ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಇಟ್ಟುಕೊಂಡಿರಿ: ಚುನಾವಣಾ ಕಾರ್ಯತಂತ್ರ ನಿಪುಣ 'ಪಿ.ಕೆ' ಹೀಗೆ ಹೇಳಿದ್ದೇಕೆ?

Published 23 ಮೇ 2024, 7:56 IST
Last Updated 23 ಮೇ 2024, 7:56 IST
ಅಕ್ಷರ ಗಾತ್ರ

ಬೆಂಗಳೂರು: 'ನೀರು ಕುಡಿಯುವುದು ಒಳ್ಳೆಯದು. ದೇಹ ಮತ್ತು ಮನಸ್ಸು ನಿರ್ಜಲೀಕರಣಗೊಳ್ಳದಿರಲು ಇದರಿಂದ ಸಾಧ್ಯ. ಈ ಚುನಾವಣೆಯ ಫಲಿತಾಂಶದ ಬಗ್ಗೆ ನಾನು ನೀಡಿರುವ ಸಮೀಕ್ಷೆಯಿಂದ ಗಾಬರಿಯಾಗಿರುವವರು, ಜೂನ್‌ 4ರಂದು ಸಾಕಷ್ಟು ನೀರು ಇಟ್ಟುಕೊಳ್ಳಬೇಕು'

ಲೋಕಸಭಾ ಚುನಾವಣೆ ಕುರಿತಂತೆ ಇತ್ತೀಚೆಗೆ ಭವಿಷ್ಯ ನುಡಿದಿದ್ದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ (ಪಿ.ಕೆ) ಅವರು ಈ ರೀತಿ ಟ್ವೀಟ್‌ ಮಾಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 300ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಸರಿಯಾದ ರೀತಿಯಲ್ಲಿ ತಂತ್ರಗಾರಿಕೆ ನಡೆಸದ ವಿರೋಧ ಪಕ್ಷಗಳು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಕಟ್ಟಿಹಾಕಲು ಇದ್ದ ಕೆಲವು ಅತ್ಯುತ್ತಮ ಅವಕಾಶಗಳನ್ನು ಹಾಳು ಮಾಡಿಕೊಂಡಿವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು.

'ಕೋವಿಡ್‌ ಸಂದರ್ಭದಲ್ಲಿ ಮೋದಿ ಅವರ ಜನಪ್ರಿಯತೆ ಕುಸಿದಿತ್ತು. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿತ್ತು. ಆ ವೇಳೆ ಮೋದಿ ಅವರನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಬಹುದಾಗಿತ್ತು. ಆದರೆ, ವಿರೋಧ ಪಕ್ಷದವರು ತಮ್ಮ ತಮ್ಮ ಮನೆಗಳಲ್ಲೇ ಕುಳಿತರು. ಇದರಿಂದ ಪ್ರಧಾನಿ ಅವರು ರಾಜಕೀಯವಾಗಿ ಪುಟಿದೇಳಲು ಸಾಧ್ಯವಾಯಿತು. ಚೆನ್ನಾಗಿ ಆಡುವ ಬ್ಯಾಟರ್‌ನ ಕ್ಯಾಚ್‌ಗಳನ್ನು ಕೈಚೆಲ್ಲಿ ಜೀವದಾನ ನೀಡಿದರೆ, ಆತ ಶತಕ ಹೊಡೆಯುತ್ತಾನೆ' ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಅದಕ್ಕೆ ಪೂರಕವಾಗಿ, ಇಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ, ತಮ್ಮ ಲೆಕ್ಕಾಚಾರ ಸತ್ಯವಾಗಲಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಗೆ 2021ರಲ್ಲಿ ನಡೆದ ಚುನಾವಣೆ ವೇಳೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪರ ತಂತ್ರಗಾರಿಕೆ ಹೆಣೆದಿದ್ದ ಕಿಶೋರ್‌, ಆ ಚುನಾವಣೆಯ ಫಲಿತಾಂಶ ಬಂದ ದಿನಾಂಕವನ್ನೂ ಉಲ್ಲೇಖಿಸಿ 'ನೆನಪಿಡಿ' ಎಂಬ ಸೂಚನೆಯನ್ನೂ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT