ಮಂಗಳವಾರ, ಸೆಪ್ಟೆಂಬರ್ 28, 2021
25 °C
‘ತುಮ್ ಬಿನ್‌‘ ಬಾಲಿವುಡ್ ಸಿನಿಮಾಕ್ಕೆ 20 ರ ಹರೆಯ

Pv Web Exclusive: ವಿರಹ ಗೀತೆಯೊಂದು ಪ್ರೇಮ ಗೀತೆ ಭೇಟಿಯಾದಾಗ 'ತುಮ್ ಬಿನ್'

ಎಂ. ನವೀನ್ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಎರಡೇ ದಿನದ ವಿರಹ ಕವಿತೆಯಾಗಿ ರೂಪತಾಳಿದೆ. ಫೋನ್‌ ಮೂಲಕ ಆಕೆ ಪ್ರಿಯಕರನಿಗಾಗಿ ಆ ಕವಿತೆ ಓದುತ್ತಿದ್ದಾಳೆ. ಕವಿತೆಯಾದರೂ ಎಂತಹುದು ‘ನಿನ್ನ ವಿನಹ ಬದುಕುವುದು ಹೇಗೆ, ಹೇಗೆ ಬದುಕಲಿ ನಿನ್ನ ವಿನಹ, ಯುಗಕ್ಕೂ ದೀರ್ಘ ಈ ರಾತ್ರಿ, ಯುಗಕ್ಕಿಂತಲೂ ಸುದೀರ್ಘವಾಯಿತು ಹಗಲು...’ ಅಸಲಿಗೆ ಕವಿತೆ ಆರಂಭವಾಗುವ ಕೆಲವೇ ಸೆಕೆಂಡ್‌ಗಳ ಮೊದಲು ಆತ ಪ್ರಾಣವನ್ನೇ ಬಿಟ್ಟಿದ್ದಾನೆ! ಕವಿತೆ ಕೇಳುತ್ತಿರುವ ವ್ಯಕ್ತಿ ಆಕೆಯ ನಲ್ಲನ ‘ಕೊಲೆಗಾರ‘!

ಇಪ್ಪತ್ತು ವರ್ಷಗಳ ಹಿಂದೆ ತೆರೆಕಂಡ ಬಾಲಿವುಡ್ ಸಿನಿಮಾ ‘ತುಮ್ ಬಿನ್’ನ ಒಂದು ಸಾಲಿನ ಕಥೆಯಿದು. ಒಂದೆರಡು ದಿನಗಳಲ್ಲಿ ತನ್ನ ಪತಿಯಾಗಬೇಕಿದ್ದ ಪ್ರೇಮಿ ಶವವಾಗಿದ್ದಾನೆ. ಆತನಿಗಾಗಿ ಬರೆದ ಕವಿತೆ ಅಕ್ಷರಶಃ ಅನಾಥವಾಗಿದೆ! ಇಡೀ ಸಿನಿಮಾ ಎಲ್ಲಿಯೂ ಓದದ ಕವನದಂತೆ... ಅಷ್ಟಕ್ಕೂ ಸಾವು ಸಂಭವಿಸಿದ್ದು ಅಪಘಾತದಿಂದ. ಅಪಘಾತವೆಂದರೆ ಅಪಘಾತವಷ್ಟೇ. ಆದರೆ ನಾಯಕ ಶೇಖರ್‌ ಪಾಪಪ್ರಜ್ಞೆಯಿಂದ ಹೊರಬರಲಾಗದೆ ಚಡಪಡಿಸುತ್ತಾನೆ. ಚಿತ್ರದ ನಾಯಕಿ ಪ್ರಿಯಾ ತನ್ನ ನಲ್ಲ ಶೇಖರ್ ಸಾವಿನಿಂದ ಆಘಾತಕ್ಕೆ ಒಳಗಾಗುತ್ತಾಳೆ. ಪ್ರಿಯಾಳ ಕಂಪನಿಯಲ್ಲಿಯೇ ಆರೋಪಿ ಶೇಖರ್ ಉದ್ಯೋಗಿಯಾಗುತ್ತಾನೆ. ಮುಳುಗುತ್ತಿದ್ದ ಕಂಪನಿಯನ್ನು ಎತ್ತಿ ನಿಲ್ಲಿಸುತ್ತಾನೆ.

ಹಾಡುಗಳ ಮೂಲಕ ದೊಡ್ಡ ನಿರೀಕ್ಷೆ ಮೂಡಿಸಿದ ಸಿನಿಮಾಗಳ ಸಾಲಿನಲ್ಲಿ ‘ತುಮ್‌ ಬಿನ್’ ನಿಲ್ಲುತ್ತದೆ. ಸಿನಿಮಾದ ಹಾಡಿನ ತುಣುಕು ಟಿ.ವಿಯಲ್ಲಿ ಪ್ರಸಾರವಾಗಿ ಭಾರಿ ಗಮನ ಸೆಳೆದಿತ್ತು. ಕಿವಿಗಿಂಪೆನಿಸುವ ಸಂಗೀತ, ಮನಸೆಳೆಯುವ ಸಾಹಿತ್ಯ ಹಾಗೂ ಅದ್ಭುತ ಹೊರಾಂಗಣ. ಟಿ ಸೀರಿಸ್ ಕಂಪನಿ ಮಾಲೀಕ ಭೂಷಣ್ ಕುಮಾರ್ ಹಾಗೂ ಕೃಷ್ಣ ಕುಮಾರ್ ನಿರ್ಮಾಣದ ಸಿನಿಮಾದ ನಿರ್ದೇಶಕ ಅನುಭವ್ ಸಿನ್ಹಾ. ಗಾಯಕ ಸೋನುನಿಗಮ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ‘ದೀವಾನ’ ಆಲ್ಬಮ್ ನ ನಿರ್ದೇಶಕ ಅನುಭವ್ ಸಿನ್ಹಾ. ಆ ಆಲ್ಬಮ್‌ ಈಗಲೂ ಸಂಗೀತ ಪ್ರಿಯರ ಫೇವರೇಟ್. ಇಂಪಾದ ಸಂಗೀತದೊಂದಿಗೆ ಕಣ್ಮನ ಸೆಳೆಯುವ ಸೆಟ್‌ ಸಂಗೀತಪ್ರಿಯರ ನೆನ‍ಪಿನಲ್ಲಿ ಉಳಿದಿದೆ.

ಭೂಷಣ್ ಕುಮಾರ್ ಅವರು ಅನುಭವ್ ಸಿನ್ಹಾ ಅವರಿಗೆ ಕರೆ ಮಾಡಿ ‘ಆಕೆ ಆತನಿಗಾಗಿ ಕವಿತೆ ಓದುತ್ತಿರುತ್ತಾಳೆ, ಆದರೆ ಆತ ಶವವಾಗಿ ಬಿದ್ದಿದ್ದಾನೆ. ಈ ಒಂದು ಸಾಲಿನ ಕಥೆಯನ್ನು ಸಿನಿಮಾ ಮಾಡಬೇಕು’ ಎಂದು ಹೇಳುತ್ತಾರೆ. ಅಬ್ಬಾ ಎನಿಸುವ ಸಾಲೊಂದು ಭಾವುಕತೆಯೇ ಪ್ರಧಾನವಾದ ಪ್ರೇಮಕಥೆಯಾಗಿ ‘ತುಮ್‌ಬಿನ್‘ ಹೆಸರಿನಲ್ಲಿ ಪರದೆ ಮೇಲೆ ಮೂಡಿ ಸಿನಿಪ್ರಿಯ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಚಿತ್ರದಲ್ಲಿ 9 ಹಾಡುಗಳಿವೆ. ಮತ್ತೆ ಮತ್ತೆ ನೆನಪಾಗುವ ಪ್ರತಿಬಾರಿ ಕೇಳಿದಾಗ ಭಾವುಕರಾಗಿಸುವಂತಹ ಹಾಡುಗಳನ್ನು ಬರೆದವರು ಫಯೀಜ್ ಅನ್ವರ್. ನಿಖಿಲ್ ವಿನಯ್ 8 ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಆ ಕಾಲದ ಪಾಪ್‌ ಬ್ಯಾಂಡ್ ಸ್ಟೀರಿಯೋ ನೇಷನ್‌ನ ತಾಜ್ ಸ್ಟಿರಿಯೋ ನೇಷನ್ ಒಂದು ಹಾಡಿಗೆ ಸಂಗೀತ ನೀಡಿ ಖುದ್ದು ಹಾಡಿದ್ದಾರೆ. ಖ್ಯಾತ ಗಜಲ್ ಗಾಯಕ ಜಗಜೀತ್ ಸಿಂಗ್ ಅವರ ಹಾಡು ಇಡೀ ಚಿತ್ರದ ಹೈಲೆಟ್ (‘ಯಾವುದೋ ದೂರೊಂದು ನಿನ್ನೆದೆಯೊಳಗೆ ಹುದುಗಿದ ಹಾಗೆ, ಕಣ್ಣುಗಳಿಂದಲೇ ನೀನೊಂದು ಮಾತು ಹೇಳಿದ ಹಾಗೆ (ಕೋಯಿ ಫರಿಯಾದ್ ದಿಲ್‌ಮೆ ದಬಿಹೋ ಜೈಸೆ)‘. ಇಡೀ ಚಿತ್ರದ ತಿರುಳು ಹಾಡಾಗಿ ಕಾಡುತ್ತದೆ. ‘ಮೇರಿ ದುನಿಯಾಮೆ ಆಕೆ ಮತ್ ಜಾ’, ‘ತುಮ್ಹಾರೆ ಸಿವಾ ಕುಚ್‌ನ ಚಾಹತ್ ಕರೇಂಗೆ ಜಬ್‌ತಕ್ ಜಿಯೇಂಗೆ ಮೋಹೋಬ್ಬತ್ ಕರೇಂಗೆ’ ಹಾಡುಗಳನ್ನು ಸಂಗೀತ ಅಭಿಮಾನಿಗಳು ಮರೆಯಲಾರರು.

ಅನುಭವ್ ಸಿನ್ಹಾ ಅವರು ಚಿತ್ರಕಥೆಗೆ ನೀಡಿರುವಷ್ಟೇ ಆದ್ಯತೆಯನ್ನು ಅದರ ಚಿತ್ರೀಕರಣಕ್ಕೆ ನೀಡಿದ್ದಾರೆ. ಕಥೆ ನಡೆಯುವುದು ಕೆನಡಾದಲ್ಲಿ, ಅದ್ಧೂರಿಯಾಗಿ ಚಿತ್ರಿಸಬೇಕು ಎಂಬ ಕಾರಣಕ್ಕೇ ಕಥೆಯಲ್ಲಿಯೇ ಕೆನಡಾವನ್ನು ಸೇರಿಸಿದ್ದಾರೆ. ಹೊಸಮುಖಗಳಾದ ಪ್ರಿಯಾಂಶು ಚಟರ್ಜಿ, ಸಂದಳಿ ಸಿನ್ಹಾ, ಹಿಮಾಂಶು ಮಲಿಕ್, ರಾಕೇಶ್ ವಸಿಷ್ಠ ಗಮನ ಸೆಳೆಯುತ್ತಾರೆ. ಎಲ್ಲಿಯೂ ಇದೊಂದು ಸಿನಿಮಾ ಅನಿಸದೆ, ನಮ್ಮೆದುರು ನಡೆಯುತ್ತಿರುವ ಕತೆ ಅನಿಸುತ್ತದೆ. ಅಷ್ಟರಮಟ್ಟಿಗೆ ವಾಸ್ತವವಾಗಿಸುವ ಪ್ರಯತ್ನವಿದೆ. ‘ನಾನು ನಿನಗೆ ಸಹಾಯ ಮಾಡಲು ಬಂದಿಲ್ಲ, ಸಾಥ್ ನೀಡಲಷ್ಟೇ ಬಂದಿದ್ದೇನೆ’ ಸ್ವಾಭಿಮಾನಿ ಹುಡುಗಿಗೆ ನಾಯಕ ಹೇಳುವ ಮಾತಿದು. ಅನುಭವ್ ಸಿನ್ಹಾ ಅವರೇ ಸಂಭಾಷಣೆ– ಕಥೆ ಬರೆದಿದ್ದಾರೆ. ಯಾವ ಪಾತ್ರವೂ ಕತೆಯಿಂದ ಹೊರಗಿಲ್ಲ. ಕೆಲವೇ ದೃಶ್ಯಗಳಲ್ಲಿ ಬರುವ, ಕೆಲಸ ಛಲ ಬಿಡದೆ ಹಿಡಿದಿದನ್ನು ಸಾಧಿಸುವ ಪೊಲೀಸ್ ಅಧಿಕಾರಿ ಡಿಮೆಲ್ಲೊ ಪಾತ್ರವೂ ಇಷ್ಟವಾಗುತ್ತದೆ. ನಾಯಕನ ಕಥೆ ಕೇಳಿ ಮರುಗಿ, ಆತನನ್ನು ಬಂಧನದಿಂದ ಮುಕ್ತಗೊಳಿಸುತ್ತಾನೆ.

ಮ್ಯೂಸಿಕಲ್ ಲವ್‌ಸ್ಟೋರಿಯಾಗಿ ಈ ಚಿತ್ರ ತನ್ನದೇ ಛಾಪು ಮೂಡಿಸಿದೆ. ಲವ್‌ಸ್ಟೋರಿ ಇಷ್ಟಪಡುವವರಿಗೆ ವಿಭಿನ್ನ ಅನುಭವ ‘ತುಮ್‌ಬಿನ್‘. ‘ನಾನು ಸಾಗುತ್ತಿರುವುದು ಅದು ಪ್ರೀತಿಯ ಹಾದಿ, ಗೊತ್ತಿಲ್ಲ ನಿನಗೆ ಈ ಬೆಂಕಿಯಲ್ಲಿ ನಾನು ಬೇಯುತ್ತಿರುವುದು’... ಎಂಬ ಸಾಲು ಬಹುಕಾಲ ಅನುರಣಿಸುತ್ತಲೇ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು