ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಡಾಳ ’ ಅಲ್ಲ ಈ ‘ಅಲಂಕಾರ್‌ ವಿದ್ಯಾರ್ಥಿ’

Last Updated 13 ಜನವರಿ 2022, 22:30 IST
ಅಕ್ಷರ ಗಾತ್ರ

ರಂಗಭೂಮಿಯಲ್ಲಿ ಪಳಗಿ ಕಿರುತೆರೆಯಲ್ಲಿ ಮಿಂಚಿ, ‘ಗೀತಾ ಬ್ಯಾಂಗಲ್‌ ಸ್ಟೋರ್‌’ ಮೂಲಕ ‘ಪ್ರೀಮಿಯರ್‌ ಪದ್ಮಿನಿ’ಯಲ್ಲಿ ಚಂದನವನದ ಹೆದ್ದಾರಿಯಲ್ಲಿ ಪ್ರಯಾಣ ಮಾಡಿ ‘ರತ್ನನ್‌ ಪ್ರಪಂಚ’ ಸುತ್ತಿದ ‘ಉಡಾಳ ಬಾಬು ರಾವ್‌’ ಖ್ಯಾತಿಯ ನಟ ಪ್ರಮೋದ್‌ ಕೈಯಲ್ಲಿ ಆಫರ್‌ಗಳು ಹಲವಿವೆ.

ಹಳ್ಳಿಯಿಂದ ಪರದೆಯತ್ತ ಪಯಣ ಆರಂಭವಾಗಿದ್ದು ಹೇಗೆ?

ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ, ಅತ್ತೆ–ಮಾವನ ಜೊತೆಗೆ ಬೆಳೆದು ಓದಿದ್ದೆಲ್ಲ ಮದ್ದೂರಿನಲ್ಲಿ. ಚಿಕ್ಕಂದಿನಿಂದಲೂ ಕಲಾವಿದನಾಗುವ ಆಸೆ. ಶಾಲೆಯಲ್ಲಿ ನಾಟಕ, ಸ್ಕಿಟ್‌ ಬರೆಯುತ್ತಿದ್ದೆ, ನಾನೂ ಪಾತ್ರಗಳನ್ನು ಮಾಡುತ್ತಿದ್ದೆ. ಆದರೆ ಬೆಂಗಳೂರಿಗೆ ಬಂದು ದೊಡ್ಡ ನಟನಾಗಬೇಕು ಎನ್ನುವ ಆಸೆ ಇರಲಿಲ್ಲ. ಆಸೆ ಹುಟ್ಟಿದರೂ ಹೇಳಿಕೊಳ್ಳುತ್ತಿರಲಿಲ್ಲ. ಪ್ರೌಢ ಶಿಕ್ಷಣದ ಬಳಿಕ ಪಿಯುಸಿಗೆ ಬೆಂಗಳೂರಿಗೆ ಬಂದೆ. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಸಿಇಟಿ ಮೂಲಕ ಎಂಜಿನಿಯರಿಂಗ್‌ ಸೀಟ್‌ ಕೂಡಾ ಪಡೆದಿದ್ದೆ. ಆದರೆ ಆಗ ನನ್ನ ತಲೆಯಲ್ಲಿ ನಟನಾಗಬೇಕು ಎನ್ನುವ ಕನಸಿನ ಚಿಗುರು ಹೆಮ್ಮರವಾಗಿ ಬೆಳೆದಿತ್ತು. ಇಷ್ಟವಿಲ್ಲದೇ ಎಂಜಿನಿಯರಿಂಗ್‌ ಮಾಡಿ ಅದನ್ನು ಅರ್ಧಕ್ಕೆ ಬಿಟ್ಟು ಮತ್ತೆ ಬೈಸಿಕೊಳ್ಳುವುದಕ್ಕಿಂತ ಅತ್ತ ತಲೆಹಾಕದೆ ಸಿಇಟಿ ಸೆಲ್‌ನಿಂದ ಹೊರಬಂದಿದ್ದೆ.

ಪಿಯುಸಿ ಮಾಡಿದ ಕಾಲೇಜಿನಲ್ಲೇ ಬಿಎಸ್ಸಿ ಬಯೋಟೆಕ್‌ ಸೇರಿಕೊಂಡೆ. ನನಗೆ ಐಎಫ್‌ಎಸ್‌ ಮಾಡಬೇಕು ಎನ್ನುವ ಆಸೆ ಇತ್ತು. ಅಣ್ಣಾವ್ರ ‘ಗಂಧದಗುಡಿ’ ಸಿನಿಮಾ ನೋಡಿದ ಬಳಿಕ ಹುಟ್ಟಿಕೊಂಡಿದ್ದ ಕನಸದು. ಹಳ್ಳಿಯಲ್ಲಿ ಬೆಳೆದಿದ್ದೂ ಮತ್ತೊಂದು ಕಾರಣ. ಡಿಗ್ರಿ ಬಳಿಕ ಒಂದೋ ನಟನಾಗುತ್ತೇನೆ ಇಲ್ಲವೇ ಐಎಫ್‌ಎಸ್‌ ಮಾಡುತ್ತೇನೆ ಎನ್ನುವ ಎರಡು ಆಯ್ಕೆ ಇಟ್ಟುಕೊಂಡಿದ್ದೆ. ಡಿಗ್ರಿ ಕೊನೆಯ ಸೆಮಿಸ್ಟರ್‌ನಲ್ಲಿ ನಟನಾಗಬೇಕು ಎನ್ನುವ ದೃಢ ನಿರ್ಧಾರ ಮಾಡಿದೆ.

ಕಿರುತೆರೆಯಿಂದ ಚಂದನವನದ ಪಯಣದ ಬಗ್ಗೆ?

ಡಿಗ್ರಿ ಮುಗಿದ ಬಳಿಕ ಒಂದಿಷ್ಟು ಫೋಟೊಗಳನ್ನು ಹಿಡಿದುಕೊಂಡು ಓಡಾಡಿದೆ. 2009–10ರಲ್ಲಿ ಮೈಕೋ ಮಂಜು ಅವರ ಪರಿಚಯವಾದ ಬಳಿಕ ಅವರು ನನ್ನನ್ನು ನಾಗಾಭರಣ ಅವರ ‘ಬೆನಕ’ ನಾಟಕ ತಂಡಕ್ಕೆ ಸೇರಿಸಿದರು. ಕಿರುತೆರೆಯಲ್ಲಿ ಮೊದಲಿಗೆ ಸಣ್ಣಪುಟ್ಟ ಪಾತ್ರಗಳು ಸಿಕ್ಕವು. ಮಿಲನ ಪ್ರಕಾಶ್‌ ಅವರು ‘ಲಕುಮಿ’ಯಲ್ಲಿ ನನಗೆ ಒಂದು ಪಾತ್ರ ನೀಡಿದರು. ಇದು ನನಗೆ ತಕ್ಕಮಟ್ಟಿಗೆ ಬ್ರೇಕ್‌ ನೀಡಿತು. ಪ್ರಮೋದ್‌ ಮುಖ ಪರಿಚಯವಾಯಿತು. ನಂತರದಲ್ಲಿ ‘ಚುಕ್ಕಿ’ ಎನ್ನುವ ಧಾರಾವಾಹಿ ಮಾಡಿದೆ. ಹೀಗೆ ಸುಮಾರು 15 ಧಾರಾವಾಹಿಗಳಲ್ಲಿ ನಟಿಸಿದೆ. ಆದರೆ ಯಾವ ಧಾರಾವಾಹಿಯಲ್ಲೂ ಹೀರೊ ಆಗಬಾರದು ಎಂದು ನಿರ್ಧರಿಸಿದ್ದೆ.ಆಫರ್‌ಗಳು ಬಂದರೂ ತಿರಸ್ಕರಿಸಿದ್ದೆ. ಹೀರೊ ಆದರೆ ಸಿನಿಮಾದಲ್ಲೇ ಆಗಬೇಕು ಎಂದುಕೊಂಡಿದ್ದೆ.

‘ಲಕುಮಿ’ಯಲ್ಲಿನ ನನ್ನ ಪಾತ್ರ, ಭಾಷೆ ಎಲ್ಲವನ್ನೂ ಗುರುತಿಸಿ ‘ಗೀತಾ ಬ್ಯಾಂಗಲ್‌ ಸ್ಟೋರ್‌’ ಸಿನಿಮಾದಲ್ಲಿ ಅವಕಾಶ ನೀಡಿದರು. ಇಲ್ಲಿಂದ ಸಿನಿಮಾ ಪಯಣ ಆರಂಭ. ಈ ಸಿನಿಮಾ ಮೂರು ವರ್ಷ ತೆಗೆದುಕೊಂಡಿತು. ಹೊಟ್ಟೆಪಾಡಿಗೆ ಅತ್ತ ಧಾರಾವಾಹಿಯಲ್ಲೂ ಮುಂದುವರಿದೆ. ಆಗ ಶ್ರುತಿ ನಾಯ್ಡು ಅವರ ಧಾರಾವಾಹಿಯಲ್ಲಿ ಪಾತ್ರವೊಂದು ಸಿಕ್ಕಿತು. ನನ್ನಲ್ಲಿನ ಕಲಾವಿದನನ್ನು ಗುರುತಿಸಿದ ಶ್ರುತಿ ಅವರು ‘ಪ್ರೀಮಿಯರ್‌ ಪದ್ಮಿನಿ’ಯಲ್ಲಿ ಅವಕಾಶ ನೀಡಿದರು. ಇದು ಸ್ಯಾಂಡಲ್‌ವುಡ್‌ನಲ್ಲಿ ಪ್ರಮೋದ್‌ನನ್ನು ಗುರುತಿಸಿತು.

‘ಪ್ರೀಮಿಯರ್‌ ಪದ್ಮಿನಿ’ ಹಾಗೂ ‘ಉಡಾಳ್‌ ಬಾಬು ರಾವ್‌’ ಎರಡೂ ಕಂಡಿರದ ಕನಸುಗಳಲ್ಲವೇ?

ಖಂಡಿತಾ. ‘ಗೀತಾ ಬ್ಯಾಂಗಲ್‌ ಸ್ಟೋರ್‌’ ಚಿತ್ರಮಂದಿರಗಳಲ್ಲಿ ಓಡಲಿಲ್ಲ. ಟಿ.ವಿಯಲ್ಲಿ ಪ್ರಸಾರವಾದಾಗ ನನ್ನ ಪಾತ್ರವನ್ನು ಜನರು ಮೆಚ್ಚಿಕೊಂಡರು. ಆದರೆ ನನಗೆ ಸಿನಿಮಾ ಅವಕಾಶಗಳು ಹೆಚ್ಚು ಬರಲಿಲ್ಲ. ‘ಪ್ರೀಮಿಯರ್‌ ಪದ್ಮಿನಿ’ ಬಳಿಕ ಸಿನಿಮಾಗಳ ಆಫರ್‌ ಬರಲಾರಂಭಿಸಿತು. ಈ ಸಂದರ್ಭದಲ್ಲೇ ಒಪ್ಪಿಕೊಂಡ ಸಿನಿಮಾ ‘ಮತ್ತೆ ಉದ್ಭವ’. ಇದು ಕಮರ್ಷಿಯಲಿ ಹಿಟ್‌ ಆಗಲಿಲ್ಲ. ನಂತರ ‘ಇಂಗ್ಲೀಷ್‌ ಮಂಜ’, ‘ಅಲಂಕಾರ್‌ ವಿದ್ಯಾರ್ಥಿ’ ಸಿನಿಮಾಗಳನ್ನು ಒಪ್ಪಿಕೊಂಡೆ. ಇದರ ಚಿತ್ರೀಕರಣ ಇನ್ನೂ ಪ್ರಾರಂಭವಾಗಿರಲಿಲ್ಲ. ಆಗ ರೋಹಿತ್‌ ಪದಕಿ ಅವರ ‘ರತ್ನನ್‌ ಪ್ರಪಂಚ’ ಆಫರ್‌ ಬಂದಿತ್ತು.

ಒಳ್ಳೆಯ ಪ್ರೊಡಕ್ಷನ್‌ ಹೌಸ್‌, ಅತ್ಯುತ್ತಮ ಕಥೆ ಹಾಗೂ ಪಾತ್ರ ಅದಾಗಿತ್ತು. ‘ಉಡಾಳ್‌ ಬಾಬು ರಾವ್‌’ ಪಾತ್ರ ನನಗೆ ಖಂಡಿತಾ ಹಿಡಿಸುತ್ತದೆ ಎನ್ನುವುದು ಆಗಲೇ ತಿಳಿದಿತ್ತು. ಹೀಗಾಗಿ ತಕ್ಷಣ ಒಪ್ಪಿಕೊಂಡೆ. ನಾಟಕ ಮಾಡುತ್ತಿದ್ದ ಕಾರಣ ಉತ್ತರ ಕರ್ನಾಟಕ ಭಾಷೆಯ ಸ್ಲ್ಯಾಂಗ್‌ ಕೂಡಾ ಸುಲಭವಾಯಿತು. ಒಳ್ಳೆಯ ಪ್ರೊಡಕ್ಷನ್‌ ಹೌಸ್‌ ಇದ್ದಾಗ ತಕ್ಷಣದಲ್ಲೇ ಸಿನಿಮಾ ತೆರೆಗೆ ಬರುತ್ತದೆ. ಇದು ಕಲಾವಿದನಿಗೂ ಅನುಕೂಲ. ಇಲ್ಲಿ ನನಗಿದ್ದಿದ್ದು ಐದಾರು ದಿನದ ಕೆಲಸವಷ್ಟೇ.

‘ರತ್ನನ್‌ ಪ್ರಪಂಚ’ ಬಳಿಕ ಪ್ರಮೋದ್‌ಗೆ ಬೇಡಿಕೆ ಹೆಚ್ಚಾಗಿದೆ ಅಲ್ಲವೇ?

ಹೌದು. ಹೆಚ್ಚಿನ ಆಫರ್‌ಗಳು ಈಗ ಬರುತ್ತಿವೆ. ಬೇಡ ಅನ್ನಬೇಕಲ್ಲವೇ ಎಂದು ಹೊಟ್ಟೆ ಉರಿದುಕೊಂಡು ಹೇಳುತ್ತಿದ್ದೇನೆ. ಈ ಸಂದರ್ಭದಲ್ಲಿ ಪಾತ್ರ ಆಯ್ಕೆಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ನಿರ್ದೇಶಕರು ಬಂದು ಕಥೆ ಹೇಳಿದಾಗ ಕಥೆ ಹಾಗೂ ಪಾತ್ರ ನನಗೆ ಕನೆಕ್ಟ್‌ ಆದರೆ, ಅದು ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿದಂತೆ. ಇದು ನೈಜ ಪ್ರೀತಿ. ಒಬ್ಬ ಕಲಾವಿದನಿಗೆ ಹೀಗೇ ಅನಿಸುತ್ತದೆ. ಆಗಲೇ ನಾವು ನಮ್ಮನ್ನು ಆ ಪಾತ್ರದೊಳಗೆ ನೋಡಿಕೊಳ್ಳಲಾರಂಭಿಸುತ್ತೇವೆ. ಜೊತೆಗೆ ಪ್ರೊಡಕ್ಷನ್‌ ಹೌಸ್‌, ಚಿತ್ರತಂಡವನ್ನೂ ನೋಡುತ್ತೇನೆ. ಇದೇ ನನ್ನ ಪಾತ್ರದ ಆಯ್ಕೆಯ ಮಾನದಂಡ.

ರ್‍ಯಾಂಕ್‌ ವಿದ್ಯಾರ್ಥಿಯಾಗಿದ್ದ ನೀವು ‘ಅಲಂಕಾರ್‌ ವಿದ್ಯಾರ್ಥಿ’ಯಾಗಿದ್ದು ಹೇಗೆ?

ಇದೊಂದು ಹಾಸ್ಯಪ್ರಧಾನವಾದ ಚಿತ್ರ. ಸಿಂಪಲ್‌ ಸುನಿ ಅವರ ಸಹಾಯಕ ನಿರ್ದೇಶಕರಾಗಿದ್ದ ಕೇಶವ್ ಎಸ್. ಇಂಡಲವಾಡಿ ಈ ಚಿತ್ರದ ನಿರ್ದೇಶಕರು. ಅಲಂಕಾರ್ ವಿದ್ಯಾರ್ಥಿ– ಇದು ಎಪ್ಪತ್ತು ಎಂಭತ್ತರ ದಶಕದಲ್ಲಿ ಕೊನೆಯ ಬೆಂಚ್‌ನ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದ ರೀತಿ. ನಮ್ಮ ಸಿನಿಮಾದಲ್ಲಿ ಹೀರೊ ಕೂಡಾ ಹಾಗೇ. ಓದು ತಲೆಗೆ ಹತ್ತದಿದ್ದರೂ ಅಲಂಕಾರಕ್ಕಾಗಿ ಕಾಲೇಜಿಗೆ ಬರುತ್ತಿರುತ್ತಾನೆ. ಇಂಥಾ ಹುಡುಗ ಮ್ಯಾನೇಜ್‌ಮೆಂಟ್ ಸೀಟು ತೆಗೆದುಕೊಂಡು ಕಾಲೇಜಿಗೆ ಬರುತ್ತಾನೆ. ಈತನ ಬದುಕು ಹೇಗಿರುತ್ತದೆ ಅನ್ನುವುದೇ ಚಿತ್ರದ ತಿರುಳು.

ಪ್ರಮೋದ್‌ ಕೈಯಲ್ಲಿರುವ ಪ್ರೊಜೆಕ್ಟ್‌ಗಳು?

ಪೂರ್ಣಪ್ರಮಾಣದ ಆ್ಯಕ್ಷನ್‌ ಹೀರೊ ಆಗಿ ಕಾಣಿಸಿಕೊಂಡಿರುವ ‘ಇಂಗ್ಲಿಷ್‌ ಮಂಜ’ ಬಿಡುಗಡೆಗೆ ಸಿದ್ಧವಿದೆ. ಶ್ರುತಿ ನಾಯ್ಡು ಅವರ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಇದು ಜೂನ್‌–ಜುಲೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮತ್ತೆರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ‘ರಾಜರು’ ಚಿತ್ರ ನಿರ್ದೇಶಿಸಿದ್ದ ಗಿರೀಶ್‌ ಮೂಲಿಮನಿ ಅವರ ನಿರ್ದೇಶನ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ರತ್ನನ್‌ ಪ್ರಪಂಚ ಬಳಿಕ ಪಾತ್ರದ ಆಯ್ಕೆ ಕುರಿತು ನಾನೇ ಸ್ವತಂತ್ರನಾಗಿ ನಿರ್ಣಯ ತೆಗೆದುಕೊಳ್ಳುವ ಹಂತಕ್ಕೆ ಬಂದಿದ್ದೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT