ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ನಟ ಕಿಶೋರ್ ಪೋಸ್ಟ್

ಬೆಂಗಳೂರು: ‘ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು’ ಎನ್ನುವ ವೈರಲ್ ವಿಡಿಯೊ ವಾಟ್ಸ್ಆ್ಯಪ್ನಲ್ಲಿ ಹರಿದು ಬಂತು. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ?’
ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿ ನಟ ಕಿಶೋರ್ ಈ ಪೋಸ್ಟ್ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಕಾಂತಾರ ಮತ್ತು ಧರ್ಮ...: ಸಿನಿಮಾ ವಿವಾದದ ಬಗ್ಗೆ ನಟ ಕಿಶೋರ್ ಕುಮಾರ್ ಪೋಸ್ಟ್
ಏನು ಹೇಳಿದ್ದಾರೆ ಕಿಶೋರ್?
ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸ್ಆ್ಯಪ್ನಲ್ಲಿ ಹರಿದು ಬಂತು.
ಆ ಸಿನಿಮಾದ ಭಾಗವಾಗಿ ಈ ರೀತಿಯ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ.
ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ?
ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ.
ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ.
ದೈವವೋ, ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ.
ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ... ಎಂದು ಅವರು ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಕಾಂತಾರ ಚಿತ್ರದ ಸುತ್ತ ಸುತ್ತಿಕೊಂಡಿದ್ದ ವಿವಾದದ ಬಗ್ಗೆಯೂ ಕಿಶೋರ್ ಕುಮಾರ್ ಈ ಹಿಂದೆ ಪೋಸ್ಟ್ ಹಾಕಿದ್ದರು.
‘ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಲಿ ಕಳಕಳಿಯ ಮನವಿ . ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ? ಎಂದು ಅವರು ಪ್ರಶ್ನೆ ಮಾಡಿದ್ದರು.
ನಟ ‘ಆ ದಿನಗಳು’ ಚೇತನ್ ಅವರು ಕಾಂತಾರ ಸಿನಿಮಾ ಕುರಿತು ‘ಭೂತಕೋಲ ಹಿಂದೂ ಸಂಸ್ಕೃತಿಯಲ್ಲ’ ಎಂದು ಹೇಳಿದ್ದರು’ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಕಿಶೋರ್ ಆಗ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇವುಗಳನ್ನೂ ಓದಿ
ಭೂತ ಕೋಲ ಹಿಂದೂ ಸಂಸ್ಕೃತಿ: ರಿಷಬ್ ಶೆಟ್ಟಿ ಹೇಳಿಕೆ ಸುಳ್ಳೆಂದ ಚೇತನ್ 'ಅಹಿಂಸಾ'
ವೀಕೆಂಡ್ನಲ್ಲಿ ‘ಕಾಂತಾರ’ ಹಣ ಬಾಚಿದ್ದೆಷ್ಟು? ಗಳಿಕೆಯಲ್ಲಿ ಹೊಸ ದಾಖಲೆ
ರಿಷಬ್ಗೆ ಹ್ಯಾಟ್ಸ್ ಆಫ್, ಅದ್ಭುತ ಅನುಭವ: ಕಾಂತಾರ ಮೆಚ್ಚಿದ ವಿವೇಕ್ ಅಗ್ನಿಹೋತ್ರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.