ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಕ್ಕಾಗಿ ಮಜಾ ಟಾಕೀಸ್‌ಗೆ ಎಂಟ್ರಿ

Last Updated 3 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

‘ಸಿಲ್ಲಿಲಲ್ಲಿ’ ಹಾಸ್ಯ ಧಾರಾವಾಹಿಯಲ್ಲಿ ‘ಡಾ.ವಿಠ್ಠಲ್‌ ರಾವ್‌’ ಆಗಿ ಪ್ರೇಕ್ಷಕರನ್ನು ನಕ್ಕು ನಗಿಸಿದ್ದ ಹಾಸ್ಯ ನಟ ರವಿಶಂಕರ್‌ ಗೌಡ ಈಗ ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ‘ಸಿಲ್ಲಿ ಲಲ್ಲಿ’ಯಲ್ಲಿ ಹಾಸ್ಯ ರಸಾಯನ ಉಕ್ಕಿಸಿದ ಪೆದ್ದು ವೈದ್ಯ, ಮಜಾ ಟಾಕೀಸ್‌ನಲ್ಲಿ ಪ್ರೇಕ್ಷಕನಿಗೆ ಸಖತ್‌ ಮಜಾ ಕೊಡುವ ‘ಮ್ಯಾಡ್‌ ಸೈಂಟಿಸ್ಟ್‌’ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಪ್ರೋಮೊ ಕೂಡ ಬಿಡುಗಡೆಯಾಗಿದ್ದು, ಇದೇ ಶನಿವಾರ (ಡಿ.5ರಿಂದ)ದಿಂದ ಶುರುವಾಗುವ ಸಂಚಿಕೆಯಲ್ಲಿ ರವಿಶಂಕರ್‌ ಹಾಸ್ಯದ ಮಜಾ ಪ್ರೇಕ್ಷಕರಿಗೆ ಸಿಗಲಿದೆ. ಮಜಾ ಟಾಕೀಸ್‌ಗೆ ಎಂಟ್ರಿಕೊಟ್ಟಿರುವ ಕಾರಣವನ್ನು ರವಿಶಂಕರ್‌ ‘ಪ್ರಜಾಪ್ಲಸ್‌’ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

‘ನಾನು ಮತ್ತು ಸೃಜ ಇಪ್ಪತ್ತು ವರ್ಷಗಳ ಸ್ನೇಹಿತರು. ಮಜಾ ಟಾಕೀಸ್‌ನ ಮೊದಲ ಸೀಸನ್‌ ಶುರುವಾದಾಗಲೇ ಈ ಷೋನಲ್ಲಿ ಅಭಿನಯಿಸುವಂತೆ ಸೃಜ ಕೇಳಿದ್ದ. ಆಗ ‘ಸಿಲ್ಲಿಲಲ್ಲಿ’ಯಲ್ಲಿ ತುಂಬಾ ಬ್ಯುಸಿಯಾಗಿದ್ದು ಬಳಲಿಕೆಯಲ್ಲಿದ್ದೆ. ಸಮಯ ಕೊಡಲು ಆಗಿರಲಿಲ್ಲ. ಮತ್ತೊಂದು ಸೀಸನ್‌ಗೂ ಸಮಯದ ಹೊಂದಾಣಿಕೆಯಾಗಿರಲಿಲ್ಲ, ಹಾಗಂತ ಸೃಜ ನನ್ನನ್ನು ಮಜಾ ಟಾಕೀಸ್‌ಗೆ ಕರೆಯುವುದನ್ನು ಬಿಡಲೇ ಇಲ್ಲ. ಸ್ನೇಹಿತ ಕೇಳುವಾಗ ನಾನು ಅಭಿನಯಿಸದೇ ಇರಲಾಗದು. ಈ ಬಾರಿ ನನಗೂ ಸಮಯ ಕೂಡಿ ಬಂತು. ಸ್ನೇಹಕ್ಕೆ ಕಟ್ಟುಬಿದ್ದು ಬಂದಿದ್ದೇನೆ, ಸಿಲ್ಲಿ ಲಲ್ಲಿಯಂತೆಯೇ ಇಲ್ಲೂ ಒಂದು ಸುದೀರ್ಘ ಮಜಾ ಪಯಣ ಮುಂದುವರಿಯಲಿದೆ’ ಎಂದು ರವಿಶಂಕರ್‌ ಮಾತಿಗಾರಂಭಿಸಿದರು.

‘ಸಿಲ್ಲಿಲಲ್ಲಿಯಲ್ಲಿ ವೈದ್ಯನಾಗಿದ್ದರೆ, ಮಜಾ ಟಾಕೀಸ್‌ನಲ್ಲಿ ‘ಸುಯ್ ಟಪಾಕ್’ ಹೆಸರಿನ ಸ್ವಯಂಘೋಷಿತ ವಿಜ್ಞಾನಿಯ ಪಾತ್ರ ನನ್ನದು. ಇದು ಯಾರಿಂದಲೂ ಪ್ರಭಾವಿತವಾದ ಅಥವಾ ನಕಲು ಮಾಡಿದ ಪಾತ್ರವಲ್ಲ, ಇದು ನನ್ನದೇ ಅನ್ವೇಷಣೆಯ ಪಾತ್ರ. ಸುಯ್ ಟಪಾಕ್ ಎಂತೆಂಥ ಹೊಸ ಆವಿಷ್ಕಾರ, ಪ್ರಯೋಗ ನಡೆಸುತ್ತಾನೆಂದರೆ ಜ್ಯೂಸ್‌ ಬಾಟಲ್‌ ಖಾಲಿಯಾದ ಮೇಲೆ ಅದರಲ್ಲಿ ನೀರು ತುಂಬಿಸಿ ಕುಡಿಯುವ ನೀರಿನ ಬಾಟಲಿಯಾಗಿ ಬಳಸುವುದನ್ನು ಜಗತ್ತಿನಲ್ಲಿ ಮೊಟ್ಟಮೊದಲು ಕಂಡು ಹಿಡಿದಿದ್ದು ನಾನೇ ಎಂದು ಹೇಳಿಕೊಳ್ಳುವ ಹುಚ್ಚು ವಿಜ್ಞಾನಿ. ಜತೆಗೆ ಯಾರದೋ ಹೆಸರು ಇನ್ಯಾರಿಗೋ ಕರೆಯುವುದು, ಯಾರ ಜತೆ ಮಾತನಾಡುತ್ತಿರುವೆ ಎನ್ನುವುದನ್ನು ಸ್ವಲ್ಪ ಹೊತ್ತಿನಲ್ಲೇ ಮರೆಯುವ ಮಹಾನ್‌ ಮರೆಗುಳಿ’ ಎಂದು ರವಿಶಂಕರ್‌ ಮಜಾ ಟಾಕೀಸ್‌ನಲ್ಲಿ ಪ್ರೇಕ್ಷಕರಿಗೆ ಉಣಬಡಿಸಲಿರುವ ಹಾಸ್ಯ ರಸಾಯನದ ಬಗ್ಗೆ ಒಂದಿಷ್ಟು ಸುಳಿವು ನೀಡಿದರು.

‘ಮಜಾ ಟಾಕೀಸ್‌ ಷೋನ ಎಪಿಸೋಡ್‌ಗಳಲ್ಲಿ ನಾನು ಕಾಣಿಸಿಕೊಳ್ಳಲಿರುವ ಭಾಗದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇದು ವಾರಾಂತ್ಯದ ಷೋ ಆಗಿರುವುದರಿಂದ ಒಂದು ದಿನ ರಿಹರ್ಸಲ್‌ ನಡೆಸಿದರೆ, ಇನ್ನೊಂದು ದಿನ ಚಿತ್ರೀಕರಣವಿರುತ್ತದೆ. ಹಾಗಾಗಿ ನಾನು ಒಪ್ಪಿಕೊಂಡಿರುವ ಸಿನಿಮಾಗಳ ಚಿತ್ರೀಕರಣಕ್ಕೂ ಅಡಚಣೆಯಾಗುವುದಿಲ್ಲ. ಮುಂದಿನ ತಿಂಗಳು ‘ಫ್ಯಾಂಟಮ್‌’ ಚಿತ್ರದ ಚಿತ್ರೀಕರಣಕ್ಕಾಗಿ ನಾನು ಕೇರಳಕ್ಕೆ ಹೋಗುವೆ’ ಎಂದು ಮಾತು ವಿಸ್ತರಿಸಿದರು.

‘ಕೆಲವರು ನಾನು ಕಿರುತೆರೆಯ ನಂಟನ್ನು ಬಿಟ್ಟಿದ್ದೆ ಎಂದುಕೊಂಡಿದ್ದಾರೆ. ಆದರೆ, ನಾನು ಸೀರಿಯಲ್‌ನಲ್ಲಿ ಅಭಿನಯಿಸುವುದನ್ನಷ್ಟೇ ಬಿಟ್ಟಿದ್ದೆ. ಧಾರಾವಾಹಿಯಲ್ಲಿ ನಟಿಸುವಷ್ಟು ತಾಳ್ಮೆ ನನ್ನಲ್ಲಿ ಉಳಿದಿರಲಿಲ್ಲ. ಸಿನಿಮಾಗಳಲ್ಲಿ ನಟಿಸುತ್ತಲೇ ‘ಹಾಡಿಗೊಂದು ಹಾಡು’, ‘ಮಾಂಗಲ್ಯಂ ತಂತು ನಾನೇನ’, ‘ಜಾಕ್‌ಪಾಟ್‌’, ‘ಸೂಪರ್‌ ಸಂಸಾರ’ ಷೋ ಸೇರಿದಂತೆ ಸಾಕಷ್ಟು ಟಿ.ವಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಕಿರುತೆರೆಯ ನಂಟು ಕಾಯ್ದುಕೊಂಡಿದ್ದೇನೆ’ ಎನ್ನುವ ಮಾತು ಸೇರಿಸಿದರು.

ಸಿನಿಮಾದತ್ತ ಮಾತು ಹೊರಳಿದಾಗ, ‘ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಸಿನಿಮಾದಲ್ಲೂ ಅಭಿನಯಿಸುತ್ತಿದ್ದೇನೆ. ಬಿಡುಗಡೆಯ ಹೊಸ್ತಿಲಿನಲ್ಲಿರುವ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ದಲ್ಲೂ ಒಂದೊಳ್ಳೆಯ ಪಾತ್ರ ಮಾಡಿರುವೆ. ನಾನು ಪ್ರಮುಖ ಪಾತ್ರ ನಿಭಾಯಿಸಿರುವ ‘ಪುರ್‌ ಸೋತ್‌ ರಾಮ’ ಚಿತ್ರವು ತೆರೆಕಾಣುವ ಹೊಸ್ತಿಲಿನಲ್ಲಿದೆ. ನಾಯಕನಾಗಿ ನಟಿಸಲು ಒಂದು ಸ್ಕ್ರಿಪ್ಟ್‌ ಕೂಡ ಬಂದಿತ್ತು. ಸ್ಕ್ರಿಪ್ಟ್‌ನಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಲು ಸಲಹೆ ಕೊಟ್ಟೆ, ನಿರ್ದೇಶಕರು ಸಲಹೆ ಸ್ವೀಕರಿಸಲಿಲ್ಲ, ನಾನು ಸಿನಿಮಾ ಒಪ್ಪಿಕೊಳ್ಳಲಿಲ್ಲ’ ಎಂದು ರವಿಶಂಕರ್‌ ಮಾತಿಗೆ ಅಲ್ಪವಿರಾಮ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT