ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರದಲ್ಲಿ ಕಾಂಗ್ರೆಸ್‌ಗೆ ಸೋಲು: ನನ್ನಿಂದ ಒಳೇಟು ಬಿದ್ದಿಲ್ಲ ಎಂದ ಮುನಿಯಪ್ಪ

Published 5 ಜೂನ್ 2024, 8:30 IST
Last Updated 5 ಜೂನ್ 2024, 8:30 IST
ಅಕ್ಷರ ಗಾತ್ರ

ಬೆಂಗಳೂರು: 'ನಮಗೆ ರಾಜ್ಯದಲ್ಲಿ 15ರಿಂದ 20 ಸ್ಥಾನಗಳು ಬರಬಹುದೆಂಬ ನಿರೀಕ್ಷೆ ಇತ್ತು. ಬಿಜೆಪಿ- ಜೆಡಿಎಸ್ ಒಂದಾದ ಕಾರಣಕ್ಕೆ ನಮ್ಮ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ' ಎಂದು ಸಚಿವ ಕೆ. ಎಚ್. ಮುನಿಯಪ್ಪ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲ ಇನ್ನೂ ಕೆಲವು ಕಡೆ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಸ್ಥಳೀಯವಾಗಿ ಕೆಲವರು ಒಟ್ಟಾಗಿ ಕೆಲಸ ಮಾಡಿಲ್ಲ. ಈ ಕಾರಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸವಾಗಿದೆ. ಇದನ್ನು ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ' ಎಂದರು.

ಕೋಲಾರ ಸೋಲಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುನಿಯಪ್ಪ, 'ಜವಾಬ್ದಾರಿ ತೆಗೆದುಕೊಂಡ ಜನರು ಇದಕ್ಕೆ ಉತ್ತರ ಹೇಳಬೇಕಿದೆ. ಯಾರು ನಮ್ಮ‌ ಕುಟುಂಬಕ್ಕೆ ಟಿಕೆಟ್ ಕೊಡಬಾರದು ಎಂದರೋ ಅವರು ಹೇಳಬೇಕು. ಮುನಿಯಪ್ಪಗೆ ಬೇಡ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದರು. ಅವರನ್ನು ನಾಯಕರು ಕೇಳಬೇಕು' ಎಂದರು.

'ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಹೇಳಿದ ನಂತರ ಕೋಲಾರ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ. ಸೋಲಿಗೆ ಯಾರು ಕಾರಣ ಅನ್ನೋದು ಜನಜನಿತವಾಗಿದೆ. ಇದನ್ನು ಹೈಕಮಾಂಡ್, ರಾಜ್ಯ ನಾಯಕರು ಕೇಳಬೇಕು.‌ಅವರನ್ನು ಕರೆಸಿ ಬುದ್ದಿ ಹೇಳಬೇಕು. ನನ್ನ ಕಡೆಯಿಂದ ಯಾವುದೇ ಕಾರಣಕ್ಕೂ ಒಳೇಟು ಬಿದ್ದಿಲ್ಲ' ಎಂದೂ ವಿವರಿಸಿದರು.

'ಚುನಾವಣೆ ಯಲ್ಲಿ ಸಿಎಂ, ಡಿಸಿಎಂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ.‌ ನಾಯಕತ್ವ ಬದಲಾವಣೆ ಕೂಗಿಗೂ ಫಲಿತಾಂಶಕ್ಕೂ ಸಂಬಂಧ ಇಲ್ಲ. ಕೆಲವೊಮ್ಮೆ ರಾಜಕೀಯವಾಗಿ ಫಲಿತಾಂಶದಲ್ಲಿ ಬದಲಾವಣೆ ಆಗುತ್ತದೆ' ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಷಯದ ಬಗ್ಗೆ ಕೇಳಿದ ಪ್ರಶ್ನೆಗೆ, 'ಈ ವಿಚಾರ ಈಗ ನಮ್ಮ ಮುಂದೆ ಇಲ್ಲ. ಕೋರ್‌ ಕಮಿಟಿ ಮಾಡಬೇಕೆಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅದು ಬೇಕೇ ಬೇಕು ಎಂದು ಹೈಕಮಾಂಡ್ ಗೆ ಹೇಳಿದ್ದೇನೆ. ನೀತಿ, ನಿರ್ಣಯಗಳನ್ನು ಕೈಗೊಳ್ಳುವ ವಿಚಾರದಲ್ಲಿ ಅದು ಬಹಳ ಮುಖ್ಯ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT