ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಸೌಹಾರ್ದ, ಅಭಿವೃದ್ಧಿಶೀಲ ಮಂಗಳೂರಿಗೆ ಆದ್ಯತೆ: ಆರ್‌.ಪದ್ಮರಾಜ್

Published 23 ಏಪ್ರಿಲ್ 2024, 6:03 IST
Last Updated 23 ಏಪ್ರಿಲ್ 2024, 6:03 IST
ಅಕ್ಷರ ಗಾತ್ರ
ಹಿಂದೂ ಧರ್ಮದ ಬಿಲ್ಲವ ಸಮುದಾಯದಲ್ಲಿ ಜನಿಸಿದ್ದಕ್ಕೆ ಅಭಿಮಾನವಿದೆ ಎಂದು ಹೇಳುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್‌ ಆರ್‌, ತಾವು ಮಾನವ ಧರ್ಮ ಎಂಬ ಸಿದ್ಧಾಂತ ನಂಬಿದವರು ಎನ್ನುತ್ತಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ

ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಎಲ್ಲ ಸೌಲಭ್ಯಗಳು ಇರುವ ಅಪರೂಪದ ಜಿಲ್ಲೆ ಇದು. ವಿಮಾನ ನಿಲ್ದಾಣ ಇದೆ, ಬಂದರು ಇದೆ. ರೈಲ್ವೆ ಸಂಪರ್ಕ ಇದೆ. ಭೂಸಾರಿಗೆ ವ್ಯವಸ್ಥೆ ಚೆನ್ನಾಗಿದೆ. ಇವೆಲ್ಲ ಕಾಂಗ್ರೆಸ್‌ನ ಸಂಸದರು ಇದ್ದಾಗ ಬಂದ ಅನುಕೂಲಗಳು. ಈಚೆಗೆ ಮೂರು ದಶಕಗಳಿಂದ ಬಿಜೆಪಿ ಸಂಸದರ ಕಾಲದಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ದ್ವೇಷ ಹುಟ್ಟಿಕೊಂಡು ಕೋಮು ಸಾಮರಸ್ಯಕ್ಕೆ ಕೊಡಲಿ ಪೆಟ್ಟು ಬಿತ್ತು. ಸಂಸದರು ಅಭಿವೃದ್ಧಿಯ ವಿಚಾರಗಳನ್ನು ಮರೆತೇಬಿಟ್ಟರು. ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಬಂದುದರಿಂದ ಉದ್ಯಮಿಗಳು ವಿಮುಖರಾದರು. ಉದ್ದಿಮೆಗಳು ಬಾರದೇ ಹೋದವು. ಉದ್ಯೋಗ ಸೃಷ್ಟಿ ಆಗಲಿಲ್ಲ. ಹೀಗಾಗಿ ಈಗ ರಾಜಕೀಯ ಮಾತನಾಡುತ್ತ ಕಾಲಹರಣ ಮಾಡುವುದಕ್ಕಿಂತ ಅಭಿವೃದ್ಧಿಯತ್ತ ಚಿತ್ತ ಹರಿಸುವುದು ಮುಖ್ಯ. ತುಳುನಾಡಿಗೆ ವಿಶಿಷ್ಟ ಸಂಸ್ಕೃತಿ ಇದೆ. ವಿದೇಶಿಗರನ್ನು ಆಕರ್ಷಿಸುವ ಶಕ್ತಿ ಅದಕ್ಕಿದೆ. ವೈದ್ಯಕೀಯ ಹಬ್ ಮತ್ತು ಶೈಕ್ಷಣಿಕ ಹಬ್ ಎಂಬುದರ ಲಾಭ ಪಡೆದುಕೊಂಡು ಮೆಡಿಕಲ್ ಟೂರಿಸಂ ಮತ್ತು ಎಜುಕೇಷನ್ ಟೂರಿಸಂ ಬೆಳೆಸಬಹುದು. ಪ್ರಾಕೃತಿಕ ಸಂಪತ್ತು ಬಳಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಮಾಡಬಹುದು.

ಪ್ರ

ನೀವು ಯಾವ ವಿಷಯ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಅಭಿವೃದ್ಧಿಯೊಂದೇ ನನ್ನ ಅಜೆಂಡಾ. ವಿರೋಧ ಪಕ್ಷದವರು ಇಲ್ಲಿ ಯುವಜನರನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಕಾನೂನು ಬಾಹಿರ ಕೆಲಸಗಳಿಗೆ ಪ್ರಚೋದನೆ ನೀಡಿ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಮಲಗುವಂತೆ ಮಾಡಿದರು. ಕೆಲವರು ಜೈಲಿನಲ್ಲಿ ಕಳೆಯುವಂತೆ ಮಾಡಿದರು. ಕೊಲೆಗೀಡಾಗಿ ಮನೆಗಳು ಅನಾಥವಾ ಗುವಂತೆ ಮಾಡಿದರು. ಹೀಗೆ ಮಾಡಿದರೆ ಬಲಿಷ್ಠ ಭಾರತ ಕಟ್ಟಲು ಸಾಧ್ಯವಿದೆಯೇ ಎಂಬುದನ್ನು ಬಿಜೆಪಿಯವರು ಅವರನ್ನೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ಪ್ರ

ಕೋಮುಸೂಕ್ಷ್ಮ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಳಚಲು ಏನು ಮಾಡಬೇ ಕೆಂದಿದ್ದೀರಿ?

ಮಂಗಳೂರಿ ನಂಥ ನಗರ ರಾತ್ರಿ ಆಗುತ್ತಿದ್ದಂತೆ ಸ್ತಬ್ಧವಾಗುತ್ತದೆ. ಈ ನಗರವನ್ನು ಮುಂಬೈಯಂತೆ ಬೆಳಗಿಸಬೇಕು. ಕನಿಷ್ಠ 20 ತಾಸಾದರೂ ಲವಲವಿಕೆಯಿಂದ ಇರುವಂತೆ ಮಾಡಬೇಕು. ಇಲ್ಲಿ ಓದಿ, ಬೆಳೆದು ಬೇರೆ ದೇಶಕ್ಕೆ ಹೋಗಿ ಸೇವೆ ಸಲ್ಲಿಸುವ ತಜ್ಞರು ಇದ್ದಾರೆ. ಆವರನ್ನು ಸಂಪನ್ಮೂಲವಾಗಿ ಬಳಸಿಕೊಂಡು ಮಂಗಳೂರಿನ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಇಂಥ ಪ್ರಯತ್ನಗಳಿಂದ ನಗರ ಮತ್ತು ಜಿಲ್ಲೆಯ ಚಿತ್ರಣ ಬದಲಾಗಿ ಅಪವಾದದಿಂದ ಮುಕ್ತವಾಗಬಹುದು.

ಪ್ರ

ಉದ್ಯೋಗ ವಲಸೆ ತಡೆಗೆ ನೀವು ರೂಪಿಸುವ ಯೋಜನೆಗಳೇನು?

ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉದ್ಯೋಗ ಸಿಗುವಂತೆ ಮಾಡುತ್ತಾರೆ. ವಯಸ್ಸಾದಾಗ ತಮ್ಮನ್ನು ನೋಡಿಕೊಂಡು ಮಕ್ಕಳು ಮನೆ ಬೆಳಗಬೇಕು ಎಂಬುದು ಅವರ ಅಭಿಲಾಷೆ. ಆದರೆ ಉದ್ಯೋಗಾವಕಾಶ ಸೃಷ್ಟಿಯಾಗದ ಕಾರಣ ಯುವಜನರು ಬೇರೆ ಕಡೆಗೆ ಹೋಗುತ್ತಿದ್ದಾರೆ. ಸೌಹಾರ್ದದ ಗತವೈಭವ ಮರುಕಳಿಸಿದರೆ ಅವರು ಪರರಾಜ್ಯ, ಪರದೇಶಗಳಿಗೆ ಹೋಗುವುದನ್ನು ತಡೆಯಬಹುದು.

ಪ್ರ

ನಿಮ್ಮ ಗೆಲುವಿಗೆ ಇರುವ ಪೂರಕ ಅಂಶಗಳೇನು?

ಅತಿ ಬಡ ಕುಟುಂಬದಿಂದ ಬಂದ ವ್ಯಕ್ತಿ ನಾನು. ಶಾಲೆಗೆ 4 ಕಿಲೊಮೀಟರ್ ನಡೆದುಕೊಂಡು ಹೋಗುತ್ತಿದ್ದೆ. ಹೆತ್ತವರು ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಸಚ್ಚಾರಿತ್ರ್ಯವಂತ ರಾಜಕಾರಣಿ ಜನಾರ್ದನ ಪೂಜಾರಿ ಅವರ ಬಳಿ ಕೆಲಸ ಆರಂಭಿಸಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಕುದ್ರೋಳಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾರಾಯಣ ಗುರುಗಳ ಆದರ್ಶ ಪಾಲಿಸುತ್ತಿದ್ದೇನೆ. ಗುರು ಬೆಳದಿಂಗಳು ಟ್ರಸ್ಟ್ ಮೂಲಕ ಅನೇಕ ಬಡ ಕುಟುಂಬಗಳಿಗೆ ನೆರವಾಗಿದ್ದೇವೆ.  

ಪ್ರ

ಚುನಾವಣೆಯಲ್ಲಿ ನಿಮ್ಮ ಎದುರಾಳಿ ಮತ್ತು ಆ ಪಕ್ಷದ ಶಕ್ತಿ–ದೌರ್ಬಲ್ಯಗಳನ್ನು ಹೇಗೆ ಅಳೆಯುತ್ತೀರಿ?

ನನಗೆ ಈ ಚುನಾವಣೆಯಲ್ಲಿ ಅಥವಾ ಚುನಾವಣೆಯ ನಂತರ ಎದುರಾಳಿ ಎಂದು ಇದ್ದರೆ ಅದು ಈ ಕ್ಷೇತ್ರದ ಜ್ವಲಂತ ಸಮಸ್ಯೆಗಳು. ನಾನೊಬ್ಬ ಹಿಂದೂ ಎಂದು ಹೇಳಿಕೊಳ್ಳಲು ಅಭಿಮಾನ ಇದೆ. ನನ್ನ ಧರ್ಮದ ಜೊತೆಯಲ್ಲಿ ಬೇರೆ ಧರ್ಮವನ್ನೂ ಗೌರವಿಸಬೇಕು ಎಂಬುದು ಹಿಂದೂ ಆಗಿದ್ದುಕೊಂಡು ನಾನು ಕಲಿತ ಪಾಠ. ಹಿಂದುತ್ವ ಎಂಬುದು ಚುನಾವಣೆಗಾಗಿ ಮಾತ್ರ ಹುಟ್ಟಿಕೊಳ್ಳುವ ಪದ. ಅದನ್ನು ನಾನು ಒಪ್ಪುವುದಿಲ್ಲ. ಹಿಂದೂ ಆಗಿ ನಾನು ಮಾಡಿದಷ್ಟು ಕೆಲಸವನ್ನು ಎದುರಾಳಿ ಅಭ್ಯರ್ಥಿ ಮಾಡಿದ್ದಾರೆಯೋ ಇಲ್ಲವೋ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ.

ಪ್ರ

ಜಿಲ್ಲೆಯ ನದಿಗಳು ಮಲಿನವಾಗಿವೆ...

ಹವಾಮಾನ ವೈಪರೀತ್ಯ ಹೆಚ್ಚುತ್ತಿರುವುದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಯಲ್ಲಿ ಜಲಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ. ಮೀನುಗಾರಿಕೆ ಮತ್ತು ನಮ್ಮತನಕ್ಕೆ ಧಕ್ಕೆ ಆಗದಂಥ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಕೈಗಾರಿಕೆಗಳನ್ನು ಪರಿಸರಸ್ನೇಹಿಯಾಗಿಸುವ ಪ್ರಯತ್ನಗಳು ಆಗಬೇಕು. 

ಪ್ರ

ಈ ಚುನಾವಣೆ ದೇಶದ್ರೋಹಿಗಳು ಮತ್ತು ದೇಶಪ್ರೇಮಿಗಳ ನಡುವಿನ ಹೋರಾಟ ಎಂದು ಕೆಲವರು ಹೇಳುತ್ತಿದ್ದಾರಲ್ಲ?

ಚುನಾವಣೆಯಲ್ಲಿ ಜಯ ಗಳಿಸುವುದಕ್ಕಾಗಿ ಯುವ ಸಮುದಾಯವನ್ನು ಹಾಳು ಮಾಡಿರುವುದು ದೇಶಪ್ರೇಮವೇ? ಬಿಜೆಪಿಯವರ ದೇಶಪ್ರೇಮದ ವ್ಯಾಖ್ಯಾನವೇ ಬೇರೆ. ಮನೆಹಾಳು ಮಾಡುವ ಕೆಲಸಗಳನ್ನು ದೇಶಪ್ರೇಮದ ಪಟ್ಟಿಗೆ ಸೇರಿಸಲು ಸಾಧ್ಯವಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT