ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ‘ಕೈ’ ಹಿಡಿಯುತ್ತಾರೆ ಅಮಾತೆಪ್ಪ ಕಂದಕೂರ?

ಶಹಾಪುರ: ಕ್ಷೇತ್ರದ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ
Published 4 ಏಪ್ರಿಲ್ 2024, 6:27 IST
Last Updated 4 ಏಪ್ರಿಲ್ 2024, 6:27 IST
ಅಕ್ಷರ ಗಾತ್ರ

ಶಹಾಪುರ: ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ ಹಾಗೂ ಅವರ ಬೆಂಬಲಿಗರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಬಗ್ಗೆ ಶಹಾಪುರ ಮಕ್ಷೇತ್ರದಲ್ಲಿ ಮಾತುಗಳು ಕೇಳಿಬರುತ್ತಿವೆ.

ಲೋಕಸಭೆಯ ಚುನಾವಣೆಯ ಹೊಸ್ತಿಲಲ್ಲಿ ಮುಂದಿನ ರಾಜಕೀಯ ಇರುವಿಕೆಯನ್ನು ಗುರುತಿಸಿಕೊಳ್ಳಲು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಅಮಾತೆಪ್ಪ ಅವರಿಗೆ ಗಾಳ ಬೀಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಒಬ್ಬರು ತಿಳಿಸಿದ್ದಾರೆ.

ಶಹಾಪುರ ಮತಕ್ಷೇತ್ರದಲ್ಲಿ ಅಮಾತೆಪ್ಪ ಕಂದಕೂರ ಅವರಿಗೆ ಬಯಸದೇ ಬಂದ ಭಾಗ್ಯದಂತೆ ಹಲವು ರಾಜಕೀಯ ಸ್ಥಾನಮಾನ ದೊರಕಿವೆ. ಹಿಂದುಳಿದ ಕುರುಬ ಸಮುದಾಯದ ಮುಖಂಡರು ಆಗಿರುವ ಕಂದಕೂರ ಅವರ ರಾಜಕೀಯ ಗುರು ದಿ.ಶಿವಶೇಖರಪ್ಪಗೌಡ ಶಿರವಾಳ. ಕಂದಕೂರ ಅವರು ಎಪಿಎಂಸಿ ಸದಸ್ಯರಾಗಿದ್ದರು. 2000ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶಿರವಾಳ ಜಿ.ಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅದೇ ಅವಧಿಯಲ್ಲಿ ಕಲಬುರಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಆಗಿದ್ದರು. 

ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರ ಅವಧಿ ಎರಡು ತಿಂಗಳು ಬಾಕಿ ಇರುವಾಗ ರಾಜೀನಾಮೆ ನೀಡಿ ಸ್ಥಳೀಯ ಸಂಸ್ಥೆಯ ಸದಸ್ಯರ ಮೂಲಕ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ 2004ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.

2013ರಲ್ಲಿ ಶಹಾಪುರ ಮತಕ್ಷೇತ್ರದಿಂದ ಕೆಜೆಪಿಯಿಂದ ಸ್ಪರ್ಧಿಸಿದ್ದ ದಿ.ಶಿವಶೇಖರಪ್ಪಗೌಡ ಶಿರವಾಳ ಅವರ ಪುತ್ರ ಮಾಜಿ ಗುರು ಪಾಟೀಲ ಶಿರವಾಳ ಅವರ ಗೆಲುವಿನಲ್ಲಿ ಕಂದಕೂರ ಅವರು ಪ್ರಮುಖ ಪಾತ್ರ ನಿರ್ವಹಿಸಿದರು. ಅಲ್ಲದೆ ತಾ.ಪಂ ಮಾಜಿ ಅಧ್ಯಕ್ಷ ಮಲ್ಲಣ್ಣ ಮಡ್ಡಿ ಸಾಹು ಹಾಗೂ ಕಂದಕೂರ ಜೋಡೆತ್ತಿನಂತೆ ಕೆಲಸ ನಿರ್ವಹಿಸಿದ್ದು ಇತಿಹಾಸ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಇಬ್ಬರು ನಾಯಕರನ್ನು ಭೇಟಿಯಾಗಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಯುಗಾದಿ ಒಳಗೆ ಶಹಾಪುರ ಮತಕ್ಷೇತ್ರದಲ್ಲಿ ಹೊಸ ರಾಜಕೀಯ ಬಿಸಿ ಗಾಳಿ ಬೀಸಲಿದೆ ಎನ್ನುತ್ತಾರೆ ಜೆಡಿಎಸ್ ಪಕ್ಷದ ಮುಖಂಡರು ಒಬ್ಬರು.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಮಾಜಿ ಶಾಸಕ ಗುರು ಪಾಟೀಲ ಹಾಗೂ ಕಾರ್ಯಕರ್ತರ ಜತೆ ಸಮಾಲೋಚಿಸಿ ತೀರ್ಮಾನಿಸುತ್ತೇನೆ. ಕಾಂಗ್ರೆಸ್ ಸೇರ್ಪಡೆ ಎನ್ನುವುದು ಸದ್ಯಕ್ಕೆ ಸುಳ್ಳು
ಅಮಾತೆಪ್ಪ ಕಂದಕೂರ ಮಾಜಿ ಎಂಎಲ್‌ಸಿ
ಸಲಾದಪೂರ-ಕಂದಕೂರ ಜಿದ್ದಾಜಿದ್ದಿ
ತಾಲ್ಲೂಕಿನ ಶಿರವಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಇಂದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶರಣಪ್ಪ ಸಲಾದಪುರ ಅವರಿಗೆ ಟಿಕೆಟ್ ನೀಡುವಂತೆ ಅಂದಿನ ಶಾಸಕ ದಿ.ಶಿವಶೇಖರಪ್ಪಗೌಡ ಶಿರವಾಳ ಅವರಿಗೆ ಸೂಚಿಸಿದರು. ಅದನ್ನು ನಯವಾಗಿ ತಿರಸ್ಕರಿಸಿದ ದಿ.ಶಿವಶೇಖರಪ್ಪಗೌಡ ಶಿರವಾಳ ಅವರು ರಾಜಕೀಯ ವಿರೋಧಿಯಾಗಿರುವ ಸಲಾದಪುರ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡುವುದಿಲ್ಲ. ಅದು ನನ್ನ ಸ್ವಂತ ಕ್ಷೇತ್ರವಾಗಿದ್ದರಿಂದ ಅಮಾತೆಪ್ಪ ಕಂದಕೂರ ಅವರಿಗೆ ನೀಡಿ ಗೆಲ್ಲಿಸಿ ತರುತ್ತೇನೆ ಎಂದು ಬಹಿರಂಗವಾಗಿ ಸವಾಲು ಹಾಕಿ ಅದರಂತೆ ಕಂದಕೂರ ಅವರನ್ನು ಆಯ್ಕೆ ಮಾಡಿರುವುದು ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT