ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೆಳೆವಿಮೆ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸಚಿವರೇ ಉತ್ತರಿಸಿ– ಸಾಗರ್‌ ಖಂಡ್ರೆ

Published 17 ಏಪ್ರಿಲ್ 2024, 12:38 IST
Last Updated 17 ಏಪ್ರಿಲ್ 2024, 12:38 IST
ಅಕ್ಷರ ಗಾತ್ರ

ಬೀದರ್‌: ‘ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಜಿಲ್ಲೆಯ ರೈತರು ₹15 ಕೋಟಿ ಪ್ರೀಮಿಯಂ ಕಟ್ಟಿದ್ದಾರೆ. ಬೆಳೆ ಹಾನಿಯಾದ ರೈತರಿಗೆ ₹80 ಲಕ್ಷವಷ್ಟೇ ಬಂದಿದೆ. ಇನ್ನುಳಿದ ಹಣ ಎಲ್ಲಿಗೆ ಹೋಗಿದೆ?’ ನನ್ನ ಈ ಪ್ರಶ್ನೆಗೆ ಕೇಂದ್ರ ಸಚಿವ ಭಗವಂತ ಖೂಬಾ ಉತ್ತರಿಸಬೇಕೆಂದು ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಆಗ್ರಹಿಸಿದರು.

ನಗರದಲ್ಲಿ ಬುಧವಾರ ನಾಮಪತ್ರ ಸಲ್ಲಿಸಿ, ರೋಡ್‌ ಶೋ ನಡೆಸಿದ ನಂತರ ಗಣೇಶ ಮೈದಾನದಲ್ಲಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ವಿಮೆ ಕಂಪನಿಗೆ ₹185 ಕೋಟಿ ಹೋಗಿದೆ. ವಿಮೆಯಿಂದ ರೈತರಿಗೆ ಪ್ರಯೋಜನವಾಗಿಲ್ಲ. ನಾನು ಸಂಸದನಾಗಿ ಆಯ್ಕೆಯಾದರೆ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಶ್ನಿಸುವೆ. ಇಷ್ಟೇ ಅಲ್ಲ, ಚುನಾವಣೆ ಮುಗಿಯುವವರೆಗೆ ಖೂಬಾ ಅವರ ಮುಂದೆ ಕೆಲವು ಪ್ರಶ್ನೆಗಳನ್ನು ಇಡುವೆ. ಅವರು ಅವುಗಳಿಗೆ ಉತ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ಉದ್ಯೋಗ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಿದೆ. ನಾನು ಸಂಸದನಾದರೆ ಜಿಲ್ಲೆಗೆ ಐ.ಟಿ. ಕಂಪನಿ ತಂದು ಕೆಲಸ ಕೊಡಿಸುವೆ. ರೈತರ ಅನುಕೂಲಕ್ಕಾಗಿ ಸೋಲಾರ್‌ ಪಾರ್ಕ್‌ ನಿರ್ಮಿಸಿ ಸತತ ವಿದ್ಯುತ್‌ ಪೂರೈಸುವೆ. ಎಲ್ಲೆಲ್ಲಿ ಕುಡಿವ ನೀರಿನ ಸಮಸ್ಯೆ ಇದೆಯೋ ಅದನ್ನು ಬಗೆಹರಿಸುವೆ. ಒಂದುವೇಳೆ ನಾನು ಗೆದ್ದರೆ ಭಾರತದಲ್ಲಿ ಅತಿ ಕಿರಿಯ ವ್ಯಕ್ತಿ ಲೋಕಸಭೆ ಪ್ರವೇಶಿಸಿದಂತಾಗುತ್ತದೆ’ ಎಂದರು.

ಖೂಬಾ ಅವರು ಹತ್ತು ವರ್ಷಗಳಿಂದ ಸಂಸದರಾಗಿದ್ದಾರೆ. ನಾನು ಗ್ರಾಮಗಳಲ್ಲಿ ಚುನಾವಣೆ ಪ್ರಚಾರಕ್ಕೆ ಹೋದಾಗ, ಖೂಬಾ ಅವರನ್ನು ಎಷ್ಟು ಸಲ ನೋಡಿದ್ದೀರಾ ಎಂದು ಪ್ರಶ್ನಿಸಿದಾಗ, ಅವರನ್ನು ನೋಡಿಯೇ ಇಲ್ಲ ಎಂದು ಹೇಳಿದ್ದಾರೆ. ನಾನು ಕೂಡ ಬಿಜೆಪಿಯ ಅನೇಕ ಮುಖಂಡರನ್ನು ನೋಡಿದ್ದೇನೆ. ಆದರೆ, ಖೂಬಾ ಅವರನ್ನು ಒಮ್ಮೆಯೂ ನೋಡಿಲ್ಲ. ಅವರು ಬೇರೆಯವರ ಹೆಸರಲ್ಲಿ ಗೆದ್ದು ಬಂದಿದ್ದಾರೆ. ಹೀಗಾಗಿ ಕಾರ್ಯಕರ್ತರನ್ನು ನೋಡುವ ಅಗತ್ಯವಿಲ್ಲ ಎಂದು ಭಾವಿಸಿದ್ದಾರೆ. ಆದರೆ, ನಾನು 24X7 ಎಲ್ಲರಿಗೂ ಸಿಗುವೆ ಎಂದು ಹೇಳಿದರು.

ಸಾಗರ್ ಖಂಡ್ರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು

ಸಾಗರ್ ಖಂಡ್ರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರು

ಪ್ರಜಾವಾಣಿ ಚಿತ್ರ

ಭರ್ಜರಿ ರೋಡ್‌ ಷೋ; ‘ಸಾಗರ್‌’ ಶಕ್ತಿ ಪ್ರದರ್ಶನ

ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆಯವರು ನಗರದಲ್ಲಿ ಬುಧವಾರ ಭರ್ಜರಿ ರೋಡ್‌ ಶೋ ನಡೆಸಿ, ಶಕ್ತಿ ಪ್ರದರ್ಶನದೊಂದಿಗೆ ಮತ್ತೊಂದು ಸೆಟ್‌ ನಾಮಪತ್ರ ಸಲ್ಲಿಸಿದರು.

ಮಂಗಳವಾರವಷ್ಟೇ ಅವರು ಉಮೇದುವಾರಿಕೆ ಸಲ್ಲಿಸಿದ್ದರು. ಬುಧವಾರ ಅವರ ತಂದೆ, ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್, ಮಾಜಿಶಾಸಕರಾದ ರಾಜಶೇಖರ ಪಾಟೀಲ ಹುಮನಾಬಾದ್, ಅಶೋಕ ಖೇಣಿ ಅವರೊಂದಿಗೆ ತೆರಳಿ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮತ್ತೊಂದು ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿ ಕಚೇರಿಯಿಂದ ನೇರವಾಗಿ ನಗರದ ಬಸವೇಶ್ವರ ವೃತ್ತಕ್ಕೆ ಬಂದ ಸಾಗರ್‌ ಖಂಡ್ರೆಯವರು, ಬಸವೇಶ್ವರರ ಮೂರ್ತಿಗೆ ಗೌರವ ಸಮರ್ಪಿಸಿ, ಅಲ್ಲಿಂದ ತೆರೆದ ಜೀಪಿನಲ್ಲಿ ರೋಡ್‌ ಶೋ ನಡೆಸಿದರು.

ಭಗತ್‌ ಸಿಂಗ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಛತ್ರಪತಿ ಶಿವಾಜಿ ಮಹಾರಾಜ ವೃತ್ತ, ಶಿವಶರಣ ಹರಳಯ್ಯಾ ವೃತ್ತದ ಮೂಲಕ ಗಣೇಶ ಮೈದಾನದ ವರೆಗೆ ರೋಡ್‌ ಶೋ ನಡೆಯಿತು.

ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್‌ ಕಾರ್ಯಕರ್ತರು, ಖಂಡ್ರೆ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೇಸರಿ ಶಾಲು, ಕಾಂಗ್ರೆಸ್‌ ಧ್ವಜ, ಸಾಗರ್‌ ಖಂಡ್ರೆ ಭಾವಚಿತ್ರವಿರುವ ಟೋಪಿಗಳನ್ನು ಧರಿಸಿ ರೋಡ್‌ ಶೋ ನಲ್ಲಿ ಹೆಜ್ಜೆ ಹಾಕಿದರು.

ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಾಗರ್‌ ಖಂಡ್ರೆಯವರ ಭಾವಚಿತ್ರ ಹಿಡಿದುಕೊಂಡು ನೃತ್ಯ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಮರಕುಣಿತ, ಸಮ್ಮಾಳ, ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರ ಕೋಲಾಟ ಮೆರವಣಿಗೆಯ ಕಳೆ ಹೆಚ್ಚಿಸಿತ್ತು. ಬಿರು ಬಿಸಿಲಿನಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಕಾಂಗ್ರೆಸ್‌ ಪಕ್ಷ ಹಾಗೂ ಅಭ್ಯರ್ಥಿ ಪರ ಜಯಘೋಷ ಹಾಕಿದರು.

ರೋಡ್‌ ಶೋದಿಂದ ನಗರದ ಬಸವೇಶ್ವರ ವೃತ್ತ, ಭಗತ್‌ ಸಿಂಗ್‌ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ ಹಾಗೂ ಹಳೆ ಬಸ್‌ ನಿಲ್ದಾಣದ ಪರಿಸರದಲ್ಲಿ ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಾಗರ್‌ ಖಂಡ್ರೆ ರೋಡ್‌ ಶೋನಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್‌, ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್‌, ಮುಖಂಡ ಪ್ರಕಾಶ ರಾಠೋಡ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಸಾಗರ್ ಖಂಡ್ರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಯುವಕರ ನೃತ್ಯ

ಸಾಗರ್ ಖಂಡ್ರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಯುವಕರ ನೃತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT