ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ತಾರಾ ಪ್ರಚಾರಕಿಯಾಗಿ ಸುನೀತಾ: ಪತಿ ಹಾದಿಯಲ್ಲಿ ಪ್ರಮುಖ ಸ್ಥಾನದತ್ತ ಹೆಜ್ಜೆ?

ಎಎಪಿ ತಾರಾ ಪ್ರಚಾರಕಿಯಾಗಿ ಸುನೀತಾ, ದೆಹಲಿ ಮತ್ತು ಮೂರು ರಾಜ್ಯಗಳಲ್ಲಿ ಪ್ರಚಾರ
Published 26 ಏಪ್ರಿಲ್ 2024, 14:06 IST
Last Updated 26 ಏಪ್ರಿಲ್ 2024, 14:06 IST
ಅಕ್ಷರ ಗಾತ್ರ

ನವದೆಹಲಿ: ಆಮ್  ಆದ್ಮಿ ಪಕ್ಷದ (ಎಎಪಿ) ತಾರಾ ಪ್ರಚಾರಕರ ಪಟ್ಟಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ಪತ್ನಿ ಸುನೀತಾ ಸ್ಥಾನ ಪಡೆದಿದ್ದಾರೆ. ರಾಜಧಾನಿ ದೆಹಲಿ ಹೊರತುಪಡಿಸಿ ಇತರ ಮೂರು ರಾಜ್ಯಗಳಲ್ಲೂ ಪ್ರಚಾರ ನಡೆಸಲಿದ್ದಾರೆ.

ಪೂರ್ವ ದೆಹಲಿ ಕ್ಷೇತ್ರದ ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಪರ ಮತ ಕೇಳುವ ಮೂಲಕ ಅವರು ಶನಿವಾರ ಚುನಾವಣಾ ಪ್ರಚಾರ ಕಾರ್ಯ ಆರಂಭಿಸುವರು. ಭಾನುವಾರ ಪಶ್ಚಿಮ ದೆಹಲಿ ಕ್ಷೇತ್ರದ ಮಹಾಬಲ ಮಿಶ್ರಾ ಪರವಾಗಿ ಪ್ರಚಾರ ನಡೆಸುವರು.

ಸುನೀತಾ ಅವರ ಪ್ರಚಾರ ಕಾರ್ಯಕ್ರಮದ ವಿವರ ನೀಡಿದ ದೆಹಲಿ ಸಚಿವೆ ಆತಿಶಿ ಅವರು, ‘ಚುನಾವಣಾ ಪ್ರಚಾರದಲ್ಲಿ ಸುನೀತಾ ಅವರು ಕೇಜ್ರಿವಾಲ್‌ ಅವರಿಗೆ ಆಶೀರ್ವಾದ ಹಾಗೂ ಎಎಪಿ ಅಭ್ಯರ್ಥಿಗಳಿಗೆ ಮತವನ್ನು ಕೋರಲಿದ್ದಾರೆ’ ಎಂದರು.

ಜತೆಗೆ, ‘ಇಂಡಿಯಾ’ ಕೂಟದ ಭಾಗವಾಗಿ ಎಎಪಿ ಪಕ್ಷವು ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿರುವ ರಾಜ್ಯಗಳಲ್ಲಿ ಮಾತ್ರವೇ ಸುನೀತಾ ಪ್ರಚಾರ ನಡೆಸುವರು ಎಂದು ತಿಳಿಸಿದರು.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನದ ನಂತರ ಸುನೀತಾ ಅವರ ಉಪಸ್ಥಿತಿಯು ಪಕ್ಷದಲ್ಲಿ ಹೆಚ್ಚು ಮಹತ್ವವನ್ನು ಪಡೆಯುತ್ತಿದೆ. ಅವರು ಪಕ್ಷದ ಪ್ರಮುಖ ವ್ಯಕ್ತಿಯಾಗಿ ಅವರು ಹೊರಹೊಮ್ಮುತ್ತಿದ್ದಾರೆ.

ಮಾಜಿ ಐಆರ್‌ಎಸ್ ಅಧಿಕಾರಿಯಾಗಿರುವ ಸುನೀತಾ ನಿಯಮಿತವಾಗಿ ವಿಡಿಯೊ ಭಾಷಣ ಬಿಡುಗಡೆ ಮಾಡುತ್ತಿದ್ದು, ಕೇಜ್ರಿವಾಲ್‌ ಅವರ ಸಂದೇಶಗಳನ್ನು ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ.

ಅವರ ಭಾಷಣದ ಹಿನ್ನೆಲೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಭಗತ್‌ ಸಿಂಗ್ ಅವರ  ಚಿತ್ರಗಳು, ರಾಷ್ಟ್ರಧ್ವಜ ಕಂಡುಬರುತ್ತಿದೆ. 

ಪಕ್ಷದಲ್ಲಿ ಪ್ರಾಮುಖ್ಯತೆ ಪಡೆಯುತ್ತಿರುವಂತೆಯೇ ಅವರನ್ನು ಭೇಟಿ ಮಾಡುವ ಪಕ್ಷದ ನಾಯಕರ ಸಂಖ್ಯೆಯೂ ಹೆಚ್ಚತ್ತಿದೆ. ಪಕ್ಷದ ಶಾಸಕರು, ದೆಹಲಿ ನಗರಪಾಲಿಕೆಯ ಸದಸ್ಯರ ನಿಯೋಗ ಈಚೆಗೆ ಅವರನ್ನು ಭೇಟಿಯಾಗಿ ಮಾಡಿ ಚರ್ಚೆ ನಡೆಸಿದೆ. 

ಅಗತ್ಯ ಮತ್ತು ಅನಿವಾರ್ಯವಾದ ಪರಿಸ್ಥಿತಿಯು ನಿರ್ಮಾಣವಾದರೆ ಸುನೀತಾ ಅವರು ಕೇಜ್ರಿವಾಲ್‌ ಅವರ ಸ್ಥಾನವನ್ನೂ ತುಂಬಬಹುದು ಎಂಬ ವದಂತಿ ದಟ್ಟವಾಗಿದೆ. ರಾಮಲೀಲಾ ಮೈದಾನದಲ್ಲಿ ನಡೆದಿದ್ದ ಸಮಾವೇಶದಲ್ಲಿ ‘ಇಂಡಿಯಾ’ ನಾಯಕರ ಜೊತೆಗೆ ಅವರು ವೇದಿಕೆ ಹಂಚಿಕೊಂಡಿದ್ದರು. ಏಪ್ರಿಲ್‌ 21ರಂದು ರಾಂಚಿಯಲ್ಲಿ ನಡೆದಿದ್ದ ‘ಇಂಡಿಯಾ’ ಸಮಾವೇಶದಲ್ಲಿಯೂ ಪಾಲ್ಗೊಂಡಿದ್ದರು. 

29 ವರ್ಷಗಳ ಹಿಂದೆ ಕೇಜ್ರಿವಾಲ್ ಅವರನ್ನು ವಿವಾಹವಾಗಿದ್ದ ಸುನೀತಾ, ಸಮಾಜಸೇವೆಯಲ್ಲಿ ಪತಿ ಸಕ್ರಿಯವಾದಂತೆ ಅವರಿಗೆ ಬೆಂಬಲವಾಗಿ ನಿಂತಿದ್ದರು. ಐಆರ್‌ಎಸ್‌ ಸೇವೆಗೆ 2015ರಲ್ಲಿ ರಾಜೀನಾಮೆ ನೀಡಿ, ಎಎಪಿ ಪರ ಪ್ರಚಾರದಲ್ಲೂ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT