಲ್ಭಾಗದಲ್ಲಿ ಒಂದು ಅಡಿಯಷ್ಟು ಎತ್ತರಕ್ಕೆ ನೀರು ನದಿಗೆ ಹರಿಯುತ್ತಿದೆ.
ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಮೊದಲ ಗೇಟ್ ಎಲಿಮೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು.
ಜಿಂದಾಲ್ ಕಂಪನಿಯಲ್ಲಿ ತಯಾರಾದ ಗೇಟ್ ಎಲಿಮೆಂಟ್ ಅನ್ನು ಮೊದಲಾಗಿ ಅಳವಡಿಸಲಾಗಿದೆ. ಅದೇ ಕಂಪನಿಯಿಂದ ಇನ್ನೂ ಎರಡು ಗೇಟ್‌ಗಳು ಈಗಾಗಲೇ ಅಣೆಕಟ್ಟೆ ತಲುಪಿದ್ದು, ಅದನ್ನು ಅಳವಡಿಸಿದ ಬಳಿಕ ನಾರಾಯಣ ಇಂಡಸ್ಟ್ರೀಸ್ ಮತ್ತು ಹಿಂದೂಸ್ತಾನ್ ಇಂಡಸ್ಟ್ರೀಸ್ ಸಂಸ್ಥೆಗಳಲ್ಲಿ ತಯಾರಾದ ತಲಾ ಒಂದು ಗೇಟ್ ಎಲಿಮೆಂಟ್ ಅಳವಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದು ಗೇಟ್ ಎಲಿಮೆಂಟ್ ಅಳವಡಿಸಿದ ತಕ್ಷಣ ಈ 19ನೇ ಗೇಟ್‌ನಲ್ಲಿ ಹರಿಯುವ ನೀರು ಸಂಪೂರ್ಣ ಬಂದ್ ಆಗಲಿದೆ. ಬಳಿಕ ಅದರ ಮೇಲೆ ಮೂರು ಎಲಿಮೆಂಟ್‌ಗಳನ್ನು ಅಳವಡಿಸಲಾಗುತ್ತದೆ. ಬಹುತೇಕ ಸಂಜೆಯೊಳಗೆ ಮೂರು ಎಲಿಮೆಂಟ್ ಕೂರಿಸುವ ಕಾರ್ಯ ಕೊನೆಗೊಳ್ಳಲಿದ್ದು, ರಾತ್ರಿಯೊಳಗೆ ಎಲ್ಲಾ ಎಲಿಮೆಂಟ್‌ಗಳನ್ನು ಕೂರಿಸುತ್ತಾರೋ, ಭಾನುವಾರಕ್ಕೆ ಉಳಿಸುತ್ತಾರೋ ಎಂಬ ಕುತೂಹಲ ನೆಲೆಸಿದೆ.
ಇಂದು (ಶನಿವಾರ) ಬೆಳಿಗ್ಗೆ 9 ಗಂಟೆಯಿಂದ ಕಾರ್ಯಾಚರಣೆ ಆರಂಭವಾಗಲಿದೆ. ಈಗಾಗಲೇ ಅಗತ್ಯದ ಸಿದ್ಧತೆ ನಡೆದಿದ್ದು, ಎಸ್‌ಡಿಆರ್‌ಎಫ್ ಸಿಬ್ಬಂದಿ ಸಹ ಅಣೆಕಟ್ಟೆ ಪ್ರದೇಶ ಮತ್ತು ನಡುಗಡ್ಡೆ ಪ್ರದೇಶಕ್ಕೆ ತೆರಳುತ್ತಿದ್ದಾರೆ.