ಮಂಗಳವಾರ, ಜನವರಿ 18, 2022
15 °C
ಹೊನ್ನಕಿರಣಗಿ ಗ್ರಾಮದಲ್ಲಿ ಫ್ಲೋರೈಡ್‌ಯುಕ್ತ ನೀರು

ಒಳನೋಟ| ಹೊನ್ನಕಿರಣಗಿಯಲ್ಲಿ ಫ್ಲೋರೈಡ್‌ ನೀರು: ಮಕ್ಕಳಲ್ಲಿ ಅಂಗ ಊನ, ಅಕಾಲ ಮುಪ್ಪು

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ ಕಾವ್ಯಾಗೆ (ಹೆಸರು ಬದಲಿಸಲಾಗಿದೆ) ಈಗ 17 ವರ್ಷ. ಪ್ರಥಮ ಪಿಯು ವಿದ್ಯಾರ್ಥಿನಿಯಾದ ಅವರು ನಡೆದು ಕಾಲೇಜು ತಲುಪುವಷ್ಟರಲ್ಲಿ ಸುಸ್ತಾಗುತ್ತಾರೆ. ಕುಡಿಯುವ ನೀರಿನಲ್ಲಿನ ಫ್ಲೋರೈಡ್‌ ಅಂಶ ಅವರ ಕಾಲುಗಳ ಸಾಮರ್ಥ್ಯವನ್ನು ಕಸಿದುಕೊಂಡಿದೆ.

ಕಾವ್ಯಾ ಅಷ್ಟೇ ಅಲ್ಲ; ಶಾಲಾ–ಕಾಲೇಜಿಗೆ ಹೋಗುವ ಈ ಊರಿನ ಶೇ 60ರಷ್ಟು ಮಕ್ಕಳು ದೈಹಿಕವಾಗಿ ಸದೃಢವಾಗಿಲ್ಲ. ಕೆಲವರ ಕಾಲುಗಳು ವಕ್ರವಾಗಿದ್ದರೆ, ಕೆಲವರ ಹಲ್ಲು ಹಳದಿಯಾಗಿವೆ. ಕಾಲುಗಳ ಚೈತನ್ಯ ಕಡಿಮೆಯಾಗಿದ್ದರಿಂದ ಇಲ್ಲಿನ ಮಕ್ಕಳು ಆಟೋಟಗಳಲ್ಲೂ ಸಾಧನೆ ಮಾಡಲು ಆಗಿಲ್ಲ.

ಲವಲವಿಕೆಯಿಂದ ಇರಬೇಕಿದ್ದ ಮಕ್ಕಳು ಮತ್ತು ಯುವಜನರ ಕಥೆ ಹೀಗಿದ್ದರೆ, ಮಧ್ಯವಯಸ್ಕರು, ಹಿರಿಯರ ಸ್ಥಿತಿ ಇನ್ನೂ ಗಂಭೀರ. ಹೊನ್ನಕಿರಣಗಿಯಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಶೇ 50ರಷ್ಟು ಮಂದಿ ಒಂದಿಲ್ಲೊಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. 35 ವರ್ಷ ಮೀರುವ ಮುನ್ನವೇ ಹಲವರು ಕಿಡ್ನಿ ಸ್ಟೋನ್‌ಗಳಿಂದ (ಮೂತ್ರಪಿಂಡದಲ್ಲಿ ಹರಳು) ಬಳಲುತ್ತಿದ್ದಾರೆ. ಗರ್ಭಿಣಿ– ಬಾಣಂತಿಯರಿಗೆ ರಕ್ತಹೀನತೆ ಕಾಡುತ್ತಿದೆ. 50 ವರ್ಷ ಆಸುಪಾಸಿನವರಿಗೆ ಕತ್ತುನೋವು ಇದೆ. ಬೆನ್ನು ಬಾಗಿದೆ, ಕೀಲು ಸವೆದಿದೆ. ಅಕಾಲ ಮುಪ್ಪು ಆವರಿಸಿದೆ.

‘ನನಗೀಗ 39 ವರ್ಷ. ತಾಸಗಟ್ಟಲೇ ಒಂದೇ ಜಾಗದಲ್ಲಿ ಕುಂತ್ರ ಬೆನ್ನು ನೋಯ್ತದ. ಮೈಲಿ ದೂರ ಹೋದ್ರೂ ತ್ರಾಸ್‌ ಆಲಾತದ. ಬೈಕ್‌ ಮ್ಯಾಲ್‌ ಹೋದರಂತೂ ಬೆನ್ನು ಚಳಕ್‌ ಅಂತದ. ಒಬ್ಬರೂ ನೆಟ್ಟಪುಟ್ಟ ಇಲ್ಲರಿ ನಮ್ಮೂರಾಗ...’ ಎಂದು ನೋವು ತೋಡಿಕೊಂಡರು ಸಿದ್ದರಾಮಪ್ಪ ಪೊಲೀಸ್‌ ಪಾಟೀಲ.

ಫ್ಲೊರೈಡ್‌ ಪ್ರಮಾಣವನ್ನು ಪಿಪಿಎಂ (ಪಾರ್ಟ್ಸ್‌ ಪರ್‌ ಮಿಲಿಲೀಟರ್‌)ನಲ್ಲಿ ಅಳೆಯುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಒಂದು ಮಿಲಿಲೀಟರ್‌ ನೀರಿಗೆ 0.5 ಪಿಪಿಎಂನಷ್ಟು ಫ್ಲೋರೈಡ್‌ ಇದ್ದರೆ ಸುರಕ್ಷಿತವೆಂದು ಮಾನದಂಡವನ್ನು ನಿಗದಿಪಡಿಸಲಾಗಿದೆ. ಬ್ಯುರೊ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ (ಬಿಐಎಸ್‌) ಇದನ್ನು ತುಸು ಪರಿಷ್ಕರಿಸಿದೆ. 0.5ರಿಂದ 1 ಪಿಪಿಎಂವರೆಗೆ ಫ್ಲೋರೈಡ್‌ ಇದ್ದರೆ ಅದು ಕುಡಿಯಲು ಯೋಗ್ಯ ನೀರು, ಇದಕ್ಕಿಂತ ಕಡಿಮೆಯೂ ಮತ್ತು ಹೆಚ್ಚೂ ಇರಬಾರದು ಎಂದು ತಿಳಿಸಿದೆ. ಹೊನ್ನಕಿರಣಗಿಯ ನೀರಿನಲ್ಲಿ ಇದರ ಪ್ರಮಾಣ 2.5 ಪಿಪಿಎಂ ಇದೆ.

ಎಲ್ಲಿರುತ್ತದೆ ಈ ವಿಷ?: ಗಣಿಗಾರಿಕೆ ಪ್ರದೇಶದ ನೀರಿನಲ್ಲಿ ಫ್ಲೋರೈಡ್‌ ಹೆಚ್ಚಾಗಿ ಕಂಡುಬರುತ್ತದೆ. ಹೊನ್ನಕಿರಣಗಿಯೂ ಸೇರಿ ಕಲಬುರಗಿ ಜಿಲ್ಲೆಯ ಬಹುತೇಕ ಗ್ರಾಮಗಳ ಆಳದಲ್ಲಿ ಸುಣ್ಣದಕಲ್ಲು ಯಥೇಚ್ಚವಾಗಿದೆ. ಇಲ್ಲಿನ ಬೋರ್‌ವೆಲ್‌ ನೀರನ್ನು ಕುಡಿಯುವ ಎಲ್ಲರಲ್ಲೂ ಫ್ಲೋರೋಸಿಸ್‌ ಕಂಡುಬರುತ್ತದೆ.

ಅಂಗನವಾಡಿ, ಶಾಲೆಗಳಿಗೆ ಅಕ್ಕಿ, ಬೇಳೆ, ಬೆಲ್ಲ ಕೊಡುತ್ತಾರೆ. ಆದರೆ, ಕುಡಿಯಲು ಶುದ್ಧ ನೀರು ಪೂರೈಸುತ್ತಿಲ್ಲ. ಮಕ್ಕಳಿಗೆ ಪದೇ ಪದೇ ಅನಾರೋಗ್ಯ ಕಾಡುತ್ತದೆ. ಫ್ಲೋರೈಡ್‌ ಮುಕ್ತಿಗಾಗಿ ದಶಕಗಳ ರೋದನ ಯಾರಿಗೂ ಕೇಳಿಸುತ್ತಿಲ್ಲ
- ವಿರೂಪಾಕ್ಷಪ್ಪ ಹಿರಣ್ಯ, ರೈತ, ಹೊನ್ನಕಿರಣಗಿ

ಸ್ಥಿತಿವಂತರು ಫಿಲ್ಟರ್‌ ನೀರು ಖರೀದಿಸಿ ಕುಡಿಯುತ್ತಾರೆ. ಆದರೆ, ಬಡವರಿಗೆ ನೀರು ಸಿಕ್ಕರೆ ಸಾಕಾಗಿದೆ. ಶುದ್ಧ ನೀರು ಮರೀಚಿಕೆಯೇ ಸರಿ. ಅರ್ಧ ಆಯಸ್ಸಿಗೇ ಸತ್ತವರ ಸಂಖ್ಯೆಯೂ ನಮ್ಮೂರಲ್ಲಿ ದೊಡ್ಡದಿದೆ‌
- ಗೊಲ್ಲಾಳಪ್ಪ ಕಾಬಾ, ಯುವಕ, ಹೊನ್ನಕಿರಣಗಿ

ಫ್ಲೋರೈಡ್‌ಯುಕ್ತ ನೀರಿನಿಂದಾದ ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಲೇ ಇದ್ದೇವೆ. ಪದೇ ಪದೇ ಶಿಬಿರ ನಡೆಸಿ ತಪಾಸಣೆ ಮಾಡುತ್ತೇವೆ. ಶುದ್ಧ ನೀರಿನ ಘಟಕದ ಅವಶ್ಯಕತೆ ಎಲ್ಲೆಲ್ಲಿದೆ ಎಂಬ ಬಗ್ಗೆಯೂ ಆಗಾಗ ಮಾಹಿತಿ ನೀಡುತ್ತೇವೆ
- ಡಾ.ರೇಖಾ ಚೌಧರಿ, ಫ್ಲೊರೋಸಿಸ್‌ ವಿಭಾಗದ ಸಲಹೆಗಾರರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಇವುಗಳನ್ನೂ ಓದಿ 

ಒಳನೋಟ| ಬಯಲು ಸೀಮೆಯ ಜೀವಜಲಕ್ಕೆ ನಂಜು

ಒಳನೋಟ| ಮಳೆಯಿಂದ ಹೆಚ್ಚಳವಾದ ಅಂತರ್ಜಲ

ಒಳನೋಟ| ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಿಂದ ಜಾರಿಕೊಳ್ಳುವ ಏಜೆನ್ಸಿ

ಒಳನೋಟ| ಕ್ಯಾನ್ ಮಾಫಿಯಾ ಮನೆ ಮನೆಗೆ ವಿಷಯುಕ್ತ ನೀರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು