ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದೇಶ್‌ಖಾಲಿಯಲ್ಲಿ ಹಿಂಸಾಚಾರ | ಜೋಯ್ನಗರ್‌ನಲ್ಲಿ ಇವಿಎಂ ಕೆರೆಗೆ ಎಸೆದ ಮತದಾರರು

Published 1 ಜೂನ್ 2024, 14:17 IST
Last Updated 1 ಜೂನ್ 2024, 14:17 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಪ್ರದೇಶದ ಬಶೀರ್‌ಹಾಟ್‌ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ಮತದಾನದ ವೇಳೆ ಚುನಾವಣಾ ಅಕ್ರಮ ವಿಚಾರಕ್ಕೆ ಸಂಬಂಧಿಸಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವ್ಯಾಪಕ ಹಿಂಸಾಚಾರ ನಡೆದಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್‌ ಸಿಡಿಸಿ, ಲಾಠಿ ಪ್ರಹಾರ ನಡೆಸಿದರು.

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿವಿಧ ರಾಜಕೀಯ ಪಕ್ಷಗಳು 1,899 ದೂರುಗಳನ್ನು ನೀಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಪೋಲಿಂಗ್‌ ಏಜೆಂಟರನ್ನು ಮತಗಟ್ಟೆ ಪ್ರವೇಶಿಸದಂತೆ ತಡೆದಿರುವುದು ಹಿಂಸಾಚಾರಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರು ಮತದಾನ ಮಾಡದಂತೆ ಟಿಎಂಸಿ ಗೂಂಡಾಗಳು ತಡೆದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ ಮುಖಂಡರು, ಬಿಜೆಪಿಯ ಗೂಂಡಾಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಸಂದೇಶ್‌ಖಾಲಿಯ ಬೈರಾಮರಿಯಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಒಬ್ಬರನ್ನು ಬಂಧಿಸಲಾಗಿದೆ ಎಂದು ಬಶೀರ್‌ಹಾಟ್‌ ಪೊಲೀಸ್‌ ವರಿಷ್ಠಾಧಿಕಾರಿ ಹುಸೇನ್ ಮೆಹದಿ ರೆಹಮಾನ್ ತಿಳಿಸಿದರು.

ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜೋಯ್ನಗರ್‌ ಕ್ಷೇತ್ರ ವ್ಯಾಪ್ತಿಯ ಕುಲ್ತುಲಿಯಲ್ಲಿ ಮತದಾರರು ವಿದ್ಯುನ್ಮಾನ ಮತಯಂತ್ರ (ಇವಿಎಂ), ವಿವಿಪ್ಯಾಟ್‌ ಮತ್ತು ಚುನಾವಣಾ ಸಾಮಗ್ರಿಗಳನ್ನು ಕೆರೆಗೆ ಎಸೆದಿದ್ದಾರೆ.

ಜಾದವ್‌ಪುರ ಕ್ಷೇತ್ರ ವ್ಯಾಪ್ತಿಯ ಬಾಂಗರ್‌ನಲ್ಲಿ ಟಿಎಂಸಿ ಮತ್ತು ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌ (ಐಎಸ್‌ಎಫ್‌) ಕಾರ್ಯಕರ್ತರ ನಡುವೆ ನಡೆದ ಗಲಭೆಯ ವೇಳೆ ಮತಗಟ್ಟೆಯ ಸಮೀಪಕ್ಕೆ ಕಚ್ಚಾ ಬಾಂಬ್‌ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಸ್ಪರ್ಧಿಸಿರುವ ಡೈಮಂಡ್‌ ಹಾರ್ಬರ್‌ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗೆ ‍ಪ್ರವೇಶಿಸದಂತೆ ಬಿಜೆಪಿ ಕಾರ್ಯಕರ್ತರನ್ನು ತಡೆಯಲಾಗಿದೆ. ಚುನಾವಣಾ ದಾಖಲೆಗಳನ್ನು ನಾಶಮಾಡಲಾಗಿದೆ. ಪೊಲೀಸರು ಅಭಿಷೇಕ್‌ ಅವರ ಪರವಾಗಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ ಅವರು ಎಕ್ಸ್‌ ವೇದಿಕೆಯಲ್ಲಿ ಆರೋಪಿಸಿದ್ದಾರೆ.

ಅಲ್ಲಲ್ಲಿ ಘರ್ಷಣೆ

  • ಸಂದೇಶ್‌ಖಾಲಿಯ ಬೈರಾಮಾರಿಯಲ್ಲಿ ಟಿಎಂಸಿ, ಬಿಜೆಪಿ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಒಬ್ಬನನ್ನು ಬಂಧಿಸಲಾಗಿದೆ.

  • ಜಾದವಪುರ ಹಾಗೂ ಡೈಮಂಡ್ ಹಾರ್ಬರ್ ಕ್ಷೇತ್ರಗಳಲ್ಲಿಯೂ ಬಿಜೆಪಿ, ಟಿಎಂಸಿ ನಡುವೆ ಘರ್ಷಣೆ ನಡೆದಿದೆ.

  • ಜಾದವಪುರ ಕ್ಷೇತ್ರದಲ್ಲಿ ಘರ್ಷಣೆಯಲ್ಲಿ ತೊಡಗಿದ್ದ ಟಿಎಂಸಿ ಹಾಗೂ ಐಎಸ್‌ಎಫ್‌ ಬೆಂಬಲಿಗರು. ಪೊಲೀಸರಿಂದ ಲಾಠಿ ಪ್ರಹಾರ. ಕಚ್ಚಾ ಬಾಂಬ್ ವಶಪಡಿಸಿಕೊಂಡ ಪೊಲೀಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT