ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಸಾಹಸಿ ರಾಣಾಗೆ ನಿವೃತ್ತಿ?

ವಿಶೇಷ ಹುಲಿ ರಕ್ಷಣಾ ಪಡೆಯ ಸದಸ್ಯ ಜರ್ಮನ್‌ ಶಫರ್ಡ್‌
Last Updated 2 ಸೆಪ್ಟೆಂಬರ್ 2020, 5:06 IST
ಅಕ್ಷರ ಗಾತ್ರ
ADVERTISEMENT
""
""

ಬಂಡೀಪುರದ ವಿಶೇಷ ಹುಲಿ ಸಂರಕ್ಷಣಾ ಪಡೆಯ ‘ರಾಣಾ’ ಇದೀಗ ಸುದ್ದಿಯಲ್ಲಿದೆ. ರಾಣಾ, ಅರಣ್ಯ ಅಕ್ರಮ ಪತ್ತೆಯಲ್ಲಿ ತರಬೇತಾದ ಜರ್ಮನ್‌ ಶಫರ್ಡ್‌ ನಾಯಿ. ಅಪರಾಧ ಪತ್ತೆಯಲ್ಲಿ ಸೋತಿದೆ, ವಯಸ್ಸಾಗಿದೆ ಎನ್ನುವ ಕಾರಣ ನೀಡಿ ನಿವೃತ್ತಿ ಮಾಡಬೇಕು ಎನ್ನವಷ್ಟರಲ್ಲಿ ಭಾರಿ ಪ್ರಕರಣವನ್ನು ಪತ್ತೆ ಮಾಡಿದೆ. ತನಗೆ ನಿವೃತ್ತಿ ನೀಡಬೇಕು ಎಂದು ಶಿಫಾರಸು ಮಾಡಿದ್ದ ಹಿರಿಯ ಅಧಿಕಾರಿಗಳಿಗೆ ತನಗಿನ್ನೂ ಸಾಮರ್ಥ್ಯ ಕುಂದಿಲ್ಲ ಎನ್ನುವ ಸಂದೇಶವನ್ನು ನೀಡಿದೆ.

ಕೊಡಗು ಭಾಗದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಹಳ್ಳ ವಲಯದ ಅಂಚಿನಲ್ಲಿರುವ ತಟ್ಟಕೆರೆ ಆದಿವಾಸಿಗಳ ಹಾಡಿ ಬಳಿಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳಿವೆ. ಸಂಜೆಯಾದರೆ ಕಾಡು ಪ್ರಾಣಿಗಳ ಓಡಾಟ ಇಲ್ಲಿ ಮಾಮೂಲು. ಮುಸ್ಸಂಜೆಯಲ್ಲಿ ಕಾಡಾನೆ ಓಡಾಟ, ಸಲಗದ ಘೀಳು ಸದಾ ಕೇಳುತ್ತದೆ.

ಕಳೆದ ತಿಂಗಳ ಅಂತ್ಯದಲ್ಲಿ ಅಂದರೆ ಆಗಸ್ಟ್‌ 25ರ ರಾತ್ರಿ ತಟ್ಟಕೆರೆ ಬಳಿ ಗುಂಡಿನ ಮೊರೆತ ಕೇಳಿತ್ತು. ಕಾಡು ಪ್ರಾಣಿಗಳು ಈ ಕರ್ಕಶಕ್ಕೆ ಬೆಚ್ಚಿಬಿದ್ದಿದ್ದವು. ಮುಂಜಾನೆ ಆದಿವಾಸಿಗಳು ಯಥಾಪ್ರಕಾರ ಓಡಾಡುತ್ತಿದ್ದಾಗ ಅರಣ್ಯ ಇಲಾಖೆಯ ವಸತಿಗೃಹಕ್ಕಿಂತ ಸ್ವಲ್ಪ ದೂರದಲ್ಲಿ ಐದು ವರ್ಷದ ಹುಲಿ ಸತ್ತಿರುವುದನ್ನು ಕಂಡು ಇಲಾಖೆಯ ಗಮನಕ್ಕೆ ತಂದರು.

ಹಿಂದಿನ ತರಬೇತುದಾರ ಪ್ರಕಾಶ್‌ ಜೊತೆ

ಹುಲಿ ಅಭಯಾರಣ್ಯದಲ್ಲಿ ಪಟ್ಟೆಹುಲಿ ವಯಸ್ಸಾಗಿ ಸತ್ತರೆ ಅಂಥ ಸುದ್ದಿಯಾಗಲ್ಲ. ಆದರೆ ಇಲ್ಲಿ ಹುಲಿಯ ನಾಲ್ಕು ಕಾಲುಗಳನ್ನು ಕತ್ತರಿಸಲಾಗಿತ್ತು. ಇಲಾಖೆಯ ಸಿಬ್ಬಂದಿ ಮನೆಗಳ ಬಳಿಯೇ ಇಂತಹ ಕೃತ್ಯ ನಡೆದರೆ ಇಲಾಖೆಗೆ ಅಪಮಾನ. ಇಂತಹ ಪ್ರಕರಣಗಳನ್ನು ಭೇದಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ರಚಿಸಿರುವ ವಿಶೇಷ ಹುಲಿ ಸಂರಕ್ಷಣಾ ಪಡೆಯನ್ನು ಅಂದು ಸಂಜೆಯೇ ಬಂಡೀಪುರದಿಂದ ಕರೆಸಲಾಯಿತು. ಈ ಪಡೆಯಲ್ಲಿ ಇದ್ದ ರಾಣಾನಿಂದ ಇಲಾಖೆಯ ಮಾನ ಉಳಿಯಿತು.

ಮುಂಜಾನೆ ಅಖಾಡಕ್ಕೆ ಇಳಿದ ರಾಣಾ ಸತ್ತ ಹುಲಿಯ ಬಳಿ ಹೋಗಿ ಮೂಸಿದ ನಂತರ ಅಲ್ಪ ದೂರದಲ್ಲಿದ್ದ ಸಂತೋಷ್‌ ಎನ್ನುವ 35 ವರ್ಷದ ಕೂಲಿ ಕಾರ್ಮಿಕನ ಮನೆ ಮುಂದೆ ನಿಂತಿತು. ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಮಂಚದಡಿಯಲ್ಲಿ ಒಂದೆರಡು ಕೆ.ಜಿ ಜಿಂಕೆ ಮಾಂಸ ಸಿಕ್ಕಿತು. ಅಲ್ಲಿಂದ ಪಕ್ಕದ ರಂಜಿ ಎನ್ನುವವನ ಮನೆಯ ಹಿತ್ತಲ ಪೊದೆಯಲ್ಲಿ ಹುಲಿಯ ಪಂಜ ಸಿಕ್ಕಿತು. ಶಶಿ ಮತ್ತು ಶರಣ ಎನ್ನವವರ ಮನೆಯಲ್ಲಿ ಕಾಡುತೂಸು ಹಾಗೂ ಉಗುರು ಪತ್ತೆಯಾಯಿತು. ಸಂತೋಷ್‌ನನ್ನು ಸಿಬ್ಬಂದಿ ಬಂಧಿಸಿದರೆ ಉಳಿದವರು ನಾಪತ್ತೆಯಾಗಿದ್ದಾರೆ.

ಅಖಾಡಕ್ಕೆ ಇಳಿದ ಗಂಟೆಗಳಲ್ಲೇ ಆರೋಪಿಗಳನ್ನು ಹಿಡಿದ ರಾಣಾನನ್ನು ವಯಸ್ಸಿನ ಕಾರಣ ನೀಡಿ ನಿವೃತ್ತಿ ಮಾಡಬೇಕು ಎನ್ನುವ ಪ್ರಸ್ತಾವ ಅರಣ್ಯ ಪಡೆಯ ಮುಖ್ಯಸ್ಥರ ಮುಂದಿದೆ. ‘ರಾಣಾನಿಗೆ ಇದೀಗ ಏಳು ವರ್ಷ ಮಾತ್ರ. ಇಂತಹ ನಾಯಿಗಳಿಗೆ ಹತ್ತು ವರ್ಷ ಕೆಲಸ ಮಾಡುವ ಶಕ್ತಿಯಿರುತ್ತದೆ’ ಎನ್ನುತ್ತಾರೆ ವಿಶೇಷ ಹುಲಿ ಸಂರಕ್ಷಣಾ ಪಡೆಯ ಎಸಿಎಫ್ ‌ರವಿಕುಮಾರ್‌. ‘ಅನಾರೋಗ್ಯದಿಂದ ರಾಣಾ ಬಳಲಿದೆ. ಇನ್ನೊಂದು ನಾಯಿ ಬರುವ ತನಕ ರಾಣಾನನ್ನು ನಿವೃತ್ತಿ ಮಾಡುವುದಿಲ್ಲ. ಮತ್ತೊಂದು ನಾಯಿ ಬಂದು ರಾಣಾ ನಿವೃತ್ತಿಯಾದರೂ ಸಿಬ್ಬಂದಿ ಜೊತೆಯಲ್ಲಿ ಇರುತ್ತಾನೆ’ ಎಂದು ಅವರು ಹೇಳಿದ್ದಾರೆ.

ರಾಣಾನಿಗೆಎರಡೂವರೆ ವರ್ಷವಿದ್ದಾಗ ಭೋಪಾಲ್‌ನ ವಿಶೇಷ ಸಶಸ್ತ್ರ ಮೀಸಲು ಪಡೆಯಲ್ಲಿ ಅರಣ್ಯ ಅಪರಾಧ ಪತ್ತೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿತ್ತು. ಹುಲಿ ಮತ್ತು ಚಿರತೆ ಮೂಳೆ ಪತ್ತೆ, ಜಿಂಕೆ ಮಾಂಸ ಪತ್ತೆ, ಹಾವು, ಜೀವಂತ ಪಕ್ಷಿಗಳನ್ನು ಪ್ಯಾಕ್‌ ಮಾಡಿದ್ದರೂ ವಾಸನೆಯಿಂದಲೇ ಪತ್ತೆ ಮಾಡಲು ಶಕ್ತ.

ಬಂಡೀಪುರದಲ್ಲಿ ಸಂದರ್ಶಕರಿಗೆ ಪದೇ ಪದೇ ಕಾಣಿಸಿಕೊಂಡು ಖ್ಯಾತನಾಗಿದ್ದ ‘ಪ್ರಿನ್ಸ್‌’ ಎಂಬ ಹೆಸರಿನಲ್ಲಿ ಗುರುತಿಸಲಾಗುತ್ತಿದ್ದ ಹುಲಿ ಹತ್ಯೆ ಪ್ರಕರಣದ ಆರೋಪಿಗಳನ್ನು ರಾಣಾನೇ ಕಂಡು ಹಿಡಿದಿದ್ದ. ತಮಿಳುನಾಡಿನ ಗುಡಲೂರಿನ ತೋಟದಲ್ಲಿ ಸೇರಿಕೊಂಡಿದ್ದ ನರಹಂತಕ ಹುಲಿಯನ್ನು ಪತ್ತೆ ಮಾಡಿದ್ದು ಸಹ ಈತನೇ. ಸುಮಾರು 22 ಪ್ರಕರಣಗಳಲ್ಲಿ ಕೆಲಸ ಮಾಡಿದ್ದಾನೆ.

ರಾಣಾನನ್ನು ನೋಡಿಕೊಳ್ಳುತ್ತಿದ್ದ, ರಾಣಾನಿಗೆ ಸ್ನೇಹಿತನಂತಿದ್ದ ಗಾರ್ಡ್‌ ಪ್ರಕಾಶ್‌ ಅವರನ್ನುಎರಡು ವರ್ಷದ ಹಿಂದೆ ದಾಂಡೇಲಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ರಾಣಾ ಮಂಕಾದ. ನಂತರ ಶ್ವಾನ ನಿಯಂತ್ರಕನಾದ ಕಾಳ ಕಾಳ್ಕರ್‌ ಹಾಗೂ ಸಹಾಯಕ ನಾಗೇಂದ್ರನ ಜೊತೆ ಇತ್ತೀಚೆಗೆ ಹೊಂದಿಕೊಂಡಿದ್ದಾನೆ. ಪ್ರಕಾಶ್‌ ವರ್ಗಾವಣೆ ನಂತರ ಪತ್ತೆ ಪ್ರಕರಣದಲ್ಲಿ ಹಿಂದೆ ಬಿದ್ದದ್ದ ರಾಣಾ, ನಾಗರಹೊಳೆ ಹುಲಿ ಹತ್ಯೆ ಪ್ರಕರಣದ ನಂತರ ಮತ್ತೆ ಹಿಂದಿನ ಟ್ರ್ಯಾಕ್‌ಗೆ ಮರಳಿದ್ದಾನೆ. ಆದರೂ ನಿವೃತ್ತಿ ಕಡತ ಅರಣ್ಯ ಪಡೆ ಮುಖ್ಯಸ್ಥರ ಮುಂದಿದೆ. ಇದರ ಜತೆಯಲ್ಲಿ ಖಾಲಿಯಿರುವ ಮತ್ತೊಂದು ಶ್ವಾನದ ಹುದ್ದೆ ಭರ್ತಿಗೆ ಇಲಾಖೆ ಗಮನ ಹರಿಸಬೇಕು.

ರಾಣಾ ಭೇದಿಸಿದ ಪ್ರಮುಖ ಪ್ರಕರಣಗಳು

9.8.16- ಸಾಗವಾನಿ ಮರ ಕಳ್ಳಸಾಗಾಣೆ ಪತ್ತೆ

21.03.2016 - ತಮಿಳುನಾಡಿನ ಗುಡಲೂರು ಬಳಿ ನರಹಂತಕ ಹುಲಿ ಪತ್ತೆಗೆ ಸಹಕಾರ

04.07.2016 - ಓಂಕಾರ ವಲಯದಲ್ಲಿ ವಿಷಪ್ರಾಷನದಿಂದ ಸತ್ತಿದ್ದ ಎರಡು ಚಿರತೆ ಹತ್ಯೆ ಪ್ರಕರಣ ಭೇದಿಸಲು ಸಹಕಾರ

14.03.2017- ಶ್ರೀರಂಗಪಟ್ಟಣದಲ್ಲಿ ಶ್ರೀಗಂಧದ ಮರಗಳ್ಳತನ ಪತ್ತೆಗೆ ಸಹಕಾರ

20.04.2017- ಖ್ಯಾತ ಹುಲಿ ಪ್ರಿನ್ಸ್‌ ಸಾವಿಗೆ ಕಾರಣರಾದವರ ಪತ್ತೆ

07.07.2018 - ಡಿ.ಬಿ ಕುಪ್ಪೆ ವಲಯದಲ್ಲಿ ಜಿಂಕೆ ಹತ್ಯೆ ಮಾಡಿದವರ ಪತ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT