ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಜಿಲ್ಲೆಯ 53 ಗ್ರಾಮಗಳಿಗೆ ಜಲಕಂಟಕ

ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ
Published 2 ಮಾರ್ಚ್ 2024, 5:53 IST
Last Updated 2 ಮಾರ್ಚ್ 2024, 5:53 IST
ಅಕ್ಷರ ಗಾತ್ರ

ಯಾದಗಿರಿ: ಬೇಸಿಗೆ ಆರಂಭದಲ್ಲೇ ಜಿಲ್ಲೆಯ 53 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಸಂಭವನೀಯ ಕುಡಿಯುವ ನೀರಿನ ಸಮಸ್ಯೆಯಾಗಬಹುದಾದ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಜಿಲ್ಲೆಯಲ್ಲಿ 6 ತಾಲ್ಲೂಕುಗಳಿದ್ದು, ಈ ತಾಲ್ಲೂಕುಗಳ 53 ಜನವಸತಿಗಳಲ್ಲಿ ನೀರಿನ ಸಮಸ್ಯೆ ತಲೆದೋರುವುದನ್ನು ಅಂದಾಜು ಮಾಡಲಾಗಿದೆ.

ನಗರ ಸೇರಿದಂತೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರಿಗಾಗಿ ಕೊಡ ಹಿಡಿದು ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ. ಕೊಳವೆಬಾವಿಯಲ್ಲಿ ನೀರು ಬಾರದ ಕಾರಣ ಕೆಲ ಕಡೆ ಕಂಪ್‌ನಿಂದ ನೀರು ಪಡೆಯಲಾಗುತ್ತಿದೆ. ಈ ಹಿಂದೇ ಕೈಪಂಪ್‌ ಕೊಳವೆಬಾವಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ಈಗ ಅದನ್ನೂ ಡಿಮ್ಯಾಂಡ್‌ ಬಂದಿದೆ.

ಜೆಜೆಎಂ ಕಾಮಗಾರಿ ಸಮಪರ್ಕವಾಗಿ ಆಗಿಲ್ಲ. ಅಲ್ಲದೇ ನೀರಿನ ಲಭ್ಯತೆ ಇಲ್ಲದ ಕಾರಣ ಹಲವಾರು ಗ್ರಾಮಗಳಲ್ಲಿ ನೀರು ನಳಗಳಿಗೆ ಇನ್ನೂ ಬಂದಿಲ್ಲ.

ತಾಲ್ಲೂಕವಾರು ವಿವರ: ಯಾದಗಿರಿ ತಾಲ್ಲೂಕಿನಲ್ಲಿ 13, ಗುರುಮಠಕಲ್ ತಾಲ್ಲೂಕಿನಲ್ಲಿ 5, ಶಹಾಪುರ ತಾಲ್ಲೂಕಿನಲ್ಲಿ 7, ವಡಗೇರಾ ತಾಲ್ಲೂಕಿನಲ್ಲಿ 5, ಸುರಪುರ ತಾಲ್ಲೂಕಿನಲ್ಲಿ 7, ಹುಣಸಗಿ ತಾಲ್ಲೂಕಿನಲ್ಲಿ 16 ಗ್ರಾಮ ಸೇರಿದಂತೆ ಜಿಲ್ಲೆಯಾದ್ಯಂತ 53 ಜನವಸತಿಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಬಗ್ಗೆ ಪಟ್ಟಿ ಮಾಡಲಾಗಿದೆ.

ಈ ಜನವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಖಾಸಗಿ ಕೊಳವೆಬಾವಿ ಮತ್ತು ತೆರೆದಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ನೀರನ್ನು ಸರಬರಾಜು ಮಾಡಲು ಕ್ರಮವಹಿಸಲಾಗಿದೆ.

ಬೋರವೆಲ್ ಮತ್ತು ತೆರೆದಬಾವಿ ಲಭ್ಯವಿಲ್ಲದ ಜನವಸತಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ.

ನಾಲ್ಕು ಹಂತಗಳಲ್ಲಿ ಜೆಜೆಎಂ

ಜಿಲ್ಲೆಯಲ್ಲಿ 710 ಜನವಸತಿಗಳಲ್ಲಿ 2.32 ಲಕ್ಷ ಮನೆಗಳಿವೆ. ಜಲ ಜೀವನ್ ಮಿಷನ್ ಯೋಜನೆಯಡಿ ₹641.66 ಕೋಟಿ ವೆಚ್ಚದಲ್ಲಿ 695 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ನಾಲ್ಕು ಹಂತಗಳಲ್ಲಿ 202965 ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಒದಗಿಸಲು ಗುರಿ ಹೊಂದಲಾಗಿದೆ. ಇದುವರೆಗೆ 384 ಕಾಮಗಾರಿಗಳು ಪೂರ್ಣಗೊಂಡಿವೆ. ₹310.32 ಕೋಟಿ ವೆಚ್ಚ ಮಾಡಿ 184021 ಮನೆಗಳಿಗೆ ಕಾರ್ಯಾತ್ಮಕ ನಳ ನೀರು ಸಂಪರ್ಕ ಒದಗಿಸಲಾಗಿದೆ. ಬಾಕಿ ಉಳಿದ 311 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್‌ ಆನಂದ ತಿಳಿಸಿದ್ದಾರೆ. ಜಲಧಾರೆ ಯೋಜನೆ ಜಿಲ್ಲೆಯ ಎಲ್ಲಾ ಗ್ರಾಮಗಳ ಜನವಸತಿಗಳಿಗೆ ಮತ್ತು 3 ಪಟ್ಟಣ ಪಂಚಾಯಿತಿಗಳಿಗೆ ಪ್ರತಿಯೊಬ್ಬರಿಗೆ 55 ಎಲ್‌ಪಿಸಿಡಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ₹1605.18 ಕೋಟಿ ಜಲಧಾರೆ ಯೋಜನೆ ಮಂಜೂರಾಗಿದ್ದು ಈಗಾಗಲೇ ನಾರಾಯಣಪುರ ಜಲಾಶಯದ ಹತ್ತಿರ ಜಾಕ್‌ವೆಲ್ ನೀರು ಸಂಸ್ಕರಣಾ ಘಟಕ (ಡಬ್ಲ್ಯೂ ಟಿಪಿ) ಮತ್ತು ಪೈಪಲೈನ್ ಕಾಮಗಾರಿ ಪ್ರಾರಂಭಗೊಂಡು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

4 ಮತಕ್ಷೇತ್ರಗಳಲ್ಲಿ 56 ಗ್ರಾಮಗಳು

ಜಿಲ್ಲೆಯ 56 ಗ್ರಾಮಗಳಲ್ಲಿ ಮುಂದಿನ 6 ತಿಂಗಳಲ್ಲಿ ನೀರಿನ ಅಭಾವ ಉಂಟಾಗುವ ಗ್ರಾಮಗಳನ್ನು ಪಟ್ಟಿ ಮಾಡಲಾಗಿದೆ. ಗುರುಮಠಕಲ್‌ ಮತಕ್ಷೇತ್ರದಲ್ಲಿ ಮಾಧವಾರ ತಾಂಡಾ ಸಣ್ಣ ಸಂಬರ ಸುಭಾಷ ನಗರ ಯಂಪಾಡ ಬುರ್ಜ ತಾಂಡಾ ಜಿ.ಬಿ. ತಾಂಡಾ ಧರ್ಮಪುರ ಧರ್ಮಪುರ ತಾಂಡಾ ಆಶಾಪುರ ತಾಂಡಾ ಕಮಲನಗರ ಹತ್ತಿಕುಣಿ ಕೊಟಗೇರಾ ಮುನಗಾಲ ಎಸ್.ಹೊಸಳ್ಳಿ ಬೆಳಗೇರಾ ಬಳಿಚಕ್ರ ಹೋರುಂಚಾ ಕಂಚಗಾರಹಳ್ಳಿ ತಾಂಡಾ ಮಲ್ಕಪನಹಳ್ಳಿ ವೆಂಕಟೇಶ ನಗರ ಯಾದಗಿರಿ ಮತಕ್ಷೇತ್ರದಲ್ಲಿ ವರ್ಕನಳ್ಳಿ ಆರ್.ಹೊಸಳ್ಳಿ ತಾಂಡಾ ಹಯ್ಯಾಳ ಕೆ ಯಕ್ಷಂತಿ ಗಡ್ಡೆಸೂಗೂರ (ಎಸ್.ಸಿ.ವಾರ್ಡ್) ಹಾಲಗೇರಾ ಹುರಸಗುಂಡಗಿ ವಡಗೇರಾ ಶಹಾಪುರ ಮತಕ್ಷೇತ್ರದಲ್ಲಿ ಮುಡಬೂಳ ಅರಳಹಳ್ಳಿ ಸಾದ್ಯಾಪುರ ಚಂದಾಪುರ ಮೇಲಿನ ತಾಂಡಾ ಕೆಳಗಿನ ತಾಂಡಾ ಗುಂಡಾಪುರ ಹೂವಿನಹಳ್ಳಿ ತಳ್ಳಳ್ಳಿ ಬಿ. ಯಕ್ತಾಪುರ ಮಲ್ಕಾಪುರ ಕಾಚಾಪುರ ಬೇವಿನಾಳ ಎಸ್‌.ಕೆ. ಸುರಪುರ ಮತಕ್ಷೇತ್ರದಲ್ಲಿ ಅಮಲಿಹಾಳ ಬೈಲಾಪುರ ಬೈಲಾಪುರ ತಾಂಡಾ ಕಲ್ಲದೇವನಹಳ್ಳಿ ಮಂಜಲಾಪುರ ಕನಗಂಡನಹಳ್ಳಿ ಕೋಳಿಹಾಳ ಗುಂಡಲಗೇರಾ ಮಾರಲಭಾವಿ ಹಣಮಸಾಗರ ರಾಜವಾಳ ತಾಂಡಾ ರಾಜನಕೊಳ್ಳೂರು ಜಾಲಗಿಡಿದ ತಾಂಡಾ ಕಮಲಪುರ ಮೇಲಿನಗಡ್ಡಿ ಜೋಗುಂಡಭಾವಿ ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ 4 ಮತಕ್ಷೇತ್ರಗಳಲ್ಲಿ ಗುರುಮಠಕಲ್‌ ಮತಕ್ಷೇತ್ರದಲ್ಲಿ 20 ಗ್ರಾಮ ಯಾದಗಿರಿ ಮತಕ್ಷೇತ್ರದಲ್ಲಿ 8 ಶಹಾಪುರ ಮತಕ್ಷೇತ್ರದಲ್ಲಿ 12 ಸುರಪುರ ಮತಕ್ಷೇತ್ರದಲ್ಲಿ 16 ಗ್ರಾಮಗಳಲ್ಲಿ ಮುಂದಿನ 6 ತಿಂಗಳಲ್ಲಿ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳನ್ನು ವಿಧಾನಸಭಾವಾರು ಪಟ್ಟಿ ಮಾಡಲಾಗಿದೆ.
-ಆನಂದ, ಕಾರ್ಯನಿರ್ವಾಹಕ ಎಂಜಿನಿಯರ್‌ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT