ಸಾಲು, ಸಾಲು ರಜೆ ಮತ್ತು ಸ್ವಾತಂತ್ರ್ಯ ದಿನದ ಅಂಗವಾಗಿ ಈ ವಾರ ಶುಕ್ರವಾರಕ್ಕೆ ಬದಲು ಗುರುವಾರವೇ (ಆ.15) ಚಿತ್ರಗಳು ತೆರೆ ಕಾಣುತ್ತಿವೆ. ಕನ್ನಡದಲ್ಲಿ ಎರಡು ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ತಮಿಳಿನ ಚಿಯಾನ್ ವಿಕ್ರಂ ನಟನೆಯ ‘ತಂಗಲಾನ್’, ತೆಲುಗಿನ ರಾಮ್ ಪೋತಿನೇನಿ ಅವರ ‘ಡಬಲ್ ಇಸ್ಮಾರ್ಟ್’, ಹಿಂದಿಯಲ್ಲಿ ರಾಜ್‌ಕುಮಾರ್ ರಾವ್ ಅಭಿಯನದ ‘ಸ್ತ್ರೀ–2’, ಅಕ್ಷಯ್ ಕುಮಾರ್ ಅವರ ‘ಖೇಲ್ ಖೇಲ್ ಮೇನ್’ ಸೇರಿದಂತೆ ಒಟ್ಟು 15 ಸಿನಿಮಾಗಳು ತೆರೆಯಲ್ಲಿ ಪೈಪೋಟಿ ನಡೆಸಲಿವೆ.
ಕೃಷ್ಣಂ ಪ್ರಣಯ ಸಖಿ: ಗೋಲ್ಡನ್ ಸ್ಟಾರ್ ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ ಅಭಿನಯದ ಈ ಚಿತ್ರ ಹಾಡುಗಳಿಂದಲೇ ಗಮನ ಸೆಳೆದಿದೆ. ಅರ್ಜುನ್ ಜನ್ಯ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿಬಂದಿರುವ ‘ದ್ವಾಪರ ದಾಟುತ’ ಗೀತೆ ಸೂಪರ್ ಹಿಟ್ ಎನಿಸಿಕೊಂಡಿದೆ. 2 ಕೋಟಿ ವೀಕ್ಷಣೆ ಪಡೆದಿರುವ ಈ ಹಾಡು ಸಾಮಾಜಿಕ ಜಾಲತಾಣವನ್ನು ಆವರಿಸಿಕೊಂಡಿದೆ.
ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಚಿತ್ರಕ್ಕೆ ಶ್ರೀನಿವಾಸರಾಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮ್ಯೂಸಿಕಲ್ ಲವ್‌ಸ್ಟೋರಿ ಹೊಂದಿರುವ ಚಿತ್ರದಲ್ಲಿ ಏಳು ಹಾಡುಗಳಿದ್ದು, ಈಗಾಗಲೇ ನಾಲ್ಕು ಹಾಡುಗಳು ಬಿಡುಗಡೆಯಾಗಿವೆ. ಶಶಿಕುಮಾರ್, ರಂಗಾಯಣ ರಘು ಮೊದಲಾದವರು ತಾರಾಗಣದಲ್ಲಿದ್ದಾರೆ.
ಗೌರಿ: ಇಂದ್ರಜಿತ್ ಲಂಕೇಶ್ ತಮ್ಮ ಪುತ್ರನಿಗಾಗಿ ಆ್ಯಕ್ಷನ್–ಕಟ್ ಹೇಳಿರುವ ಚಿತ್ರ ‘ಗೌರಿ’. ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿದ್ದು, ಮಂಡ್ಯ ಶೈಲಿಯಲ್ಲಿ ಖಡಕ್ ಡೈಲಾಗ್ ಹೇಳಿದ್ದಾರೆ. ಸಾನ್ಯ ಅಯ್ಯರ್ ಜೋಡಿಯಾಗಿದ್ದಾರೆ. ಪ್ರೇಮಕಥೆಯ ಎಳೆ ಹೊಂದಿರುವ ಚಿತ್ರದಲ್ಲಿ ಹಾಡು, ಫೈಟ್‌ಗಳು ಹೇರಳವಾಗಿವೆ.
ಎ.ಜೆ. ಶೆಟ್ಟಿ ಅವರ ಛಾಯಾಚಿತ್ರಗ್ರಹಣವಿದ್ದು, ಮಾಸ್ತಿ ಮಂಜು ಮತ್ತು ಬಿ.ಎ. ಮಧು ಸಂಭಾಷಣೆಯಿದೆ. ಪ್ರಿಯಾಂಕಾ ಉಪೇಂದ್ರ, ಸಿಹಿಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಲೂಸ್‌ಮಾದ ಯೋಗಿ, ಅಕುಲ್ ಬಾಲಾಜಿ ಮುಂತಾದವರು ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.