ಕರ್ನಾಟಕದಲ್ಲಿ ಮೆಣಸಿನಕಾಯಿ ಬೆಲೆಯು ಕುಸಿದಿರುವುದರಿಂದ ಹಲವು ಜಿಲ್ಲೆಗಳ ಲಕ್ಷಾಂತರ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಿ, ಮೆಣಸಿನಕಾಯಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ನಷ್ಟವಾಗುವುದನ್ನು ತಪ್ಪಿಸಬೇಕು ಎಂದು ಬೆಳೆಗಾರರು ರೈತ ಸಂಘಟನೆಗಳ ಮುಖಂಡರು, ಆಗ್ರಹಿಸುತ್ತಲೇ ಇದ್ದಾರೆ.
ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನದ ದರ ಏರಿಳಿತ ಸಾಮಾನ್ಯ. ಇಳುವರಿ ಪ್ರಮಾಣ ಈ ಏರಿಳಿತಕ್ಕೆ ಕಾರಣವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಮೆಣಸಿನಕಾಯಿ ಧಾರಣೆ ಭಾರಿ ಏರಿಕೆ ಆಗಿರುವುದನ್ನು ನೋಡಿದ್ದೇವೆ. ಆದರೆ, ಈ ಬಾರಿ ಮೆಣಸಿನಕಾಯಿ ಆವಕ ಮತ್ತು ದರ ಕುಸಿದಿದೆ. ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸುವಂತೆ ಮನವಿ ಮಾಡುತ್ತೇವೆ. ಕೇಂದ್ರ ಸರ್ಕಾರ ಮಂಜೂರಾತಿ ನೀಡಿದರೆ ಖರೀದಿ ಕೇಂದ್ರಗಳ ಮೂಲಕ ಎಂಎಸ್‌ಪಿ ಅಡಿ ಮೆಣಸಿನಕಾಯಿ ಖರೀದಿಸಲು ಸರ್ಕಾರ ಸಿದ್ಧವಾಗಿದೆ.–ಶಿವಾನಂದ ಎಸ್. ಪಾಟೀಲ, ಕೃಷಿ ಮಾರುಕಟ್ಟೆ ಸಚಿವ
ಆಂಧ್ರಪ್ರದೇಶದ ಬೆಳೆಗಾರರ ಸಂಕಷ್ಟಕ್ಕೆ ಅಲ್ಲಿನ ಸರ್ಕಾರ ಸ್ಪಂದಿಸಿದೆ. ಕೇಂದ್ರದ ಮೇಲೆ ಒತ್ತಡ ತಂದು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಣಸಿನಕಾಯಿ ಖರೀದಿಸುವಂತೆ ಮಾಡಲು ಯಶಸ್ವಿಯಾಗುದೆ. ಅಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ರೈತರ ಪರ ಕೆಲಸ ಮಾಡಿವೆ. ನಮ್ಮಲ್ಲಿ ಎರಡೂ ಪಕ್ಷಗಳೂ ರೈತರ ಕಾಳಜಿ ವಹಿಸುತ್ತಿಲ್ಲ. ಕರ್ನಾಟಕದಲ್ಲೂ ರೈತರಿಗೆ ಬೆಂಬಲ ಬೆಲೆ ನೀಡದಿದ್ದರೆ ಅಥವಾ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವಿಗೆ ಬಾರದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ–ಕರೂರು ಮಾಧವ ರೆಡ್ಡಿ, ಅಧ್ಯಕ್ಷ, ರಾಜ್ಯ ರೈತ ಸಂಘ
ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಫಸಲು ಬರುವ ಸಂದರ್ಭದಲ್ಲಿ ಬೆಲೆ ಕುಸಿದಿದೆ. ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರ ಆರಂಭಿಸಬೇಕು.–ಬೆಳಗಲ್ ಮಲ್ಲಿಕಾರ್ಜುನ, ರೈತ ಮುಖಂಡ, ತೆಕ್ಕಲಕೋಟೆ, ಬಳ್ಳಾರಿ ಜಿಲ್ಲೆ
ಬೆಲೆ ಕುಸಿತದಿಂದ ರೈತರು ತೀವ್ರ ಆತಂಕ ಪಡುವಂತಾಗಿದೆ. ಕಳೆದ ವರ್ಷ ₹38 ಸಾವಿರಕ್ಕೆ ಮಾರಾಟವಾಗಿದ್ದ ಬ್ಯಾಡಗಿ ಮೆಣಸಿನಕಾಯಿ ಈ ವರ್ಷ ₹13,200ಕ್ಕೆ ಮಾರಾಟವಾಗಿದೆ. ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದೇನೆ. ಪ್ರತಿ ಎಕರೆಗೆ ಅಂದಾಜು ₹1 ಲಕ್ಷ ಖರ್ಚು ಮಾಡಿದ್ದೇನೆ. ಈ ವರ್ಷ ಕೊಳೆರೋಗದಿಂದ ಬೆಳೆ ರಕ್ಷಣೆ ಸವಾಲಾಗಿ ಪರಿಣಮಿಸಿತ್ತು. ಇದೀಗ ಧಾರಣೆ ಕುಸಿತ ಮತ್ತೊಂದು ಹೊಡೆತ ನೀಡಿದೆ..–ಮುಕ್ತಾರ್‌ಪಾಶಾ ಗುಡಗಿ, ಕವಿತಾಳ, ರಾಯಚೂರು ಜಿಲ್ಲೆ
ಎರಡು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದು, ಇದಕ್ಕಾಗಿ ₹ 1 ಲಕ್ಷ ಸಾಲ ಮಾಡಿದ್ದೇನೆ. ಬೆಳೆಗೆ ರೋಗ ವಿಪರೀತವಾಗಿ ಇಳುವರಿ ಕಡಿಮೆಯಾಗಿತ್ತು. ಈಗ ಪ್ರತಿ ಕ್ವಿಂಟಲ್ ಮೆಣಸಿನಕಾಯಿಗೆ ₹ 8,000ದಿಂದ ₹ 10 ಸಾವಿರ ಸಿಗುತ್ತಿದೆ. ಬರೀ ₹80 ಸಾವಿರ ಹಣ ಬಂದಿದ್ದು, ಹಾಕಿದ ಬಂಡವಾಳವೂ ವಾಪಸ್ ಬಂದಿಲ್ಲ.–ಲಕ್ಷಪ್ಪ ದತ್ತಪ್ಪ ಎಲ್ಲಗೋಳ, ಬಳೂರ್ಗಿ, ಅಫಜಲಪುರ ತಾಲ್ಲೂಕು, ಕಲಬುರಗಿ ಜಿಲ್ಲೆ
ಪೂರಕ ಮಾಹಿತಿ: ಹುಬ್ಬಳ್ಳಿ ಮತ್ತು ಕಲಬುರಗಿ ಬ್ಯೂರೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.