ಭಾನುವಾರ, ಜೂನ್ 20, 2021
25 °C
ಸುಧಾರಣೆಗೆ ಇನ್ನೂ 6 ತಿಂಗಳು ಬೇಕು, ನೆರವಿಗೆ ಬಾರದ ₹5,000

ಯಾದಗಿರಿ: ಟ್ಯಾಕ್ಸಿ ಚಾಲಕರಿಗೆ ಇನ್ನೂ ಸಿಗದ ಪರಿಹಾರ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ಕಾರಣದಿಂದ ತತ್ತರಿಸಿದ್ದ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರ ಧನ ಇನ್ನೂ ಹಲವರಿಗೆ ಸಿಕ್ಕಿಲ್ಲ. ಇದರಿಂದ ಚಾಲಕರು ದುಸ್ಥಿತಿಗೆ ಒಳಗಾಗಿದ್ದು, ಅತ್ತ ಪ್ರಯಾಣಿಕರಿಲ್ಲದೆ ಇತ್ತ ಪರಿಹಾರದ ಹಣವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ. 

ಲಾಕ್‌ಡೌನ್‌ ಕಾರಣದಿಂದ ನಿಂತಲ್ಲೆ ನಿಲ್ಲಿಸಿದ್ದ ವಾಹನಗಳು ಈಗ ಲಾಕ್‌ಡೌನ್‌ ತೆರವಾದರೂ ಪ್ರಯಾಣಿಕರು ಬಾರದೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಅವಲತ್ತುಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮ ಕಾರುಗಳನ್ನು ಮಾರಾಟ ಮಾಡದಿದ್ದಾರೆ. 

ಮುಖ್ಯಮಂತ್ರಿಯವರು ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ₹5,000 ಪರಿಹಾರ ಧನ ಘೋಷಿಸಿದ್ದರು. ಆದರೆ, ಈ ಹಣ ಇನ್ನೂ ನಮಗೆ ತಲುಪಿಲ್ಲ. ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸುತ್ತಾರೆ ಗಿರಿನಾಡು ಟ್ಯಾಕ್ಸಿ, ಕಾರು ಚಾಲಕರ ಸಂಘದ ಸದಸ್ಯರು.

ಬಾಡಿಗೆ ಕೇಳುತ್ತಿಲ್ಲ: ‘ಕೊರೊನಾ ಕಾರಣದಿಂದ ಪ್ರಯಾಣಿಕರು ನಮ್ಮ ವಾಹನಗಳನ್ನು ಬಾಡಿಗೆ ಪಡೆಯುತ್ತಿಲ್ಲ. ಇದರಿಂದ ಬಾಡಿಗೆಗೆ ತೆರಳಲು ಆಗದೆ ನಿಂತಲ್ಲೆ ನಿಲ್ಲಿಸುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದೇವೆ’ ಎನ್ನುತ್ತಾರೆ ಗಿರಿನಾಡು ಟ್ಯಾಕ್ಸಿ, ಕಾರು ಚಾಲಕರ ಸಂಘದ ಅಧ್ಯಕ್ಷ ಮಲ್ಲನಗೌಡ ಮಾಲಿಪಾಟೀಲ.

ಡೀಸೆಲ್ ದರ ಏರಿಕೆ ಹೊಡೆತ: ಲಾಕ್‌ಡೌನ್‌ ಮುನ್ನ ₹60 ಅಸುಪಾಸಿನಲ್ಲಿದ್ದ ಡೀಸೆಲ್‌ ದರ ಈಗ ₹78 ದಾಟಿದೆ. ಇದರಿಂದ ಚಾಲಕರು ಕಡಿಮೆ ಬಾಡಿಗೆಗೆ ತೆರಳಲು ಹಿಂದೇಟು ಹಾಕುವಂತ ಸ್ಥಿತಿ ಬಂದಿದೆ. ಹೆಚ್ಚು ದರ ಹೇಳಿದರೆ ಗ್ರಾಹಕರು ಇತ್ತ ಮುಖ ಮಾಡುವುದಿಲ್ಲ. ನಮ್ಮದು ಡೋಲಾಯಮಾನ ಪರಿಸ್ಥಿತಿ ಇದೆ ಎನ್ನುತ್ತಾರೆ ಅವರು. 

ಸುಧಾರಿಸಿಕೊಳ್ಳಲು 6 ತಿಂಗಳು ಬೇಕು: ಇದೇ ಪರಿಸ್ಥಿತಿ ಮುಂದುವರಿದರೆ ನಾವು ಸುಧಾರಿಸಿಕೊಳ್ಳಲು ಇನ್ನೂ ಆರು ತಿಂಗಳು ಬೇಕಾಗಿದೆ. ಆಗ ಮಾತ್ರ ಜನರು ಭಯಬಿಟ್ಟು ಟ್ಯಾಕ್ಸಿ ಉಪಯೋಗಿಸಲು ಮುಂದೆ ಬರಬಹುದು ಎಂದು ಚಾಲಕರು ಹೇಳಿದರು.

ಐಎಂಐ ಕಂತಿನ ಚಿಂತೆ: ಮೂರು ತಿಂಗಳು ಮಾತ್ರ ಐಎಂಐ ಕಂತಿನ ಚಿಂತೆ ಇರಲಿಲ್ಲ. ಈಗ ಬ್ಯಾಂಕ್‌ಗಳವರು ಕಂತು ಕಟ್ಟದಿದ್ದರೆ ಬಡ್ಡಿ ಹಾಕುತ್ತಿದ್ದಾರೆ. ಇದರಿಂದ ಕಂತಿನ ಹಣ ಹೇಗೆ ಹೊಂದಿಸಬೇಕು ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಚಾಲಕ ಸಾಬಯ್ಯ ಗುತ್ತೇದಾರ. 

‘ಚಾಲಕರಿಗೆ ಶೇ 10 ರಷ್ಟು ಮಾತ್ರ ಪರಿಹಾರ ಧನ ಬಂದಿದೆ. ನಾಲ್ಕು ಬಾರಿ ಅರ್ಜಿ ಸಲ್ಲಿಸಿದ್ದೇವೆ. ಇನ್ನೂ 90 ರಷ್ಟು ಚಾಲಕರಿಗೆ ಬಂದಿಲ್ಲ. ಇದು ಘೋಷಣೆಗೆ ಮಾತ್ರ ಸೀಮಿತ ಎನ್ನುವಂತಾಗಿದೆ. ಸಾರಿಗೆ ಸಚಿವರಿಗೆ, ಕಾರ್ಮಿಕರ ಅಧಿಕಾರಿಗೆ ನಮ್ಮ ಹೆಸರು, ಮೊಬೈಲ್‌ ಸಂಖ್ಯೆ, ಚಾಲನೆಯಲ್ಲಿ ಅನುಭವ ಇತ್ಯಾದಿ ಮಾಹಿತಿ ಪತ್ರ ಸಲ್ಲಿಸಿದ್ದೇವೆ. ಆದರೂ ಇನ್ನು ಪರಿಹಾರ ಬಂದಿಲ್ಲ’ ಎನ್ನುತ್ತಾರೆ ಸಂಘದ ಸದಸ್ಯ ಶರಣು ನಾರಾಯಣಪೇಟ. 

‘ಪರಿಹಾರದ ಹಣಕ್ಕಾಗಿ ಸೇವಾ ಸಿಂಧು ಯೋಜನೆಯಡಿ 1,450 ಚಾಲಕರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಅವರ ಖಾತೆಗೆ ನೇರವಾಗಿ ಹಣ ಜಮೆ ಆಗಿರುತ್ತದೆ. ಹೀಗಾಗಿ ನಮಗೆ ಮಾಹಿತಿ ಇಲ್ಲ’ ಎನ್ನುತ್ತಾರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್‌ ಚವ್ಹಾಣ್.

10 ವರ್ಷಗಳಾದರೂ ಜಾಗವೇ ಇಲ್ಲ!

ಟ್ಯಾಕ್ಸಿ ಚಾಲಕರು ನಗರದ ಚಿತ್ತಾಪುರ ರಸ್ತೆಯ ನಗರಸಭೆ ಸಂಕೀರ್ಣ ಮುಂಭಾಗದಲ್ಲಿ ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಆದರೆ, ಮಳಿಗೆ ಮುಂದೆ ನಿಲ್ಲಿಸಲು ಮಾಲಿಕರು ಒಪ್ಪುತ್ತಿಲ್ಲ. ಇದರಿಂದ ರಸ್ತೆ ಬದಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎನ್ನುತ್ತಾರೆ ಗಿರಿನಾಡು ಟ್ಯಾಕ್ಸಿ, ಕಾರು ಚಾಲಕರ ಸಂಘದ ಅಧ್ಯಕ್ಷ ಮಲ್ಲನಗೌಡ ಮಾಲಿ ಪಾಟೀಲ.

‘ಜಿಲ್ಲೆಯಾಗಿ ಯಾದಗಿರಿ 10 ವರ್ಷ ಕಳೆದರೂ ನಮಗೆ ಒಂದು ನಿಲ್ದಾಣ ಇಲ್ಲ. ಇದರಿಂದ ನಮಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಈ ಹಿಂದೆ ನಗರಸಭೆ ಸಂಕೀರ್ಣದಿಂದ ನಮ್ಮನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಮುಂದಾಗಿದ್ದರು. ನಮಗೆ ಜಾಗ ತೋರಿಸಿದರೆ ತೆರಳುತ್ತೇವೆ ಎಂದು ಪಟ್ಟು ಹಿಡಿದಾಗ ಸುಮ್ಮನಾದರು. ಆದರೂ ಇಲ್ಲಿಯವರೆಗೆ ನಮಗೆ ಜಾಗ ತೋರಿಸಿಲ್ಲ. ಇಕ್ಕಟ್ಟಾದ ಸ್ಥಳಗಳಲ್ಲೇ ಕಾರು, ಟ್ಯಾಕ್ಸಿ ನಿಲ್ಲಿಸುತ್ತೇವೆ’ ಎಂದು ಅವರು ತಿಳಿಸುತ್ತಾರೆ. 

ನಗರದಲ್ಲಿ ಟ್ಯಾಕ್ಸಿ, ಕಾರುಗಳಿಗೆ ಜಾಗದ ಸಮಸ್ಯೆ ಇಲ್ಲದಿದ್ದರೂ ನಮಗೆ ಇನ್ನೂ ಒಂದು ನಿಲ್ದಾಣವೇ ಇಲ್ಲ. ಹೀಗಾಗಿ ನಾವು ರಸ್ತೆ ಬದಿಯೇ ನಿಲ್ಲಿಸುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಮಲ್ಲನಗೌಡ ಹೇಳುತ್ತಾರೆ. 

***

ಲಾಕ್‌ಡೌನ್‌ ಪರಿಹಾರ ಇನ್ನೂ ನಮಗೆ ಬಂದಿಲ್ಲ. ನಮ್ಮ ಸಂಘದಲ್ಲಿ 8–10 ಚಾಲಕರು ತಮ್ಮ ಕಾರುಗಳನ್ನು ಮಾರಾಟ ಮಾಡಿದ್ದಾರೆ 

-ಮಲ್ಲನಗೌಡ ಮಾಲಿ ಪಾಟೀಲ, ಅಧ್ಯಕ್ಷ, ಗಿರಿನಾಡು ಟ್ಯಾಕ್ಸಿ ಕಾರು ಚಾಲಕರ ಸಂಘ

***

ಸರ್ಕಾರ, ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಿದರೂ ಇನ್ನು ಪರಿಹಾರದ ಹಣ ನಮಗೆ ತಲುಪಿಲ್ಲ. ಪ್ರತಿಭಟನೆಯೊಂದೆ ನಮಗಿರುವ ದಾರಿಯಾಗಿದೆ

-ಸಾಬಯ್ಯ ಗುತ್ತೇದಾರ, ಖಜಾಂಚಿ, ಗಿರಿನಾಡು ಟ್ಯಾಕ್ಸಿ ಕಾರು ಚಾಲಕರ ಸಂಘ

***

ಸೇವಾ ಸಿಂಧು ಯೋಜನೆಯಡಿ ಆಟೊ ಮತ್ತು ಟ್ಯಾಕ್ಸಿ ಫಲಾನುಭವಿಗಳಲ್ಲಿ ಜಿಲ್ಲೆಯಲ್ಲಿ ಬ್ಯಾಡ್ಜ್ ಹೊಂದಿರುವವರು 3,609 ಇದ್ದಾರೆ 

-ವಸಂತ್‌ ಚವ್ಹಾಣ್, ಪ್ರಾದೇಶಿಕ ಸಾರಿಗೆ ಅಧಿಕಾರಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು