ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಮೇಲ: ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ ನೂತನ ತಾಲ್ಲೂಕು ಕೇಂದ್ರ

Published 20 ನವೆಂಬರ್ 2023, 4:48 IST
Last Updated 20 ನವೆಂಬರ್ 2023, 4:48 IST
ಅಕ್ಷರ ಗಾತ್ರ

ಅಲಮೇಲ: ನೂತನ ತಾಲ್ಲೂಕು ಕೇಂದ್ರವಾದ ಆಲಮೇಲ ದಿನದಿಂದ ದಿನಕ್ಕೆ ವಿಸ್ತಾರವಾಗಿ ಬೆಳೆಯುತ್ತಿದೆ. ಆದರೆ, ಪಟ್ಟಣದಲ್ಲಿ ಮೂಲ ಸೌಲಭ್ಯಗಳಾದ ಸುಸಜ್ಜಿತ ರಸ್ತೆಗಳು, ಚರಂಡಿಗಳು ಇಲ್ಲದೇ ಗಟಾರದ ಮಲೀನ ನೀರು ರಸ್ತೆಯ ಮೇಲೆ ಹರಿಯುತ್ತದೆ. ಬೇಸಿಗೆ ಬಂದಿತೆಂದರೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಕೆಲವು ಕಡೆ ಬಯಲು ಶೌಚಾಲಯವೇ ಗತಿಯಾಗಿದೆ.

ಹೌದು! 25 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪುಟ್ಟ ಪಟ್ಟಣ ಅಲಮೇಲ. 19 ವಾರ್ಡ್‌ಗಳ ವ್ಯಾಪ್ತಿ ಹೊಂದಿದೆ. ಸಿಂದಗಿ ರಸ್ತೆ, ಇಂಡಿ ರಸ್ತೆ, ಕಡಣಿ ರಸ್ತೆಗೆ ಹೊಂದಿಕೊಂಡು ಹೊಸ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಪಟ್ಟಣದ ಸಮಸ್ಯೆಗಳು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತಿವೆ. ಅಲಮೇಲ ನೂತನ ತಾಲ್ಲೂಕು ಕೇಂದ್ರವಾಗಿದ್ದು, ಇದರ ಸಮಗ್ರ ಅಭಿವೃದ್ಧಿ ಮತ್ತು ನಗರ ಸೌಂದರ್ಯೀಕರಣ ಆಗಬೇಕಿದೆ.

ಬಸವ ನಗರ ನಿರ್ಮಾಣಗೊಂಡು ಎರಡು ದಶಕ ಮೇಲಾಗಿವೆ. ವಿದ್ಯುತ್‌ ಕಂಬಗಳ ಹೊರತಾಗಿ ಬೇರಾವ ಸೌಕರ್ಯಗಳಿಲ್ಲದೇ ನಿವಾಸಿಗಳು ಪರದಾಡುತ್ತಿದ್ದಾರೆ. 300ಕ್ಕೂ ಹೆಚ್ಚು ಮನೆಗಳಿದ್ದು, ಬಲು ಇಕ್ಕಟ್ಟಾದ, ಕಿರಿದಾದ ರಸ್ತೆ ಇದೆ. ಅಭಿವೃದ್ಧಿ ಮಾತಿಲ್ಲ.

ಒಂದನೇ ವಾರ್ಡ್‌ನ ವಿನಾಯಕ ನಗರ ಕುಡಿಯುವ ನೀರು, ರಸ್ತೆ ಚರಂಡಿ ಮುಂತಾದ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿ ವಸತಿ ಸಮುಚ್ಚಯ (ಅಪಾರ್ಟಮೆಂಟ್), ಶಾಲೆ, ಕಾಲೇಜು, ಮಂಗಲ ಕಾರ್ಯಾಲಯ ಮೊದಲಾದ ಬೃಹತ್ ಕಟ್ಟಡಗಳು, ಬಹುಮಡಿಮನೆಗಳು ಇಲ್ಲಿರುವುದರಿಂದ ಇದಕ್ಕೆ ಡಾಲರ್ ಕಾಲೊನಿ ಎಂತಲೂ ಕರೆಯುತ್ತಾರೆ. ಆದರೆ, ಇಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೇ ಜನರು ಬದುಕುತ್ತಿದ್ದಾರೆ.

ಬೀದಿ ದೀಪದ ಕಂಬಗಳು ಈ ಬಡಾವಣೆಗೆ ಇಲ್ಲ. ಒಂದು ರಸ್ತೆಗೆ ಹಾದು ಹೋದ ಕಂಬ (ಹೈ ವೋಲ್ಟೇಜ್‌) ಗಳಿಗೆ ವಿದ್ಯುತ್ ಬಲ್ಬ ಅಳವಡಿಸಿದ್ದರಿಂದ ಅವು ನಿತ್ಯ 24 ಗಂಟೆ ನಿರಂತರ ಬೆಳಗುತ್ತವೆ. ಈ ಹೈ ವೋಲ್ಟೋಜ್‌ ವಿದ್ಯುತ್ ತಂತಿ ವಸತಿ ಪ್ರದೇಶದಲ್ಲಿ ಹಾದುಹೋಗಿದ್ದು ಇಲ್ಲಿನ ಜನರು ಆತಂಕದಲ್ಲಿದ್ದಾರೆ. ಅದನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದರೂ ಹೆಸ್ಕಾಂ ಕ್ಯಾರೆ ಅನ್ನುತ್ತಿಲ್ಲ ಎಂದು ಇಲ್ಲಿಯ ನಿವಾಸಿ ಬಸವರಾಜ ತೊರವಿ ಆರೋಪಿಸಿದರು.

ಕೆರೆ ಸೌಂದರ್ಯೀಕರಣ: ಆಲಮೇಲ ಕೆರೆ ಅಭಿವೃದ್ಧಿ ಪಡಿಸಿದರೆ ಇದೊಂದು ಜನಾಕರ್ಷಕ ಪ್ರದೇಶವಾಗಲಿದೆ. ಪಟ್ಟಣದ ಸಾವಿರಾರು ವರ್ಷಗಳ ಹಳೆಯ ಅಗಸಿ ಕೆಡವಲಾಗಿದ್ದು, ಅದಕ್ಕೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಸದ್ಯ ಅರ್ಧಕ್ಕೆ ನಿಂತಿದೆ. ಅದರ ಅಭಿವೃದ್ಧಿ ಆಗಬೇಕಿದೆ.

₹ 5 ಕೋಟಿ ಮಂಜೂರು: ನಗರೋತ್ಥಾನ ಯೋಜನೆಯ ಅಡಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ಹೈಮಾಸ್ಟ್, ಹೈಟೆಕ್ ಶೌಚಾಲಯ, ಸಮುದಾಯ ಭವನಗಳಿಗೆ ₹ 5 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಅದು ಸಕಾಲಕ್ಕೆ ಮುಗಿಯುವುದೇ ಎಂಬುದು ನೋಡಬೇಕಿದೆ.

ಆಲಮೇಲದ ವಿನಾಯಕ ನಗರದ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು 
ಆಲಮೇಲದ ವಿನಾಯಕ ನಗರದ ರಸ್ತೆಯ ಮೇಲೆ ಹರಿಯುತ್ತಿರುವ ಚರಂಡಿ ನೀರು 
ಆಲಮೇಲ ಪಟ್ಟಣದ ಇಂಡಿ–ಅಫಜಲಪುರ ರಸ್ತೆಯ ಎರಡು ಕಿ.ಮೀ ಮಾರ್ಗದಲ್ಲಿ ರಸ್ತೆ ಅಭಿವೃದ್ಧಿಪಡಿಸಿ ನಡುವೆ ಹೈಮಾಸ್ಟ್ ದೀಪಗಳನ್ನು ಅಳವಡಿಸಿ ₹ 15 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು
ಅಶೋಕ ಮನಗೂಳಿ ಶಾಸಕ 
ಸಿಂದಗಿ ರಸ್ತೆಯಲ್ಲಿ ನಾಕಾಣೆ ಭಾಗ ಹೈಮಾಸ್ಟ್ ಅಳವಡಿಸಿದ್ದು ಅದನ್ನು ರಾಯಲ್ ಫಂಕ್ಷನ್ ಹಾಲ್ ದಾಟಿ ಮುಂದಿನ ಬಡಾವಣೆವರೆಗೂ ವಿಸ್ತರಿಸಬೇಕಿದೆ.
ಬಸವರಾಜ ಜಾನಾ
ಬೇಸಿಗೆ ಬಂತೆಂದರೆ ನೀರಿಗೆ ಹಾಹಾಕಾರ
ವಿನಾಯಕ ನಗರ ಸೇರಿದಂತೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ. ಶಾಸಕ ಅಶೋಕ ಮನಗೂಳಿ ಅವರು ಭೀಮಾನದಿಯಿಂದ ಪೈಪ್‌ಲೈನ್ ಮೂಲಕ ಆಲಮೇಲ ಪಟ್ಟಣಕ್ಕೆ ನೀರು ಒದಗಿಸಲು ಯೋಜನೆ ಹಾಕಿಕೊಂಡಿದ್ದು ಅದನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದಾರೆ. ಉದ್ಯಾನಗಳನ್ನು ಹುಡುಕಬೇಕಾದ ಪರಿಸ್ಥಿತಿ ಇದೆ ಕೆಲವು ಅತಿಕ್ರಮಣವಾಗಿವೆ. ಕೆಲವು ಕಡೆ ಇರುವ ಉದ್ಯಾನಗಳಿಗೆ ತಂತಿ ಬೇಲಿ ಹಾಕಿದ್ದು ಬಿಟ್ಟರೆ ಮತ್ತೇನೂ ಇಲ್ಲ! ಅಲ್ಲಿ ಒಂದು ಗಿಡವೂ ನೆಟ್ಟಿಲ್ಲ. ಕೂರಲು ಒಂದು ಆಸನವೂ ಇಲ್ಲ. ಇಂತಹ ಉದ್ಯಾನಗಳಿಗೆ ಮೀಸಲಿಟ್ಟ ಜಾಗಗಳನ್ನು ಗುರುತಿಸಿ ಸಂರಕ್ಷಣೆ ಮಾಡಬೇಕಾದ ತುರ್ತು ಅಗತ್ಯವಿದೆ ಎನ್ನುತ್ತಾರೆ ವಿನಾಯಕ ನಗರದ ನಿವಾಸಿ ಸಿದ್ದರಾಮ ಸಲಾದಹಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT