ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Election: ಕುತೂಹಲದ ಕ್ಷೇತ್ರಗಳ ಸವಾಲು ಗೆದ್ದಿದ್ದು ಹೇಗೆ?

Published 5 ಜೂನ್ 2024, 0:26 IST
Last Updated 5 ಜೂನ್ 2024, 0:26 IST
ಅಕ್ಷರ ಗಾತ್ರ

ಕಾಗೇರಿಗೆ 3.37 ಲಕ್ಷ ಮತಗಳ ಅಂತರದ ಭರ್ಜರಿ ಗೆಲುವು

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ 3,37,428 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರನ್ನು ಸೋಲಿಸುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಅಂತರದ ಗೆಲುವಿನ ದಾಖಲೆ ಬರೆದರು.

ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ 61ರಷ್ಟನ್ನು ಪಡೆದ ಅವರು 7,82,495 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷದ ಡಾ.ಅಂಜಲಿ ನಿಂಬಾಳ್ಕರ್ 4,43,296 ಮತ ಪಡೆದರು.

ವರ್ಷದ ಹಿಂದಷ್ಟೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಗೇರಿ 8 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದರು.

ಅರಸು ಕುಡಿಗೆ ‌ಒಲಿದ ಮೈಸೂರು

ಮೈಸೂರು: ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪ್ರಥಮ ಪ್ರಯತ್ನದಲ್ಲೇ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಯದುವೀರ್‌ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಾಲ್ಕು ಬಾರಿ ಸಂಸದರಾಗಿದ್ದರು. ಎರಡು ಬಾರಿ ಸೋತಿದ್ದರು. ಬಳಿಕ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದರು. ಈಗ ಯದುವೀರ್ ಗೆಲುವಿನೊಂದಿಗೆ ‘ರಾಜಪರಿವಾರ’ದ sರಾಜಕಾರಣ ಮತ್ತೆ ಪ್ರಾರಂಭವಾದಂತಾಗಿದೆ.

ಸತತ ಎರಡು ಬಾರಿ ಆಯ್ಕೆಯಾಗಿದ್ದ ಪ್ರತಾಪ ಸಿಂಹ ಅವರ ಬದಲು, ಹೊಸ ಮುಖಕ್ಕೆ ಮಣೆ ಹಾಕಿದ್ದ ಬಿಜೆಪಿ ‘ಪ್ರಯೋಗ’ ಯಶಸ್ವಿಯಾಗಿದೆ. ‘ರಾಜಕಾರಣಕ್ಕೂ ನನಗೂ ಆಗಿ ಬರುವುದಿಲ್ಲ’ ಎನ್ನುತ್ತಲೇ ಕೊನೆ ಕ್ಷಣದಲ್ಲಿ ಬಿಜೆಪಿಗೆ ಸೇರಿ ಸ್ಪರ್ಧಿಸಿದ್ದ ‘ಅರಸು ಕುಡಿ’, ಯದುವೀರ್‌ ಅವರಿಗೆ ಮತದಾರರು ‘ಬಹುಪರಾಕ್‌’ ಹೇಳಿದ್ದಾರೆ. ಇದರೊಂದಿಗೆ, ಬಿಜೆಪಿ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿ ಬೀಗಿದೆ.

ಕಾಂಗ್ರೆಸ್‌ನ ‘ಸಾಮಾನ್ಯ ಕಾ‌ಯಕರ್ತ’ ಎಂ.ಲಕ್ಷ್ಮಣ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತವರಿನಲ್ಲೇ ತೀವ್ರ ಮುಖಭಂಗವಾಗಿದೆ. ‘ಒಕ್ಕಲಿಗಾಸ್ತ್ರ’ವೂಕೈಹಿಡಿದಿಲ್ಲ.

ಜೆಡಿಎಸ್‌ ನೆಚ್ಚಿಕೊಂಡೇ ಗೆದ್ದ ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್‌ ತಮ್ಮ ಪಕ್ಷಕ್ಕಿಂತಲೂ ಹೆಚ್ಚಾಗಿ ಜೆಡಿಎಸ್‌ ನಾಯಕರನ್ನು ನೆಚ್ಚಿಕೊಂಡೇ ಗೆಲುವು ಸಾಧಿಸಿದ್ದಾರೆ. ಬಿಜೆಪಿಯವರೇ ಆದ ಯಲಹಂಕ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರು ಸುಧಾಕರ್‌ ಸ್ಪರ್ಧೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ಬಿ.ಎಸ್‌. ಯಡಿಯೂರಪ್ಪ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿತ್ತು. ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ ಮತಬ್ಯಾಂಕ್‌ ದೊಡ್ಡ ಪ್ರಮಾಣದಲ್ಲಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪ್ರಚಾರಕ್ಕೆ ಕರೆತಂದ ಸುಧಾಕರ್‌, ಒಕ್ಕಲಿಗ ಮತ ಬ್ಯಾಂಕ್‌ ಸೆಳೆಯುವಲ್ಲಿ ಯಶಸ್ವಿಯಾದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಹಿಂದುಳಿದ ವರ್ಗಗಳ ಬಲಿಜ ಸಮುದಾಯದ ರಕ್ಷಾ ರಾಮಯ್ಯ ಎದುರು ಜೆಡಿಎಸ್‌ ನಾಯಕರನ್ನು ಮುಂದಿಟ್ಟುಕೊಂಡು ಒಕ್ಕಲಿಗ ಮತಗಳನ್ನು ಒಗ್ಗೂಡಿಸುವ ಮಾಜಿ ಸಚಿವರ ಪ್ರಯತ್ನದಿಂದ ಬಿಜೆಪಿಯನ್ನು ಗೆಲುವಿನ ದಡ ತಲುಪಿಸಿದೆ.

ರಾಜಕೀಯ ಭವಿಷ್ಯ ಕಂಡುಕೊಂಡ ಸೋಮಣ್ಣ

ತುಮಕೂರು: ರಾಜಕೀಯ ಭವಿಷ್ಯಕ್ಕಾಗಿ ಹೆಣಗಾಡಿ ಮೈಸೂರು, ಚಾಮರಾಜನಗರ ಸುತ್ತಿ ಬಂದ ವಿ.ಸೋಮಣ್ಣ ಕೊನೆಗೂ ತುಮಕೂರಿನಿಂದ ಆಯ್ಕೆಯಾಗುವ ಮೂಲಕ ನೆಲೆ ಕಂಡುಕೊಂಡಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರ ಟಿಕೆಟ್ ಸಿಗದೆ ವರುಣಾ, ಚಾಮರಾಜನಗರಕ್ಕೆ ಹೋಗಿ ಎರಡೂ ಕಡೆಯೂ ಸೋತರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ರಾಜ್ಯಸಭೆ ಸ್ಥಾನ ಬಯಸಿದ್ದರು. ಸಿಗದ ಕಾರಣ ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನಗೊಂಡಿದ್ದರು. ಪಕ್ಷ ತೊರೆಯುವ ಹಂತ ತಲುಪಿದ್ದರು. ಕೊನೆಗೆ ತುಮಕೂರು ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದು ಯಶ ಕಂಡಿದ್ದಾರೆ.

7ನೇ ಬಾರಿಗೆ ಸಂಸದರಾದ ರಮೇಶ ಜಿಗಜಿಣಗಿ

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಮೇಶ ಜಿಗಜಿಣಗಿ ಸತತ ಏಳನೇ ಬಾರಿಗೆ ಸಂಸದರಾಗಿದ್ದಾರೆ.

ಚಿಕ್ಕೋಡಿ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ಮೂರು ಸಲ ಮತ್ತು ವಿಜಯಪುರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ ನಾಲ್ಕು ಸಲ ಆಯ್ಕೆಯಾಗಿದ್ದಾರೆ.

ಮೂವರು ಸಚಿವರ ಮಕ್ಕಳಿಗೆ ಸೋಲು–ಮೂವರಿಗೆ ಗೆಲುವು

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಐವರು ಸಚಿವರ ಮಕ್ಕಳಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗಿತ್ತು. ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಬೀದರ್‌ನಲ್ಲಿ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಚಿಕ್ಕೋಡಿಯಲ್ಲಿ, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಚಾಮರಾಜನಗರದಿಂದ ಗೆಲುವು ಕಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪುತ್ರ ಮೃಣಾಲ್‌ ಹೆಬ್ಬಾಳಕರ ಬೆಳಗಾವಿ ಕ್ಷೇತ್ರದಲ್ಲಿ, ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಬಾಗಲಕೋಟೆಯಲ್ಲಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಡಿ.ಕೆ. ಸುರೇಶ್‌ ಬೆಂಗಳೂರು ಗ್ರಾಮಾಂತರದಲ್ಲಿ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಅಕ್ಕ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗದಲ್ಲಿ ಸೋಲು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT