ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Polls | ಬಿಜೆಪಿ–ಆರ್‌ಎಸ್‌ಎಸ್ ದೇಶವನ್ನೇ ನಾಶ ಮಾಡುವ ವಿಷದಂತೆ: ಖರ್ಗೆ

Published 31 ಮಾರ್ಚ್ 2024, 13:31 IST
Last Updated 31 ಮಾರ್ಚ್ 2024, 13:31 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶವನ್ನೇ ನಾಶ ಮಾಡುವ ವಿಷವಿದ್ದಂತೆ ಎಂದು ಕಿಡಿಕಾರಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ದೇಶ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಭಾನುವಾರ ಹೇಳಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಸುತ್ತಿರುವ 'ಲೋಕತಂತ್ರ ಬಚಾವೋ' (ಪ್ರಜಾಪ್ರಭುತ್ವ ಉಳಿಸಿ) ರ್‍ಯಾಲಿಯಲ್ಲಿ ಪಾಲ್ಗೊಂಡ ಅವರು, ಈ ಬಾರಿಯ ಚುನಾವಣೆಯು ಪ್ರಜಾಪ್ರಭುತ್ವ, ದೇಶ ಹಾಗೂ ಸಂವಿಧಾನದ ಉಳಿವಿಗಾಗಿ ನಡೆಯಲಿದೆ ಎಂದಿದ್ದಾರೆ.

ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರನ್ನು ಬಂಧಿಸಿರುವುದನ್ನು ಖಂಡಿಸಿ, ಈ ರ್‍ಯಾಲಿ ನಡೆಸಲಾಗುತ್ತಿದೆ.

ಈ ವೇಳೆ ಮಾತನಾಡಿದ ಖರ್ಗೆ, 'ನಾವೆಲ್ಲ ಒಂದಾಗಬೇಕಿದೆ. ಆಗ ಮಾತ್ರವೇ ಬಿಜೆಪಿ ವಿರುದ್ಧ ಹೋರಾಟ ನಡೆಸಲು ಸಾಧ್ಯವಾಗುತ್ತದೆ. ನಾವು ಪರಸ್ಪರ ಕಚ್ಚಾಟದಲ್ಲಿ ತೊಡಗಿದರೆ, ಯಶಸ್ಸು ಸಾಧಿಸಲು ಆಗದು. ಈ ಬಾರಿಯ ಚುನಾವಣೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದಕ್ಕಾಗಿ ನಡೆಯಲಿದೆ. ನಾವೆಲ್ಲ ಒಂದಾಗಿ ಹೋರಾಟ ನಡೆಸಬೇಕಿದೆ' ಎಂದು ವಿರೋಧ ಪಕ್ಷಗಳ ನಾಯಕರಿಗೆ ಕರೆ ನೀಡಿದ್ದಾರೆ.

'ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಹೋರಾಟ ನಡೆಸಲು ಸಮಾನ ವೇದಿಕೆ ಇಲ್ಲ' ಎಂದು ಆರೋಪಿಸಿರುವ ಕಾಂಗ್ರೆಸ್‌ ಅಧ್ಯಕ್ಷ, 'ಪ್ರಧಾನಿ ನರೇಂದ್ರ ಮೋದಿ, ಮೈದಾನದಲ್ಲಿ ಗುಂಡಿಗಳನ್ನು ತೋಡಿ, ವಿರೋಧ ಪಕ್ಷಗಳಿಗೆ ಕ್ರಿಕೆಟ್‌ ಆಡಲು ಹೇಳುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹಣವನ್ನು ದೋಚಲಾಗಿದೆ. ಈ ಬಾರಿ ನ್ಯಾಯಸಮ್ಮತವಾದ ಚುನಾವಣೆ ನಡೆಯುವುದಿಲ್ಲ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಇತ್ತೀಚೆಗೆ ತಿಳಿಸಿರುವುದಾಗಿ ಹೇಳಿದ್ದಾರೆ.

'ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿಷವಿದ್ದಂತೆ, ರುಚಿ ನೋಡಬೇಡಿ. ಅವು ದೇಶವನ್ನು ಹಾಳು ಮಾಡಿವೆ. ಇನ್ನಷ್ಟು ನಾಶ ಮಾಡಲು ಅವಕಾಶ ನೀಡಬಾರದು' ಎಂದು ಒತ್ತಿಹೇಳಿದ್ದಾರೆ.

ಮೋದಿ ಹಾಗೂ ಮೋದಿಯ ಚಿಂತನೆಗಳನ್ನು ಕಿತ್ತೊಗೆಯುವವರೆಗೂ ದೇಶದ ಅಭ್ಯುದಯ ಸಾಧ್ಯವಿಲ್ಲ ಎಂದೂ ಖರ್ಗೆ ಹೇಳಿದ್ದಾರೆ.

ಮೋದಿ, ವಿರೋಧ ಪಕ್ಷಗಳು ಮತ್ತು ಅವುಗಳ ನಾಯಕರನ್ನು ಬೆದರಿಸಲು, ಚುನಾಯಿತ ಸರ್ಕಾರಗಳನ್ನು ಉರುಳಿಸಿ, ಬಿಜೆಪಿಯನ್ನು ಅಧಿಕಾರಕ್ಕೇರಿಸಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT