ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಾನಂದ ಸಿನಿಮಾ ವಿಮರ್ಶೆ | ವಿಕ್ಟೋರಿಯಾ ಯಂತ್ರವೂ ‘ವಿಕ್ಟರಿ’ಯ ಕಥನವೂ

Last Updated 9 ಡಿಸೆಂಬರ್ 2022, 12:30 IST
ಅಕ್ಷರ ಗಾತ್ರ

ಗದುಗಿನ ರೈಲು ನಿಲ್ದಾಣಕ್ಕೆ ಬರುವ ‘ವಿಕ್ಟೋರಿಯಾ’, ಒಂದು ಮುದ್ರಣ ಯಂತ್ರವೇನೋ ಸರಿ. ಆದರೆ, ಆ ಹೆಸರಿನ ಹಿಂದಿದ್ದ ಸಾಮ್ರಾಜ್ಯವಿದೆಯಲ್ಲಾ, ಅಂಥದ್ದೊಂದನ್ನು ಕಟ್ಟುವುದು ನಾಯಕನ ಕನಸು. ಅಪ್ಪನ ಹಾದಿಯಲ್ಲಿ ಕೆಲದೂರ ಸಾಗಿ ಮುಂದೆ ತನ್ನದೇ ದಾರಿ ಕಂಡುಕೊಳ್ಳುವ ಸಾಹಸಗಾಥೆಯಿದು. ‘ವಿಕ್ಟೋರಿಯಾ’ ಕನಸು ಮುಂದೆ ವಿಕ್ಟರಿಯ (ವಿಜಯದ) ಬದುಕಾಗಿ ಬದಲಾಗುತ್ತದೆ. ಉದ್ಯಮ ಸಾಮ್ರಾಜ್ಯವೊಂದನ್ನು ಕಟ್ಟಿಬಿಡುತ್ತದೆ.

ಉದ್ಯಮಿ ವಿಜಯ ಸಂಕೇಶ್ವರರ ಬದುಕನ್ನು ಎರಡು ಗಂಟೆ ನಲ್ವತ್ತು ನಿಮಿಷಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಸಿನಿಮಾ ಎನ್ನಲು ಒಂದಿಷ್ಟು ವಾಣಿಜ್ಯಿಕ – ಮನೋರಂಜನಾತ್ಮಕ ಅಂಶಗಳನ್ನು ಅಲ್ಲಲ್ಲಿ ಬೆರೆಸಿದ್ದಾರೆ.

1950ರಿಂದ 1999ರವರೆಗಿನ ಕಾಲಘಟ್ಟದ ಘಟನಾವಳಿಗಳನ್ನು ನೈಜವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಚಿತ್ರ ಮಾಡುತ್ತದೆ. ಅಂದಿನ ಕಾಲದ ರೈಲು, ನಿಲ್ದಾಣ, ಮುದ್ರಣ ಯಂತ್ರ, ವಾಹನ ವಿನ್ಯಾಸ, ಸಂಕೇಶ್ವರ ಕುಟುಂಬದ ಹಾಗೂ ಗದಗ ಹುಬ್ಬಳ್ಳಿ ಭಾಗದ ಉಡುಗೆ ತೊಡುಗೆ, ನಡವಳಿಕೆಗಳು ಇತ್ಯಾದಿ ಪ್ರತಿಯೊಂದನ್ನೂ ಯಥಾವತ್ತಾಗಿ ಚಿತ್ರಿಸಲಾಗಿದೆ. ನಿರ್ದೇಶಕಿ ರಿಶಿಕಾ ಶರ್ಮಾ ಹಾಗೂ ಅವರ ಕಲಾ ತಂಡದ ಪರಿಶ್ರಮ ಎದ್ದು ಕಾಣುತ್ತದೆ.

ವಿಜಯ ಸಂಕೇಶ್ವರರು ಎದುರಿಸಿದ ತೀವ್ರ ಅಸಹಾಯಕತೆ, ಅವಮಾನಗಳೇ ಅವರ ಉದ್ಯಮ ಸಾಮ್ರಾಜ್ಯದ ಮೆಟ್ಟಿಲ ಕಲ್ಲುಗಳಾಗಿ ಪರಿವರ್ತನೆಯಾದವು ಎಂದು ಚಿತ್ರದ ಪ್ರತೀ ದೃಶ್ಯವೂ ಹೇಳುತ್ತದೆ. ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ (ಭರತ್‌ ಬೋಪಣ್ಣ) ಅಪ್ಪನ ಬದುಕಿನ ಕಥನವನ್ನು ನಿರೂಪಿಸುತ್ತಾ ಹೋಗಿದ್ದಾರೆ. ಹಾಗಾಗಿ ಪ್ರಸ್ತುತ ಮತ್ತು ಫ್ಲ್ಯಾಷ್‌ಬ್ಯಾಕ್‌ಗಳ ನಡುವೆ ಚಿತ್ರ ಸಾಗುತ್ತದೆ.

ತಮ್ಮನ್ನು ನಿರಂತರ ಅವಮಾನಿಸಿದ ಕನ್ನಡ ಪತ್ರಿಕೋದ್ಯಮದ ‘ಭೀಷ್ಮ’ರೊಬ್ಬರಿಗೆ (ಪ್ರಕಾಶ್‌ ಬೆಳವಾಡಿ)ತಾವು ಅದೇ ಉದ್ಯಮಕ್ಕಿಳಿದು ಉತ್ತರಿಸಿದ ಸನ್ನಿವೇಶವನ್ನು ಢಾಳಾಗಿ ತೋರಿಸಿ ಕೊನೆಗೂ ಸೌಹಾರ್ದ ಅಂತ್ಯ ಕಾಣಿಸಿದ್ದಾರೆ.

ಹಾಗೆಂದು ಪತ್ರಿಕೆ, ಮಾಧ್ಯಮ ಮಾರುಕಟ್ಟೆ ಸಂಬಂಧಿಸಿ ಸಂಕೇಶ್ವರರು ಮಾಡಿದ ಉದ್ಯಮ ಸೂತ್ರ ಈ ಕ್ಷೇತ್ರಕ್ಕೆ ಹೊಸದಲ್ಲ. ಆದರೆ, ಚಿತ್ರದಲ್ಲಿ ಅಭಿವ್ಯಕ್ತಿಸಿರುವ ವಿವರಗಳು ಇದಕ್ಕೆ ವ್ಯತಿರಿಕ್ತವಾಗಿವೆ.

ದ್ವಿತೀಯಾರ್ಧ ಸ್ವಲ್ಪ ನಿಧಾನವಾಯಿತೇನೋ. ಇನ್ನೊಂದಿಷ್ಟು ಗಟ್ಟಿಗೊಳಿಸಬಹುದಿತ್ತು. ರಮೇಶ್‌ ಭಟ್‌ – ಭರತ್‌ ಬೋಪಣ್ಣ ಮುಖಾಮುಖಿಯಾಗುವ ಸನ್ನಿವೇಶ ಸ್ವಲ್ಪ ಎಳೆದಾಡಿದಂತಿದೆ. ವ್ಯಕ್ತಿಕಥನ ಆಗಿರುವುದರಿಂದ ಹಾಗಿರಬೇಕಿತ್ತು– ಹೀಗಿರಬೇಕಿತ್ತು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಸಂಕೇಶ್ವರ ಹೀಗೆ ಇದ್ದರು. ಹೀಗೆಯೇ ಇದ್ದಾರೆ ಎನ್ನುವಲ್ಲಿಗೆ ಕಥೆ ಶುಭಾಂತ್ಯವಾಗುತ್ತದೆ.

ಸಂಕೇಶ್ವರರನ್ನು ಮೂರು ಕಾಲಘಟ್ಟಗಳಲ್ಲಿ ಕಾಣಿಸಿದ ನಿಹಾಲ್‌ ರಜಪೂತ್‌ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಅವರಿಗೂ ಪೂರ್ಣ ಅಂಕ ನೀಡಬಹುದು. ಬಿ.ಜಿ.ಸಂಕೇಶ್ವರ ಪಾತ್ರದಲ್ಲಿ ಅನಂತ್‌ನಾಗ್‌, ಚಂದ್ರಮ್ಮನಾಗಿ ವಿನಯಾಪ್ರಸಾದ್‌ ಅಭಿನಯ ಚೆನ್ನಾಗಿದೆ. ಲಲಿತಾ ಸಂಕೇಶ್ವರ್‌ ಪಾತ್ರಕ್ಕೆ ಸಿರಿ ಪ್ರಹ್ಲಾದ್‌ ನ್ಯಾಯ ಒದಗಿಸಿದ್ದಾರೆ. ಆಗಾಗ ಬಂದು ಹೋಗುವ ರವಿಚಂದ್ರನ್‌ ಕೂಡಾ ಇಷ್ಟವಾಗುತ್ತಾರೆ.

ಛಾಯಾಗ್ರಹಣ ಉತ್ತಮವಾಗಿದೆ. ವಾಹನಗಳ ಸಾಲು, ಸಂಕೇಶ್ವರ ಸಾಮ್ರಾಜ್ಯವನ್ನು ತೋರಿಸಿದೆ. ಬಹುಶಃ ದೃಶ್ಯ ವಿಸ್ತಾರಕ್ಕೆ ಇನ್ನಷ್ಟು ಅವಕಾಶಗಳಿದ್ದವು. ಬಹುತೇಕ ದೃಶ್ಯಗಳು ಹುಬ್ಬಳ್ಳಿ– ಗದಗ– ಧಾರವಾಡದ ಆಸುಪಾಸಿನಲ್ಲೇ ಗಿರಕಿ ಹೊಡೆದಿವೆ. ಸಂಗೀತ ಹಿತಮಿತವಾಗಿದೆ. ಕೊನೆಯಲ್ಲಿ ವಿಜಯ ಸಂಕೇಶ್ವರ ಮತ್ತು ಆನಂದ ಸಂಕೇಶ್ವರ ಅವರ ಮಾತು ಹೀಗಿತ್ತು. ಈ ಚಿತ್ರದಿಂದ ಯಾರಿಗಾದರೂ ಸ್ಫೂರ್ತಿಯಾದರೆ ನಮ್ಮ ಪ್ರಯತ್ನ ಸಾರ್ಥಕ ಎಂದಿದ್ದಾರೆ. ಹಾಗಾಗಿ ಸ್ಪೂರ್ತಿ ಕಥನಗಳ ಆಸಕ್ತರಿಗೆ, ಉದ್ಯಮ ಅಧ್ಯಯನ ಮಾಡುವವರ ಪಾಲಿಗೆ ಒಳ್ಳೆಯ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT