ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ: ‘ಬಡತನ ತೋರಿಸಿಕೊಳ್ಳಲು ಅವಮಾನವೇ?’
ಆಳ –ಅಗಲ: ‘ಬಡತನ ತೋರಿಸಿಕೊಳ್ಳಲು ಅವಮಾನವೇ?’
Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

‘ಮನೆಗೆ ನೆಂಟರು ಬರುತ್ತಾರೆ ಎಂದಾಗ, ಮನೆಯ ಕೊಳಕನ್ನೆಲ್ಲಾ ತೊಳೆಯುವುದಿಲ್ಲವೇ? ಇದೂ ಹಾಗೇ’. ದೆಹಲಿಯಲ್ಲಿ ನಡೆದ ಜಿ–20 ಶೃಂಗಸಭೆಗಾಗಿ ನಗರದ ಸೌಂದರ್ಯೀಕರಣಕ್ಕಾಗಿ ಕೊಳೆಗೇರಿಗಳನ್ನು ನೆಲಸಮ ಮಾಡಿದ್ದು ಮತ್ತು ಕೊಳೆಗೇರಿಗಳಿಗೆ ಪರದೆ ಹೊದಿಸಿ ಮರೆಮಾಚಲಾದ ಸರ್ಕಾರದ ಕ್ರಮವನ್ನು ಕೆಲವರು ಸಮರ್ಥಿಸಿಕೊಂಡ ಬಗೆ ಇದು. ‘ಬಡತನವನ್ನು, ಬಡವರನ್ನು ತೋರಿಸಿಕೊಳ್ಳಲು ಅವಮಾನವೇ? ಹಾಗಿದ್ದಲ್ಲಿ ನಮಗೆಲ್ಲಾ ಪುನರ್ವಸತಿ ಕಲ್ಪಿಸಿಬಿಡಿ’: ದೆಹಲಿಯನ್ನು ಸುಂದರಗೊಳಿಸುವ ಕ್ರಮದ ಫಲವಾಗಿ ತನ್ನ ಜೋಪಡಿ ಕಳೆದುಕೊಂಡ ಜನತಾ ಕ್ಯಾಂಪ್‌ನ ಬೀರಾ ಸಿಂಗ್‌ನ ಮಾತಿದು. ಸೌಂದರ್ಯದ ನೆಪದಲ್ಲಿ ಕೊಳೆಗೇರಿಗಳನ್ನು ಮರೆಮಾಚುವ ಕೆಲಸವನ್ನು ಕಾಂಗ್ರೆಸ್‌, ಬಿಜೆಪಿ, ಎಎಪಿ ಎಲ್ಲವೂ ಮಾಡಿವೆ

*****

‘ಹದಿನೆಂಟನೇ ಶತಮಾನ. ಜೀವನೋಪಯಕ್ಕಾಗಿ ಯೂರೋಪ್‌ನಿಂದ ರಷ್ಯಾಕ್ಕೆ ಬಂದಿದ್ದ ಆಕೆ ಕೆಲವೇ ವರ್ಷಗಳಲ್ಲಿ ರಷ್ಯಾದ ಮಹಾರಾಣಿಯಾದಳು. ರಷ್ಯಾ ದೊರೆ 3ನೇ ಪೀಟರ್‌ ಪತ್ನಿಯಾಗಿದ್ದ ಆಕೆ, ಒಂದು ಹಂತದಲ್ಲಿ ಗಂಡನನ್ನು ಅಧಿಕಾರದಿಂದ ಕೆಳಗಿಳಿಸಿ ತಾನೇ ರಾಜ್ಯಭಾರ ನಡೆಸಿದಳು. ರಷ್ಯಾ ಸಾಮ್ರಾಜ್ಯವನ್ನು ಮುನ್ನಡೆಸಿದಳು, ಸಾಮ್ರಾಜ್ಯವನ್ನು ವಿಸ್ತರಿಸಿದಳು. ರಷ್ಯಾದ ಮಂದಿಗೆ ಆಕೆಯೆಂದರೆ ಬಹಳ ಗೌರವ. ಸಮಾಜದಲ್ಲಿ ಹತ್ತಾರು ಸುಧಾರಣೆ, ಸಾಮ್ರಾಜ್ಯ ವಿಸ್ತರಣೆ... ಇದಕ್ಕಾಗಿಯೇ ಅವಳನ್ನು ‘ಕ್ಯಾಥರೀನ್‌ ದಿ ಗ್ರೇಟ್‌’ ಎಂದು ಗುರುತಿಸಲಾಗುತ್ತದೆ.

‘ಆಕೆಗೆ ತನ್ನ ಜನರನ್ನು ನೋಡುವ ಹಂಬಲ. ಅದಕ್ಕಾಗಿ ಆಕೆ ಆಗಾಗ್ಗೆ ನಗರ ಸಂಚಾರ ಮಾಡುತ್ತಿದ್ದಳು. ಆ ನಗರ ಸಂಚಾರಕ್ಕೂ ಮುನ್ನ, ಸಂಚಾರ ನಡೆಯುವ ಹಾದಿಯನ್ನೆಲ್ಲಾ ಸಿಂಗರಿಸಲಾಗುತ್ತಿತ್ತು. ಜನರು ತಮ್ಮಲ್ಲಿರುವ ಅತಿಒಳ್ಳೆಯ ಬಟ್ಟೆಯನ್ನು ತೊಟ್ಟು, ಹಾದಿಯ ಇಕ್ಕೆಲದಲ್ಲಿ ನಿಲ್ಲಬೇಕಿತ್ತು ಮತ್ತು ಆಕೆ ಬರುವಾಗ ತಾವು ಅತ್ಯಂತ ಸಂತೋಷದಿಂದ ಇದ್ದೇವೆ ಎಂದು ತೋರಿಸಬೇಕಿತ್ತು.  ಜನರು ತಮ್ಮ ಕಷ್ಟವನ್ನು ಮರೆಮಾಚುತ್ತಿದ್ದರು. ತಾವು ಸಂತೋಷವಾಗಿ ಇದ್ದೇವೆ ಎಂದು ತೋರಿಸುತ್ತಿದ್ದರು. ಪ್ರಧಾನಿಯ ಆಜ್ಞೆಯಾದ ಕಾರಣ ಜನರು ಹಾಗೇ ಮಾಡುತ್ತಿದ್ದರು, ರಾಣಿ ಸಂತೋಷದಿಂದ ಅರಮನೆಗೆ ವಾಪಸಾಗುತ್ತಿದ್ದಳು... ರಾಣಿ ಕ್ಯಾಥರೀನ್‌ಳ ಸಾಧನೆಗಳನ್ನು ಹೇಳುವಾಗ, ಈ ನಗರ ಸಂಚಾರ ವಿಚಾರವನ್ನೂ ನೆನಪಿಸಿಕೊಳ್ಳಲಾಗುತ್ತದೆ.’

ಕ್ಯಾಥರೀನ್‌ ಕುರಿತು ನ್ಯಾಷನಲ್‌ ಜಿಯಾಗ್ರಫಿಕ್‌ ಸಿದ್ಧಪಡಿಸಿದ್ದ ವ್ಯಕ್ತಿಚಿತ್ರದಲ್ಲಿರುವ ವಿವರಗಳು ಇವು.

ಈಗ ದೆಹಲಿಗೆ ಬರೋಣ. ಜಿ–20 ಶೃಂಗಸಭೆಯ ಕಾರಣಕ್ಕೆ ದೆಹಲಿಯನ್ನು ಸಿಂಗರಿಸಲಾಗಿತ್ತು. ಹೀಗೆ ಸಿಂಗರಿಸುವಾಗ ದೆಹಲಿಯ ವಿವಿಧ ಭಾಗಗಳಲ್ಲಿ ಇರುವ ಕೊಳೆಗೇರಿಗಳನ್ನು ತೆರವು ಮಾಡಲಾಯಿತು. ಜಿ–20 ಶೃಂಗಸಭೆಯ ವಿದೇಶಿ ಗಣ್ಯರು ಉಳಿಯಲಿದ್ದ ಹೋಟೆಲ್‌ಗಳು ಮತ್ತು ಶೃಂಗಸಭೆ ನಡೆದ ‘ಭಾರತ ಮಂಟಪ’ ಸಭಾಂಗಣ ಸಂಕೀರ್ಣದ ಹಾದಿಯಲ್ಲಿರುವ ಹಾಗೂ ಸುತ್ತಮುತ್ತಲಿನ ಎಲ್ಲಾ ಕೊಳೆಗೇರಿಗಳನ್ನೂ ತೆರವು ಮಾಡಲಾಗಿತ್ತು. ಹೀಗೆ ನಗರದ ‘ಸೌಂದರ್ಯೀಕರಣ’ದ ಶ್ರೇಯವನ್ನು ದೆಹಲಿಯ ಎಎಪಿ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ತಮಗೆ ತಾವೇ ನೀಡಿಕೊಂಡವು. ‘ಸೌಂದರ್ಯೀಕರಣಕ್ಕೆ ಕೇಂದ್ರ ಸರ್ಕಾರ ಒಂದು ಪೈಸೆಯನ್ನೂ ನೀಡಲಿಲ್ಲ. ಎಲ್ಲಾ ನಾವೇ ಮಾಡಿದೆವು’ ಎಂದು ದೆಹಲಿ ಸಚಿವ ಸೌರವ್ ಭಾರದ್ವಾಜ್‌ ಹೇಳಿಕೊಂಡರು.

ಆಳ –ಅಗಲ: ‘ಬಡತನ ತೋರಿಸಿಕೊಳ್ಳಲು ಅವಮಾನವೇ?’

ಸೌಂದರ್ಯೀಕರಣದ ಭಾಗವಾಗಿ ದೆಹಲಿಯ ಅತ್ಯಂತ ದೊಡ್ಡ ಕೊಳೆಗೇರಿಗಳಾದ ಜನತಾ ಕ್ಯಾಂಪ್‌, ಕೂಲಿ ಕ್ಯಾಂಪ್‌ಗಳನ್ನು ತೆರವು ಮಾಡಲಾಯಿತು. ಜನತಾ ಕ್ಯಾಂಪ್‌ ಅಂತೂ ‘ಭಾರತ ಮಂಟಪ’ದಿಂದ ಕೇವಲ 280 ಮೀಟರ್‌ನಷ್ಟು ದೂರದಲ್ಲಿತ್ತು. ಶೃಂಗಸಭೆ ಆರಂಭಕ್ಕೂ ವಾರಗಳ ಮೊದಲಷ್ಟೇ ಜನತಾ ಕ್ಯಾಂಪ್‌ ಅನ್ನು ನೆಲಸಮ ಮಾಡಲಾಯಿತು. ಇದರ ಮಧ್ಯೆಯೇ ತಮ್ಮನ್ನು ಮರೆಮಾಚಿದ್ದರ ಬಗ್ಗೆ, ತಮ್ಮ ನೆಲೆಯನ್ನು ನೆಲಸಮ ಮಾಡಿದ್ದರ ಬಗ್ಗೆ ದೆಹಲಿಯ ಕೊಳೆಗೇರಿ ನಿವಾಸಿಗಳು ತೀವ್ರ ಅಸಮಾಧಾನ ಹೊರಹಾಕುತ್ತಲೇ ಇದ್ದರು. ‘ಒಬ್ಬ ಬಡವ, ಕೇವಲ ಬಡವನಷ್ಟೇನಾ? ಅವನು ಮನುಷ್ಯನಲ್ಲವೇ? ಆ ಬಡವ ಕಸವೇ ಅಥವಾ ಪ್ರಾಣಿಯೇ’ ತಮ್ಮ ಮನೆ ನೆಲಸಮವಾದುದರ ಬಗ್ಗೆ ಕೂಲಿ ಕ್ಯಾಂಪ್‌ನ ಮುಕೇಶ್ ಹೊರಹಾಕಿದ ಆಕ್ರೋಶವಿದು. ‘ಬೀದೀಲಿ ನಾಯಿ ಸತ್ತರೆ, ಸರ್ಕಾರಕ್ಕೆ ಏನಾದರೂ ಆಗುತ್ತದೆಯೇ? ಬಡವನಿಗೆ ತೊಂದರೆಯಾದರೆ, ಯಾರಿಗೂ ಏನಾಗುವುದಿಲ್ಲ. ತೊಂದರೆಯಾಗುವುದು ಬಡವನಿಗೆ ಮಾತ್ರ’ ಎಂದು ಮುಕೇಶ್ ಹೇಳುವ ಮಾತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಲೇ ಇದೆ.

ಸರ್ಕಾರದ ಅಂದಾಜಿನ ಪ್ರಕಾರ, ದೆಹಲಿಯಲ್ಲಿ 1,700ಕ್ಕೂ ಹೆಚ್ಚು ಕೊಳೆಗೇರಿಗಳಿವೆ. ದೆಹಲಿ ವಿಧಾನಸಭೆಗೆ 2020ರಲ್ಲಿ ಚುನಾವಣೆ ನಡೆದಾಗ, ‘ನಾವು ಅಧಿಕಾರಕ್ಕೆ ಬಂದರೆ ಈ ಎಲ್ಲಾ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುತ್ತೇವೆ. ಕೊಳೆಗೇರಿ ನಿರ್ಮಾಣಗಳನ್ನು ಸಕ್ರಮಗೊಳಿಸುತ್ತೇವೆ’ ಎಂದು ಬಿಜೆಪಿ ಮತ್ತು ಎಎಪಿ ಎರಡೂ ಘೋಷಿಸಿದ್ದವು. ಈ ವಿಚಾರವನ್ನು ಪ್ರಣಾಳಿಕೆಗಳಲ್ಲೂ ಸೇರಿಸಿದ್ದವು. ಎಎಪಿ ಅಧಿಕಾರಕ್ಕೆ ಬಂದಿತು. ಬಿಜೆಪಿ ಅಧಿಕಾರಕ್ಕೆ ಬರದಿದ್ದರೂ, ದೆಹಲಿ ನಗರ ಪಾಲಿಕೆ ಬಿಜೆಪಿ ತೆಕ್ಕೆಯಲ್ಲೇ ಇತ್ತು. ಎರಡೂ ಪಕ್ಷಗಳು ಅಧಿಕಾರದಲ್ಲಿದ್ದರೂ ತಮ್ಮ ಚುನಾವಣಾ ಘೋಷಣೆಗಳನ್ನು ಅನುಷ್ಠಾನಕ್ಕೆ ತರಲಿಲ್ಲ. ಈಗ ಜಿ–20 ಶೃಂಗಸಭೆಗಾಗಿ ದೆಹಲಿಯನ್ನು ಸಿಂಗರಿಸಲು ಕೊಳೆಗೇರಿಗಳನ್ನು ತೆರವು ಮಾಡಿದವು, ಪರದೆ ಹೊದೆಸಿ ಕೊಳೆಗೇರಿಗಳನ್ನು ಮರೆಮಾಚಿದವು. ದೆಹಲಿಯ ಮೇಲ್ಸೇತುವೆಗಳ ಅಡಿಯಲ್ಲಿ ನೆಲೆ ಕಂಡುಕೊಂಡಿದ್ದ ನಿರ್ವಸತಿಕರನ್ನು 15 ದಿನಗಳ ಮಟ್ಟಿಗೆ ನಗರದಿಂದ ಹೊರಹೋಗುವಂತೆ ಸೂಚಿಸಿದವು. 

ಆನಂತರ, ಜಿ20 ವಿದೇಶಿ ಗಣ್ಯರು ಉಳಿಯಲಿದ್ದ ತಾರಾ ಹೋಟೆಲ್‌ಗಳಿದ್ದ ಏರೋಸಿಟಿಯಿಂದ ಭಾರತ ಮಂಟಪಕ್ಕೆ ಬರುವ ಹಾದಿಯಲ್ಲಿನ ವಸಂತ್‌ಕುಂಜ್‌ ಮತ್ತು ವಸಂತ ವಿಹಾರ ಜಂಕ್ಷನ್‌ನಲ್ಲಿರುವ ಕೊಳೆಗೇರಿಗೆ 20 ಅಡಿ ಎತ್ತರದ ಪರದೆಯನ್ನು ಹೊದೆಸಲಾಯಿತು. ಜಿ–20 ಗಣ್ಯರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸುವ ಬರಹ–ಚಿತ್ರಗಳಿರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಆ ಹಸಿರು ಪರದೆಗಳ ಮೇಲೆ ಹಾಕಲಾಯಿತು. ಪರದೆಯನ್ನು ದಾಟಿ ಬರಬೇಡಿ ಎಂದು ಜನರಿಗೆ ತಾಕೀತು ಮಾಡಲಾಯಿತು. ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸಲಾಯಿತು. ಜಿ20 ಗಣ್ಯರು ಎರಡು ದಿನವೂ ಅದೇ ರಸ್ತೆಗಳಲ್ಲಿ ಓಡಾಡಿ ದೆಹಲಿಯ ಸೌಂದರ್ಯವನ್ನು ಕಣ್ತುಂಬಿಕೊಂಡರು. ‘ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಖುಷಿಯಾಗುತ್ತಿದೆ. ಇದು ಈಗ ಸೆಲ್ಫಿ ಕೇಂದ್ರವಾಗಿದೆ. ನನಗೆ ಹೆಮ್ಮೆಯಾಗುತ್ತಿದೆ’ ಎಂದು ಸೌಂದರ್ಯೀಕರಣದ ಬಗ್ಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಖುಷಿಪಟ್ಟರು.

ಮೋದಿಗಾಗಿಯೂ ಪರದೆ
ಬ್ರಿಟನ್‌ ಪ್ರಧಾನಿಯಾಗಿದ್ದ ಬೋರಿಸ್‌ ಜಾನ್ಸನ್‌ ಅವರು 2022ರ ಏಪ್ರಿಲ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಸಬರಮತಿ ಆಶ್ರಮಕ್ಕೂ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಅಹಮದಾಬಾದ್‌ನಿಂದ ಆಶ್ರಮದವರೆಗಿನ ರಸ್ತೆಯುದ್ದಕ್ಕೂ ಬಿಳಿ ಪರದೆ ಹಾಕುವುದರ ಮೂಲಕ ಕೊಳೆಗೇರಿಗಳನ್ನು ಮುಚ್ಚಿಡಲಾಗಿತ್ತು. ಇದೇ ಸಂದರ್ಭದಲ್ಲಿ, ಕೊಳೆಗೇರಿಗಳಿಗೆ ಅಡ್ಡಲಾಗಿ ಹಾಕಲಾಗಿದ್ದ ಬಿಳಿ ಪರದೆಯನ್ನು ಎತ್ತಿ ಕೆಲವು ಮಕ್ಕಳು ರಸ್ತೆಗೆ ಮುಖಮಾಡಿ ಕುಳಿತಿದ್ದ ಚಿತ್ರವೊಂದನ್ನು ಬಹಿರಂಗವಾಗಿತ್ತು. ‘ಇದು ಮೋದಿ ಅವರ ನವಭಾರತ. ಜಾನ್ಸನ್‌ಗಾಗಿ ಕೊಳೆಗೇರಿಯನ್ನು ಮರೆಮಾಚಲಾಗಿದೆ’ ಎಂದೂ ಜರೆಯಲಾಯಿತು. ಆದರೆ, ಇದು ತಿರುಚಲಾದ ಮಾಹಿತಿಯಾಗಿತ್ತು. ಜಾನ್ಸನ್‌ ಬಂದಾಗ ಕೊಳೆಗೇರಿಗೆ ಪರದೆ ಹೊದಿಸಲಾಗಿತ್ತಾದರೂ, ಹಂಚಿಕೊಳ್ಳಲಾಗಿದ್ದ ಚಿತ್ರಕ್ಕೂ ಆ ಸುದ್ದಿಗೂ ಸಂಬಂಧವಿರಲಿಲ್ಲ. ಈ ಚಿತ್ರ ತೆಗೆದದ್ದು 2021ರ ಮಾರ್ಚ್‌ನಲ್ಲಿ. ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಸಬರಮತಿ ಆಶ್ರಮದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಈ ವೇಳೆ ಆಶ್ರಮಕ್ಕೆ ಸಾಗುವ ರಸ್ತೆ ಬದಿಗಳಲ್ಲಿ ಇರುವ ಕೊಳೆಗೇರಿಗಳನ್ನು ಮುಚ್ಚಿಡಲು ಬಿಳಿ ಪರದೆಗಳನ್ನು ಹಾಕಲಾಗಿತ್ತು! ಈ ಬಗ್ಗೆ ‘ದಿ ಕ್ವಿಂಟ್‌’ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳು ಫ್ಯಾಕ್ಟ್‌ಚೆಕ್‌ ಪ್ರಕಟಿಸಿವೆ. ಜೊತೆಗೆ ಅಹಮದಾಬಾದ್‌ ಮಿರರ್‌ ಕೂಡ ವರದಿ ಪ್ರಕಟಿಸಿದೆ.

ಬಡವರನ್ನು ಮುಚ್ಚಿಡುವ ಅಲಂಕಾರ!

*  2010ರಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆದಿತ್ತು. ಕ್ರೀಡಾಕೂಟ ನಡೆದ ಸ್ಥಳದ ಸುತ್ತಮುತ್ತ ಇದ್ದ ಕೊಳೆಗೇರಿಗಳ ಸುಮಾರು 2 ಲಕ್ಷ ಜನರನ್ನು ಒಕ್ಕಲೆಬ್ಬಿಸಲಾಗಿತ್ತು. ಒತ್ತಾಯಪೂರ್ವಕವಾಗಿ ಬಡವರನ್ನು ಒಕ್ಕಲೆಬ್ಬಿಸುವ ವೇಳೆ ಸುಮಾರು 18 ಮಂದಿ ಮೃತಪಟ್ಟಿದ್ದರು. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರವಿತ್ತು. ದೆಹಲಿಯಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು

*  2014ರ ಸೆಪ್ಟೆಂಬರ್‌ನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಗುಜರಾತ್‌ಗೆ ಭೇಟಿ ನೀಡಿದ್ದರು. ಈ ವೇಳೆ ದಂಡಿ ಸೇತುವೆಯಿಂದ ನವಾ ವಾದಜ್‌ ಪ್ರದೇಶದವರೆಗೆ ಕೊಳೆಗೇರಿಗಳಿಗೆ ಪರದೆಗಳನ್ನು ಹಾಕಲಾಗಿತ್ತು

*  ಪ್ರವಾಸಿ ಭಾರತೀಯ ದಿನ ಮತ್ತು ವೈಬ್ರೆಂಟ್‌ ಗುಜರಾತ್‌ ಶೃಂಗಸಭೆಯು 2015ರಲ್ಲಿ ಗುಜರಾತ್‌ನಲ್ಲಿ ನಡೆದಿತ್ತು. ವಿದೇಶಿ ಗಣ್ಯರು ಸಾಗುವ ಮುಖ್ಯ ದಾರಿಗಳ ಸಮೀಪದ ಕೊಳೆಗೇರಿಗಳನ್ನು ಮುಚ್ಚಿಡಲು ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಜಾಹೀರಾತುಗಳನ್ನು, ವಿವಿಧ ಭಾಷೆಗಳಲ್ಲಿ ಇರುವ ಸ್ವಾಗತ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. 2017ರಲ್ಲಿಯೂ ವೈಬ್ರೆಂಟ್‌ ಗುಜರಾತ್‌ ಶೃಂಗಸಭೆ ನಡೆದಿತ್ತು. ಈ ವೇಳೆ 3,000 ಜನ ವಾಸಿಸುವ ಸರಾನಿಯಾವಾಸ್‌ ಕೊಳೆಗೇರಿಯು ಹೊರಗೆ ಕಾಣದಂತೆ ಮಾಡಲಾಗಿತ್ತು

*  ಜಪಾನ್‌ ಪ್ರಧಾನಿಯಾಗಿದ್ದ ಶಿಂಜೊ ಅಬೆ ಹಾಗೂ ಅವರ ಪತ್ನಿ ಭಾರತ ಭೇಟಿಗಾಗಿ 2017ರಲ್ಲಿ ಗುಜರಾತ್‌ನ ಅಹಮದಾಬಾದ್‌ ಹಾಗೂ ಗಾಂಧಿನಗರಕ್ಕೆ ಬಂದಿದ್ದರು. ಈ ವೇಳೆ ನಗರದಾದ್ಯಂತ ಇರುವ ಕೊಳೆಗೇರಿಗಳಿಗೆ ಹಸಿರು ಪರದೆಯನ್ನು ಹಾಕಲಾಗಿತ್ತು

*  2020ರಲ್ಲಿ ಗುಜರಾತ್‌ನಲ್ಲಿ ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಟ್ರಂಪ್‌ ಅವರು ಸಂಚರಿಸುವ ರಸ್ತೆಯುದ್ದಕ್ಕೂ ಕೊಳೆಗೇರಿಗಳನ್ನು ಮುಚ್ಚಿಡುವ ಸಲುವಾಗಿ 6 ಅಡಿ ಎತ್ತರ ಮತ್ತು 1,640 ಅಡಿ ಉದ್ದದ ಗೋಡೆಯನ್ನು ನಿರ್ಮಿಸಲಾಗಿತ್ತು. ಈ ವೇಳೆಯಲ್ಲಿ ಪ್ರಧಾನಿ ಮೋದಿ ಹಾಗೂ ಟ್ರಂಪ್‌ ಅವರು ರೋಡ್‌ಶೊವನ್ನು ನಡೆಸಿದ್ದರು

*  2022ರ ಡಿಸೆಂಬರ್‌ 13ರಿಂದ 16ರವರೆಗೆ ಮುಂಬೈನಲ್ಲಿ ಜಿ20 ಸಭೆ ನಡೆದಿದೆ. ಈ ವೇಳೆ ವೆಸ್ಟ್ರನ್‌ ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಇರುವ ಕೊಳೆಗೇರಿಗಳಿಗೆ ಬಿಳಿ ಪರದೆ ಹಾಗೂ ಬ್ಯಾರಿಕೇಡ್‌ಗಳನ್ನು ಬೃಹನ್‌ಮುಂಬೈ ಮುನಿಸಿಪಲ್‌ ಕಾರ್ಪರೇಷನ್‌ (ಬಿಎಂಸಿ) ಹಾಕಿತ್ತು

*  2023ರ ಮಾರ್ಚ್‌ನಲ್ಲಿ ವಿಶಾಖಪಟ್ಟಣದಲ್ಲಿ ಜಿ20 ಸಭೆ ನಡೆದಿತ್ತು. ಈ ವೇಳೆ ವಿಶಾಖಪಟ್ಟಣದ ವಿಮಾನ ನಿಲ್ದಾಣದಿಂದ ನಗರವನ್ನು ಪ್ರವೇಶಿಸುವವರೆಗೂ ರಸ್ತೆಗಳ ಪಕ್ಕದಲ್ಲಿ ಹಸಿರು ಪರದೆ ಎಳೆಯಲಾಗಿತ್ತು. ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕೊಳೆಗೇರಿಗಳು ಇವೆ

ಆಧಾರ: ಪಿಟಿಐ, ರಾಯಿಟರ್ಸ್‌, ಪಿಐಬಿ, ಪಿಐಬಿ ಫ್ಯಾಕ್ಟ್‌ಚೆಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT