ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ

ಅನಕ್ಷರತೆ ಹೋಗಲಾಡಿಸಲು ಯತ್ನ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಮಾನವ ಅಭಿವೃದ್ಧಿಗೆ ತೊಡಕಾಗಿ ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳಲ್ಲಿ ಅನಕ್ಷರತೆಯೂ ಒಂದಾಗಿದ್ದು, ಇದನ್ನು ತೊಡೆದು ಹಾಕಲು ಹಲವಾರು ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಿದೆ. ‘ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲ ಕೊಟ್ಟೆ ಕೊಡುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಬುಧವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸಾಕ್ಷರತಾ ಧ್ವಜಾರೋಹಣ ನೆರವೇರಿಸಿ ಸಾಕ್ಷರತಾ ಪ್ರಮಾಣ ವಚನ ಬೋಧಿಸಿ, ಪಡ್ನಾ -ಲಿಖ್ನಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಸ್ವಯಂ ಸೇವಕ- ಬೋಧಕರಿಗೆ ಸಾಂಕೇತಿಕವಾಗಿ ಕಲಿಕಾ- ಬೋಧನಾ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಸಾಕ್ಷರತೆಯ ಅಗತ್ಯತೆಯನ್ನು ಮನಗಂಡು ಅದನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಕನ್ನಡ ನಾಡಿನದು. 1912 ರಲ್ಲಿ ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯರವರ ದೂರದೃಷ್ಟಿಯ ಫಲವಾಗಿ 7,000 ರಾತ್ರಿ ಶಾಲೆಗಳನ್ನು ಮತ್ತು ಹಲವು ಸಂಚಾರಿ ಪುಸ್ತಕ ಭಂಡಾರಗಳನ್ನು ಪ್ರಾರಂಭಿಸಿದರು ಎಂದರು.

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಗ್ರಾಮೀಣ ಪುರುಷರಲ್ಲಿ ಶೇಕಡವಾರು 49, ನಗರಗಳಲ್ಲಿ ಶೇಕಡವಾರು 69 ಹಾಗೂ ಗ್ರಾಮೀಣ ಮಹಿಳೆಯರಲ್ಲಿ ಶೇಕಡವಾರು 30, ನಗರಗಳ ಮಹಿಳೆಯರಲ್ಲಿ ಶೇಕಡವಾರು 55 ಸಾಕ್ಷರತಾ ಪ್ರಮಾಣ ಇರುತ್ತದೆ ಎಂದರು.

ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಗಳ ಮೂಲಕ ಶೇಕಡವಾರು 10 ರಷ್ಟು ಸಾಕ್ಷರತೆ ಹೆಚ್ಚಾಗಿದೆ. ಇನ್ನೂ ಈ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಬೇಕಾದರೆ ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಸಂಘ–ಸಂಸ್ಥೆಗಳು, ಸ್ವಯಂ ಸೇವಕರು ಮತ್ತು ಸಾರ್ವಜನಿಕರು, ಮಾಧ್ಯಮದವರು ಮತ್ತು ವಿವಿಧ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರು ಮುತುವರ್ಜಿ ವಹಿಸಿ ಎಲ್ಲರನ್ನು ಒಳಗೊಂಡಂತೆ ‘ಪಡ್ನಾ- ಲಿಖ್ನಾ’ ಅಭಿಯಾನ ಕಾರ್ಯಕ್ರಮ ಅನುಷ್ಠಾನದಲ್ಲಿ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಕೋರಿದರು.

ಈ ಸಾಕ್ಷರತಾ ಆಂದೋಲನದ ಮುಖ್ಯ ಗುರಿ 18 ವರ್ಷ ಮೇಲ್ಪಟ್ಟ ಎಲ್ಲಾ ಅನಕ್ಷರಸ್ಥರು ಓದು ಬರಹ ಲೆಕ್ಕಾಚಾರದಲ್ಲಿ ಸ್ವಾವಲಂಬನೆ ತಂದು ಮುಂದುವರಿಕೆಯಾಗಿ ಈಗಾಗಲೇ ತೊಡಗಿರುವ ವೃತ್ತಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮುಖಾಂತರ ಮತ್ತು ಸ್ವಯಂ ಉದ್ಯೋಗಕ್ಕಾಗಿ ಕಿರುಸಾಲ ಯೋಜನೆಗಳ ಮುಖಾಂತರ ಕ್ರಿಯಾತ್ಮಕ ಸ್ವಾವಲಂಬನೆ ತರುವುದು ಇದರ ಉದ್ದೇಶವಾಗಿರುತ್ತದೆ ಎಂದರು.

ಜಿಲ್ಲಾ ಲೋಕ ಶಿಕ್ಷಣ ಸಮಿತಿ ಮುಖಾಂತರ ಸಮಾಜದ ಪ್ರತಿಯೊಬ್ಬ ಶಿಕ್ಷಿತ ಪ್ರಜೆಯು ಅಶಿಕ್ಷಿತ ಪ್ರಜೆಯನ್ನು ಸಾಕ್ಷಾರನ್ನಾಗಿ ಮಾಡುವ ಕಾಯಕದೊಂದಿಗೆ ಎಲ್ಲರನ್ನೂ ಒಳಗೊಂಡಂತೆ ಎಲ್ಲರನ್ನೂ ಒಳಗೊಳ್ಳುವಿಕೆಯ ಮೂಲಕ ಈ ಗುರಿಯನ್ನು ಸಾಧಿಸಲು ಎಲ್ಲರೂ ಪ್ರೇರಕರಾಗಿ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಕೋರಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾಶರ್ಮಾ, ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ಅಜಿತ್ ನಾಯಕ, ಜಿಲ್ಲಾ ಕಾರ್ಯಕ್ರಮ ಸಹಾಯಕ ಶ್ರೀಶೈಲ ಹೊಸಮನಿ, ಯಾದಗಿರಿ ತಾಲ್ಲೂಕು ಸಂಯೋಜಕ ವಿರೂಪಾಕ್ಷರೆಡ್ಡಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

***

ಪಡ್ನಾ- ಲಿಖ್ನಾ ಅಭಿಯಾನದಡಿ 2020-21 ನೇ ಸಾಲಿನಲ್ಲಿ ಜಿಲ್ಲೆಗೆ 38,684 ಜನ ಅನಕ್ಷರಸ್ಥರನ್ನು ಹಾಗೂ 1,935 ಜನ ಸ್ವಯಂ ಸೇವಕ ಬೋಧಕರನ್ನು ಸರ್ವೆಮಾಡಿ ಗುರುತಿಸಲಾಗಿದೆ
ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು