ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಚೀತಾ ಮತ್ತೆ ಕಾಣಿಸುವುದೆ?

Last Updated 10 ಮೇ 2020, 1:44 IST
ಅಕ್ಷರ ಗಾತ್ರ
ADVERTISEMENT
""
""

ಮಾಂಸಾಹಾರಿ ಪ್ರಾಣಿಗಳನ್ನು ಮೂಲ ನೆಲೆಯಿಂದ ಬೇರೊಂದು ಅರಣ್ಯಕ್ಕೆ ಬಿಟ್ಟು ಪೋಷಿಸಿ ಯಶಸ್ವಿಯಾದ ನಿದರ್ಶನಗಳಿಲ್ಲ. ಅಂತಹ ಆಲೋಚನೆಗಳು ಭಾರತದ ಅರಣ್ಯದ ಮಟ್ಟಿಗೆ ಸಾಧ್ಯವೂ ಇಲ್ಲ. ಆಫ್ರಿಕಾದಿಂದ ಚೀತಾ ತಂದು ಇಲ್ಲಿನ ಕಾಡುಗಳಲ್ಲಿ ಆವಾಸ ಕಲ್ಪಿಸುವ ಕೇಂದ್ರ ಸರ್ಕಾರದ ಪ್ರಯೋಗಾರ್ಥ ಪ್ರಯತ್ನ ಫಲ ನೀಡುವುದೇ?

‘ಅಸಿನೋನಿಕ್ಸ್‌ ಜುಬಾಟಸ್’ ಅಂದರೆ ಯಾರಿಗೂ ಗೊತ್ತಾಗಲ್ಲ; ಇದು ಚೀತಾದ ವೈಜ್ಞಾನಿಕ ಹೆಸರು. ಇದರ ಹೆಗ್ಗಳಿಕೆ ಇರುವುದೇ ಅದರ ವೇಗದ ಓಟದಲ್ಲಿ. ಗಂಟೆಗೆ 110ರಿಂದ 120 ಕಿ.ಮೀ. ವೇಗದಲ್ಲಿ ಓಡಬಲ್ಲ ಇದು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಓಡುವ ಪ್ರಾಣಿ. ನಮ್ಮಲ್ಲಿ ಬಹಳ ಜನ ‘ಚಿರತೆಯಷ್ಟು ವೇಗವಾಗಿ ಓಡುವ ಪ್ರಾಣಿಯಿಲ್ಲ’ ಎಂದು ಹೇಳುವುದುಂಟು. ಚೀತಾ ಅಂದರೆ ಚಿರತೆಯಲ್ಲ; ಅದು ಬೇರೆಯೇ.

ಆದರೆ ಇಲ್ಲೊಂದು ವಿಶೇಷವಿದೆ. ಚೀತಾಗಳು ಈ ವೇಗದಲ್ಲಿ ಹೆಚ್ಚು ದೂರ ಕ್ರಮಿಸಲು ಆಗುವುದಿಲ್ಲ. ಸ್ವಲ್ಪ ದೂರ ಓಡಿದ ಬಳಿಕ ಅರ್ಧಗಂಟೆಯ ವಿಶ್ರಾಂತಿ ಬೇಕು. ಜೊತೆಗೆ ಸ್ವಲ್ಪ ಆಹಾರ ಸೇವಿಸಿಯೇ ಮತ್ತೆ ಓಡಬೇಕು. ಇದರ ಉದ್ದವಾದ ಕಾಲುಗಳು ಮತ್ತು ದೇಹಾಕೃತಿ ವೇಗದ ಓಟಕ್ಕೆ ಮತ್ತು ತಿರುವುಗಳಲ್ಲೂ ವೇಗ ಉಳಿಸಿಕೊಳ್ಳಲು ಸಹಕಾರಿಯಾಗಿವೆ.

ಚೀತಾ ಎಂಬ ಹೆಸರು ಸಂಸ್ಕೃತದ ‘ಚಿತ್ರಕ’ದಿಂದ ಬಂದಿದೆ. ಚೀತಾ ಎಂದರೆ ಕಪ್ಪು ಎಂದರ್ಥ. ಇವುಗಳ ಕಣ್ಣುಗಳು ಬಲುಚುರುಕು. ಬೇಟೆಯಾಡಿದ ಪ್ರಾಣಿಯನ್ನು ಅರ್ಧಗಂಟೆ ಸುಧಾರಿಸಿದ ಬಳಿಕ ತಿನ್ನಲು ಶುರು ಮಾಡುತ್ತವೆ. ಉಳಿದ ಮಾಂಸವನ್ನು ಮರಗಳ ಮಧ್ಯೆ ಮರೆಮಾಡಿ ಅಥವಾ ನೆಲದಲ್ಲಿ ಹೂತಿಟ್ಟು, ಬಳಿಕ ಹಸಿವಾದಾಗ ತಿನ್ನುವುದು ಇವುಗಳ ವಿಶೇಷ.

ಚೀತಾಗಳ ಜೀವಿತಾವಧಿ 10ರಿಂದ 13 ವರ್ಷಗಳು. ಭಾರತದ ಕಾಡುಗಳಲ್ಲಿ ಕೊನೆಯ ಚೀತಾ ಕಾಣಿಸಿಕೊಂಡಿದ್ದು 1951ರಲ್ಲಿ. ಕೊರಿಯಾ (ಈಗಿನ ಛತ್ತೀಸಗಡ) ಜಿಲ್ಲೆಯಲ್ಲಿ ಒಂದು ಹೆಣ್ಣು ಚೀತಾ ಕಾಣಿಸಿದ್ದೇ ಕೊನೆಯ ಸುದ್ದಿ. ಅಲ್ಲಿಂದೀಚೆಗೆ ಭಾರತದಲ್ಲಿ ಅವುಗಳು ಕಾಣಿಸಿಕೊಂಡಿಲ್ಲ.

ಭಾರತದಲ್ಲಿದ್ದ ಚೀತಾಗಳದ್ದು ಏಷಿಯಾಟಿಕ್ ಪ್ರಭೇದ. ಒಂದು ಕಾಲದಲ್ಲಿ ಇವು ಯಥೇಚ್ಛವಾಗಿ ನೋಡಲು ಸಿಗುತ್ತಿದ್ದವು. ದಕ್ಷಿಣದ ತಿರುನಲ್ವೇಲಿಯಿಂದ ಕರ್ನಾಟಕದ ಕಾಡುಗಳವರೆಗೂ ಓಡಾಡುತ್ತಿದ್ದವು. ಏಷಿಯಾಟಿಕ್‌ ಚೀತಾವನ್ನು ಹಂಟಿಂಗ್‌ ಚೀತಾ/ ಹಂಟಿಂಗ್‌ ಲೆಪರ್ಡ್‌ ಎಂದು ಕರೆಯಲಾಗುತ್ತಿತ್ತು. ಮೊಘಲ್‌ ದೊರೆಗಳು ಕೃಷ್ಣಮೃಗಗಳ ಬೇಟೆಗೆ ಇವುಗಳನ್ನು ಬಳಸುತ್ತಿದ್ದರು. ಮೊಘಲ್‌ ಚಕ್ರವರ್ತಿ ಅಕ್ಬರ್‌ ಬೇಟೆಯಲ್ಲಿ ನೆರವಾಗಲು 1,000ಕ್ಕೂ ಅಧಿಕ ಚೀತಾಗಳನ್ನು ಬಳಸುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖಗಳಿವೆ.

ಭಾರತದಲ್ಲಿ ಶ್ರೀಮಂತರು ಮತ್ತು ರಾಜಮನೆತನದವರು ಸಾಕಲು ಶುರು ಮಾಡಿದ್ದರಿಂದಾಗಿ, 20ನೇ ಶತಮಾನದ ಮೊದಲಾರ್ಧದಲ್ಲಿ ಇವುಗಳ ಸಂತತಿ ನಾಶವಾಗುತ್ತಾ ಬಂತು.ಕೊನೆಯದಾಗಿ ಉಳಿದಿದ್ದ ಮೂರು ಗಂಡು ಏಷಿಯಾಟಿಕ್ ಚೀತಾಗಳನ್ನು ಸೆನುನಾ ರಾಜ್ಯದ ಮಹಾರಾಜನಾಗಿದ್ದ (ಉತ್ತರ ಛತ್ತೀಸಗಡ) ರಾಮಾನುಜ್ ಪ್ರತಾಪ್ ಸಿಂಗ್ ದಿಯೋ 1947ರಲ್ಲಿ ಹೊಡೆದುರುಳಿಸಿದ ಎಂಬುದು ದಾಖಲೆಗಳಲ್ಲಿದೆ. ಹುಲ್ಲುಗಾವಲುಗಳ ನಾಶದ ಪರಿಣಾಮ ಉಳಿದಿದ್ದ ಚೀತಾಗಳ ಅವಸಾನಕ್ಕೆ ಕಾರಣವಾಯಿತು.

ಹುಲಿ, ಸಿಂಹ, ಚಿರತೆ, ಚೀತಾ, ಕಾಡುಬೆಕ್ಕುಫಿಲಿಡೀ ಕುಟುಂಬಕ್ಕೆ ಸೇರಿವೆ. ಇವು 70 ಮಿಲಿಯನ್ ವರ್ಷಗಳ ಹಿಂದೆ ಏಷಿಯಾ ಖಂಡದಲ್ಲಿ ಜನ್ಮ ತಾಳಿದವು. ಕಾಲಾಂತರದಲ್ಲಿ ಕೆಲವು ನಡುಗಡ್ಡೆಗಳನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಯೂ ಕಂಡುಬಂದವು. ವಿಶ್ವದಾದ್ಯಂತ 37 ಪ್ರಭೇದದ ಬೆಕ್ಕುಗಳಿವೆ. ಇವುಗಳಲ್ಲಿ ಭಾರತದಲ್ಲಿ 15 ಪ್ರಭೇದದ ಬೆಕ್ಕುಗಳು ಕಾಣಸಿಗುತ್ತವೆ. ಏಷಿಯಾಟಿಕ್‌ ಚೀತಾಗಳ ಪ್ರಭೇದ ಕೊನೆಯುಸಿರೆಳೆದಿದೆ ಎಂದು ಅಧಿಕೃತವಾಗಿಯೇ ಘೋಷಿಸಲಾಗಿದೆ. ಐದು ಪ್ರಭೇದಗಳಲ್ಲಿಅಲಿನೋಯಿಸ್ ಜುಬಾಟಸ್ ರಾಯ್ ನೇಯಿಲ್, ದಕ್ಷಿಣ ಆಫ್ರಿಕಾದ ಚೀತಾ, ಉತ್ತರ ಆಫ್ರಿಕಾದ ಚೀತಾ ಮತ್ತು ಅಲಿನೋಯಿಸ್ ಜುಬಾಟಸ್ ಸೋಯಮೇರಿ ಪ್ರಭೇದ ಮಾತ್ರ ಉಳಿದುಕೊಂಡಿವೆ. ಆಗ್ನೇಯ ಏಷಿಯಾದಿಂದ ಹಿಡಿದು ಉತ್ತರ ಮತ್ತು ಮಧ್ಯೆ ಭಾರತದ ವಿವಿಧ ಕಾಡುಗಳಲ್ಲಿ ಇದ್ದ ಏಷಿಯಾಟಿಕ್‌ ಚೀತಾಗಳು ಈಗ ನೆನಪು ಮಾತ್ರ.

ಬೇರೆ ಪ್ರಭೇದದ ಚೀತಾಗಳೂ ಅಳಿವಿನಂಚಿಗೆ ಸಾಗಿವೆ.ಅನುವಂಶೀಯತೆಯಲ್ಲಿ ವಿವಿಧತೆ ಇಲ್ಲದಿರುವುದು ಒಂದು ಸಮಸ್ಯೆ. ತಮ್ಮ ಪ್ರಕೃತಿದತ್ತವಾದ ಸ್ವಜಾತೀಯ (ಫಿಸಿಕಲ್ ಹೋಮೊಜಿನಿಟಿ) ಗುಣಗಳನ್ನು ಹೊಂದದಿರುವುದು, ಕೆಲವು ಅಂಟುಜಾಢ್ಯಗಳಿಗೆ ತುತ್ತಾಗುವುದು, ಕಡಿಮೆ ಸತ್ವವುಳ್ಳ ವೀರ್ಯಾಣುಗಳಿಂದಾಗಿ ಹಾಗೂ ಕೊಂಕಿದ ಬಾಲದ ಕಾರಣದಿಂದಾಗಿ ಚೀತಾಗಳ ಸಂತತಿ ಕ್ಷೀಣಿಸುತ್ತಿದೆ. ಚೀತಾಗಳು ಬೇರೆ ಪ್ರಾಣಿಗಳಂತೆ ಬೇರೆ ಪರಿಸರಕ್ಕೆ ಒಗ್ಗಿಕೊಳ್ಳುವುದಿಲ್ಲ. ಇದರಿಂದ ಇದರ ಸ್ಥಳಾಂತರ ಕಷ್ಟ. ಈ ಸಮಸ್ಯೆಯಿಂದ ಮಾನವನ ಸಂಘರ್ಷಕ್ಕೆ ಗುರಿಯಾಗಿ ಬಹಳಷ್ಟು ಪ್ರದೇಶಗಳಲ್ಲಿ ಚೀತಾಗಳ ಉಳಿವು ಕಷ್ಟವಾಗಿದೆ. ಚೀತಾಗಳನ್ನು ಐಯುಸಿಎನ್ ಕೆಂಪುಪಟ್ಟಿಗೆ ಸೇರಿಸಿದೆ.

ಚೀತಾಗಳ ಸಂಖ್ಯೆ ಎಷ್ಟು?
ಆಫ್ರಿಕಾದ ಸಬ್-ಸಹಾರ ಪ್ರದೇಶ, ಹುಲ್ಲುಗಾವಲು ಮತ್ತು ತೆರೆದ ಕಾಡುಗಳಲ್ಲಿ9000ರಿಂದ 12000 ಚೀತಾಗಳು ವಾಸಿಸುತ್ತಿವೆ. ವಾಯುವ್ಯ ಇರಾನ್‍ನಲ್ಲಿ 60ರಿಂದ 90 ಚೀತಾಗಳು ವಾಸಿಸುತ್ತವೆ. ಇರಾನ್‍ನಲ್ಲಿರುವುದು ಏಷಿಯಾಟಿಕ್ ಚೀತಾಗಳ ತಳಿ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಚೀತಾಗಳು ಮಾಂಸಾಹಾರಿಗಳು. ಆಫ್ರಿಕಾದ ಸಮತಟ್ಟಿನ ಹುಲ್ಲುಗಾವಲಿನಲ್ಲಿ ಮೊಲ, ಹಂದಿ, ಹಕ್ಕಿಗಳನ್ನು ಹಿಡಿದು ತಿನ್ನುತ್ತವೆ. ಕೆಲವೊಮ್ಮೆ ಗುಂಪಿನಲ್ಲಿದ್ದಾಗ ವೈಲ್ಡ್‌ಬೀಸ್ಟ್‌ನಂತಹ ಪ್ರಾಣಿಗಳನ್ನು ಬೇಟೆಯಾಡುತ್ತವೆ.

ಇವು ಸಾಧಾರಣವಾಗಿ ಬೇಟೆಯಾಡುವುದು ಬೆಳಕಿನಲ್ಲಿ. ತಮ್ಮ ಸಾವಿಗೆ ಕಾರಣವಾಗುವ ಸಿಂಹ, ಚಿರತೆ, ಕತ್ತೆಕಿರುಬಗಳಿಂದ ದೂರವಿರಲು ಗುಂಪಿನಲ್ಲಿರುತ್ತವೆ. ಈ ಗುಂಪು ತಾಯಿ ಹಾಗೂ ಮರಿಗಳನ್ನು ಒಳಗೊಂಡಿರುತ್ತದೆ. ಅಥವಾ ಗಂಡು ಚೀತಾಗಳು ಇವುಗಳ ಜೊತೆಯಲ್ಲಿರುತ್ತವೆ. ಜೊತೆಯಾಗಿಯೇ ಬೇಟೆಯಾಡುತ್ತವೆ. ಬೆದೆಗೆ ಬಂದಾಗ ಗಂಡು ಚೀತಾ ಕೂಡಲು ಹೆಣ್ಣುಗಳ ಗುಂಪು ಸೇರುತ್ತದೆ.

ಏಷಿಯಾಟಿಕ್ ಚೀತಾ ಮತ್ತು ಆಫ್ರಿಕಾದ ಚೀತಾಗಳು ಒಂದೇ ತಳಿ ಎಂದು ಕೆಲವು ವಿಜ್ಞಾನಿಗಳ ಅಭಿಪ್ರಾಯ. ಮತ್ತೆ ಕೆಲವರು ಆಫ್ರಿಕಾದ ತಳಿಯೇ ಬೇರೆ ಎಂದು ವಾದಿಸುತ್ತಾರೆ.

ಭಾರತದಲ್ಲಿ ಚೀತಾ ಅವಸಾನಗೊಂಡು ಹಲವು ದಶಕಗಳೇ ಉರುಳಿವೆ. ಇಲ್ಲಿನ ಕಾಡುಗಳಲ್ಲಿ ಮತ್ತೆ ಅವುಗಳಿಗೆ ಆವಾಸ ಕಲ್ಪಿಸಲು ಸಾಧ್ಯವೇ? ಎಂಬುದು ಹಲವು ವನ್ಯಜೀವಿ ಪ್ರಿಯರ ಪ್ರಶ್ನೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಸತತ ಪ್ರಯತ್ನ ನಡೆಸುತ್ತಲೇ ಇತ್ತು. ಭಾರತದಲ್ಲಿಆಫ್ರಿಕಾದ ಚೀತಾ ತಳಿಯನ್ನು ಪ್ರಯೋಗಿಸಿದರೆ ಬೇರೆ ಪ್ರಾಣಿಸಂಕುಲಕ್ಕೆ ಹಾನಿಯಾಗುತ್ತದೆ ಎಂಬುದು ಕೆಲವರ ವಾದ. ಈ ವಾದ– ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಹತ್ತಿತ್ತು.‌

ಆದರೆ, ಕಳೆದ ಜನವರಿಯಲ್ಲಿ ಆಫ್ರಿಕಾದ ನಮೀಬಿಯಾದಿಂದ ಚೀತಾಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಅವುಗಳಿಗೆ ಸೂಕ್ತವಾದ ಆವಾಸಸ್ಥಾನ ಕಲ್ಪಿಸಲು ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ನೀಡಿದೆ. ಆದರೆ, ಇದೊಂದು ಪ್ರಯೋಗಾರ್ಥ ಪ್ರಯತ್ನ. ಇದರ ಪರಿಶೀಲನೆಗಾಗಿ ಸಮಿತಿ ರಚಿಸಬೇಕು. ಇದರ ಸಾಧಕ– ಬಾಧಕವನ್ನು ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ಸಮಿತಿಯು
4 ತಿಂಗಳಿಗೊಮ್ಮೆ ವರದಿ ನೀಡುವಂತೆ ಆದೇಶಿಸಿದೆ.

ಎಲ್ಲೆಲ್ಲಿ ಮರುಸ್ಥಾಪ‍ನೆ
ಕಣ್ಮರೆ ಆಗಿರುವ ಏಷ್ಯಾಟಿಕ್‌ ಚೀತಾಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ದೇಶದ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಮಧ್ಯಪ್ರದೇಶದ ದಿ ನೌರಾಡ್ಚಿ ವೈಲ್ಡ್‌ಲೈಫ್ ಸ್ಯಾಂಕ್ಚುರಿ, ಕುನೋ -ಪಾಲ್‍ಪುರ್ ಸ್ಯಾಂಕ್ಚುರಿ, ಷಾಹಗರ್ ಬಲ್ಜಿ ಲ್ಯಾಂಡ್ ಸ್ಕೇಪ್, ರಾಜಸ್ಥಾನದ ಜೆಸೆಲ್ಮೇರ್‌ ಪ್ರದೇಶ ಸಂಭಾವ್ಯ ಸ್ಥಳಗಳಾಗಿವೆ. ಕೂನೋ -ಪಾಲ್‍ಪುರ್ ಎಲ್ಲಾ 4 ದೊಡ್ಡ ಬೆಕ್ಕುಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಹೇಳಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರವನ್ನೂ ಚೀತಾ ಮರುಸ್ಥಾಪನೆಗಾಗಿ ಗಣನೆಗೆ ತೆಗೆದುಕೊಳ್ಳಲು ತಿಳಿಸಿದೆ. ಏಷಿಯಾಟಿಕ್ ಚೀತಾಗಳ ಅಳಿವಿನ ಮುಂಚೆ ಈ ಪ್ರದೇಶಗಳಲ್ಲಿ ಜೊತೆಯಾಗಿ ವಾಸಿಸುತ್ತಿದ್ದವು ಎಂದು ಹೇಳಿದೆ.

ಮೊದಲಿಗೆ ಗಾಜನ್‍ರ್ ವೈಲ್ಡ್‌ಲೈಫ್ ಸ್ಯಾಂಕ್ಚುರಿಯಲ್ಲಿ ತಳಿ ಅಭಿವೃದ್ಧಿಪಡಿಸಿ ನಂತರ ಅವುಗಳನ್ನು ಇತರೆ ಪ್ರದೇಶಗಳಿಗೆ ಕಳುಹಿಸುವ ಪ್ರಯತ್ನ ನಡೆದಿದೆ. ಇಲ್ಲಿ ತಳಿ ವೃದ್ಧಿಯಾದಂತೆ ಇತರೆ ಪ್ರದೇಶಗಳನ್ನು ಪರಿಗಣಿಸಬಹುದಾಗಿದೆ.

ಸುಪ್ರೀಂ ಕೋರ್ಟ್‌ನ ಆದೇಶ ವನ್ಯಜೀವಿ ಪ್ರಿಯರಲ್ಲಿ ಆನಂದ ತಂದಿರುವುದು ನಿಜ. ಆದರೆ, ಆಫ್ರಿಕಾದಿಂದ ತರುವ ಚೀತಾಗಳು ಇಲ್ಲಿನ ಅರಣ್ಯದಲ್ಲಿ ಸಂರಕ್ಷಣೆಯಾಗುತ್ತವೆಯೇ ಎಂಬ ಪ್ರಶ್ನೆ ಎದುರಾಗುವುದು ಸಹಜ.

ಮಾಂಸಾಹಾರಿ ಪ್ರಾಣಿಗಳನ್ನು ಬೇರೊಂದು ಅರಣ್ಯಕ್ಕೆ ಬಿಟ್ಟು ಪೋಷಿಸಿ ಯಶಸ್ವಿಯಾದ ನಿದರ್ಶನಗಳಿಲ್ಲ. ಅಂತಹ ಆಲೋಚನೆಗಳು ಭಾರತದ ಅರಣ್ಯದ ಮಟ್ಟಿಗೆ ಸಾಧ್ಯವೂ ಇಲ್ಲ. ಯಾವುದೇ ಜೀವಿಯೊಂದು ಅದರ ಮೂಲ ನೆಲೆಯಿಂದ ಬೇರ್ಪಟ್ಟರೆ ಅದು ಅವನತಿಯ ಹಾದಿ ಹಿಡಿಯಿತು ಎಂದರ್ಥ. ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪೆನ್ನಾ ಹುಲಿ ರಕ್ಷಿತಾರಣ್ಯದಲ್ಲಿ ಕಳ್ಳಬೇಟೆಯಿಂದ ಹುಲಿಗಳು ಕಣ್ಮರೆ ಪ್ರಕರಣವೇ ಇದಕ್ಕೆ ಉದಾಹರಣೆ. ಚೀತಾ ಕೂಡ ಇದರಿಂದ ಹೊರತಲ್ಲ ಎಂಬುದು ಕೆಲವು ವನ್ಯಜೀವಿ ತಜ್ಞರ
ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT