ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್ ಪ್ರಶಸ್ತಿಯ ಮೇಲೆ ಹದ್ದಿನ ಕಣ್ಣು

Last Updated 25 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

‘ಆಲ್ ದಟ್ ಬ್ರೀತ್ಸ್’ (All That Breathes) ಚಿತ್ರ ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದೆ. ಜನವರಿ 2022ರಲ್ಲಿ ಸನ್‌ಡಾನ್ಸ್ ಫೆಸ್ಟಿವಲ್‌ನಲ್ಲಿ (Sundance Festival) ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಯನ್ನು ಗೆದ್ದ ನಂತರ ಕ್ಯಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಪ್ರತಿಷ್ಠಿತ L'Oeil d'Or (ಗೋಲ್ಡನ್ ಐ)ಅನ್ನು ಪಡೆದುಕೊಳ್ಳಲು ಮುಂದಾಯಿತು. ಈಗ ಎಲ್ಲರ ಕಣ್ಣುಗಳು ಮಾರ್ಚ್ 12ರ ಮೇಲಿದೆ. ಅಂದು ಆಸ್ಕರ್ ಪ್ರಶಸ್ತಿಯ ಘೋಷಣೆಯಾಗಲಿದೆ. ಪ್ರಶಸ್ತಿ ಗೆಲ್ಲಲು ‘ಆಲ್ ದಟ್ ಬ್ರೀತ್ಸ್’ ಚಿತ್ರವು ಪ್ರಬಲ ಸ್ಪರ್ಧಿಯಾಗಿದೆ.

ಭವಿಷ್ಯದ ಫಲಿತಾಂಶಗಳು ಹೇಗಾದರೂ ಇರಲಿ, 91-ನಿಮಿಷಗಳ ‘ಆಲ್ ದಟ್ ಬ್ರೀತ್ಸ್’ ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಆಗಿದೆ. ‘ಷಿಕಾಗೊ ರೀಡರ್’ ದಿನಪತ್ರಿಕೆ ಚಿತ್ರವನ್ನು ‘ಏರುತ್ತಿರುವ ದೃಶ್ಯ ಮೇರುಕೃತಿ’ (A soaring visual masterpiece) ಎಂದು ಶ್ಲಾಘಿಸಿದರೆ, ಗಾರ್ಡಿಯನ್ ಪತ್ರಿಕೆ ಇದನ್ನು ‘ದೆಹಲಿಯ ಕಲುಷಿತ ಆಕಾಶದಿಂದ ಬೀಳುವ ಬೇಟೆಯ ಪಕ್ಷಿಗಳನ್ನು ರಕ್ಷಿಸುವ ಇಬ್ಬರು ಸಹೋದರರ ಶ್ರಮದ ಬಗ್ಗೆ ಒಂದು ಪ್ರಕಾಶಮಾನವಾದ ಸಾಕ್ಷ್ಯಚಿತ್ರ’ ಎಂದು ಕೊಂಡಾಡಿದೆ.

L'Oeil d'Or ತೀರ್ಪುಗಾರರ ಅಭಿಪ್ರಾಯ ಹೀಗಿದೆ: ‘ವಿನಾಶದ ಜಗತ್ತಿನಲ್ಲಿ, ಪ್ರತಿ ಜೀವವು ಮುಖ್ಯ, ಪ್ರತಿಯೊಂದು ಸಣ್ಣ ಕ್ರಿಯೆಯೂ ಮುಖ್ಯ ಎಂದು ‘ಆಲ್ ದಟ್ ಬ್ರೀತ್ಸ್’ ಚಿತ್ರ ನಮಗೆ ನೆನಪಿಸುತ್ತದೆ... ಇದು ಮೂರು ಯುವಕರ ಸ್ಫೂರ್ತಿದಾಯಕ ಪ್ರಯಾಣವಾಗಿದೆ. ಅವರು ಸಂಪೂರ್ಣ ಜಗತ್ತನ್ನು ಉಳಿಸದಿರಬಹುದು; ಆದರೆ ತಮ್ಮ ಜಗತ್ತನ್ನು ಸಂರಕ್ಷಿಸಿಕೊಂಡಿದ್ದಾರೆ.’

‘ಆಲ್ ದಟ್ ಬ್ರೀತ್ಸ್’ ಚಿತ್ರದ ಮುಖ್ಯ ಪಾತ್ರಧಾರಿಗಳೆಂದರೆ ಸಹೋದರರಾದ ಮೊಹಮ್ಮದ್ ಸೌದ್ ಮತ್ತು ನದೀಮ್ ಶಹಜಾದಾಸ್ ಹಾಗೂ ಅವರ ಯುವ ಸಹಾಯಕ ಸಲಿಕ್ ರೆಹಮಾನ್. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಈ ಮುಸ್ಲಿಂ ಸಹೋದರರು ದೆಹಲಿಯ ವಜೀರಾಬಾದ್ ಗ್ರಾಮದಲ್ಲಿ Wildlife Rescue ಎಂಬ ಸರ್ಕಾರೇತರ ಸಂಸ್ಥೆ ನಡೆಸುತ್ತಿದ್ದಾರೆ. ಅದರ ಮೂಲಕ ದೆಹಲಿಯಲ್ಲಿ ಸಾವಿರಾರು ಕಪ್ಪು ಹದ್ದುಗಳನ್ನು (kites) ರಕ್ಷಿಸಿದ್ದಾರೆ. ನಿರ್ದೇಶಕ ಶೌನಕ್ ಸೆನ್ (35) ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ ಪಿಎಚ್‌.ಡಿ ಪಡೆದ ಚಲನಚಿತ್ರ ವಿದ್ವಾಂಸರು. ಬಳಲುತ್ತಿರುವ ಹದ್ದುಗಳು ಮತ್ತು ಸಂರಕ್ಷಕ ಸಹೋದರರ ನಡುವಿನ ದೈಹಿಕ ಮತ್ತು ಭಾವನಾತ್ಮಕ ಸಂಪರ್ಕವನ್ನು ದಾಖಲಿಸಿ ಸೆರೆಹಿಡಿಯಲು ಮೂರು ವರ್ಷ ಕಳೆದಿದ್ದಾರೆ. ‘ಒಂದು ಬದಿಯಲ್ಲಿ ಕೈಗಾರಿಕಾ ಕೊಳಕು ಮತ್ತು ಇನ್ನೊಂದೆಡೆ ಸುಂದರವಾದ ರಾಜ ಪಕ್ಷಿಗಳಿರುವ ಸಣ್ಣ ತೇವ ನೆಲಮಾಳಿಗೆಯಲ್ಲಿ ನಾನು ಸಹೋದರರನ್ನು ಭೇಟಿಯಾದೆ. ಆ ಕ್ಷಣವೇ ಇದೊಂದು ಸಿನಿಮೀಯ ಸ್ಥಳ ಎಂದು ನನಗೆ ಅರ್ಥವಾಯಿತು’ ಎಂದು ಸೆನ್ ನೆನಪಿಸಿಕೊಳ್ಳುತ್ತಾರೆ. ‘ನಾನು ಅವರ ಬಗ್ಗೆ ಚಿತ್ರ ಮಾಡಲು ನಿರ್ಧರಿಸಿ, ಮುಂದಿನ ಮೂರು ವರ್ಷಗಳವರೆಗೆ ನಂಬಲಾಗದ ಆವೇಗದೊಂದಿಗೆ ಕೆಲಸ ಮಾಡಿದೆ’ ಎಂದೂ ಅವರು ಹೇಳುತ್ತಾರೆ.

ಸೆನ್ ಅವರ ಪ್ರಯತ್ನಕ್ಕೆ ಉತ್ತಮ ಪ್ರತಿಫಲ ಸಿಕ್ಕಿದೆ. ಅಂತರರಾಷ್ಟ್ರೀಯ ಸರ್ಕ್ಯೂಟ್‌ಗಳಲ್ಲಿ ‘ಆಲ್ ದಟ್ ಬ್ರೀತ್ಸ್’ ಅನೇಕ ಪ್ರದರ್ಶನಗಳನ್ನು ಕಂಡಿದೆ. ಜೊತೆಗೆ, ನಿರ್ದೇಶಕರು ಮತ್ತು ಅದರ ಪ್ರಮುಖ ಪಾತ್ರಧಾರಿಗಳು ವ್ಯಾಪಕವಾಗಿ ದೇಶ ವಿದೇಶಗಳನ್ನು ಸುತ್ತಲೂ ಅವಕಾಶ ಸಿಕ್ಕಿದೆ... ‘ಹನ್ನೊಂದು ದಿನಗಳಲ್ಲಿ ಐದು ಮಹಾನಗರಗಳನ್ನು - ಬರ್ಲಿನ್, ಕೋಪನ್ ಹೇಗನ್, ಜ್ಯೂರಿಚ್, ಲಂಡನ್ ಮತ್ತು ನ್ಯೂಯಾರ್ಕ್ – ಸುತ್ತಬೇಕಾಯಿತು’ ಎನ್ನುತ್ತಾರೆ ಸೆನ್.

ಮೊದಲಿನಿಂದಲೂ ಚಿತ್ರ ‘ಏನಾಗಬಾರದು’ ಎಂಬುದರ ಬಗ್ಗೆ ನನಗೆ ಖಚಿತವಾಗಿತ್ತು ಎನ್ನುತ್ತಾರೆ ಸೆನ್. ನಮ್ಮ ಚಿತ್ರ ಒಂದು ಆತಂಕ ತರುವ ಅಥವಾ ಪ್ರಕ್ಷುಬ್ಧವಾದ ಚಿತ್ರವಾಗಿರಬಾರದು. ಅತೀ ಭಾವನಾತ್ಮಕತೆಯನ್ನು ಹೊಂದಿರಬಾರದು. ಎಲ್ಲಕ್ಕಿಂತ ಹೆಚ್ಚಾಗಿ, ಇದು ಒಳ್ಳೆಯ ಜನರು, ಒಳ್ಳೆಯ ಕೆಲಸಗಳನ್ನು ಮಾಡುವುದನ್ನಷ್ಟೇ ತೋರಿಸುವ ಸಿಹಿ ಚಿತ್ರವಾಗಿರಬಾರದು! ಬದಲಾಗಿ, ಚಿತ್ರವು ಕಾವ್ಯಾತ್ಮಕವಾಗಿರಬೇಕು ಹಾಗೂ ಚಿಂತನಶೀಲ ಗುಣವನ್ನು ಹೊಂದಿರಬೇಕು. ನಗರದಲ್ಲಿನ ನಡವಳಿಕೆಯ ಬದಲಾವಣೆಗಳು ಗೋಚರಿಸಬೇಕು. ನಗರದ ಜೀವನವನ್ನು ಒಂದು ದೊಡ್ಡದಾದ ಕ್ಯಾನ್‌ವಾಸ್‌ನಲ್ಲಿ ಬಿಚ್ಚಿಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು’ ಎಂದು ಸೆನ್ ಹೇಳುತ್ತಾರೆ.

ಅಪರೂಪದ ವಿಷಯ, ಅದ್ಭುತ ನಿರೂಪಣೆಯನ್ನು ಹೊಂದಿರುವ ‘ಆಲ್ ದಟ್ ಬ್ರೀತ್ಸ್’ ಚಿತ್ರದಲ್ಲಿ ನಂಬಲು ಕಷ್ಟವಾಗುವ ಮತ್ತು ಅತಿವಾಸ್ತವಿಕ ಎನ್ನಬಹುದಾದ ಅನೇಕ ಕ್ಷಣಗಳಿವೆ. ರಟ್ಟಿನ ಪೆಟ್ಟಿಗೆಗಳಲ್ಲಿ ತರಲಾದ ಅನಾರೋಗ್ಯ ಪೀಡಿತ ಮತ್ತು ಗಾಯಗೊಂಡ ಪಕ್ಷಿಗಳ ಕ್ಲೋಸ್-ಅಪ್‌ಗಳು ಮನವನ್ನು ಕಲಕುತ್ತವೆ. ‘ಪಕ್ಷಿಗಳ ನಡವಳಿಕೆ ವಿಶಿಷ್ಟ. ನಾವು ಹಾಕುವ ಲೆಕ್ಕಾಚಾರಗಳಿಗೆ ಅವು ಮಣೆ ಹಾಕುವುದಿಲ್ಲ. ಆದ್ದರಿಂದ ನಮಗೆ ಸತತವಾಗಿ ಆಶ್ಚರ್ಯವಾಗುವ ಸನ್ನಿವೇಶಗಳು ಎದುರಾಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ ನಾವು ಇದ್ದರೆ ಸಾಕು, ವಿಸ್ಮಯಗಳು ತಮಗೆ ತಾವೇ ನಮ್ಮ ಮುಂದೆ ನಿಲ್ಲುತ್ತವೆ’ ಎಂದು ಸೆನ್‌ ವಿವರಿಸುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅರ್ಬನ್ ಲೆನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಿಕ್ಕಿರಿದ ವೀಕ್ಷಕರ ಮುಂದೆ ‘ಆಲ್ ದಟ್ ಬ್ರೀತ್ಸ್’ ಚಿತ್ರವನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT