ದೇಶದಾದ್ಯಂತ ಶೇ 20ರಷ್ಟು ಎಥೆನಾಲ್ ಮಿಶ್ರಿತ (ಇ20) ಪೆಟ್ರೋಲ್ ಪೂರೈಕೆ ಗುರಿಯನ್ನು ಸಾಧಿಸಿರುವ ಹೊತ್ತಿನಲ್ಲೇ, ಕೇಂದ್ರದ ಜೈವಿಕ ಇಂಧನ ಪ್ರೋತ್ಸಾಹ ನೀತಿಯ ವಿರುದ್ಧ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಜುಲೈನಿಂದ ದೇಶದ ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಇ20 ಪೆಟ್ರೋಲ್ ಮಾತ್ರ ಲಭ್ಯವಿದೆ. ಈ ಪೆಟ್ರೋಲ್ ಹಳೆಯ ವಾಹನಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಕೂಗು ಚಾಲಕರು ಮತ್ತು ಮಾಲೀಕರಿಂದ ಕೇಳಿಬರುತ್ತಿದೆ. ಇಂಧನ ಕ್ಷಮತೆ ಕುಸಿತ, ಎಂಜಿನ್‌ಗೆ ಹಾನಿಯಂತಹ ಸಮಸ್ಯೆಗಳ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಜನರ ಆಕ್ಷೇಪಣೆಗಳನ್ನು ತಳ್ಳಿಹಾಕಿದ್ದು, ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.