ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಆ್ಯಪ್‌ ಸಾಲ ಜಾಲ

Last Updated 8 ಜನವರಿ 2021, 19:31 IST
ಅಕ್ಷರ ಗಾತ್ರ

ಯಾವ ಭದ್ರತೆಯನ್ನೂ ಕೇಳದೆ ಸಾಲ ನೀಡುವ ಆ್ಯಪ್‌ಗಳು ಹತ್ತಾರಿವೆ. ಇದೊಂದು ದೊಡ್ಡ ಜಾಲ ಮತ್ತು ವಿಷವರ್ತುಲ. ಕೇಳಿದ ಕೂಡಲೇ ಸಾಲ ಕೊಡುವ ಇವು ಸಾಲ ವಸೂಲಿಗೆ ಅಮಾನವೀಯ ಮಾರ್ಗಗಳನ್ನು ಅನುಸರಿಸುತ್ತವೆ ಎಂದು ಹೇಳಲಾಗುತ್ತದೆ. ಸಾಲ ಪಡೆದವರನ್ನು ಶಾಶ್ವತವಾಗಿ ಸಾಲದ ಸುಳಿಯಲ್ಲಿ ಉಳಿಯುವಂತೆ ಮಾಡುತ್ತವೆ. ಸಾಲಗಾರರಿಗೆ ಕಿರುಕುಳ ಕೊಟ್ಟು ಅವರ ಆತ್ಮಹತ್ಯೆಗೂ ಕಾರಣವಾಗಿವೆ. ಇಂತಹ ಜಾಲದ ಹಲವರನ್ನು ಇತ್ತೀಚೆಗೆ ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಚೀನೀಯರು. ಇವರೇ ದಕ್ಷಿಣ ಭಾರತದಲ್ಲಿ ಈ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಆ್ಯಪ್‌ ಸಾಲದ ಕಾರಣಕ್ಕೆ ತೆಲಂಗಾಣದಲ್ಲಿ ಐವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಆ್ಯಪ್‌ ಮೂಲಕ ಸಾಲ ಪಡೆಯುವವರಿಗೆ ಎಚ್ಚರಿಕೆಯ ಘಂಟೆ.

ಸಾಲ ನೀಡಿಕೆ ಜಾಲ

ಲೋನ್‌ ಆ್ಯಪ್‌ಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವವರ ಸಂಪೂರ್ಣ ವಿವರಗಳನ್ನು ಕಲೆ ಹಾಕಲಾಗುತ್ತದೆ. ಆಧಾರ್ ವಿವರ, ಮನೆ ವಿಳಾಸ, ಕಚೇರಿ ವಿಳಾಸ, ವಾಹನಗಳ ವಿವರ, ಚಾಲನಾ ಪರವಾನಗಿ ವಿವರ, ಮೊಬೈಲ್‌-ಫೋನ್‌ ಸಂಖ್ಯೆಗಳನ್ನು ಪಡೆದುಕೊಳ್ಳಲಾಗುತ್ತದೆ. ಇಷ್ಟೇ ಮಾಹಿತಿಯ ಆಧಾರದ ಮೇಲೆ ಸಾಲ ನೀಡಲಾಗುತ್ತದೆ.

ಆದರೆ ಅಪ್ಲಿಕೇಷನ್‌ಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡುವ ವೇಳೆ, ಫೋನ್‌ನಲ್ಲಿರುವ ಸಂಪರ್ಕ ಸಂಖ್ಯೆಗಳು, ಮೆಸೇಜ್‌, ಚಿತ್ರಗಳು, ವಿಡಿಯೊಗಳು, ಲೊಕೇಷನ್‌, ಕರೆ ವಿವರಗಳಿಗೆ ಆಕ್ಸೆಸ್ ಕೇಳಲಾಗುತ್ತದೆ. ಈ ಆಕ್ಸೆಸ್‌ಗಳನ್ನು ನೀಡಿದರೆ ಮಾತ್ರವೇ ಸಾಲ ನೀಡಲಾಗುತ್ತದೆ. ಒಮ್ಮೆ ಸಾಲ ಪಡೆದರೆ, ಮತ್ತೆ ಸಾಲ ಪಡೆಯುವಂತೆ ಕರೆ ಮಾಡಲಾಗುತ್ತದೆ. ಸಾಲ ಪಡೆದವರ ಫೋನ್‌ನಲ್ಲಿರುವ ಎಲ್ಲಾ ಸಂಪರ್ಕ ಸಂಖ್ಯೆಗಳಿಗೂ ಸಾಲ ನೀಡಿಕೆ ಕರೆ ಹೋಗುತ್ತವೆ. ಹೀಗೆ ಸಾಲ ಪಡೆದವರ ಸಂಪರ್ಕದಲ್ಲಿರುವ ಎಲ್ಲ ವ್ಯಕ್ತಿಗಳನ್ನೂ ಸಾಲ ನೀಡಿದವರು ಸಂಪರ್ಕಿಸಲು ಆರಂಭಿಸುತ್ತಾರೆ.

ವಿಷ ವರ್ತುಲ

1. ಅತ್ಯಂತ ಕಡಿಮೆ ಅವಧಿಯಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ. ಕೆಲವು ಪ್ರಕರಣಗಳಲ್ಲಿ 10 ನಿಮಿಷದಲ್ಲೇ ಸಾಲ ಮಂಜೂರು ಆಗಿದ್ದೂ ಇದೆ. ಇಂತಹ ಅಪ್ಲಿಕೇಷನ್‌ಗಳ ಮೂಲಕ ₹ 1,000 ಸಾವಿರದಿಂದ ₹ 50,000ರದವರೆಗೂ ಸಾಲ ನೀಡಲಾಗಿದೆ. ಅತ್ಯಂತ ಕ್ಷಿಪ್ರವಾಗಿ ಸಾಲ ನೀಡುವುದರಿಂದ, ಜನರು ಇಂತಹ ಸಾಲದತ್ತ ಬೇಗ ಆಕರ್ಷಿತರಾಗುತ್ತಾರೆ. ಇಂತಹ ಅಪ್ಲಿಕೇಷನ್‌ ಒಂದನ್ನು ಪರಿಶೀಲಿಸಿದಾಗ, ಒಬ್ಬ ವ್ಯಕ್ತಿ ತಿಂಗಳೊಂದರಲ್ಲೇ 200 ಬಾರಿ ಸಾಲ ಮಾಡಲು ಅವಕಾಶವಿದೆ ಎಂಬುದು ಪತ್ತೆಯಾಯಿತು

2. ಸಾಲ ಮರುಪಾವತಿ ವಿಧಾನವೂ ಸರಳವೆಂಬಂತೆ ತೋರಿಸಲಾಗುತ್ತದೆ. ದಿನಗಳ ಲೆಕ್ಕದಲ್ಲಿ, ವಾರಗಳ ಲೆಕ್ಕದಲ್ಲಿ ಮತ್ತು ತಿಂಗಳ ಲೆಕ್ಕದಲ್ಲಿ ಕಂತುಗಳನ್ನು ಕಟ್ಟಬೇಕು. ಬಡ್ಡಿಯ ಪ್ರಮಾಣ ಶೇ 30-35ರಷ್ಟು ಇರುವುದರಿಂದ, ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದವರ ಪ್ರಮಾಣ ಕಡಿಮೆ. ಹೀಗಾಗಿ ದಿನದ ಮತ್ತು ವಾರದ ಲೆಕ್ಕದಲ್ಲಿ ಕಂತು ಕಟ್ಟಬೇಕಿದ್ದವರು ಗಡುವು ಮೀರಿದ್ದು ಹೆಚ್ಚು. ಈವರೆಗೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಪತ್ತೆಯಾದ ಅಂಶವಿದು

3. ಕಂತು ಕಟ್ಟಬೇಕಿರುವ ಗಡುವು ಮುಗಿದ ನಂತರ ದಂಡ ವಿಧಿಸಲಾಗುತ್ತದೆ. ಹೈದರಾಬಾದ್‌ನ ಪ್ರಕರಣವೊಂದರಲ್ಲಿ ₹ 8,000 ಸಾಲ ಪಡೆದಿದ್ದವರು ಬಡ್ಡಿ ಮತ್ತು ದಂಡ ಸೇರಿ ₹ 43,000 ಮರುಪಾವತಿ ಮಾಡಿದ್ದಾಗಿ ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ. ಗಡುವು ಮುಗಿದ ನಂತರ ಅವರಿಗೆ ದಿನವೊಂದಕ್ಕೆ ₹ 3,000 ದಂಡ ವಿಧಿಸಲಾಗಿತ್ತು

4. ಸಾಲ, ಬಡ್ಡಿ ಮತ್ತು ದಂಡ ಮರುಪಾವತಿ ಮಾಡಲಾಗದವರಿಗೆ ಇನ್ನಷ್ಟು ಸಾಲ ನೀಡಲಾಗುತ್ತದೆ. ಹೊಸ ಸಾಲವನ್ನು ನೀಡಿ, ಆ ಹಣದ ಮೂಲಕ ಹಳೆಯ ಸಾಲವನ್ನು ಮರುಪಾವತಿ ಮಾಡಿಸಿಕೊಳ್ಳಲಾಗುತ್ತದೆ. ಈ ರೀತಿ ನೀಡಲಾದ ಹೊಸ ಸಾಲದ ಬಡ್ಡಿಯ ಪ್ರಮಾಣ ಇನ್ನಷ್ಟು ಹೆಚ್ಚು ಇರುತ್ತದೆ. ಒಮ್ಮೆ ಸಾಲ ಪಡೆದವರು, ಅದನ್ನು ತೀರಿಸಲಾಗದೆ ಮತ್ತೆ-ಮತ್ತೆ ಸಾಲ ಪಡೆಯುವ ಅನಿವಾರ್ಯಕ್ಕೆ ಒಳಗಾಗುತ್ತಾರೆ.

ವಸೂಲಿ ತಂತ್ರಗಳು

ಬಹುತೇಕ ಸಂದರ್ಭಗಳಲ್ಲಿ ಕನಿಷ್ಠ ಶೇ 30ರಷ್ಟು ಬಡ್ಡಿ ವಿಧಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಬಡ್ಡಿ ಮತ್ತು ಅಸಲನ್ನು ಪಾವತಿ ಮಾಡಲೇಬೇಕು. ಪಾವತಿ ಮಾಡದಿದ್ದರೆ, ಮೊದಲ ಹಂತದಲ್ಲಿ ಕರೆ ಮಾಡಿ ಸಾಲ ಮರುಪಾವತಿ ಮಾಡುವಂತೆ ಹೇಳಲಾಗುತ್ತದೆ. ಮರುಪಾವತಿ ಮತ್ತಷ್ಟು ವಿಳಂಬವಾದರೆ ಸಾಲ ಪಡೆದವರ ಕುಟುಂಬದವರಿಗೆ ಕರೆ ಮಾಡಿ ಸಾಲ ಮರುಪಾವತಿ ಮಾಡುವಂತೆ ಬೆದರಿಕೆ ಸ್ವರೂಪದಲ್ಲಿ ಹೇಳಲಾಗುತ್ತದೆ. ಈ ಅವಧಿಯಲ್ಲಿ ಬಡ್ಡಿ ಮತ್ತು ದಂಡದ ಪ್ರಮಾಣವನ್ನು ಏರಿಸುತ್ತಾ ಹೋಗಲಾಗುತ್ತದೆ. ಕರೆಯಲ್ಲಿ ಅವಾಚ್ಯ ಪದಗಳ ಬಳಕೆ ಸಾಮಾನ್ಯವಾಗಿರುತ್ತದೆ. ಮೂರನೇ ಹಂತದಲ್ಲಿ, ಸಾಲ ಪಡೆದವರ ಸ್ನೇಹಿತರಿಗೂ ಕರೆ ಮಾಡಿ ಸಾಲ ಮರುಪಾವತಿಸಲು ಹೇಳುವಂತೆ ಸೂಚಿಸಲಾಗುತ್ತದೆ. ಈ ಹಂತದಲ್ಲಿ ಸಾಲ ಪಡೆದವರ ಕುಟುಂಬದವರು, ಸಂಬಂಧಿಕರು ಮತ್ತು ಸ್ನೇಹಿತರೆಲ್ಲರಿಗೂ ವಾಟ್ಸ್‌ಆ್ಯಪ್‌‌, ಫೇಸ್‌ಬುಕ್‌, ಟ್ವಿಟರ್‌ ಮೂಲಕ ಸಾಲ ಮರುಪಾವತಿ ಮಾಡುವಂತೆ ಹೇಳಲಾಗುತ್ತದೆ. ಸಾಲ ಪಡೆದವರ ಅವಹೇಳನ ಮತ್ತು ತೇಜೋವಧೆ ಮಾಡಲಾಗುತ್ತದೆ. ಈ ರೀತಿ ಅವಮಾನ ಮಾಡಿದ್ದರಿಂದಲೇ ಹೈದರಾಬಾದ್‌ನಲ್ಲಿ ಸಾಲ ಪಡೆದಿದ್ದವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳು...

ಆ್ಯಪ್ ಮೂಲಕ ಸಾಲ ನೀಡಿಕೆಯನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ಇಲ್ಲ. ಇದು ಇಂತಹ ಆ್ಯಪ್‌ಗಳ ಪಾಲಿಗೆ ವರ, ಇವುಗಳನ್ನು ಬಳಸುವವರ ಪಾಲಿಗೆ ಶಾಪ! ಸಾಲ ಕೊಡುವ ಸಂಸ್ಥೆಗಳು ಬ್ಯಾಂಕಿಂಗ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿ (ಎನ್‌ಬಿಎಫ್‌ಸಿ) ಕೆಲಸ ನಿರ್ವಹಿಸುವ ಪರವಾನಗಿಯನ್ನು ಹೊಂದಿರಬೇಕಾಗುತ್ತದೆ. ಸಾರ್ವಜನಿಕರಿಗೆ ಸಾಲ ನೀಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ರೂಪಿಸಿದ ಕಾನೂನಿನ ಅಡಿ ನೋಂದಣಿ ಮಾಡಿಸಿಕೊಂಡ ಸಂಸ್ಥೆಗಳಿಗೂ ಸಾಲ ಕೊಡುವ ಅರ್ಹತೆ ಇದೆ.

ಸಾಲ ನೀಡಿಕೆ ಆ್ಯಪ್‌ಗಳು ಅಧಿಕೃತವೋ ಅಲ್ಲವೋ ಎಂಬುದನ್ನು ಪರಿಶೀಲಿಸಿ, ಸಾಲ ಪಡೆಯುವತ್ತ ಮುಂದುವರಿಯುವುದು ಜಾಣತನದ ಕೆಲಸ. ಸಾಲ ನೀಡುವ ಆ್ಯಪ್‌ನ ಮಾಲೀಕರುಯಾರು ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಬೇಕು. ಮಾಲೀಕತ್ವವು ಯಾವುದೇ ಬ್ಯಾಂಕ್ ಅಥವಾ ಎನ್‌ಬಿಎಫ್‌ಸಿ ಕೈಯಲ್ಲಿ ಇಲ್ಲ ಎಂದಾದರೆ, ಅದನ್ನು ಮುನ್ನಡೆಸುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ಆ್ಯಪ್‌ನ ಕಚೇರಿ ಎಲ್ಲಿದೆ ಎಂಬುದು ತಿಳಿದಿದ್ದರೆ ಒಳಿತು. ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿ ಪರವಾಗಿ ಸಾಲ ನೀಡುವ ಆ್ಯಪ್‌ಗಳು ತಾವು ಪ್ರತಿನಿಧಿಸುತ್ತಿರುವ ಸಂಸ್ಥೆಯ ಹೆಸರನ್ನು ಗ್ರಾಹಕರಿಗೆ ತಾವಾಗಿಯೇ ತಿಳಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ. ಯಾವುದೇ ಆ್ಯಪ್‌ ಈ ಕೆಲಸವನ್ನು ಮಾಡುತ್ತಿಲ್ಲ ಎಂದಾದರೆ, ಜಾಗರೂಕರಾಗಿ ವರ್ತಿಸುವುದು ಸೂಕ್ತ.

ಸಾಲ ನೀಡುವ ಮೊದಲು ಬ್ಯಾಂಕ್‌ಗಳು ಹಾಗೂ ಎನ್‌ಬಿಎಫ್‌ಸಿಗಳು ಸಾಲ ಕೇಳಿ ಬಂದವರ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ಪರಿಶೀಲಿಸುತ್ತವೆ. ಸಾಲ ಪಡೆದವರು ಎಷ್ಟರಮಟ್ಟಿಗೆ ಕ್ರಮಬದ್ಧವಾಗಿ ಸಾಲ ಮರುಪಾವತಿ ಮಾಡಿದ್ದಾರೆ ಎಂಬುದನ್ನು ತಿಳಿಸುತ್ತದೆ ಈ ಸ್ಕೋರ್. ಒಳ್ಳೆಯ ಕ್ರೆಡಿಟ್ ಸ್ಕೋರ್ (900ರಲ್ಲಿ 700 ಅಥವಾ ಅದಕ್ಕಿಂತ ಹೆಚ್ಚು ಸ್ಕೋರ್ ಅನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ) ಇರುವವರಿಗೆ ಬ್ಯಾಂಕ್‌ಗಳು ಹಾಗೂ ಎನ್‌ಬಿಎಫ್‌ಸಿಗಳು ಸುಲಭವಾಗಿ ಸಾಲ ನೀಡುತ್ತವೆ. ಹಾಗಾಗಿ,ಒಳ್ಳೆಯ ಕ್ರೆಡಿಟ್ ಸ್ಕೋರ್ ಇರುವವರು ಇಂತಹ ಆ್ಯಪ್‌ಗಳ ಕಡೆ ಹೋಗಬೇಕಿಲ್ಲ. ಸಾಲ ನೀಡುವುದಾಗಿ ಹೇಳುವ ಆ್ಯಪ್‌ಗಳು, ಕ್ರೆಡಿಟ್ ಸ್ಕೋರ್‌ ಬಗ್ಗೆ ಪರಿಶೀಲನೆಯನ್ನೇ ಮಾಡುವುದಿಲ್ಲ ಎಂದಾದರೆ, ಅವುಗಳು ಎಷ್ಟು ಸಾಚಾ ಎಂಬುದನ್ನು ಅರಿತುಕೊಳ್ಳುವುದು ಒಳ್ಳೆಯದು.

ಸಾಲ ಕೊಡುವವರು ವೈಯಕ್ತಿಕ ಸಾಲಕ್ಕೆ ಪ್ರತಿಯಾಗಿ, ಭದ್ರತೆಯೊಂದನ್ನು (ಅಡಮಾನ) ಕೇಳುವುದು ಸಹಜ. ಆದರೆ, ಈ ಆ್ಯಪ್‌ಗಳು ಯಾವ ಭದ್ರತೆಯನ್ನೂ ಕೇಳದೆ ಸಾಲ ಕೊಡುತ್ತವೆ ಎಂಬ ವರದಿಗಳು ಇವೆ. ಭದ್ರತೆಯೇ ಇಲ್ಲದೆ ಸಾಲ ನೀಡುವವರು ಸಾಮಾನ್ಯವಾಗಿ ಭಾರಿ ಪ್ರಮಾಣದ ಬಡ್ಡಿ ವಿಧಿಸುತ್ತಾರೆ. ಸಾಲಕ್ಕೆ ಯಾವ ಭದ್ರತೆಯೂ ಬೇಡ ಎಂಬುದು, ಆ್ಯಪ್‌ ಎಷ್ಟು ಸುರಕ್ಷಿತ ರೀತಿಯಲ್ಲಿ ಸಾಲ ಕೊಡಬಹುದು ಎಂಬ ಪ್ರಶ್ನೆ ಮೂಡಿಸುವುದಕ್ಕೆ ಕಾರಣವಾಗಬೇಕು.

ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಇಂತಹ ಆ್ಯಪ್‌ಗಳ ಬಗ್ಗೆ ಹುಡುಕಾಟ ನಡೆಸಿದರೆ, ನೂರಾರು ಆ್ಯಪ್‌ಗಳ ಪಟ್ಟಿ ಕಾಣಿಸುತ್ತದೆ. ಇವುಗಳಲ್ಲಿ ಯಾವ ಆ್ಯಪ್‌ಗೆ ಎಷ್ಟು ರೇಟಿಂಗ್ ಇದೆ ಎಂಬುದನ್ನೂ ಸ್ಥೂಲವಾಗಿ ಒಮ್ಮೆ ಅವಲೋಕಿಸುವುದು ಒಳಿತು.

ಎಚ್ಚರ ಇರಲಿ: ಆರ್‌ಬಿಐ

ಬ್ಯಾಂಕ್‌ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ನೀಡಲು ತಮ್ಮ ಡಿಜಿಟಲ್‌ ವೇದಿಕೆಯನ್ನು ಬಳಸಲಿ ಅಥವಾ ಹೊರಗುತ್ತಿಗೆ ಆಧಾರದ ವೇದಿಕೆಯನ್ನೇ ಬಳಸಲಿ, ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಳೆದ ವರ್ಷದ ಜೂನ್‌ ತಿಂಗಳಲ್ಲಿ ಆರ್‌ಬಿಐ ಸೂಚನೆ ನೀಡಿತ್ತು.

ಆದರೆ, ಸಾಲ ನೀಡಿಕೆ ಆ್ಯಪ್‌ಗಳು ಆರ್‌ಬಿಐನ ಸೂಚನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಹೆಚ್ಚಿನವು ಕಾರ್ಯನಿರ್ವಹಣೆಗಾಗಿ ಆರ್‌ಬಿಐನ ಪರವಾನಗಿಯನ್ನೂ ಪಡೆದಿರುವುದಿಲ್ಲ. ಇತ್ತೀಚಿನ ಬೆಳವಣಿಗೆಗಳ ನಂತರ, ಡಿಸೆಂಬರ್‌ನಲ್ಲಿ ಜನರಿಗೆ ಇನ್ನೊಂದು ಎಚ್ಚರಿಕೆಯ ಸಂದೇಶವನ್ನು ನೀಡಿರುವ ಆರ್‌ಬಿಐ, ಇಂಥ ಆ್ಯಪ್‌ಗಳ ಬಲೆಗೆ ಬೀಳಬಾರದು ಎಂದು ಸಲಹೆ ನೀಡಿದೆ.

ಆರ್‌ಬಿಐ ಸಲಹೆಗಳು:

* ಸಾಲ ಪಡೆಯುವುದಕ್ಕೂ ಮುನ್ನ ಇಂಥ ಆ್ಯಪ್‌ಗಳ ಮೂಲ ಹಾಗೂ ಹಿನ್ನೆಲೆಗಳನ್ನು ವಿವರವಾಗಿ ಪರಿಶೀಲಿಸಿಕೊಳ್ಳಿ

* ಅಜ್ಞಾತ ವ್ಯಕ್ತಿಗಳ ಜತೆಗೆ ಅಥವಾ ಆ್ಯಪ್‌ಗಳ ಜತೆಗೆ ಯಾವ ಕಾರಣಕ್ಕೂ ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ಕುರಿತ ಮಾಹಿತಿ ಮತ್ತು ದಾಖಲೆಗಳನ್ನು ಹಂಚಿಕೊಳ್ಳಬೇಡಿ

*ಯಾರೇ ಆದರೂ ಈ ಮಾಹಿತಿಗಳನ್ನು ನೀಡುವಂತೆ ಒತ್ತಾಯಿಸಿದರೆ ಸಂಬಂಧಪಟ್ಟ ಕಾನೂನು ಜಾರಿ ಸಂಸ್ಥೆಗೆ ದೂರು ನೀಡಬೇಕು. ಅಥವಾ https://sachet.rbi.org.in ಮೂಲಕ ಆನ್‌ಲೈನ್‌ ದೂರು ದಾಖಲಿಸಬಹುದು

*ಸಾಲದ ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾ

ಸುರಕ್ಷಿತ ಹೇಗೆ?

*ಆರ್‌ಬಿಐ ಮಾನ್ಯತೆ ಇಲ್ಲದ ಯಾವುದೇ ಆ್ಯಪ್‌ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಬೇಡಿ

* ಸಾಲ ನೀಡಿದ ಆ್ಯಪ್‌ ಕಂಪನಿಯವರು ಬೆದರಿಕೆ ಹಾಕಿದರೆ, ಗಲಿಬಿಲಿಗೊಳ್ಳದೆ ಸಂಬಂಧಪಟ್ಟವರಿಗೆ ದೂರು ಸಲ್ಲಿಸಿ

* ನಿಮ್ಮ ಯಾವುದೇ ದಾಖಲೆಯನ್ನು ಆ್ಯಪ್‌ಗಳಿಗೆ ಸಲ್ಲಿಸಬೇಡಿ

* ಆ್ಯಪ್‌ ಡೌನ್‌ಲೋಡ್‌ ಮಾಡುವಾಗ ಮೊಬೈಲ್‌ನ ಡೈರೆಕ್ಟರಿ, ಲೊಕೇಶನ್‌ ಮುಂತಾದ ಮಾಹಿತಿಯನ್ನು ಸಂಗ್ರಹಿಸಲು ಅವಕಾಶ ನಿರಾಕರಿಸಿ. ಹಾಗೆ ಮಾಡಿದಾಗ ಸಾಲ ನೀಡಲು ನಿರಾಕರಿಸಿದರೆಂದರೆ ಅದು ‘ಎಲ್ಲವೂ ಸರಿಯಾಗಿಲ್ಲ’ ಎಂಬುದರ ಮೊದಲ ಸೂಚನೆ ಎಂದು ತಿಳಿಯಬೇಕು. ಕೂಡಲೇ ಆ್ಯಪ್‌ ಅನ್ನು ಅನ್‌ ಇನ್‌ಸ್ಟಾಲ್‌ ಮಾಡಿ

ಡುವಾಗ ಅದು ನಿಮ್ಮ ಫೋನ್‌ನಲ್ಲಿ ದಾಖಲಾಗಿರುವ ದೂರವಾಣಿ ಸಂಖ್ಯೆಗಳನ್ನು ಬಳಸಿಕೊಳ್ಳಲು ಅನುಮತಿ ಕೇಳುತ್ತದೆ. ಯಾವ ಕಾರಣಕ್ಕೂ ಅನುಮತಿ ಕೊಡಬೇಡಿ

*ಬ್ಯಾಂಕ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪರವಾಗಿ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸಮಾಡುವ ಆ್ಯಪ್‌ಗಳು ಕಡ್ಡಾಯವಾಗಿ ಸಾಲ ನೀಡುವ ಸಂಸ್ಥೆಯ ಹೆಸರನ್ನು ಸಾಲ ಪಡೆಯುವವರಿಗೆ ಒದಗಿಸಬೇಕು

*ಆರ್‌ಬಿಐನಲ್ಲಿ ನೋಂದಣಿಯಾಗಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವಿಳಾಸ ಹಾಗೂ ಇತರ ವಿವರಗಳನ್ನು https://cms.rbi.org.in ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಆರ್‌ಬಿಐನಿಂದ ನಿಯಂತ್ರಿತವಾಗಿರುವ ಈ ಸಂಸ್ಥೆಗಳ ವಿರುದ್ಧ ದೂರುಗಳಿದ್ದರೂ ಇದೇ ವೆಬ್‌ಸೈಟ್‌ ಮೂಲಕ ಸಲ್ಲಿಸಬಹುದು

ಆಧಾರ: ಪಿಟಿಐ, ಟ್ವಿಟರ್, ಆರ್‌ಬಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT