ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಉಪಚುನಾವಣೆ; ಗರಿಗೆದರಿದ ರಾಜಕೀಯ

ತೆರೆಮರೆಯಲ್ಲಿ ಲಾಭಿ ನಡೆಸಿರುವ ಟಿಕೆಟ್‌ ಆಕಾಂಕ್ಷಿಗಳು
Last Updated 12 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ವಿಜಯಪುರ: ಜೆಡಿಎಸ್ ಹಿರಿಯ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂದಗಿ ವಿಧಾನಸಭಾ ಕ್ಷೇತ್ರವು ಉಪಚುನಾವಣೆಯ ಹೊಸ್ತಿಲಿನಲ್ಲಿದೆ.

ರಾಜ್ಯದ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಶೀಘ್ರದಲ್ಲೇ ಎದುರಾಗಲಿರುವ ಉಪ ಚುನಾವಣೆಯ ಜೊತೆಗೆ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಆಯಾ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಟಿಕೆಟ್‌ಗಾಗಿ ಲಾಭಿ ನಡೆಸತೊಡಗಿದ್ದಾರೆ. ಈ ನಡುವೆ ಸಾಕಷ್ಟು ರಾಜಕೀಯ ಊಹಾಪೂಹಗಳು ಕೇಳಿಬರತೊಡಗಿವೆ.

ದಿವಂಗತ ಎಂ.ಸಿ.ಮನಗೂಳಿ ಅವರ ಪುತ್ರರಾದ ಸಿಂದಗಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಮುಖಂಡ ಅಶೋಕ ಮನಗೂಳಿ ಅವರಲ್ಲಿ ತಂದೆಯ ಉತ್ತರಾಧಿಕಾರ ಪಟ್ಟಕ್ಕೆ ತೆರೆಮರೆಯಲ್ಲಿ ಕಾದಾಟ ನಡೆದಿದೆ.

ಈ ನಡುವೆ‘ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ’ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಹೇಳಿಕೆ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ತಣ್ಣೀರು ಎರಚಿದೆ. ತಂದೆಯ ಸಾವಿನಿಂದ ತೆರವಾಗಿರುವ ಶಾಸಕ ಸ್ಥಾನವನ್ನು ತಮ್ಮ ಕುಟುಂಬದಲ್ಲೇ ಉಳಿಸಿಕೊಳ್ಳಬೇಕೆಂಬ ಆಶಯದಲ್ಲಿರುವ ಮನಗೂಳಿ ಸಹೋದರರಿಗೆ ದೇವೇಗೌಡರ ಹೇಳಿಕೆ ದಿಗಿಲುಂಟು ಮಾಡಿದೆ.

ಇನ್ನೊಂದೆಡೆ ಮನಗೂಳಿ ಸಹೋದರನ್ನು ಸೆಳೆಯುವ ತಂತ್ರಗಾರಿಗೆಯೂಕಾಂಗ್ರೆಸ್‌, ಬಿಜೆಪಿ ವಲಯದಲ್ಲಿ ನಡೆದಿದೆ.

ಹಿರಿಯ ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ ಮತ್ತು ಈಶ್ವರ ಖಂಡ್ರೆ ಅವರುಮನಗೂಳಿ ಪುತ್ರರೊಬ್ಬರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಖಾತರಿಯಾದರೆ ಜೆಡಿಎಸ್‌ ತೊರೆಯುವ ಸಾಧ್ಯತೆ ದಟ್ಟವಾಗಿದೆ. ಮನಗೂಳಿ ಸಹೋದರರು ಪಕ್ಷ ತೊರೆದರೆ ಜೆಡಿಎಸ್‌ ಅಸ್ವಿತ್ವಕ್ಕೆ ಪೆಟ್ಟು ಬೀಳಲಿದೆ.

ಒಂದು ವೇಳೆ ಮನಗೂಳಿ ಪುತ್ರರಿಗೆ ಕಾಂಗ್ರೆಸ್‌ನಲ್ಲಿ ಅವಕಾಶ ಸಿಗದಿದ್ದರೆ ಇನ್ನಾರಿಗೆ ಟೆಕೆಟ್‌ ಸಿಗಬಹುದು ಎಂಬುದು ಕುತೂಹಲ ಕೆರಳಿಸಿದೆ. ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ಪ್ರಬಲ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಕಳ್ಳಿಮನಿ ಅವರು ಸಿದ್ದರಾಮಯ್ಯ ಅವರನ್ನು ಈಗಾಗಲೇ ಭೇಟಿ ಮಾಡಿ ಟಿಕೆಟ್‌ಗಾಗಿ ಲಾಭಿ ನಡೆಸಿದ್ದಾರೆ.

ಡಿಸಿಎಂ ಹೆಸರು:ಸಿಂದಗಿ ಕ್ಷೇತ್ರದ ಮಾಜಿ ಶಾಸಕ, ಪ್ರಭಾವಿ ಮುಖಂಡ ರಮೇಶ ಭೂಸನೂರು ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರ ಬೆನ್ನಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಇದ್ದಾರೆ. ಹೀಗಾಗಿ ಇವರ ದಾರಿ ಸುಗಮ ಎನ್ನಲಾಗುತ್ತಿದೆ. ಆದರೆ, ಈ ನಡುವೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಿಂದಗಿ ಉಪ ಚುನಾವಣಾ ಅಖಾಡಕ್ಕೆ ಧುಮುಕಲಿದ್ದು, ಅವರೇ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಇದು ಎಷ್ಟರಮಟ್ಟಿಗೆ ನಿಜ ಎಂಬುದು ಹೇಳಲಾಗದು.

ಕ್ಷೇತ್ರದಲ್ಲಿ ಲಿಂಗಾಯತ ಗಾಣಿಕ, ಪಂಚಮಸಾಲಿ ಮತ್ತು ಕುರುಬ ಸಮಾಜದ ವೋಟುಗಳುಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆಯಾ ಸಮಾಜದ ಮುಖಂಡರು ಟೆಕೆಟ್‌ಗಾಗಿ ಪ್ರಯತ್ನ ಬಿರುಸುಗೊಳಿಸಿದ್ದಾರೆ. ದಿನದಿಂದ ದಿನಕ್ಕೆ‌ ಸಿಂದಗಿ ವಿಧಾನಸಭಾ ಕ್ಷೇತ್ರದ ಚುನಾವಣೆ ರಂಗುಪಡೆಯತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT