ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪವನ ವಿದ್ಯುತ್‌ ಪರಿಸರ ಸ್ನೇಹಿಯೆ?

Published : 30 ಮೇ 2023, 23:44 IST
Last Updated : 30 ಮೇ 2023, 23:44 IST
ಫಾಲೋ ಮಾಡಿ
Comments

ಉದಯ ಶಂಕರ ಪುರಾಣಿಕ

ಪವನಶಕ್ತಿಯನ್ನು ಬಳಸಿ ವಿದ್ಯುತ್‌ ಉತ್ಪಾದನೆ ಮಾಡುವುದು ಪರಿಸರಸ್ನೇಹಿ ಎಂದು ಹೇಳಲಾಗುತ್ತಿದೆ.

ಯುರೋಪ್‌ ಮೂಲದ ಜಾಗತಿಕ ಪವನ ವಿದ್ಯುತ್‌ ಕೌನ್ಸಿಲ್‌ ( ಜಿವ್ಯುಇಸಿ) ಸಂಸ್ಥೆ 2023ರಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ ವಿಶ್ವದಾದಂತ್ಯ 901 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿರುವಷ್ಟು ಘಟಕಗಳು ಸ್ಥಾಪನೆಯಾಗಿವೆ. ೨೦೨೩2023–30ರ ಅವಧಿಯಲ್ಲಿ ವಿಶ್ವದಾದಂತ್ಯ 143ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವಿರುವ ಹೊಸ ಘಟಕಗಳು ಸ್ಥಾಪನೆಯಾಗಲಿವೆ.

ಒಂದು ಸಮೀಕ್ಷೆಯ ಪ್ರಕಾರ ಈಗ ಜಗತ್ತಿನಲ್ಲಿ ಸುಮಾರು ನಾಲ್ಕು ಲಕ್ಷ ಪವನ ವಿದ್ಯುತ್‌ ಉತ್ಪಾದನೆ ಯಂತ್ರಗಳು ಕೆಲಸ ಮಾಡುತ್ತಿವೆ. ಮುಂಬರುವ ವರ್ಷಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಪವನ ವಿದ್ಯುತ್‌ ಉತ್ಪಾದನೆ ಯಂತ್ರಗಳು ಸ್ಥಾಪನೆಯಾಗಲಿವೆ. ಆದರೆ ಈ ಪವನ ವಿದ್ಯುತ್‌ ಉತ್ಪಾದನೆ ಯಂತ್ರಗಳು ಎಷ್ಟು ಪರಿಸರ ಸ್ನೇಹಿಯಾಗಿವೆ ಎಂದು  ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಚೀನಾ, ಇಟಲಿ, ಅಮೆರಿಕ, ಮೆಕ್ಸಿಕೋ ಮೊದಲಾದ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಪವನ ವಿದ್ಯುತ್‌ ಉತ್ಪಾದನೆ ಯಂತ್ರಗಳನ್ನು ಕುರಿತು ಮಾಹಿತಿ ಪಡೆದಿರುವ ವಿಜ್ಞಾನಿಗಳು, ಈ ಯಂತ್ರಗಳನ್ನು ತಯಾರಿಸುವ ವಿಧಾನ ಮತ್ತು ಬಳಸಲಾಗುತ್ತಿರುವ ಕಚ್ಚಾ ವಸ್ತುಗಳನ್ನು ಗಮನಿಸಿದಾಗ, ಈ ಯಂತ್ರಗಳ ತಯಾರಿಕೆ ಹಂತದಲ್ಲಿ ಅತ್ಯಂತ ಹೆಚ್ಚಿನ ಪರಿಸರ ಹಾನಿಯಾಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉದಾಹರಣೆಗೆ, 15 ಕಿಲೋವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿರುವ ಯಂತ್ರವೊಂದನ್ನು ತಯಾರಿಸಲು ಸುಮಾರು 11,468 ಕಿ.ಗ್ರಾಂ. ಉಕ್ಕು, 76 ಕಿ.ಗ್ರಾಂ. ಅಲ್ಯೂಮಿನಿಯಂ, 53 ಕಿ.ಗ್ರಾಂ. ತಾಮ್ರ, 14 ಕಿ.ಗ್ರಾಂ. ಪ್ಲಾಸ್ಟಿಕ್‌, 36 ಕಿ.ಗ್ರಾಂ. ಅಪರೂಪದ ಲೋಹ ಮತ್ತು 2 ಕಿ.ಗ್ರಾಂ.ಯಷ್ಟು ಇತರೆ ವಸ್ತುಗಳು ಬೇಕಾಗುತ್ತದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ. ಯಂತ್ರಗಳನ್ನು ತಯಾರಿಸಲು ಬಳಸಲಾಗುವ ವಸ್ತುಗಳ ಉತ್ಪಾದನೆಯಲ್ಲಿ ಬಳಕೆಯಾಗುವ ವಿದ್ಯುತ್‌ ಮತ್ತು ಇತರೆ ಸಂಪನ್ಮೂಲಗಳು ಹಾಗೂ ಉಂಟಾಗುವ ತ್ಯಾಜ್ಯದಿಂದ ಪರಿಸರದ ಮೇಲಾಗುವ ಪರಿಣಾಮವನ್ನು ಕೂಡ ವಿಜ್ಞಾನಿಗಳು ಪರಿಗಣಿಸಿದ್ದಾರೆ.

ಇನ್ನು ಪವನ ವಿದ್ಯುತ್‌ ಉತ್ಪಾದನೆ ಕೇಂದ್ರದಲ್ಲಿ ಸಾಮಾನ್ಯವಾಗಿ ಸ್ಥಾಪಿಸುವ 1.5 ಮೆಗಾ ವ್ಯಾಟ್‌ ಸಾಮರ್ಥ್ಯದ ಯಂತ್ರಕ್ಕೆ 212ಅಡಿಗಳಷ್ಟು ಎತ್ತರದ ಟವರ್‌ ನಿರ್ಮಿಸಬೇಕಾಗುತ್ತದೆ. ಈ ಯಂತ್ರಕ್ಕೆ ಬಳಸಲಾಗುವ ಟರ್ಬೈನ್‌ ಬ್ಲೇಡ್‌ಗಳು ತಲಾ  116 ಅಡಿಗಳಷ್ಟು ಉದ್ದವಿರುತ್ತವೆ. ಇಂತಹ ಬೃಹತ್‌ ಯಂತ್ರವನ್ನು ಸ್ಥಾಪಿಸಲು ಸರಾಸರಿ ಒಂದು ಸಾವಿರ ಟನ್‌ ಕಾಂಕ್ರೀಟ್‌ ಹಾಗೂ ಉಕ್ಕಿನ ಪ್ರಮಾಣವನ್ನು ಬೇಕಾಗುತ್ತದೆ. ಪ್ರತಿಯೊಂದು ಯಂತ್ರಕ್ಕೆ ಬಳಸಲಾಗುವ ಉಕ್ಕು ಮತ್ತು ಕಾಂಕ್ರಿಟ್‌ ಹಾಗೂ ಜೋಡಿಸುವ ಬೃಹತ್‌ ಗಾತ್ರದ ಟರ್ಬೈನ್‌ ಬ್ಲೇಡ್‌ಗಳ ಉತ್ಪಾದನೆ, ಸಾಗಾಣಿಕೆ ಮತ್ತು ಅಳವಡಿಸುವಲ್ಲಿ ವ್ಯಯವಾಗುವ ವಿದ್ಯುತ್‌, ಇಂಧನ ಮತ್ತು ಇತರೆ ಸಂಪನ್ಮೂಲಗಳನ್ನು ಕುರಿತು ವಿಜ್ಞಾನಿಗಳು ವಿಶ್ಲೇಷಣೆ ನಡೆಸಿದ್ದಾರೆ.

ಪವನ ಶಕ್ತಿಯಿಂದ ವಿದ್ಯುತ್‌ ಉತ್ಪಾದನೆ ಮಾಡುವ ಯಂತ್ರಗಳು ಉಂಟು ಮಾಡುವ ಶಬ್ದ ಮಾಲಿನ್ಯದಿಂದ ಪರಿಸರ ಮತ್ತು ಜನರ ಆರೋಗ್ಯದ ಮೇಲಾಗುವ ಪರಿಣಾಮ ಕುರಿತು ವಿಸ್ತೃತ ಅಧ್ಯಯನದ ಅಗತ್ಯವಿದೆ. ಪ್ರತಿಯೊಂದು ವಿದ್ಯುತ್‌ ಉತ್ಪಾದನೆ ಯಂತ್ರ ಸುಮಾರು 25 ವರ್ಷಗಳವರೆಗೆ ಕೆಲಸ ಮಾಡುತ್ತದೆ ಎಂದು ಪರಿಗಣಿಸಿದರೆ, ಅವಧಿ ಮುಗಿದ ನಂತರ ಈ ಯಂತ್ರದಿಂದ ಉಳಿಯುವ ತ್ಯಾಜ್ಯದಿಂದ ಪರಿಸರಕ್ಕೆ ಆಗುವ ಹಾನಿಯನ್ನು ಕೂಡ ಪರಿಗಣಿಸ ಬೇಕಾಗುತ್ತದೆ. ಯಂತ್ರಗಳನ್ನು ತಯಾರಿಸಲು ಬಳಸಲಾಗಿರುವ ಉಕ್ಕು, ತಾಮ್ರ, ಇತ್ಯಾದಿಗಳನ್ನು ಪುನರ್‌ ಬಳಖೆ ಮಾಡಿಕೊಳ್ಳಬಹುದಾದರೂ, ಪ್ಲಾಸ್ಟಿಕ್‌ ತ್ಯಾಜ್ಯದ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಬೃಹತ್‌ ಗಾತ್ರದ ಟರ್ಬೈನ್‌ ಬ್ಲೇಡ್‌ಗಳನ್ನು ಫೈಬರ್‌ ಬಳಸಿ ತಯಾರಿಸಿರುವುದರಿಂದ, ಅವಧಿ ಮುಗಿದ ನಂತರ ಅವುಗಳನ್ನು ಖಾಲಿ ಜಾಗದಲ್ಲಿ ತ್ಯಾಜ್ಯವಾಗಿ ಎಸೆಯುವ ಕೆಲಸವನ್ನು ಕೆಲವು ದೇಶಗಳಲ್ಲಿ ಮಾಡಲಾಗುತ್ತಿದೆ. ಇದರಿಂದ ಪರಿಸರ ಮಾಲೀನ್ಯ ಉಂಟಾಗುತ್ತದೆ.

ಫೈಬರ್‌ ಆಧಾರಿತ ಬ್ಲೇಡ್‌ಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ವಿಶೇಷ ತ್ಯಾಜ್ಯ ನಿರ್ವಹಣೆ ಘಟಕಗಳನ್ನು ಸ್ಥಾಪಿಸಬೇಕಾಗುತ್ತದೆ. ಇನ್ನು ಯಂತ್ರದ ಸ್ಥಾಪನೆಗೆ ಬಳಸಲಾಗುವ ಸಾವಿರಾರು ಟನ್‌ ಕಾಂಕ್ರಿಟ್‌ ಮತ್ತು ಉಕ್ಕು ಸಂಸ್ಕರಣೆ ಮಾಡಬೇಕಾದರೆ ಕಟ್ಟಡ ತ್ಯಾಜ್ಯ ಸಂಸ್ಕರಣೆ ಮಾಡುವ ವಿಶೇಷ ಘಟಕಗಳ ಸ್ಥಾಪನೆ ಅಗತ್ಯವಾಗುತ್ತದೆ.

ಪವನ ಶಕ್ತಿ ಆಧಾರಿತ ವಿದ್ಯುತ್‌ ಉತ್ಪಾದನೆಯಲ್ಲಿ ಕೋಟ್ಯಂತರ ಡಾಲರ್‌ ಬಂಡವಾಳ ಹೂಡಿಕೆ ಮಾಡಲು ಉತ್ಸಾಹ ತೋರಿಸುವ ದೇಶಗಳು, ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆ ಮತ್ತು ಸಂಸ್ಕರಣೆಯ ವಿಷಯದಲ್ಲಿ ನಿರ್ಲಕ್ಷ ತೋರಿಸುತ್ತಿರುವುದರ ವಿರುದ್ಧ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT