ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Powder Movie Review: ‘ಪೌಡರ್‌’ನಲ್ಲಿ ತಿಳಿ ಹಾಸ್ಯದ ಘಮ

Published 23 ಆಗಸ್ಟ್ 2024, 12:46 IST
Last Updated 23 ಆಗಸ್ಟ್ 2024, 12:46 IST
ಅಕ್ಷರ ಗಾತ್ರ
ಚಿತ್ರ ವಿಮರ್ಶೆ : ‘ಪೌಡರ್‌’
ನಿರ್ದೇಶಕ:ಜನಾರ್ಧನ್‌ ಚಿಕ್ಕಣ್ಣ
ಪಾತ್ರವರ್ಗ: ದಿಗಂತ್‌, ಧನ್ಯಾ ರಾಮ್‌ಕುಮಾರ್‌, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಶರ್ಮಿಳಾ ಮಾಂಡ್ರೆ, ನಾಗಭೂಷಣ್‌, ರವಿಶಂಕರ್‌ ಗೌಡ ಮತ್ತಿತರರು 

ನಿರ್ಮಾಣ: ಕೆಆರ್‌ಜಿ ಸ್ಟುಡಿಯೊಸ್‌ ಮತ್ತು ಟಿವಿಎಫ್‌ ಮೋಷನ್‌ ಪಿಕ್ಚರ್ಸ್‌   

ಬಾಲಿವುಡ್‌ನಲ್ಲಿ ‘ದೆಲ್ಹಿ ಬೆಲ್ಲಿ’ ಎಂಬ ಸಿನಿಮಾವೊಂದು ಬಹಳ ವರ್ಷಗಳ ಹಿಂದೆ ಬಂದಿತ್ತು. ಗ್ಯಾಂಗ್‌ಸ್ಟರ್‌ ಒಬ್ಬನಿಗೆ ಸೇರಿದ ಡೈಮಂಡ್ಸ್‌ ಅಪ್ಪಿತಪ್ಪಿ ಮೂವರು ಯುವಕರ ಕೈಸೇರುತ್ತದೆ. ಅವರು ಅದನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಣಗಳಿಸುತ್ತಾರೆ. ಆದರೆ ಗ್ಯಾಂಗ್‌ಸ್ಟರ್‌ ಡೈಮಂಡ್ಸ್‌ಗಾಗಿ ಅವರ ಹಿಂದೆ ಬೀಳುತ್ತಾನೆ. ‘ಪೌಡರ್‌’ನ ಕಥೆಯೂ ಇದೇ ಎಳೆಯಲ್ಲಿದೆ. ವ್ಯತ್ಯಾಸವಿಷ್ಟೇ ‘ಡೈಮಂಡ್ಸ್‌’ ಬದಲು ಇಲ್ಲಿ ‘ಪೌಡರ್‌’ ಅರ್ಥಾತ್‌ ಮಾದಕವಸ್ತು ಇದೆ. ‘ಫಿರ್‌ ಹೇರಾ ಪೇರಿ’ಯಲ್ಲೂ ಇದೇ ಮಾದರಿಯ ಕಥೆಯಿದೆ. ಚಿತ್ರಕಥೆಯಲ್ಲಿ ಹೊಸ ಪ್ರಯೋಗಗಳಷ್ಟೇ ‘ಪೌಡರ್‌’ ಸಿನಿಮಾದ ವಿಶೇಷತೆ.

ಸೂರ್ಯ(ದಿಗಂತ್‌) ಮೈಸೂರಿನ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುವಾತ. ಆತನ ರೂಮ್‌ಮೇಟ್‌ ಕರಣ್‌(ಅನಿರುದ್ಧ). ಸೂರ್ಯನ ಪ್ರೇಯಸಿ ನಿತ್ಯಾ (ಧನ್ಯಾ ರಾಮ್‌ಕುಮಾರ್‌) ನರ್ಸ್‌. ಅತ್ತ ಚೀನಾದಲ್ಲಿರುವ ಬ್ರೂಸ್‌ಲಿ ಎಂಬಾತ ಮಾದಕವಸ್ತುಗಳ ಮಾರಾಟ ಜಾಲದ ಮುಖ್ಯಸ್ಥ. ಆತ ಪೌಡರ್‌ ರೂಪದಲ್ಲಿರುವ ವಿಶೇಷ ಮಾದಕವಸ್ತುವೊಂದನ್ನು ತಯಾರಿಸುತ್ತಾನೆ. ಆತ ಈ ವಿಶೇಷ ಮಾದಕವಸ್ತುವನ್ನು ತಯಾರಿಸಿರುವುದರ ಹಿಂದೊಂದು ಕಥೆಯೂ ಇದೆ. ಅದನ್ನು ಭಾರತಕ್ಕೆ ‘ಘಮ ಘಮ’ ಎಂಬ ಬ್ರ್ಯಾಂಡ್‌ನ ಟಾಲ್ಕಮ್‌ ಪೌಡರ್‌ ಡಬ್ಬಿಯಲ್ಲಿ ಹಾಕಿ ಕಳ್ಳದಾರಿಯ ಮೂಲಕ ರವಾನಿಸುತ್ತಾನೆ. ‘ಜೀವ್ಸ್‌’ ಎಂಬಾತನ ಮೂಲಕ ಇದರ ವಿತರಣೆಯ ಜವಾಬ್ದಾರಿ ಅಣ್ಣಾಚಿಗೆ(ರಂಗಾಯಣ ರಘು) ಸಿಗುತ್ತದೆ. ಆದರೆ ಆ ಡಬ್ಬಿಗಳು ಅಪ್ಪಿತಪ್ಪಿ ಸೂರ್ಯ ಕೆಲಸ ಮಾಡುವ ಸೂಪರ್‌ ಮಾರ್ಕೆಟ್‌ ಸೇರುತ್ತವೆ. ಅಲ್ಲಿಂದ ಹಲವು ವ್ಯಕ್ತಿಗಳಿಗೆ ಇದು ಮಾರಾಟವಾಗುತ್ತದೆ. ಇದು ಟಾಲ್ಕಮ್‌ ಪೌಡರ್‌ ಅಲ್ಲ, ಬೇರೆ ‘ಪೌಡರ್‌’ ಎಂಬ ವಿಷಯ ಸೂರ್ಯ, ನಿತ್ಯಾ ಹಾಗೂ ಕರಣ್‌ಗೆ ತಿಳಿದ ನಂತರ ಕಥೆ ಮುಂದೆ ಸಾಗುತ್ತದೆ. 

ನಿರ್ದೇಶಕರು ಮೊದಲ ಬಾರಿಗೆ ಹಾಸ್ಯ ಪ್ರಧಾನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇಂತಹ ಸಿನಿಮಾಗಳ ಜೀವಾಳವೇ ಬರವಣಿಗೆ. ಈ ಸಿನಿಮಾದಲ್ಲಿ ಪಂಚ್‌ ಡೈಲಾಗ್ಸ್‌ಗಳ ಕೊರತೆಯಿದೆ. ನಟರ ಆಂಗಿಕ ಅಭಿನಯಗಳಷ್ಟೇ ನಗು ತರಿಸುತ್ತವೆ. ಸಂಭಾಷಣೆಗಳಲ್ಲಿ ಹಾಸ್ಯ ತಿಳಿಯಾಗಿದೆ. ಕಥೆಯನ್ನು ಮೊದಲ ದೃಶ್ಯದಿಂದಲೇ ಊಹಿಸಿಕೊಂಡು ಹೋಗಬಹುದು. ಮೊದಲಾರ್ಧವನ್ನು ಪಾತ್ರಗಳ ಪರಿಚಯ ಹಾಗೂ ಅವುಗಳ ಸ್ಥಾಪನೆಗೆ ನಿರ್ದೇಶಕರು ಬಳಸಿಕೊಂಡಿದ್ದಾರೆ. ದ್ವಿತೀಯಾರ್ಧದ ನಂತರ ಚಿತ್ರಕಥೆ ಬಿಗಿಯಾಗುತ್ತದೆ. ಸಿನಿಮಾದ ವಿಎಫ್‌ಎಕ್ಸ್‌ಗೆ ಹೆಚ್ಚಿನ ಅಂಕ ಸಿಗಬೇಕು. ಕ್ಲೈಮ್ಯಾಕ್ಸ್‌ನಲ್ಲಿನ 10–15 ನಿಮಿಷದ ದೃಶ್ಯಗಳು ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗ. ಬರಹಗಾರ ಹಾಗೂ ನಿರ್ದೇಶಕರ ಈ ಕಲ್ಪನೆ ಹೊಸ ಲೋಕವನ್ನೇ ಇಲ್ಲಿ ಸೃಷ್ಟಿಸಿದೆ. ಕಥೆಗೊಂದು ಅರ್ಥವೂ ಇಲ್ಲಿ ಅಡಕವಾಗಿದೆ. ಈ ಭಾಗ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಸಂಕಲನ ಹಾಗೂ ಅದ್ವೈತ್‌ ಗುರುಮೂರ್ತಿ ಛಾಯಾಚಿತ್ರಗ್ರಹಣವೂ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದು.       

ಎಲ್ಲರೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಶರ್ಮಿಳಾ ತಮ್ಮ ಆ್ಯಕ್ಷನ್‌ ಸಾಮರ್ಥ್ಯವನ್ನು ತೋರಿಸಿದ್ದಾರೆ. ‘ಅಣ್ಣಾಚಿ’ ಪಾತ್ರದಲ್ಲಿ ರಂಗಾಯಣ ರಘು ಹಾಗೂ ‘ಸುಲೈಮಾನ್‌’ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಗಿಸುತ್ತಾರೆ. ಜಗ್ಗೇಶ್‌ ಅವರ ಧ್ವನಿ ಸಿನಿಮಾಗೆ ವೇದಿಕೆ ಹಾಕಿಕೊಟ್ಟಿದೆ. ಸಿನಿಮಾ ಯಾವ ಸಂದೇಶವನ್ನೂ ನೀಡುವ ಗೋಜಿಗೆ ಹೋಗುವುದಿಲ್ಲ. ‘ಪೌಡರ್‌–2’ ಸಿನಿಮಾ ಬರಲಿದೆ ಎನ್ನುವುದನ್ನು ನೇರವಾಗಿಯೇ ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT