ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ, ಹಾಸನ, ಮಂಡ್ಯ ಜೆಡಿಎಸ್‌ಗೆ: ರಾಧಾ ಮೋಹನ್‌ ದಾಸ್‌ ಅಗರ್ವಾಲ್‌

Published 23 ಮಾರ್ಚ್ 2024, 13:15 IST
Last Updated 23 ಮಾರ್ಚ್ 2024, 13:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಲಾರ, ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಲಿದೆ’ ಎಂದು ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರಿಗೆ ಶನಿವಾರ ಆಯೋಜಿಸಿದ್ದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಬಿಜೆಪಿ 25 ಮತ್ತು ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲು ಎರಡೂ ಪಕ್ಷಗಳ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು’ ಎಂದರು.

‘ಬಿಜೆಪಿಯ 25 ಅಭ್ಯರ್ಥಿಗಳ ಆಯ್ಕೆಯಲ್ಲಿ ಜೆಡಿಎಸ್‌ ನಾಯಕರು ಹಸ್ತಕ್ಷೇಪ ಮಾಡಿಲ್ಲ. ಅವರಿಗೆ ಹಂಚಿಕೆ ಮಾಡಿರುವ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ನಮ್ಮ ಪಕ್ಷದವರು ಹಸ್ತಕ್ಷೇಪ ಮಾಡುವಂತಿಲ್ಲ.  ಅಭ್ಯರ್ಥಿ ಯಾರು ಎನ್ನುವುದು ಮುಖ್ಯವಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುವುದು ಮುಖ್ಯ’ ಎಂದು ಹೇಳಿದರು.

‘ಮಂಡ್ಯ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕುರಿತು ಇನ್ನೂ ನಿರ್ಧಾರವಾಗಿಲ್ಲ’ ಎಂಬ ಸಂಸದೆ ಸುಮಲತಾ ಹೇಳಿಕೆ ಬಗ್ಗೆ ಸಭೆಯ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾಧಾ ಮೋಹನ್‌, ‘ಸುಮಲತಾ ಅವರು ಹೇಳಿಕೆ ನೀಡುವಾಗ ಯಾವುದೇ ತೀರ್ಮಾನ ಆಗಿರಲಿಲ್ಲ. ಈಗ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಆಗಿದೆ’ ಎಂದರು.

‘ಸುಮಲತಾ ಅವರಿಗೆ ಉತ್ತಮವಾದ ರಾಜಕೀಯ ಭವಿಷ್ಯವಿದೆ. ಅವರು ಮಹತ್ತರವಾದ ಪಾತ್ರವನ್ನು ವಹಿಸಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT