ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ಯಾಕುಮಾರಿಯಲ್ಲಿ 45 ತಾಸಿನ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

Published 1 ಜೂನ್ 2024, 10:20 IST
Last Updated 1 ಜೂನ್ 2024, 10:20 IST
ಅಕ್ಷರ ಗಾತ್ರ

ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ವಿವೇಕಾನಂದ ಸ್ಮಾರಕದಲ್ಲಿ ಗುರುವಾರ ಆರಂಭಿಸಿದ್ದ 45 ತಾಸುಗಳ ಧ್ಯಾನವನ್ನು ಶನಿವಾರ ಅಂತ್ಯಗೊಳಿಸಿದರು. ನಂತರ ತಮಿಳು ಕವಿ ತಿರುವಳ್ಳುವರ್ ಪ್ರತಿಮೆಗೆ ಗೌರವ ಸಲ್ಲಿಸಿದರು.

ಧ್ಯಾನ ಅಂತ್ಯಗೊಂಡ ನಂತರ ಮೋದಿ ಅವರು ವಿವೇಕಾನಂದ ಸ್ಮಾರಕದ ಪಕ್ಕದಲ್ಲಿಯೇ ಇರುವ, 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯ ಸ್ಥಳಕ್ಕೆ ನಾವೆಯ ಮೂಲಕ ತೆರಳಿದರು. ಪ್ರತಿಮೆಯ ಪಾದಗಳಿಗೆ ಬೃಹತ್ ಗಾತ್ರದ ಹಾರವನ್ನು ಇರಿಸಿದರು. ನಂತರ ನಾವೆಯ ಮೂಲಕ ಸಮುದ್ರ ತೀರವನ್ನು ತಲುಪಿದರು. ಆಗ ಅವರು ಬಿಳಿ ಬಣ್ಣದ ವಸ್ತ್ರ ಧರಿಸಿದ್ದರು.

ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತಿರುವನಂತಪುರಕ್ಕೆ ತೆರಳಿದ ಪ್ರಧಾನಿ, ದೆಹಲಿಯ ಕಡೆ ಪ್ರಯಾಣ ಬೆಳೆಸಿದರು. ವಿವೇಕಾನಂದ ಸ್ಮಾರಕದಲ್ಲಿ ಇದ್ದ ಅವಧಿಯಲ್ಲಿ ಪ್ರಧಾನಿಯವರು ಧ್ಯಾನ ಮಾಡಿದ್ದಷ್ಟೇ ಅಲ್ಲದೆ, ‘ಸೂರ್ಯ ಅರ್ಘ್ಯ’ ಸಮರ್ಪಿಸಿದ್ದರು. ಧ್ಯಾನದ ಅವಧಿಯಲ್ಲಿ ಅವರು ಕೇಸರಿ ವಸ್ತ್ರ ಧರಿಸಿದ್ದರು.

ಧ್ಯಾನ ಮಾಡಲು ಅವರು ಕನ್ಯಾಕುಮಾರಿಗೆ ಬಂದಿದ್ದಕ್ಕೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಿಂದ ವಿರೋಧ ವ್ಯಕ್ತವಾಗಿತ್ತು. ಜೂನ್‌ 1ರಂದು ಕಡೆಯ ಹಂತದ ಮತದಾನ ಇರುವ ಕಾರಣ, ಧ್ಯಾನವನ್ನು ಟಿ.ವಿ. ವಾಹಿನಿಗಳಲ್ಲಿ ಪ್ರಸಾರ ಮಾಡುವುದಕ್ಕೆ ಅವು ವಿರೋಧ ವ್ಯಕ್ತಪಡಿಸಿದ್ದವು.

‘ಧ್ಯಾನ ಮಾಡುವವರು ಶಾಂತಿಯುತವಾಗಿ, ಒಬ್ಬಂಟಿಯಾಗಿ ಮಾಡುತ್ತಾರೆ. ಆದರೆ ಎದುರಿಗೆ 14 ಕ್ಯಾಮೆರಾಗಳನ್ನು ಇರಿಸಿಕೊಂಡು ವ್ಯಕ್ತಿಯೊಬ್ಬ ಧ್ಯಾನ ಮಾಡುವುದು ಹೇಗೆ? ಇದು ಧ್ಯಾನವೇ? ಚುನಾವಣಾ ರಾಜಕೀಯದ ಮೇಲೆ ಕಣ್ಣಿರಿಸಿರುವ ಧ್ಯಾನ ಇದು’ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಶನಿವಾರ ಆರೋಪಿಸಿದ್ದಾರೆ.

ಮೋದಿ ಅವರು ಸ್ವಾಮಿ ವಿವೇಕಾನಂದರ ಪರಂಪರೆಗೆ ವಿರುದ್ಧವಾಗಿ ನಡೆದುಕೊಂಡು, ವಿವೇಕಾನಂದರ ಹೆಸರಿಗೆ ಕಳಂಕ ತರುವ ಕೆಲಸವನ್ನು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT