ಶುಕ್ರವಾರ, ಅಕ್ಟೋಬರ್ 7, 2022
24 °C

‘ಬಿಗ್‌ಬಾಸ್‌ ಸೀಸನ್ 9’ ಆರಂಭಕ್ಕೆ ಮುಹೂರ್ತ ನಿಗದಿ: ಪ್ರವೀಣರ ಜೊತೆ ನವೀನರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ‘ಬಿಗ್‌ಬಾಸ್‌’ ಆರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಬಿಗ್‌ಬಾಸ್‌ ಒಟಿಟಿ ಆವೃತ್ತಿ ಕ್ಲೈಮ್ಯಾಕ್ಸ್‌ ಹಂತ ತಲುಪುತ್ತಿದ್ದಂತೆಯೇ ಬಿಗ್‌ಬಾಸ್‌ 9ನೇ ಆವೃತ್ತಿಯ ಘೋಷಣೆಯಾಗಿದೆ. ಸೆ.24ರಂದು ಸಂಜೆ 6 ಗಂಟೆಗೆ 9ನೇ ಆವೃತ್ತಿ ಆರಂಭವಾಗಲಿದೆ ಎಂದು ಕಲರ್ಸ್‌ ಕನ್ನಡ ತಿಳಿಸಿದೆ.

ಈ ಘೋಷಣೆಯ ಜೊತೆಗೆ ‘ಪ್ರವೀಣರ ಜೊತೆ ನವೀನರು!’ ಎಂಬ ಅಡಿಬರಹವನ್ನು ನೀಡಿ ಕಲರ್ಸ್‌ ಕನ್ನಡ ಪ್ರೊಮೊವೊಂದನ್ನು ಬಿಡುಗಡೆ ಮಾಡಿದೆ. ಅಚ್ಚರಿಯ ವಿಷಯವೇನೆಂದರೆ ಈ ಹಿಂದೆ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದ ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌ ಹಾಗೂ ಅನುಪಮಾ ಗೌಡ ಮತ್ತೆ ಬಿಗ್‌ಬಾಸ್‌ ಮನೆ ಪ್ರವೇಶಿಸಲಿದ್ದಾರೆ.

ಬಿಗ್‌ಬಾಸ್‌ ಒಟಿಟಿ ಆವೃತ್ತಿ ಪೂರ್ಣಗೊಂಡ ಬೆನ್ನಲ್ಲೇ ಟಿ.ವಿಯಲ್ಲಿ ಬಿಗ್‌ಬಾಸ್‌ 9ನೇ ಆವೃತ್ತಿ ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತಿಳಿಸಿದ್ದರು. ಈ ವಾರ ಒಟಿಟಿ ಸೀಸನ್‌ ಪೂರ್ಣಗೊಳ್ಳಲಿದೆ. ಆದರೆ ಈಗ ಟಿ.ವಿ ಆವೃತ್ತಿ ಆರಂಭಕ್ಕೆ ಒಂದು ವಾರದ ಅಂತರವನ್ನು ನಿಗದಿಪಡಿಸಲಾಗಿದೆ.

ಸದ್ಯ ಒಟಿಟಿ ಆವೃತ್ತಿ ಸ್ಪರ್ಧೆಯಲ್ಲಿ ಸೋನು ಗೌಡ, ಸೋಮಣ್ಣ, ಆರ್ಯವರ್ಧನ್‌ ಗುರೂಜಿ, ರೂಪೇಶ್‌ ಶೆಟ್ಟಿ ಸೇರಿ ಎಂಟು ಸ್ಪರ್ಧಿಗಳಿದ್ದಾರೆ. ಒಟಿಟಿ ಆವೃತ್ತಿಯಲ್ಲಿ ಕೇವಲ ಒಬ್ಬ ವಿಜೇತ ಎಂದಿಲ್ಲ. ಕೊನೆಯ ಸುತ್ತಿಗೆ ಬಂದ ಎಲ್ಲರೂ ವಿಜೇತರೇ. ಹೀಗಾಗಿ ನಾಲ್ಕೈದು ಸ್ಪರ್ಧಿಗಳು ಬಿಗ್‌ಬಾಸ್‌ 9ನೇ ಆವೃತ್ತಿಗೆ ಪ್ರವೇಶ ಪಡೆಯಲಿದ್ದಾರೆ. ಇವರ ಜೊತೆಗೆ ಮಾಜಿ ಸ್ಪರ್ಧಿಗಳು ಸೇರಿದಂತೆ ಹೊಸ ಸ್ಪರ್ಧಿಗಳೂ ಬಿಗ್‌ಬಾಸ್‌ ಮನೆಯನ್ನು ಪ್ರವೇಶಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು