ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: 30 ಮಂದಿ ಕಣದಲ್ಲಿ, ಡಬಲ್ ಬ್ಯಾಲೆಟ್ ಮತಯಂತ್ರ ಬಳಕೆ

Published 23 ಏಪ್ರಿಲ್ 2024, 4:52 IST
Last Updated 23 ಏಪ್ರಿಲ್ 2024, 4:52 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಬಯಸಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಅಖಾಡದಲ್ಲಿ 30 ಅಭ್ಯರ್ಥಿಗಳು ಉಳಿದಿರುವುದರಿಂದ ಡಬಲ್‌ ಬ್ಯಾಲೇಟ್‌ ಮತಯಂತ್ರ ಬಳಕೆಗೆ ಸಿದ್ಧತೆ ನಡೆದಿದೆ.

ಚಿತ್ರದುರ್ಗದ ಲೋಕಸಭಾ ಕ್ಷೇತ್ರದಿಂದ ಪ್ರತ್ಯೇಕಗೊಂಡ ದಾವಣಗೆರೆ ಸ್ವತಂತ್ರ ಕ್ಷೇತ್ರವಾದ ಬಳಿಕ 2009ರಲ್ಲಿ 28 ಹುರಿಯಾಳುಗಳು ಕಣದಲ್ಲಿದ್ದರು. ಅದನ್ನು ಹೊರತುಪಡಿಸಿ 2019ರ ಚುನಾವಣೆಯಲ್ಲಿ 25 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಈ ಬಾರಿ 30 ಸ್ಪರ್ಧಾಳುಗಳು ಕಣದಲ್ಲಿ ಇದ್ದು, ಇದುವರೆಗೆ ನಡೆದ ಚುನಾವಣೆಗಳಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಂತಾಗಿದೆ.

1977ರಲ್ಲಿ ನಡೆದ ಚುನಾವಣೆಯು ದಾವಣಗೆರೆ ಕ್ಷೇತ್ರದ ಮೊದಲ ಚುನಾವಣೆಯಾಗಿತ್ತು. ಮೂವರು ಕಣಕ್ಕಿಳಿದಿದ್ದು, ಒಬ್ಬರು ಠೇವಣಿ ಕಳೆದುಕೊಂಡಿದ್ದರು. ದಾವಣಗೆರೆ ಕ್ಷೇತ್ರದಲ್ಲಿ ಅತಿ ಕಡಿಮೆ ಹುರಿಯಾಳುಗಳಿದ್ದ ಚುನಾವಣೆ ಅದೇ ಆಗಿತ್ತು.

ಠೇವಣಿ ಉಳಿಸಿಕೊಳ್ಳದ ಪಕ್ಷೇತರರು: ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಅ‌ಭ್ಯರ್ಥಿಗಳ ನಡುವೆಯೇ ಹಣಾಹಣಿ ನಡೆದಿದೆ. ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ ಬಹುತೇಕರು ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

1977ರಿಂದ 2019ರವರೆಗೆ ಒಟ್ಟು 12 ಚುನಾವಣೆಗಳನ್ನು ಈ ಕ್ಷೇತ್ರ ಕಂಡಿದೆ. ಅದರಲ್ಲಿ ಒಟ್ಟು 149 ಮಂದಿ ಸ್ಪರ್ಧೆಗೆ ಇಳಿದಿದ್ದರು. ಚುನಾವಣೆಯ ನಿಯಮಗಳ ಪ್ರಕಾರ ಚಲಾವಣೆಯಾದ ಒಟ್ಟು ಮತಗಳಲ್ಲಿ 6ನೇ ಒಂದು ಭಾಗದಷ್ಟು ಮತ ಪಡೆಯಲು ಸಾಧ್ಯವಾಗದೇ ಇದ್ದರೆ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಹಾಗಾಗಿ 149 ಸ್ಪರ್ಧಿಗಳಲ್ಲಿ 122 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. 12 ಮಂದಿ ಗೆದ್ದಿದ್ದರೆ 14 ಮಂದಿಯಷ್ಟೇ ಠೇವಣಿ ಉಳಿಸಿಕೊಳ್ಳಲು ಸಫಲರಾಗಿದ್ದರು.

6 ಚುನಾವಣೆಗಳಲ್ಲಿ ಹುರಿಯಾಳುಗಳ ಸಂಖ್ಯೆ ಒಂದಂಕಿ ದಾಟಿಲ್ಲ. ಎರಡು ಬಾರಿಯಷ್ಟೇ 20ರ ಗಡಿ ದಾಟಿತ್ತು. ಈ ಸಲ ಮೊದಲ ಬಾರಿಗೆ 30ರ ಗಡಿ ದಾಟಿದೆ.

1977ರಲ್ಲಿ ಮೂವರು, 1999ರಲ್ಲಿ ನಾಲ್ವರು, 1989ರಲ್ಲಿ ಐವರು, 1980 ಮತ್ತು 2004ರಲ್ಲಿ ಆರು ಮಂದಿಯಷ್ಟೇ ಕಣದಲ್ಲಿ ಇದ್ದರು. 1996ರಲ್ಲಿ 44 ಮಂದಿ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 20 ಮಂದಿ ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದರು. 2019ರಲ್ಲಿ ಒಟ್ಟು 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇವರ ಪೈಕಿ ಇಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. 26 ಅಭ್ಯರ್ಥಿಗಳ ಒಬ್ಬರು ಕಣದಿಂದ ಹಿಂದಕ್ಕೆ ಸರಿದಿದ್ದರು.

ಈ ಬಾರಿ ಒಟ್ಟು 40 ಅಭ್ಯರ್ಥಿಗಳಿಂದ ಒಟ್ಟು 55 ನಾಮಪತ್ರ ಸಲ್ಲಿಕೆಯಾಗಿದ್ದು, ಅವರಲ್ಲಿ 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, ಮೂವರು ಕಣದಿಂದ ಹಿಂದಕ್ಕೆ ಸರಿದಿದ್ದು, 30 ಮಂದಿ ಕಣದಲ್ಲಿದ್ದಾರೆ.

ಡಬ್ಬಲ್ ಬ್ಯಾಲೇಟ್‌ಗೆ ಬಳಕೆಗೆ ಸಿದ್ಧತೆ

30 ಅಭ್ಯರ್ಥಿಗಳು ಕಣದಲ್ಲಿರುವುದಾಗಿ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಿಕೊಟ್ಟಿದ್ದು ಬಳ್ಳಾರಿ ಜಿಲ್ಲೆಯ ಬ್ಯಾಲೆಟ್‌ಗಳನ್ನು ದಾವಣಗೆರೆ ಹಂಚಿಕೆ ಮಾಡಲಾಗುತ್ತದೆ. ಮೊದಲ ಬ್ಯಾಲೇಟ್‌ನಲ್ಲಿ 16 ಅಭ್ಯರ್ಥಿಗಳು 2ನೇ ಬ್ಯಾಲೆಟ್‌ನಲ್ಲಿ 14 ಹಾಗೂ ನೋಟಾ ಸೇರಿ 15 ಜನರ ಹೆಸರು ನಮೂದಾಗಿರುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT