ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸರಳ ಈದ್‌ ಮಿಲಾದ್‌ ಆಚರಣೆ

ಮೆರವಣಿಗೆ ರದ್ದು, ‘ಶಿರ್ ಕುರ್ಮಾ’ ವಿತರಿಸಿ ಶುಭಾಶಯ ವಿನಿಮಯ
Last Updated 30 ಅಕ್ಟೋಬರ್ 2020, 15:29 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ್ಯಂತ ಪ್ರವಾದಿ ಮುಹಮ್ಮದ್‌ರ ಜನ್ಮದಿನವಾದ ಈದ್‌ ಮಿಲಾದ್‌ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಮನೆಗಳಲ್ಲಿ ನಮಾಜ್‌ ಮಾಡಿದರು. ‘ಶಿರ್ ಕುರ್ಮಾ’ ಸಿಹಿ ಪಾಯಸವನ್ನು ಅಕ್ಕ ಪಕ್ಕದವರಿಗೆ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಚಿಣ್ಣರು ಹೊಸಬಟ್ಟೆ ತೊಟ್ಟು ನಮಾಜಿನಲ್ಲಿ ಪೋಷಕರೊಂದಿಗೆ ಪಾಲ್ಗೊಂಡಿದ್ದರು.

ಮಹಿಳೆಯರು ಸಿಹಿ ಊಟ ತಯಾರಿಸುವುದು, ಬಂಧುಗಳಿಗೆ ಊಟ ನೀಡುವುದು ಮಾಡುತ್ತಿದ್ದರು.

ಮೆರವಣಿಗೆ ರದ್ದು: ಕಳೆದ ವರ್ಷ ಮೆಕ್ಕಾ, ಮದೀನಾ, ನಕ್ಷತ್ರ ಸೇರಿದಂತೆ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆ ಅದ್ಧೂರಿಯಾಗಿ ನಡೆದಿತ್ತು. ಡಿ.ಜೆ. ಸೌಂಡ್‌ ಮೂಲಕ ಚಕ್ರಕಟ್ಟಾದಿಂದ ಆರಂಭವಾಗಿ ನಗರದ ವಿವಿಧೆಡೆ ಸಂಚಾರ ಮಾಡಿತ್ತು. ಆದರೆ, ಈ ಬಾರಿ ಕೋವಿಡ್‌ ಕಾರಣದಿಂದ ಜಿಲ್ಲಾಡಳಿತ ಮೆರವಣಿಗೆ ನಿಷೇಧಿಸಿತ್ತು. ಮೆರವಣಿಗೆಗೆ ಅನುಮತಿ ನೀಡಿಲ್ಲ. ಹೀಗಾಗಿ ಮನೆಗಳಲ್ಲಿ ನಮಾಜ್‌ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.

ಜಗಮಗಿಸುವ ವಿದ್ಯುತ್ ದೀಪಾಲಂಕಾರ: ನಗರದ ವಿವಿಧ ಮಸೀದಿ, ದರ್ಗಾಗಳಲ್ಲಿಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ.

ಅಂಗಡಿ, ಮುಂಗಟ್ಟು ಬಂದ್‌:

ಶುಕ್ರವಾರ ಬಹುತೇಕ ಅಂಗಡಿ, ಮುಂಗಟ್ಟು ಬಂದ್‌ ಆಗಿದ್ದವು. ಎಲ್ಲ ಕಡೆ ಮುಸ್ಲಿಮರು ಅಂಗಡಿ ಮುಂಗಟ್ಟು ನಡೆಸುತ್ತಿದ್ದರಿಂದ ಮುಚ್ಚಿರುವುದು ಕಂಡು ಬಂದಿತು.

ಹಣ್ಣು, ಬಿಸ್ಕತ್‌, ಬ್ರೆಡ್‌ ವಿತರಣೆ: ಜಿಲ್ಲಾಸ್ಪತ್ರೆಯಲ್ಲಿ ಮೋಸಿನ್ ವೇಲ್ಫೆರ್ ಫೌಂಡೇಷನ್ ವತಿಯಿಂದ ರೋಗಿಗಳಿಗೆ ಹಣ್ಣು, ಬಿಸ್ಕತ್‌, ಬ್ರೆಡ್‌ ವಿತರಣೆ ಮಾಡಿದರು.

ಮೋಸಿನ್ಕಾಯನಾಥ ವೇಲ್ಫೆರ್ ಫೌಂಡೇಷನ್ ವತಿಯಿಂದ ಹಲವಾರು ವರ್ಷಗಳಿಂದ ನಗರದ ಎಲ್ಲಾ ಆಸ್ಪತ್ರೆಗಳಿಗೆ ಹಣ್ಣು ಹಂಪಲು ವಿತರಿಸುತ್ತಾ ಬಂದಿದ್ದಾರೆ.ಫೌಂಡೇಷನ್ ಅಧ್ಯಕ್ಷ ನೂರುಲ್ ಹಸನ್, ಅಬ್ದುಲ್ ಬಾರಿ, ಅಬ್ದುಲ್ ವಾಹೇದ್, ಬಾಬಾ ಇದ್ದರು.

ಕರ್ನಾಟಕ ಅಹಲೆಸುನ್ನತ್ ಜಮಾತ್‌ವತಿಯಿಂದ ಈದ್ ಮಿಲಾದ್‌ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಅಧ್ಯಕ್ಷ ಖಾಜಿ ಅಬ್ಜಲೋದ್ದೀನ್‌ ಸಿದ್ಧಿಕಿ, ಅಬರಾರ ಅಹಮದ್, ವಕೀಲರಾದ ಇಮತೀಹಾಜೋದ್ದಿನ್, ಡಾ. ಮೊಬಸೀರ್ ಅಹಮದ್ ಸಾಜೀದ್‌ ಇದ್ದರು.

***

ಮುಸ್ಲಿಂ ಯುವ ಬಳಗದಿಂದ ರಕ್ತದಾನ

ಯಾದಗಿರಿ: ನಗರದ ಮುಸ್ಲಿಂ ಯುವ ಬಳಗ ಹಾಗೂ ಡಾ. ಸುರಗಿಮಠ ರಕ್ತನಿಧಿ ಕೇಂದ್ರ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್‌ ಪೈಗಂಬರ್ ಅವರ ಜನ್ಮದಿನ ಅಂಗವಾಗಿ ನಗರದ ಹತ್ತಿಕುಣಿ ಕ್ರಾಸ್ ಬಳಿ ಶುಕ್ರವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ನಗರದ ಯುವಕರು ಶಿಬಿರದಲ್ಲಿಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಈ ವೇಳೆ ಡಾ. ಸುರಗಿಮಠ ಹಾಗೂ ಫರ್ವೆಜ್ ಪಟೇಲ್ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಜನರಿಗೆ ರಕ್ತದ ಅವಶ್ಯಕತೆ ಇದೆ. ಈ ಶಿಬಿರದ ಮೂಲಕ ಸಂಗ್ರಹಿಸಿದ ರಕ್ತ ಸಹಾಯಕವಾಗಲಿ ಎಂಬ ದೃಷ್ಟಿಕೋನದಿಂದ ಏರ್ಪಡಿಸಿದ್ದೇವೆ. ನಿರೀಕ್ಷೆಗೂ ಮೀರಿ ಯುವಕರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ತಿಳಿಸಿದರು.

ಶಿಬಿರದಲ್ಲಿ ಯುವ ಬಳಗದ ಸಿರಾಜ್ ರಜ್ವಿ, ಶೇಖ್ ಖಮರಲ್ ಇಸ್ಲಾಂ, ಇಮ್ರಾನ್ ಸಗರಿ, ರಿಯಾಜ್, ಆರಿಫ್ ಸಗರಿ ಸೇರಿದಂತೆ ರಕ್ತನಿಧಿ ಕೇಂದ್ರದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT