ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕಾಲೇಜುಗಳಲ್ಲಿ ಕಡಿಮೆ ಹಾಜರಾತಿ

ಆಫ್‌ಲೈನ್‌ಗಿಂತ ಆನ್‌ಲೈನ್‌ ತರಗತಿಗೆ ಹೆಚ್ಚು ಹಾಜರು
Last Updated 24 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಯಾದಗಿರಿ: ನವೆಂಬರ್ 17ಕ್ಕೆ ಪದವಿ ಕಾಲೇಜುಗಳು ಆರಂಭವಾಗಿವೆ. ಆದರೆ, ಒಂದು ವಾರವಾದರೂ 10-15 ವಿದ್ಯಾರ್ಥಿಗಳು ಮಾತ್ರ ಬರುತ್ತಿದ್ದಾರೆ. ಕೋವಿಡ್‌ ಪರೀಕ್ಷೆ ನೆಗೆಟಿವ್‌ ವರದಿ, ಪೋಷಕರ ಒಪ್ಪಿಗೆ ಪತ್ರ ತರಬೇಕಾಗಿದ್ದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ನಗರದ ಪದವಿ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ,‌ ಸ್ನಾತಕೋತ್ತರ ಪ್ರಥಮ,‌ ದ್ವಿತೀಯ ವರ್ಷದ ಬೆರಳೆಣಿಕೆಯ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಮಹಾವಿದ್ಯಾಲಯದಲ್ಲಿ 11 ಸ್ನಾತಕೋತ್ತರ ವಿಭಾಗಗಳಿವೆ. ನಾಲ್ಕು ಪದವಿ ಹಂತದ ಕೋರ್ಸ್‌ಗಳಿವೆ. ಬಿಎ ಪ್ರಥಮ ವರ್ಷಕ್ಕೆ ಈ ಬಾರಿ1,200ಕ್ಕೂ ಹೆಚ್ಚು ವಿದ್ಯಾರ್ಥಿಗಳುಹೆಸರು ನೋಂದಾಯಿಸಿಕೊಂಡಿದ್ದಾರೆ.ಪದವಿ, ಸ್ನಾತಕೋತ್ತರ ಸೇರಿದಂತೆ ಈ ಬಾರಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಂದಾಯಿಸಿಕೊಂಡಿದ್ದಾರೆ.

ಗ್ರಾಮಾಂತರ ಪ್ರದೇಶದವರು ಹೆಚ್ಚು: ಮಹಾವಿದ್ಯಾಲಯಕ್ಕೆ ಗ್ರಾಮಾಂತರ ಭಾಗದಿಂದ ಹೆಚ್ಚು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಶೇ 90ರಷ್ಟು ಗ್ರಾಮೀಣ ಭಾಗದವರು ಕಾಲೇಜಿಗೆ ಬರುವ ವಿದ್ಯಾರ್ಥಿಗಳಾಗಿದ್ದಾರೆ. ವಡಗೇರಾ, ದೋರಹನಳ್ಳಿ, ಸೈದಾಪುರ, ಬಳಿಚಕ್ರ, ಕಂದಕೂರ, ಮಧ್ವಾರ, ನಂದೇಪಲ್ಲಿ, ಯರಗೋಳ, ಹತ್ತಿಕುಣಿ ಸೇರಿದಂತೆ ವಿವಿಧ ಭಾಗದಿಂದ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಇನ್ನೂ ಹಾಜರಾತಿ ಇಲ್ಲ.ಗ್ರಾಮೀಣ ಭಾಗದಲ್ಲಿ ಇನ್ನೂ ಸಾರಿಗೆ ಸಂಚಾರ ಸಂಪೂರ್ಣ ಆರಂಭವಾಗಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬರುತ್ತಿಲ್ಲ ಎನ್ನಲಾಗುತ್ತಿದೆ.

ಆನ್‌ಲೈನ್‌ಗೆ ಹೆಚ್ಚು ಒತ್ತು: ಸರ್ಕಾರವೇ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಅಥವಾ ಆನ್‌ಲೈನ್‌ ತರಗತಿಗೆ ಹಾಜರಾಗಲು ಅನುಮತಿ ನೀಡಿದೆ. ಇದರಿಂದ ಪ್ರತಿಶತ ವಿದ್ಯಾರ್ಥಿಗಳು ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗುತ್ತಿದ್ದಾರೆ. ಕೋವಿಡ್‌ ಭಯ ಇನ್ನೂ ದೂರವಾಗಿಲ್ಲ.

ನವೆಂಬರ್ 17, 18ರಂದು ಕಾಲೇಜು ಕ್ಯಾಂಪಸ್‌ನಲ್ಲಿ 250ಕ್ಕೂ ಟೆಸ್ಟ್ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಸರ್ಕಾರವೇ ಕಾಲೇಜು ಆವರಣದಲ್ಲಿ ಪರೀಕ್ಷೆ ಮಾಡುವುದು ಬೇಡ ತಿಳಿಸಿದ್ದರಿಂದ ನಿಲ್ಲಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರದ ಪ್ರದೇಶದಲ್ಲಿ ಹಳೆ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಅಲ್ಲಿಂದ ನೆಗೆಟಿವ್‌ ಪ್ರಮಾಣ ಪತ್ರ ತರಬೇಕಿದೆ. ಹೀಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಹಿಂಜರಿಯಲು ಕಾರಣವಾಗಿದೆ ಎಂದು ಅಧ್ಯಾ‍ಪಕರೊಬ್ಬರು ತಿಳಿಸಿದರು.

ಕೋವಿಡ್‌ ವರದಿ ವಿಳಂಬ: ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದರೂ ವರದಿ ಬರುವುದು ತಡವಾಗಿದೆ. ನೆಗೆಟಿವ್‌ ಪತ್ರ ತರಬೇಕಾಗಿದ್ದರಿಂದ ಕಾಲೇಜಿಗೆ ಬರಲು ವಿಳಂಬವಾಗಿರಬಹುದು. ಶೀಘ್ರವೇ ವರದಿ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಪ್ರಾಂಶುಪಾಲರೊಬ್ಬರು ತಿಳಿಸಿದರು.

***

ಸರ್ಕಾರ ಪದವಿ ಮಹಾವಿದ್ಯಾಲಯದಲ್ಲಿ 22 ಅಧ್ಯಾಪಕ ಸಿಬ್ಬಂದಿ ಇದ್ದು ಎಲ್ಲರಿಗೂ ನೆಗೆಟಿವ್‌ ವರದಿ ಬಂದಿದೆ. ಕೋವಿಡ್‌ ನಿಯಮಗಳನ್ನು ಪಾಲಿಸಿ ಕಾಲೇಜು ಆರಂಭಿಸಿದ್ದೇವೆ.
-ಡಾ.ಸುಭಾಶ್ಚಂದ್ರ ಕೌಲಗಿ, ಪ್ರಾಂಶುಪಾಲ, ಸರ್ಕಾರಿ ಪದವಿ ಮಹಾವಿದ್ಯಾಲಯ ಯಾದಗಿರಿ

***
ವಿದ್ಯಾರ್ಥಿಗಳು ಭೌತಿಕವಾಗಿ ಕಾಲೇಜಿಗೆ ಬರದಿದ್ದರೂ ನಾವು ಮಾತ್ರ ಆನ್‌ಲೈನ್‌, ಆಫ್‌ಲೈನ್‌ ಎರಡು ಬೋಧಿಸುತ್ತಿದ್ದೇವೆ. ಕಾಲೇಜಿಗಿಂತಆನ್‌ಲೈನ್‌ನಲ್ಲಿ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ.
-ಡಾ.ಸರ್ವೋದಯ ಶಿವಪುತ್ರ, ಇತಿಹಾಸ ಪ‍್ರಾಧ್ಯಾಪಕ

***
ಗ್ರಾಮಾಂತರ, ವೇಗದೂತ ಸೇರಿದಂತೆ ಈಗಾಗಲೇ 290 ಬಸ್‌ಗಳ ಕಾರ್ಯಾಚರಣೆ ಮಾಡುತ್ತಿವೆ. ಕೆಲ ಗ್ರಾಮಗಳಿಗೆ ಬಸ್‌ ಆರಂಭಿಸಿಲ್ಲ. ಈ ಬಗ್ಗೆ ಇಲ್ಲಿಯವರೆಗೆ ವಿದ್ಯಾರ್ಥಿಗಳು ಮನವಿ ಮಾಡಿಲ್ಲ.
-ರಮೇಶ ಪಾಟೀಲ, ವಿಭಾಗೀಯ ಸಂಚಲನ ಅಧಿಕಾರಿ

***

ಕೋವಿಡ್‌ ಭಯದಿಂದ ತರಗತಿಗೆ ಹಾಜರಾಗುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದೇವೆ. ಆನ್‌ಲೈನ್‌ ಕ್ಲಾಸ್‌ ಬಗ್ಗೆ ನಮಗೆ ಮೊದಲೇ ಅಧ್ಯಾಪಕರು ಮಾಹಿತಿ ನೀಡುತ್ತಾರೆ.
-ಮಲ್ಲಯ್ಯ ನರಸಪ್ಪ, ಕಾಲೇಜು ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT