ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS polls | ದೆಹಲಿಯಲ್ಲಿ ಬಿಜೆಪಿ ಜಯದ ಓಟಕ್ಕೆ ತಡೆಯೊಡ್ಡುವುದೇ ಎಎಪಿ?

ಬಿಜೆಪಿಗೆ ಎಲ್ಲ ಸ್ಥಾನ ಉಳಿಸಿಕೊಳ್ಳುವ ಬಯಕೆ * ‘ಇಂಡಿಯಾ’ಕ್ಕೆ ಕೇಜ್ರಿವಾಲ್ ಬಂಧನದ ಅನುಕಂಪವೇ ಆಸರೆ
Published 17 ಏಪ್ರಿಲ್ 2024, 14:43 IST
Last Updated 17 ಏಪ್ರಿಲ್ 2024, 14:43 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ದೆಹಲಿಯ ಏಳು ಕ್ಷೇತ್ರಗಳಲ್ಲಿ ಸತತ ಮೂರನೇ ಬಾರಿಗೆ ಗೆಲ್ಲುವ ಕನಸು ಕಾಣುತ್ತಿದ್ದರೆ, ಎಎಪಿ ಅರವಿಂದ ಕೇಜ್ರಿವಾಲ್ ಬಂಧನದ ಅನುಕಂಪವನ್ನು ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು, ಬಿಜೆಪಿಯ ಜಯದ ಓಟಕ್ಕೆ ತಡೆಯೊಡ್ಡುವ ಚಿಂತನೆಯಲ್ಲಿದೆ.

ದೆಹಲಿಯಲ್ಲಿ ‘ಇಂಡಿಯಾ’ ಕೂಟದ ಮಿತ್ರಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸುತ್ತಿದ್ದು, ಬಿಜೆಪಿಯೊಂದಿಗೆ ನೇರ ಹಣಾಹಣಿ ನಡೆಸುತ್ತಿವೆ. ಎಎಪಿ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಉಮೇದುವಾರರನ್ನು ನಿಲ್ಲಿಸಿದೆ. ಎರಡೂ ಪಕ್ಷಗಳು ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದು, ಜಿದ್ದಾಜಿದ್ದಿಯ ಹೋರಾಟ ಏರ್ಪಡುವ ಸಾಧ್ಯತೆಯಿದೆ.

ಪೂರ್ವಾಂಚಲದವರು ಮತ್ತು ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಈಶಾನ್ಯ ದೆಹಲಿಯಲ್ಲಿ ಬಿಹಾರ ಮೂಲದ ಇಬ್ಬರು ಅಭ್ಯರ್ಥಿಗಳ ನಡುವೆ ಹಣಾಹಣಿ ನಡೆಯಲಿದೆ. ಬಿಜೆಪಿಯಿಂದ ಮನೋಜ್ ತಿವಾರಿ ಕಣಕ್ಕಿಳಿದಿದ್ದು, ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಕನ್ಹಯ್ಯ ಕುಮಾರ್ ಕ್ಷೇತ್ರದಲ್ಲಿ ಮೊದಲ ಬಾರಿಗೆ ಉಮೇದುವಾರರಾಗಿದ್ದಾರೆ. 

ಬಿಜೆಪಿಯ ಮುಖಂಡರೊಬ್ಬರು ಹೇಳುವ ಪ್ರಕಾರ, ತಿವಾರಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ವಿದ್ಯಾರ್ಥಿ ನಾಯಕರಾಗಿದ್ದ ಮತ್ತು ಎಡಪಂಥೀಯರೊಂದಿಗೆ ಗುರುತಿಸಿಕೊಂಡಿದ್ದ ಕನ್ಹಯ್ಯ ಕುಮಾರ್‌ ಮತ ಧ್ರುವೀಕರಣ ಮಾಡುವ ಸಾಧ್ಯತೆ ಇದೆ ಎಂದು ಅವರು ಪ್ರತಿಪಾದಿಸುತ್ತಾರೆ.

ದೆಹಲಿ ವಿಧಾನಸಭಾ ಚುನಾವಣೆ 2025ರಲ್ಲಿ ನಡೆಯಲಿರುವುದರಿಂದ ಕನ್ಹಯ್ಯ ಅವರ ಜನಪ್ರಿಯತೆ ಮತ್ತು ಮಾತಿನ ಕೌಶಲವನ್ನು ಬಳಸಿಕೊಂಡು ಪ್ರಬಲ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ.

ಪೂರ್ವ ದೆಹಲಿಯ ಸಾಮಾನ್ಯ ಕ್ಷೇತ್ರದಲ್ಲಿ ಎಎಪಿ ದಲಿತ ಶಾಸಕ ಕುಲ್ದೀಪ್‌ ಕುಮಾರ್ ಅವರನ್ನು ಕಣಕ್ಕಿಳಿಸಿದ್ದು, ಇದು ದೆಹಲಿಯ ವಿವಿಧ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ 12 ವಿಧಾನಸಭಾ ಕ್ಷೇತ್ರಗಳ ದಲಿತ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. 

ಪೂರ್ವ ದೆಹಲಿಯಲ್ಲಿ ಬಿಜೆಪಿಯೊಂದಿಗೆ ಎಎಪಿ ನೇರ ಹಣಾಹಣಿ ನಡೆಸಲಿದೆ. ದಲಿತರು ಮತ್ತು ಮುಸ್ಲಿಮರಲ್ಲಿ ಮೋದಿವಿರೋಧಿ ಭಾವನೆಯಿದೆ ಎಂದು ಪ್ರತಿಪಾದಿಸಿರುವ ಎಎ‍ಪಿ, ಅದು ಚುನಾವಣೆಯಲ್ಲಿ ತನಗೆ ಯಶಸ್ಸು ತಂದುಕೊಡಲಿದೆ ಎಂದು ಭಾವಿಸಿದೆ. 

ಬಿಜೆಪಿಯು ಅಭ್ಯರ್ಥಿಗಳ ಆಯ್ಕೆಯಲ್ಲಿ ಜಾತಿ ಸಮೀಕರಣವನ್ನು ಅನುಸರಿಸಿದೆ. ಪಕ್ಷವು ಪೂರ್ವ ದೆಹಲಿಯಿಂದ ಪಂಜಾಬಿ ಸಮುದಾಯದ ಹರ್ಷ್ ಮಲ್ಹೋತ್ರಾ ಅವರನ್ನು ಕಣಕ್ಕಿಳಿಸಿದ್ದರೆ, ಚಾಂದಿನಿ ಚೌಕ್‌ನಿಂದ ಬನಿಯಾ ಜಾತಿಯ ಪ್ರವೀಣ್ ಖಂಡೇಲ್‌ವಾಲ್, ದಕ್ಷಿಣ ದೆಹಲಿಯಿಂದ ಗುಜ್ಜರ್ ಮುಖಂಡ ರಾಮ್‌ವೀರ್ ಸಿಂಗ್ ಬಿಧೂರಿ, ಪಶ್ಚಿಮ ದೆಹಲಿಯಿಂದ ಕಮಲ್‌ಜೀತ್ ಸೆಹ್ರಾವತ್, ವಾಯವ್ಯ ದೆಹಲಿ ಮೀಸಲು ಕ್ಷೇತ್ರದಿಂದ ದಲಿತ ಮುಖಂಡ ಯೋಗೇಂದ್ರ ಚಂದೋಲಿಯಾ ಅವರನ್ನು ಕಣಕ್ಕಿಳಿಸಿದೆ.

ಜತೆಗೆ ನವದೆಹಲಿಯಿಂದ ಇಬ್ಬರು ಮಹಿಳೆಯರನ್ನು– ಸೆಹ್ರಾವತ್ ಮತ್ತು ಬಾನ್ಸುರಿ ಸ್ವರಾಜ್– ಕಣಕ್ಕಿಳಿಸುವ ಮೂಲಕ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದೆ.    

ಎಎಪಿಯು ಮೂರು ಬಾರಿಯ ಶಾಸಕ ಸೋಮನಾಥ್ ಭಾರ್ತಿ ಅವರನ್ನು ನವದೆಹಲಿ ಕ್ಷೇತ್ರದಿಂದ, ಸಹಿರಾಮ್ ಪೆಹಲ್ವಾನ್ ಅವರನ್ನು ದಕ್ಷಿಣ ದೆಹಲಿಯಿಂದ ಮತ್ತು ಕಾಂಗ್ರೆಸ್ ಮಾಜಿ ಸಂಸದ ಮಹಾಬಲ ಮಿಶ್ರಾ ಅವರನ್ನು ಪಶ್ಚಿಮ ದೆಹಲಿಯಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜೆ.ಪಿ.ಅಗರ್ವಾಲ್ ಅವರನ್ನು ಚಾಂದಿನಿ ಚೌಕ್‌ನಿಂದ, ಮಾಜಿ ಬಿಜೆಪಿ ಸಂಸದ ಉದಿತ್ ರಾಜ್ ಅವರನ್ನು ವಾಯವ್ಯ ದೆಹಲಿಯ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಸಿದೆ.

ಕೇಜ್ರಿವಾಲ್ ಪರ ಅನುಕಂಪದ ಅಲೆ

ಎಎಪಿಯ ಚುನಾವಣಾ ಪ್ರಚಾರವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಕೇಂದ್ರೀಕರಿಸಿದೆ. ‘ಸದ್ಯಕ್ಕೆ ದೆಹಲಿಯ ಹೊರಗೆ ಪರಿಸ್ಥಿತಿ ಹೇಗಿದೆಯೋ ನನಗೆ ಗೊತ್ತಿಲ್ಲ. ಆದರೆ ದೆಹಲಿಯಲ್ಲಿ ಕೇಜ್ರಿವಾಲ್ ಪರ ಭಾರಿ ಅನುಕಂಪದ ಅಲೆ ಇದೆ. ಬಿಜೆಪಿಯನ್ನು ಬೆಂಬಲಿಸುವವರೂ ಕೂಡ ಇದು ಅತಿಯಾಯಿತು ಈ ರೀತಿ ಮಾಡಬಾರದಿತ್ತು ಎನ್ನುವ ಭಾವನೆ ಹೊಂದಿದ್ದಾರೆ’ ಎಂದು ಪಿಟಿಐ ಸಂಪಾದಕರೊಂದಿಗಿನ ಸಂವಾದದಲ್ಲಿ ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದರು.  

ಎಎಪಿಗೆ ಮತ ಧ್ರುವೀಕಣದ ಭರವಸೆ

ದೆಹಲಿಯ ಬಿಜೆಪಿ ಮುಖಂಡರು ಪಕ್ಷವು 2014ರಿಂದ ಹಿಡಿತ ಸಾಧಿಸಿರುವ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಳ್ಳಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ. 2019ರ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಪಕ್ಷದ ಪ್ರತಿ ಅಭ್ಯರ್ಥಿ ಗಳಿಸಿದ ಮತಗಳು ಕಾಂಗ್ರೆಸ್‌ನ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳು ಪಡೆದ ಮತಗಳಿಗಿಂತ ಅಧಿಕವಾಗಿವೆ ಎಂದು ಅವರು ಹೇಳುತ್ತಾರೆ. 2019ರ ಚುನಾವಣೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಶೇ 56.5 ಮತ ಪ್ರಮಾಣ ಪಡೆದರೆ ಕಾಂಗ್ರೆಸ್ ಶೇ 22 ಮತ್ತು ಎಎಪಿ ಶೇ 18.1 ರಷ್ಟು ಮತ ಪ್ರಮಾಣ ಪಡೆದಿದ್ದವು. ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದಾಗಿರುವುದರಿಂದ ಬಿಜೆಪಿ ವಿರೋಧ ಮತಗಳು ಕ್ರೋಡೀಕರಣಗೊಳ್ಳಲಿವೆ ಎಂದು ಎಎಪಿ ಮುಖಂಡರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT