ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕೋಲಾರ ಕ್ಷೇತ್ರ: ಟಿಕೆಟ್‌ಗೆ ಕೊನೆಯ ಹಂತದ ಕಸರತ್ತು!

ಕಾಂಗ್ರೆಸ್‌, ಜೆಡಿಎಸ್‌ ಟಿಕೆಟ್‌ ಇಂದೇ ಫೈನಲ್‌–ನಾಮಪತ್ರಿಕೆ ಸಲ್ಲಿಕೆ ಆರಂಭಕ್ಕೆ 3 ದಿನ ಬಾಕಿ
Published : 25 ಮಾರ್ಚ್ 2024, 7:03 IST
Last Updated : 25 ಮಾರ್ಚ್ 2024, 7:03 IST
ಫಾಲೋ ಮಾಡಿ
Comments
ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್‌ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಟಿಕೆಟ್‌ ಸಿ.ಎಂ.ಮುನಿಯಪ್ಪಗೋ, ಚಿಕ್ಕಪೆದ್ದಣ್ಣಗೋ? ಒಂದು ಬಣಕ್ಕೆ ನೀಡಿದರೆ ಮತ್ತೊಂದು ಬಣಕ್ಕೆ ಸಿಟ್ಟು
ಖರ್ಗೆ ಭೇಟಿ ಮಾಡಿದ ರಮೇಶ್‌ ಕುಮಾರ್‌
ಸಿ.ಎಂ.ಮುನಿಯಪ್ಪ ಅವರಿಗೆ ಟಿಕೆಟ್‌ ಕೊಡಬೇಕೆಂದು ಕೆ.ಆರ್‌.ರಮೇಶ್‌ ಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಹಾಗೂ ಸಚಿವ ಡಾ.ಎಂ.ಸಿ.ಸುಧಾಕರ್‌ ಇದ್ದರು. ‘ಸುಮಾರು ಮೂರು ಗಂಟೆ ಚರ್ಚೆ ನಡೆಯಿತು. ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ ಸ್ಪರ್ಧೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರದ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಶಾಸಕರ ಬೆಂಬಲವಿದೆ ಹಾಗೂ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಇರುವುದು ಬಲಗೈ ಸಮುದಾಯದವರು ಎಂಬುದನ್ನು ಮನವರಿಕೆ ಮಾಡಲಾಯಿತು’ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸೋಮವಾರ ಟಿಕೆಟ್‌ ಘೋಷಣೆ ಆಗಲಿದೆ. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಿಕೊಂಡು ಬರಬೇಕು ಎಂಬುದಾಗಿ ಖರ್ಗೆ ಸೂಚನೆ ನೀಡಿದರು’ ಎಂದರು.
ಹನುಮಂತಯ್ಯ ಕೂಡ ಖರ್ಗೆ ಭೇಟಿ
ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷರಾಗಿ ನೇಮಕವಾಗಿರುವ ರಾಜ್ಯಸಭೆ ಮಾಜಿ ಸದಸ್ಯ ಎಲ್‌.ಹನುಮಂತಯ್ಯ ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭಾನುವಾರ ಭೇಟಿ ಮಾಡಿ ಚರ್ಚಿಸಿದ್ದಾರೆ. ‘ನನ್ನನ್ನು ಅಭ್ಯರ್ಥಿ ಆಗಿಸಿದ ಕೂಡಲೇ ಪ್ರಚಾರ ಸಮಿತಿ ಸಹ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತೇನೆ. ಇದು ಬಹಳ ಹಿಂದೆಯೇ ನಿರ್ಧಾರವಾದ ಪಟ್ಟಿ. ಸ್ಪರ್ಧೆಗೆ ನಾನೂ ತಯಾರಿ ಮಾಡಿಕೊಂಡಿದ್ದೇನೆ. ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ಖರ್ಗೆ ಹೇಳಿದರು. ಸಾಮಾಜಿಕ ನ್ಯಾಯದ ಪ್ರಕಾರ ಟಿಕೆಟ್ ಕೊಡಲಾಗುತ್ತದೆ’ ಎಂದು ಹನುಮಂತಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಎಡಗೈ–ಬಲಗೈ ಸಮುದಾಯದ ವಾದ
ಕೆ.ಎಚ್‌.ಮುನಿಯಪ್ಪ ಕೂಡ ಎಲ್ಲರ ವಿಶ್ವಾಸ ಪಡೆದುಕೊಳ್ಳಲು ಮುಂದಾಗಿದ್ದಾರೆ. ಎಡಗೈ ಸಮುದಾಯದ ಚಿಕ್ಕಪೆದ್ದಣ್ಣ (ಅಳಿಯ) ಅವರನ್ನು ಗೆಲ್ಲಿಸಿಕೊಡುವ ಭರವಸೆಯನ್ನೂ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ‘ವಿಜಯಪುರ ಕಲಬುರಗಿಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿದೆ. ಚಾಮರಾಜನಗರದಲ್ಲೂ ಬಲಗೈ ಸಮುದಾಯಕ್ಕೆ ಸಿಗುವ ಸಾಧ್ಯತೆ ಇದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯಕ್ಕೆ ಸಿಕ್ಕಿದ್ದು ಕೋಲಾರದಲ್ಲೂ ಇದೇ ಸಮುದಾಯಕ್ಕೆ ಸಿಗಬೇಕು’ ಎಂಬ ವಾದ ಮಂಡಿಸಿರುವುದು ಗೊತ್ತಾಗಿದೆ.
ಸಮೃದ್ಧಿ–ಮಲ್ಲೇಶ್‌ ಬಾಬು: ಟಿಕೆಟ್‌ ಯಾರಿಗೆ?
ಚೆನ್ನೈನಲ್ಲಿ ಚಿಕಿತ್ಸೆ ಪಡೆದು ಎಚ್‌.ಡಿ.ಕುಮಾರಸ್ವಾಮಿ ವಾಪಸ್‌ ಆಗುತ್ತಿದ್ದಂತೆ ಜೆಡಿಎಸ್‌ನಲ್ಲೂ ರಾಜಕೀಯ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಈಗಾಗಲೇ ಬಿಜೆಪಿ ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು ಟಿಕೆಟ್‌ಗೆ ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಶಾಸಕ ಸಮೃದ್ಧಿ ಮಂಜುನಾಥ್‌ ಹೆಸರು ಮುಂಚೂಣಿಯಲ್ಲಿದೆ. ಬಂಗಾರಪೇಟೆ ಪರಾಜಿತ ಅಭ್ಯರ್ಥಿ ಮಲ್ಲೇಶಬಾಬು ಹಾಗೂ ದೇವನಹಳ್ಳಿ ಪರಾಜಿತ ಅಭ್ಯರ್ಥಿ ನಿಸರ್ಗ ನಾರಾಯಣಸ್ವಾಮಿ ಹೆಸರೂ ಪಟ್ಟಿಯಲ್ಲಿದೆ. ಆದರೆ ಈ ಮೂವರಲ್ಲಿ ಟಿಕೆಟ್‌ ತಮಗೇ ಬೇಕೆಂದು ಯಾರೂ ಪಟ್ಟು ಹಿಡಿಯದಿರುವುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT