ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls ಪ್ರವಾಹ, ಬರಕ್ಕೆ ಸ್ಪಂದಿಸಲಿಲ್ಲ; ಮತ ಕೇಳಲು ಬರುತ್ತಾರೆ: ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ
Published 2 ಮೇ 2024, 23:59 IST
Last Updated 2 ಮೇ 2024, 23:59 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜ್ಯಕ್ಕೆ ಕೇಂದ್ರದಿಂದ ನಿರಂತರ ಅನ್ಯಾಯವಾಗುತ್ತಿದ್ದರೂ ಆ ಬಗ್ಗೆ ಜಿಲ್ಲೆಯ ಪರವಾಗಿ ಸಂಸತ್ತಿನಲ್ಲಿ ನೆಪಕ್ಕೂ ಬಾಯಿ ಬಿಡದ ಬಿ.ವೈ.ರಾಘವೇಂದ್ರ ಸಂಸದರಾಗಿದ್ದೇ ವೇಸ್ಟ್. ಬಿಜೆಪಿಯಿಂದ ಗೆದ್ದ 25 ಸಂಸದರು ರಾಜ್ಯದ ಪರವಾಗಿ ಯಾವತ್ತೂ ಧ್ವನಿ ಎತ್ತಲಿಲ್ಲ. ಇಂಥವರನ್ನು ಗೆಲ್ಲಿಸಿ ನಿಮಗಾಗಲೀ, ರಾಜ್ಯಕ್ಕಾಗಲೀ, ಜಿಲ್ಲೆಗಾಗಲಿ ಏನೇನೂ ಪ್ರಯೋಜನವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಪ್ರಜಾಧ್ವನಿ– 2 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣೆ ಬಂದಾಗ ಮಾತ್ರ. ಬರಗಾಲ, ಪ್ರವಾಹ ಬಂದಾಗಲೂ ರಾಜ್ಯ ನೆನಪಾಗಲಿಲ್ಲ. ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಇರುವ ಮೋದಿ ದ್ವೇಷದ ರಾಜಕಾರಣ ಮಾಡಿ, ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಪ್ರವಾಹ ಅಥವಾ ಬರಗಾಲ ಬಂದಾಗ ರಾಜ್ಯಕ್ಕೆ ಬಂದು ಜನರ ಕಷ್ಟ ಸುಖ ಕೇಳುವ ಪ್ರಯತ್ನವನ್ನೂ ಮೋದಿ ಮಾಡಲೇ ಇಲ್ಲ’ ಎಂದರು.

‘ಮೋದಿ ಕಳೆದ 10 ವರ್ಷಗಳಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ₹ 15 ಲಕ್ಷ ಕಪ್ಪು ಹಣ ತರಲಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಲಿಲ್ಲ. ಅಚ್ಚೇ ದಿನ್ ಬರಲಿಲ್ಲ. ಬೆಲೆಯೇರಿಕೆ, ಹಣದುಬ್ಬರ ಜಾಸ್ತಿಯಾಗಿ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಸಾಲ ಮನ್ನಾ ಮಾಡಿ, ನ್ಯಾಯಯುತ ಬೆಲೆ ಕೊಡಿ, ಎಂಎಸ್‌ಪಿಗೆ ಕಾನೂನು ರೂಪಿಸಿ ಎಂದು ಹೋರಾಟ ಮಾಡಿದರೂ ನರೇಂದ್ರ ಮೋದಿ ಜಗ್ಗಲಿಲ್ಲ. ಬಿಜೆಪಿ, ಬಡವರು, ರೈತರ, ಮಹಿಳೆಯರ ವಿರುದ್ಧವಾದ ಸರ್ಕಾರ. ಆದ್ದರಿಂದಲೇ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ’ ಎಂದರು.

ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಎಂಟು ತಿಂಗಳೊಳಗೆ ಜಾರಿಗೆ ತಂದಿದ್ದೇವೆ. ಶಕ್ತಿ ಯೋಜನೆಯಡಿ ಪ್ರಯಾಣಿಸಿದ್ದ ಅರಸೀಕೆರೆಯ ಹೆಣ್ಣುಮಗಳೊಬ್ಬರು ಬಸ್‌ ಟಿಕೆಟ್‍ಗಳ ಹಾರ ಹಾಕಿದ್ದು, ಕೊಪ್ಪಳದ ಮಹಿಳೆಯೊಬ್ಬರು ಗೃಹಲಕ್ಷ್ಮೀ ಯೋಜನೆಯ ಹಣ ಹಾಗೂ ಗೃಹಜ್ಯೋತಿ ಯೋಜನೆಯಿಂದ ಉಳಿತಾಯವಾದ ಮೊತ್ತದಲ್ಲಿ ಚಿನ್ನದುಂಗುರ ಖರೀದಿಸಿರುವುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಬಡವರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

‘ಲೋಕಸಭೆಯಲ್ಲಿ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡುವಂತಹವರನ್ನು ಮತದಾರರು ಆಯ್ಕೆ ಮಾಡಬೇಕು. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಕೊಡುವುದಾಗಿ ಕೇಂದ್ರದ ಬಜೆಟ್‌ನಲ್ಲಿ ಘೋಷಿಸಿದ್ದರೂ, ನಯಾಪೈಸೆ ಬಿಡುಗಡೆ ಮಾಡಲಿಲ್ಲ’ ಎಂದರು.

‘ರಾಜ್ಯಕ್ಕೆ ಭೀಕರ ಬರಗಾಲದ ಪರಿಸ್ಥಿತಿ ಎದುರಾದರೂ ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಲಿಲ್ಲ. ಕರ್ನಾಟಕದಲ್ಲಿ 48 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ, ₹ 35,000 ಕೋಟಿ ನಷ್ಟವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ’ ಎಂದರು.

‘ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರಾಜ್ಯಕ್ಕೆ ₹18,172 ಕೋಟಿ ಬರ ಪರಿಹಾರ ನೀಡಲು ಮನವಿ ಸಲ್ಲಿಸಲಾಗಿತ್ತು. ಅದು ರಾಜ್ಯಕ್ಕೆ ಕೊಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ರಾಜ್ಯಕ್ಕಾದ ಅನ್ಯಾಯ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಕೇವಲ ₹ 3,454 ಕೋಟಿ ನೀಡಿ ಮತ್ತೆ ಮತ್ತೆ ದ್ರೋಹ ಮಾಡುತ್ತಲೇ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ಶಿವಮೊಗ್ಗದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ–2 ಸಮಾವೇಶದಲ್ಲಿ ಎಐಸಿಸಿ ನಾಯಕ ರಾಹುಲ್‌ಗಾಂಧಿ ಮಾತನಾಡಿದರು
ಶಿವಮೊಗ್ಗದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ–2 ಸಮಾವೇಶದಲ್ಲಿ ಎಐಸಿಸಿ ನಾಯಕ ರಾಹುಲ್‌ಗಾಂಧಿ ಮಾತನಾಡಿದರು

ಗೀತಾ ಗೆಲುವಿಗೆ ‘ಗ್ಯಾರಂಟಿ’ ಬಲ: ಡಿಕೆಶಿ

ಕುವೆಂಪು ನಾಡು ಬಂಗಾರಪ್ಪ ಅವರಿಗೆ ಆಶೀರ್ವಾದ  ಮಾಡಿದ ನಾಡು ಈ ಪವಿತ್ರ ಭೂಮಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲವು ಸಾಧಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ಸಮಾವೇಶದಲ್ಲಿ ಮಾತನಾಡಿದ ಅವರು ‘ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನರಿಗೆ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ ಶಕ್ತಿ ಕೊಟ್ಟಿದೆ’ ಎಂದು ಹೇಳಿದರು. ‘ಶಿವಮೊಗ್ಗ ಸೇರಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ವಿರೋಧ ಪಕ್ಷಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಗಳನ್ನು ಗ್ಯಾರಂಟಿ ಯೋಜನೆಗಳಂತೆ ಈಡೇರಿಸಲಾಗುವುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಗ್ಯಾರಂಟಿಗೆ ಸಹಿ ಮಾಡಿದ್ದಾರೆ’ ಎಂದರು.

ನಾನು ರಾಹುಲ್ ಗಾಂಧಿ ಅಭಿಮಾನಿ: ಶಿವಣ್ಣ

ಶಿವಮೊಗ್ಗ: ‘ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಲಿ’ ಎಂದು ನಟ ಶಿವರಾಜಕುಮಾರ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಅಲ್ಲಮಪ್ರಭು‌ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫಿಟ್ನೆಸ್ ಮತ್ತು ಮನುಷ್ಯತ್ವಕ್ಕೆ ನಾನು ಅವರ ದೊಡ್ಡ ಅಭಿಮಾನಿ ಆಗಿದ್ದೇನೆ’ ಎಂದರು. ‘ದೈಹಿಕವಾಗಿ ಸಮರ್ಥವಾಗಿ ಇದ್ದವರು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಈ ಸಮಾವೇಶದಲ್ಲಿ ನಾನು ಭಾಗವಹಿಸಿರುವುದು ಮತ್ತು ರಾಹುಲ್‌ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು.

ಸುಳ್ಳು ಹೇಳುವುದೇ ಮೋದಿ ಗ್ಯಾರಂಟಿ: ಖರ್ಗೆ

‘ದೇಶದ ಜನರಿಗೆ ಸುಳ್ಳು ಹೇಳುವುದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿ ಆಗಿದೆ’ ಎಂದು ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ‘ಜಾತಿ ಗಣತಿ ಮಾಡುತ್ತೇವೆ ಅಂತಾ ನಾವು ಹೇಳಿದ್ದೇವೆ. ಆದರೆ ಮೋದಿ ಅದನ್ನು ತಪ್ಪಾಗಿ ಬಿಂಬಿಸಿ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್‌ ಯಾರ ಮಂಗಳಸೂತ್ರ ಕದ್ದಿಲ್ಲ ಬಡವರ ಮನೆಯ ಅಲ್ಮೇರಾದಲ್ಲಿನ ಹಣ ಕದ್ದಿಲ್ಲ. ಮೋದಿ ಬರೀ ಅಪಪ್ರಚಾರ ಮಾಡುತ್ತಾರೆ’ ಎಂದು ಲೇವಡಿ ಮಾಡಿದರು. ‘ಶಿವಮೊಗ್ಗ ಬುದ್ದಿವಂತರ ಜಿಲ್ಲೆ ಚಳವಳಿಗಾರರ ನೆಲೆ. ಕಾಂಗ್ರೆಸ್ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸುವ ಮೂಲಕ ಲಕ್ಷಾಂತರ ಜನರಿಗೆ ಭೂಮಿ ನೀಡಿದೆ. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಈಗಾಗಲೇ ಜಾರಿಗೊಳಿಸಿದಂತೆ 25 ಗ್ಯಾರಂಟಿ ಹಾಗೂ 5 ನ್ಯಾಯ ಯೋಜನೆಗಳ ಜಾರಿಗೊಳಿಸಲಾಗುವುದು’ ಎಂದರು. ‘ಮಹಿಳೆಯರಿಗೆ ಪ್ರತಿ ವರ್ಷ ₹ 1 ಲಕ್ಷ ಕೊಡುತ್ತೇವೆ. ಇಡೀ ದೇಶದಲ್ಲಿ ಯಾರು ಈ ಕೆಲಸ ಮಾಡಿಲ್ಲ. ಯುವ ಜನರಿಗೆ ಪ್ರತಿ ತಿಂಗಳು ತರಬೇತಿ ನೀಡಲು ₹ 8500 ಕೊಡುತ್ತೇವೆ. ನೌಕರಿ ಕೂಡ ಕೊಡಿಸುತ್ತೇವೆ. ರೈತರ ಸಾಲಮನ್ನಾ ಮಾಡುತ್ತೇವೆ. ಈ ಹಿಂದೆ ಮನಮೋಹನ ಸಿಂಗ್ ಪ್ರಧಾನಿ ಆಗಿದ್ದಾಗ ಯುಪಿಎ ಸರ್ಕಾರ ₹ 72000 ಕೋಟಿ ಸಾಲಮನ್ನಾ ಮಾಡಿದೆ’ ಎಂದು ಹೇಳಿದರು. ‘ಶ್ರಮಿಕ್ ನ್ಯಾಯ ಯೋಜನೆ ಮಾಡುತ್ತೇವೆ. ಕಾರ್ಮಿಕರ ಪರವಾದ ಕಾನೂನು ಜಾರಿ ಮಾಡುತ್ತೇವೆ. ನರೇಗಾ ಯೋಜನೆಡಿ ಒಂದು ದಿನಕ್ಕೆ ಕೂಲಿ ₹ 400 ಕೊಡುತ್ತೇವೆ’ ಎಂದರು. ‘ದೇಶದಲ್ಲಿ ಬದಲಾವಣೆಗಾಗಿ ರಾಹುಲ್ ಗಾಂಧಿ‌ ಹಗಲು ರಾತ್ರಿ ಓಡಾಡುತ್ತಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಹತ್ತಾರು ಕೇಸ್ ಹಾಕಿಸಿದ್ದಾರೆ. ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ಬಗ್ಗೆ ಮಾತನಾಡದಿದ್ದರೇ ಅವರಿಗೆ ಊಟ ಮಾಡಿರುವುದು ಅರಗುವುದಿಲ್ಲ. ಇದಕ್ಕೆ ಹೆದರಲ್ಲ.‌ ಕದಲುವುದಿಲ್ಲ ಎಂಬುದಾಗಿ ರಾಹುಲ್‌ಗಾಂಧಿ ಹೇಳಿದ್ದಾರೆ’ ಎಂದರು.

ಉರಿಬಿಸಿಲು ಲೆಕ್ಕಿಸದೇ ಬಂದರು..

ಉರಿಬಿಸಿಲು ಲೆಕ್ಕಿಸದೇ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಕಾಂಗ್ರೆಸ್‌ನ ಪ್ರಜಾಧ್ವನಿ–2 ಸಮಾವೇಶಕ್ಕೆ ಬಂದಿದ್ದರು. ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್‌) ಹಾಕಿದ್ದ ಬೃಹತ್ ವೇದಿಕೆಗೆ ಮಧ್ಯಾಹ್ನ 1 ಗಂಟೆಗೆ ಎಐಸಿಸಿ ನಾಯಕ ರಾಹುಲ್‌ ಗಾಂಧಿ ಬಂದರು. ನೆರೆದವರು ‘ರಾಹುಲ್ ರಾಹುಲ್’ ಘೋಷಣೆಯೊಂದಿಗೆ ಸ್ವಾಗತಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಂದಾಗಲೂ ಶಿಳ್ಳೆ– ಚಪ್ಪಾಳೆ ಮುಗಿಲುಮುಟ್ಟಿದವು. ಕಾಂಗ್ರೆಸ್ ಬಾವುಟಗಳು ಹಾರಾಡಿದವು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ವೇದಿಕೆ ಹತ್ತಲಿಲ್ಲ. ಬದಲಿಗೆ ಜನರ ನಡುವೆ ಕುಳಿತು ಸಮಾವೇಶ ವೀಕ್ಷಿಸಿದರು. ಪತಿ ಶಿವರಾಜಕುಮಾರ್ ಗೀತಾ ಪರ ಮತ ಕೇಳಿದರು. ಭಾಷಣ ಮುಗಿಸಿದ ರಾಹುಲ್‌ಗಾಂಧಿ ರಾಯಚೂರಿಗೆ ತೆರಳಿದರು. ಸಚಿವ ಮಧು ಬಂಗಾರಪ್ಪ ಹಾಗೂ ರಾಜ್ಯಸಭಾ ಸದಸ್ಯ ನಾಸಿರ್‌ಹುಸೇನ್ ರಾಹುಲ್‌ಗಾಂಧಿ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT